ಕಣ್ಣೀರು ಹಾಕಿದ ರಿಯಲ್ ಹೀರೋ ಸೋನುಸೂದ್ | ಕಾರಣ ಏನು ಗೊತ್ತಾ?
ಮುಂಬೈ: ಖಾಸಗಿ ವಾಹಿನಿ ಡಾನ್ಸ್ ದಿವಾನೆ ರಿಯಾಲಿಟಿ ಶೋ ಎಪಿಸೋಡ್ ಚಿತ್ರೀಕರಣದ ಸೆಟ್ ನಲ್ಲಿ ನಿರಾಶ್ರಿತರ ದೇವರು, ನಟ ಸೋನುಸೂದ್ ಕಣ್ಣೀರು ಹಾಕಿದ ಘಟನೆ ನಡೆದಿದೆ. ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಭಾರ್ತಿ ಎಂಬ ಮಹಿಳೆಯನ್ನು ಚಿಕಿತ್ಸೆಗಾಗಿ ನಾಗ್ಪುರದಿಂದ ಹೈದರಾಬಾದ್ ಗೆ ವಿಮಾನದಲ್ಲಿ ಕೊಂಡೊಯ್ಯಲು ನಟ ಸೋನು ಸೂದ್ ವ್ಯವಸ್ಥೆ ಮಾಡಿಸಿದ್ದರು. ಈ ದೃಶ್ಯವನ್ನು ನೃತ್ಯದ ಮೂಲಕ ಪ್ರಸ್ತುತ ಪಡಿಸಿದ್ದು, ಈ ವೇಳೆ ಅವರು ಕಣ್ಣೀರು ಹಾಕಿದರು.
ಶ್ವಾಸಕೋಶವನ್ನು ಕಳೆದುಕೊಂಡಿದ್ದ 25 ವರ್ಷದ ಯುವತಿ ಭಾರ್ತಿಯನ್ನು ಸೋನುಸೂದ್ ಅವರು ಚಿಕಿತ್ಸೆಗಾಗಿ ನಾಗ್ಪುರದ ವೋಕ್ಹಾರ್ಡ್ ಆಸ್ಪತ್ರೆಯಿಂದ ಹೈದರಾಬಾದ್ ನ ಅಪೊಲೋ ಆಸ್ಪತ್ರೆಗೆ ಸಾಗಿಸಲು ಏರ್ ಲಿಫ್ಟ್ ಮಾಡಿಸಿದ್ದರು. ಈ ಕಾರ್ಯದ ಬಗ್ಗೆ ಖಾಸಗಿ ವಾಹಿನಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಪ್ರೋಮೋವನ್ನು ತೋರಿಸಿದರು. ಇದರಲ್ಲಿ ಭಾರ್ತಿ ಅವರ ಕುಟುಂಬದ ಸದಸ್ಯರು, “ಸೋನು ಸೂದ್ ಅವರು ನಮಗೆ ದೇವರು” ಎಂದು ಹೇಳುತ್ತಿದ್ದಂತೆಯೇ ಅವರು ಕಣ್ಣೀರು ಹಾಕಿದರು.
ಬಳಿಕ ಮಾತನಾಡಿದ ಅವರು, ನನಗೆ ತಂದೆ-ತಾಯಿ ಇಲ್ಲ. ಎಲ್ಲಿಂದಲೋ ಏನೋ ಇಂದು ನನ್ನ ಕುಟುಂಬ ಭಾರತದಾದ್ಯಂತ ದೊಡ್ಡದಾಗಿದೆ. ನಿಮ್ಮ ಹಳ್ಳಿ ಎಲ್ಲಿ ಬೇಕಾದರೂ ಇರಲಿ, ಲಾಕ್ ಡೌನ್ ಎಷ್ಟು ತಿಂಗಳ ವರೆಗೆ ಬೇಕಾದರೂ ವಿಸ್ತರಿಸಿ, ನನ್ನ ನೆರವು ನಿಮಗೆ ಸಿಗುತ್ತಲೇ ಇರುತ್ತದೆ ಎಂದು ಅವರು ಭರವಸೆ ನೀಡಿದರು.