ತೆಂಗಿನ ಚಿಪ್ಪಿನಲ್ಲಿ ನೀರು ಕುಡಿಯುವ ಶಿವ: ಅಸ್ಪೃಶ್ಯತೆಯ ದುರಂತ ನೆನಪಿಸಿದ ಕಾಂತಾರ - Mahanayaka
9:07 AM Thursday 12 - December 2024

ತೆಂಗಿನ ಚಿಪ್ಪಿನಲ್ಲಿ ನೀರು ಕುಡಿಯುವ ಶಿವ: ಅಸ್ಪೃಶ್ಯತೆಯ ದುರಂತ ನೆನಪಿಸಿದ ಕಾಂತಾರ

kanthara
09/11/2022

ಕಾಂತಾರ ಚಿತ್ರ ದೇಶಾದ್ಯಂತ ಈಗಲೂ ಪ್ರದರ್ಶನಗೊಳ್ಳುತ್ತಿದೆ. ಇದೇ ಸಂದರ್ಭದಲ್ಲಿ ಚಿತ್ರದ ಕೆಲವು ಭಾಗಗಳಲ್ಲಿ ತೋರಿಸಿರುವ ವಿಚಾರಗಳು  ಅಸಮಾನತೆಯ ವಿಚಾರಗಳು ಚರ್ಚೆಯಾಗುತ್ತಿದೆ.

ದೈವಾರಾಧನೆ ಹಿಂದೂ ಆಚರಣೆ ಹೌದೋ ಅಲ್ಲವೋ ಅನ್ನೋ ಚರ್ಚೆ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದರ ಬೆನ್ನಲ್ಲೇ ಅಸಮಾನತೆಯ ಆಚರಣೆ ಮತ್ತು ಮೇಲ್ವರ್ಗದವರು ದುರ್ಬಲ ಸಮಾಜದವರನ್ನು ನೋಡುತ್ತಿದ್ದ ಮತ್ತು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ಕೂಡ ಬಣ್ಣಿಸಲಾಗಿದೆ.

ಈಗಲೂ ಅಸ್ಪೃಷ್ಯತೆ ಅನ್ನೋದು ಕಾನೂನಿನ ಎದುರು ಕಾಲ ಮೇಲೆ ಕಾಲು ಹಾಕಿ ಕುಳಿತಿದೆ. ಮೇಲ್ವರ್ಗದ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಈ ಆಚರಣೆಗೆ ಹಿಂಬಾಗಿಲಿನ ಮೂಲಕ ಕೈ ಜೋಡಿಸುತ್ತಿರುವುದರಿಂದ ಇದು ಮುಂದುವರಿಯುತ್ತಲೇ ಇದೆ. ಕೋಲಾರ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿವೆ. ರಾಜ್ಯದಲ್ಲಿ ಎಷ್ಟೋ ದಲಿತ ದೌರ್ಜನ್ಯ ಪ್ರಕರಣಗಳು ಪೊಲೀಸ್ ಠಾಣೆಯಲ್ಲೇ ರಾಜಿ ಸಂಧಾನದಲ್ಲಿ ಬಗೆ ಹರಿಯುತ್ತಿದೆ. ಇಂತಹ ಸಂದರ್ಭದಲ್ಲಿ ಕಾಂತಾರ ಚಿತ್ರದಲ್ಲಿ ತೋರಿಸಿರುವ ಕೆಲವು ದೃಶ್ಯಗಳು ಹಳೆಯ ಅಸ್ಪೃಷ್ಯತೆಯ ಕರಾಳ ನೆನಪುಗಳನ್ನು ಹೊರ ಹಾಕಿದೆ.

ಧನಿ(ಮೇಲ್ಜಾತಿಯ ವ್ಯಕ್ತಿ)ಯ ಮನೆಯಲ್ಲಿ ಶಿವ ಮತ್ತು ಆತನ ಗೆಳೆಯರು ಮನೆಯ ಹೊರಗಡೆ ಕುಳಿತು ಊಟ ಮಾಡುವ ದೃಶ್ಯ ಕಾಂತಾರ ಚಿತ್ರದಲ್ಲಿ ಬರುತ್ತದೆ. ಈ ದೃಶ್ಯದಲ್ಲಿ ಶಿವ(ರಿಷಬ್ ಶೆಟ್ಟಿ) ನೀರು ಕುಡಿಯುವ ದೃಶ್ಯವಿದೆ. ಅದರಲ್ಲಿ ತೆಂಗಿನ ಚಿಪ್ಪು(ಗೆರಟೆ)ನಲ್ಲಿ ಶಿವ ನೀರು ಕುಡಿಯುತ್ತಾನೆ. ಯಾಕೆ ಧನಿಯ ಮನೆಯಲ್ಲಿ ಲೋಟದಲ್ಲಿ ನೀರು ಕೊಡಲ್ವಾ?  ಅನ್ನೋ ಪ್ರಶ್ನೆಗಳಿವೆ. ಅಂದಿನ ಕಾಲದಲ್ಲಿ ಕರಾವಳಿ ಭಾಗದಲ್ಲಿ ದಲಿತರು ಹೊಟೇಲ್ ಗಳಿಗೆ ಹೋದರೂ ತೆಂಗಿನ ಚಿಪ್ಪಿನಲ್ಲಿ ಚಹಾ ಕುಡಿಯ ಬೇಕಿತ್ತು. ಅಂತಹ  ಅನಾಚಾರಗಳನ್ನು ದಲಿತರ ಮೇಲೆ ಮೇಲ್ಜಾತಿಗಳು ಹೇರುತ್ತಿದ್ದವು. ಹೊಟೇಲ್ ಗಳ ಸಮೀಪಕ್ಕೆ ಹೋಗಲು ಕೂಡ ದಲಿತರು ಹಿಂಜರಿಯುತ್ತಿದ್ದರು. ಅಷ್ಟೊಂದು ಪ್ರಮಾಣದಲ್ಲಿ ಜಾತಿ ಪದ್ಧತಿ ಕಠಿಣವಾಗಿತ್ತು.ಆ ದುರಂತಗಳನ್ನು ರಿಷಬ್ ಶೆಟ್ಟಿ ಮತ್ತೆ ನೆನಪಿಸಿದ್ದಾರೆ.

ಶಿವ ತೆಂಗಿನ ಚಿಪ್ಪಿನಲ್ಲಿ ನೀರು ಕುಡಿಯುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸಾಕಷ್ಟು ಪ್ರಶ್ನೆಗಳನ್ನು ಸೃಷ್ಟಿಸಿದೆ. ಇದೂ ಕೂಡ ಸಂಸ್ಕೃತಿಯೇ? ಅನ್ನೋ ಪ್ರಶ್ನೆಗಳಿಗೂ ಗ್ರಾಸವಾಗಿದೆ. ಎಷ್ಟೋ ಸಂಸ್ಕೃತಿಗಳು ಅಸಮಾನತೆ, ದೌರ್ಜನ್ಯಗಳಿಂದ ಕೂಡಿದೆ ಅನ್ನೋ ಮಾತುಗಳಿಗೆ ಕಾರಣವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ