ಕಾಂತಾರ ಚಿತ್ರಕ್ಕೆ ದೊಡ್ಡ ಸಂಕಷ್ಟ: ಚಿತ್ರದಲ್ಲಿ ದಲಿತರ ಬಗ್ಗೆ ಅವಹೇಳನಕಾರಿ ವಿಚಾರಗಳಿವೆ ಎಂಬ ಆರೋಪ
ಕಾಂತಾರ ಸಿನಿಮಾದ ‘ವರಾಹ ರೂಪಂ’ ಹಾಡಿನ ಟ್ಯೂನ್ ಮಲೆಯಾಳಂ ಮ್ಯೂಸಿಕ್ ಆಲ್ಬಂನಿಂದ ಚೌರ್ಯ ಮಾಡಿರೋದು ಎಂಬ ಆರೋಪ ಇತ್ತೀಚೆಗೆ ಭಾರೀ ಸದ್ದು ಮಾಡಿತ್ತು. ಈ ವಿಚಾರ ಸುದ್ದಿಯಲ್ಲಿರುವಾಗಲೇ ಮತ್ತೆ ‘ಕಾಂತಾರ’ದಲ್ಲಿ ದಲಿತ ಅವಹೇಳನಕಾರಿ ವಿಚಾರಗಳಿವೆ ಎಂಬ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ಮಂಗಳೂರಲ್ಲಿ ಸಮತಾ ಸೈನಿಕ ದಳದ ರಾಜ್ಯ ಕಾರ್ಯದರ್ಶಿ ಲೋಲಾಕ್ಷ ಮಾತನಾಡಿ, ಕಾಂತಾರ ಸಿನಿಮಾದ ಕೆಲವೊಂದು ಪಾತ್ರಗಳಲ್ಲಿ ದಲಿತ ವಿರೋಧಿ ವಿಚಾರಗಳಿದ್ದು, ಇದು ದೈವಾರಾಧನೆಯಲ್ಲಿ ತೊಡಗಿರುವ ದಲಿತರ ಭಾವನೆಗಳಿಗೆ ಧಕ್ಕೆಯುಂಟಾಗಿದೆ. ನಮಗೆ ಸಿನಿಮಾ ತಂಡದ ಬಗ್ಗೆ ಆಕ್ಷೇಪಣೆಯಿಲ್ಲ ಎಂದಿದ್ದಾರೆ.
ಆದರೆ, ಸೆನ್ಸಾರ್ ಮಂಡಳಿ ಕಾನೂನಿನ ಚೌಕಟ್ಟಿನಲ್ಲಿ ಸಿನಿಮಾವನ್ನು ಕೂಲಂಕಷವಾಗಿ ಪರಿಶೀಲಿಸಿ ಆಕ್ಷೇಪಣೆ ಇರುವ ಭಾಗಗಳಿಗೆ ಕತ್ತರಿ ಹಾಕಬೇಕಿತ್ತು. ದೈವಾರಾಧನೆ ಬಗ್ಗೆ ಸೆನ್ಸಾರ್ ಬೋರ್ಡ್ ಗೆ ಅರಿವು ಇಲ್ಲದಿದ್ದಲ್ಲಿ ಈ ಬಗ್ಗೆ ಅಧ್ಯಯನ ಮಾಡಿರುವ ಸಂಶೋಧಕರನ್ನು ಇರಿಸಿಕೊಂಡು ಆ ಕೆಲಸ ಮಾಡಬಹುದಿತ್ತು. ಆದರೆ, ಸೆನ್ಸಾರ್ ಮಂಡಳಿ ಇದಾವುದನ್ನೂ ಮಾಡದೆ ನಿರ್ಲಕ್ಷ್ಯ ವಹಿಸಿದೆ ಎಂದರು.
ಅಲ್ಲದೆ, ದೈವಗಳು ಅಭಯ ನೀಡುತ್ತದೆಯೇ ಹೊರತು ಕತ್ತಿಯಿಂದ ಇರಿದು ಕೊಲ್ಲುವ ಕಾರ್ಯ ಮಾಡುವುದಿಲ್ಲ. ಇದು ದೈವಾರಾಧನೆಯ ವಿಕೃತಿಯಾಗಿದೆ. ಸಿನಿಮಾದಲ್ಲಿ ಇಂತಹ ಹಲವು ನಿಂದನಕಾರಿ ಅಂಶಗಳಿದ್ದು, ಇದನ್ನು ನಾವು ವಿರೋಧಿಸುತ್ತೇವೆ ಎಂದರು.
ಅಸ್ಪೃಶ್ಯತೆಯ ವಿಚಾರಗಳನ್ನೂ ಸಿನಿಮಾದಲ್ಲಿ ತೋರಿಸಿದ್ದಲ್ಲದೆ, ದಲಿತರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ಆದ್ದರಿಂದ ಇಂತಹ ವಿಕೃತಿಯ ಭಾಗಗಳಿಗೆ ಕತ್ತರಿ ಹಾಕಬೇಕೆಂದು ನಾವು ಸೆನ್ಸಾರ್ ಮಂಡಳಿಯನ್ನು ಒತ್ತಾಯ ಮಾಡುತ್ತೇವೆ. ಇದಕ್ಕಾಗಿ ನಾವು ದ.ಕ. ಜಿಲ್ಲಾಧಿಕಾರಿಯವರಿಗೆ ಪತ್ರ ಮುಖೇನ ಮನವಿ ಮಾಡುತ್ತೇವೆ.
ಅವರು ಈ ಸಿನಿಮಾದಲ್ಲಿರುವ ನಾವು ಹೇಳಿರುವ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ ಸಿನಿಮಾದ ಸಾರ್ವಜನಿಕ ಪ್ರದರ್ಶನವನ್ನು ಸ್ಥಗಿತ ಮಾಡಬೇಕು. ಅವರು ಕೇಂದ್ರ ಸರಕಾರಕ್ಕೆ ಈ ಬಗ್ಗೆ ಬರೆದು ಸೆನ್ಸಾರ್ ಮಂಡಳಿಯು ಸಿನಿಮಾವನ್ನು ಪುನರ್ ವಿಮರ್ಶಿಸುವ ಕಾರ್ಯ ಮಾಡಬೇಕು. 2 ವಾರಗಳ ಕಾಲಾವಕಾಶವನ್ನು ನಾವು ಅವರಿಗೆ ನೀಡುತ್ತೇವೆ.
ಆ ಬಳಿಕವೂ ಇದು ಸರಿಯಾಗದಿದ್ದಲ್ಲಿ ಮತ್ತೆ ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟುಗಳ ಸಂಘಟನೆಗಳು ನಾವು ಮತ್ತೆ ಸಭೆ ಸೇರಿ ಯಾವ ರೀತಿ ಕಾನೂನಾತ್ಮಕ ಹೋರಾಟ ನಡೆಸಬಹುದು ಎಂದು ಚಿಂತನೆ ನಡೆಸುತ್ತೇವೆ ಎಂದು ಲೋಲಾಕ್ಷ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka