ಕರಂಗೋಲು ಪಾಡ್ದನದ ಧಾರ್ಮಿಕತೆ, ಐತಿಹಾಸಿಕ ನೆಲೆಗಳ ಅರ್ಥ
ಕರಂಗೋಲು ಕುಣಿತ: ಅದರ ಸಾಮಾಜಿಕ ಮತ್ತು ಅಲೌಕಿಕ ನೆಲೆಗಳು: ಸಂಚಿಕೆ: 2
ಲೇಖಕರು ರಘು ಧರ್ಮಸೇನ
( ಈ ಅಧ್ಯಯನವು ಆದಿ ದ್ರಾವಿಡ ಸಮುದಾಯದ ಮೇಲಿನ ಸುಮಾರು ಹದಿನೈದು ವರ್ಷಗಳ ಜನಾಂಗೀಕ ಅಧ್ಯಯನದ ಫಲಶ್ರುತಿಯಾಗಿದೆ..ಅಧ್ಯಯನ ಸಂದರ್ಭದಲ್ಲಿ ಬಾಬು ಬಳ್ಲಾಜೆ ಅಂತಹ ಹಲವಾರು ಪಾಡ್ದನಕಾರರು ಹಾಗೂ ಆದಿ ದ್ರಾವಿಡ ಸಮುದಾಯದ ಹಲವಾರು ಮಾಹಿತಿದಾರರನ್ನು ಸಂದರ್ಶನ ಮಾಡಿ ಅವರು ಕೊಟ್ಟ ಮಾಹಿತಿಗಳನ್ನು ಅಧ್ಯಯನದಲ್ಲಿ ಬಳಕೆ ಮಾಡಲಾಗಿದೆ )
ಕರಂಗೋಲು ಪಾಡ್ದನ ಪಠ್ಯಗಳನ್ನು ಗಂಭೀರವಾಗಿ ವಿಶ್ಲೇಷಣೆಗಳಿಗೆ ಒಳಪಡಿಸಿದರೆ ಅದರ ಸಾಮಾಜಿಕ, ಧಾರ್ಮಿಕತೆ, ಐತಿಹಾಸಿಕ ಹಾಗೂ ಜನಾಂಗೀಕ ನೆಲೆಗಳ ಅರ್ಥ ಮತ್ತು ಮಹತ್ವಗಳು ನಮ್ಮ ಅರಿವಿಗೆ ಗೋಚರಿಸಬಹುದು. ಇಲ್ಲದಿದ್ದರೆ ಬರೀ ಅದರ ಆಚರಣಾತ್ಮಕ ವಿಧಾನಗಳ ವಿವರಗಳಿಗೆ ತ್ರಪ್ತಿಪಟ್ಟುಕೊಳ್ಳಬಹುದು. ಡಾ.ವಾಮನ ನಂದಾವರರು ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ಸಂಪಾದಿಸಿದ ಕರಂಗೋಲು ಹಾಡನ್ನು ಉಲ್ಲೇಖಿಸುತ್ತಾರೆ. ಆ ಹಾಡು ಹೀಗೆ ಸಾಗುತ್ತದೆ;
ಓ ಪೊಲಿಯೇ ಪೊಲ್ಯರೆ ಪೋ ಪುವ್ವೆ ಪೊಂಡುಲ್ಲಯ
ಓ ಮಾಯಿತ ಪುಣ್ಣಮೆ ಮಾಯಿಡೇ ಪೋತುಂಡೇ
ಓ ಸುಗ್ಗಿದ ಪುಣಮೆ ಸುಗ್ಗಿಢೇ ಪೋತುಂಡೇ
ಕರಂಗೋಲು ಪುಟ್ಟುನೇ ಕಡಲಾ ಬರಿಟ್ ಗೆ
ಕರಂಗೋಲು ಪುಟ್ಟುನೇ ಪೊಯ್ಯೆತ ನಡುಟೇ
ಪೊಯ್ಯೆತುಲಯ ಕುವ್ವೆತನೆ ನಡುಟೇ
ಕರಂಗೋಲು ಕೊಂಡ್ಪುನಾ ಕುಸಲೆನ್ ಪಿನಯೆರೆ
ಕೊಟ್ಟೆತಾ ಮುಳ್ಳುಟೋ ಕೂತೂತು ಕೊಂಡ್ರೊಡೆ
ಕರೆಯನೆ ಮಾದೇರಿಟಿ ಪೊದಿತೇ ಕೇಂಡ್ರೋಡೇ
ಕಂಚಿನೇ ತಡ್ಪೇಡ್ ಗಾಳ್ತದೇ ಕೊಂಡ್ರೊಡ್
ಉಳ್ಳಯನ್ ಮೆನ್ಪಿಯರ್ ಕುಸಲೆನ್ ಪಿನಯೆರೆ
ಗಿಂಡ್ಯಟೇ ಪೇರ್ ಪತ್ತ ಉಳ್ಳಯನ್ ಮೆನಿಪು
ಏರಜೇ ಕಾಂತಗಾ ಅಜ್ಜರೇನ್ ಮೆನಿಪು
ಅಜ್ಜರೆನ್ ಮೆನ್ಪಿಯೆರ ಕುಸಲ್ ನ ಪಿನಯನೆ
ಎರಜೇ ಕಾಂತಗಾ ಬಾಲೆನ್ ಮೆನಿಪು
ಬಾಲೆನ್ ಮೆನ್ಪಿಯರೆ ಕುಸಲ್ ನ ಎಯೆನ್
ಬಾಲೆದ ಕೈತಲ್ ಪುರ್ಗೊದೀದ್ ಬಾಲೆನ್ ಮೆನಿಪು
ಬಟ್ಟಲ್ಢ್ ಪೇರ್ ಪತ್ತ್ ಬಾಲೆನ್ ಮೆನಿಪು
ಉಳ್ಳಾಳ್ತಿನ ಮೆನ್ಪಿಯರೆ ಕುಸಲ್ ನ ಪಿನಯನೆ
ಗಿಂಡ್ಯಡ್ ನೀರ್ ಪತ್ತ್ ಉಳ್ಳಾಳ್ತಿನ್ ಮೆನಿಪು
ಎರೆಗೆ ಕಾಂತಗಾ ಉಳ್ಳಾಳ್ತಿನ್ ಮೆನಿಪು
ಉಳ್ಳಾಳ್ತಿನ ಮೆನಿಪಯರೆ ಕುಸಲ್ ನ ಪಿನಯನೆ
ಒರ್ಕರನೆ ಮೊಟ್ಟುಲೆಯೆ ಓರಂಗಡಿ ಓದಲೆ
ಓ ಪೊಲಿಯೇ ಪೊಲಿಯರೆ ಪೋ ಪೂವೆ ಪೊಂಡುಲ್ಲಾಯ
ಓ ಎರಗಾಲಂಗಾರ ನಾಲೆರು ಕಟ್ಟ್ ನಾ
ನಾಲೆರು ಕಟ್ಟರನೆ ನಾಯರಲಬ್ಯಾಂಡ್
*ಕಾಯೆರ್ತ ನಾಯೆರ ನನ ಬೇಕಾಲಾವೊಂದೆ
ಎರಗಾಲಂಗಾರ ನಾಲೆಯ ಮಾದಲಾ
ನಾಲೆರುಮಾದಯರೆ ನುಗೋನೆ ಇದ್ದಿಂಡೆ
ಪೆಲ ಕಡ್ತೆರುಳ್ಳಯ ನುಗೊಲೊಂಜಿ ತೀರುಂಡೆ
ಎರಗಾಲಂಗಾರಾ ನಾಲೆರು ಮಾದಲಾ
ನಾಲೆರು ಮಾದವರೆ ಪನೊರೊಂಬಿಲಾವೋ
ಪಾವೆರಿ ಪತ್ಯರುಳ್ಳಾಯ ಪನೊರೊಂಜಿ *ತೀರ್ತೆರೆ
ಏರಗಸಲಂಗಾರ ನಾಲೆರು ಮಾದಲಾ
ನಾಲೆರು ಮಾದಯರೆ ಪೊಸಕೆತ ಬಲ್ಲ್ದ್ಯಾಂಡೆ
ಕೇರಿನ್ ಪತ್ತ್ ದ್ ಪೊಸಕೆತ ಬಲ್ಲ್ ಮಲ್ತೆರೇ
ಏರಗಾಲಂಗಾರ ನಾಲೆರು ಮಾದಲಾ
ನಾಲೆರು ಮಾದವೆರೆ ಬಡೂನೆ ಆವೋಡೇ
ಬಡೂನೇ ಮಲ್ತೆರ್ ಪಿಲಿಯುಗುರು ಬಡೂನೇ
ಓಲಾಯರೇ ಕಂಡೊನು ಈಯರೆ ಕಂಡೋನು
ಕಾರಿ ಕಬಿಲನೆ ಎರು ರಡ್ಡ್ ಮಲ್ತೆರೇ
ಕೊಂಕಣಿ ಮಾಂಕಣಿ ಕಂಡೋ ರಡ್ಡ್ ಮಲ್ತೆರ
ಲಾಯೆರೆ ಕಂಬುಲನೇ *ಒರ್ಲನೇ ಮಲ್ತ್ ರೇ
ಇರ್ವಲಟ ಅಡತಡ್ ಮೂವ್ವಲಟ್ ಕೋರುಂಡೆ
ಎರಗಾಲಂಗಾರ ನೀರ್ ನ ಕಟ್ಟಲಾ
ಓ ಪೊಲಿಯೆ ಪೊಲಿಯರೆ ಪೋ ಪುಲೆ ಪೊಂಡುಲ್ಲಾಯ
(ನೋಡಿ, ಹಾಡಿದವರು ಶ್ರೀಮತಿ ಮಿಣ್ಕೋ, ಪಾಲ್ತಾಡಿ(ಸಂಗ್ರಹ )ಪಿ.ರಾಮಕೃಷ್ಣ ಆಚಾರ್, ಉಲ್ಲೇಖ; ಡಾ.ವಾಮನ ನಂದಾವರ, ಕರ್ನಾಟಕದ ಬುಡಕಟ್ಟುಗಳು, ಪುಟ; 675–676)
ತುಳು ಭಾಷೆಯ ಸೊಗಡಿನಿಂದ ತುಂಬಿರುವ ಕರಂಗೋಲು ಹಾಡನ್ನು ಕನ್ನಡದ ಓದುಗರಿಗೂ ಅರ್ಥವಾಗಲಿ ಮತ್ತು ತೌಲನಿಕ ಅಧ್ಯಯನದ ಹಿನ್ನೆಲೆಯಲ್ಲಿ ಅದನ್ನು ಇಲ್ಲಿ ದಾಖಲಿಸುವುದು ಸೂಕ್ತ ಎಂಬುದಾಗಿ ತೋರುತ್ತದೆ. ಕರಂಗೋಲು ಹಾಡಿನ ಕನ್ನಡ ರೂಪವನ್ನು ಡಾ.ಕೆ. ಚಿನ್ನಪ್ಪ ಗೌಡರು ಸಂಪಾದಿಸಿದ್ದಾರೆ. ಅದು ಹೀಗಿದೆ :
‘ಪೊಲಿ ಪೊಲಿ’ ಎಂದು ಕರೆವೆವು ಕರ್ಂಗೋಲ ಹುಟ್ಟಿದ
ಕರಂಗೋಲು ಹುಟ್ಟಿದ್ದು ಎಲ್ಲಿ ಕಾಂತಕ್ಕ
ಮೂಡುದಿಕ್ಕಿನಲ್ಲಿ ಗದ್ದೆಯ ಗಡಿಯಲ್ಲಿ
ಪಡುದಿಕ್ಕಿನಲ್ಲಿ ಹೊಳೆಬದಿ ನಡುವಿನಲ್ಲಿ
ಎಲ್ಲಿ ಕಾಂತಕ್ಕ ಏಳು ಕಡಲು ಆ ಬದಿಯಲ್ಲಿ
‘ಮಾದೆರು’ವಿನ ದೊಡ್ಡ ಕಾಡು ತಿರುಗಿಸಿ ತರಬೇಕು
‘ಕೊಟ್ಟೆ’ಯ ಮುಳ್ಳಿಯಲ್ಲಿ ಸಿಕ್ಕಿಸಿ ತರಬೇಕು
‘ಸೂರಿ’ಯ ಮುಳ್ಳಿನಲ್ಲಿ ಹೆಣೆದು ತರಬೇಕು
‘ಈಂಬುಳ’ ಮುಳ್ಳಿನಲ್ಲಿ ತಿರುಗಿಸಿ ತರಬೇಕು
‘ಇಟ್ಟೆಯದ’ ಸೊಪ್ಪಿನಲ್ಲಿ ಹೊದ್ದಿಸಿ ತರಬೇಕು
‘ಬೈದ್ಯರ’ ಕೋವಿಯಲ್ಲಿ ಗುಂಡು ಹಾರಿಸಿ ತರಬೇಕು
ಕೈಯ ಬಿಲ್ಲಿನಲ್ಲಿ ಸಿಕ್ಕಿಸಿ ತರಬೇಕು
ನೆಕ್ಕಿ ಸೊಪ್ಪಿನಲ್ಲಿ ಬೀಸಿ ತರಬೇಕು
ಗೆರಟೆಯ ನೀರಿನಲ್ಲಿ ಮುಳುಗಿಸಿ ತರಬೇಕು
ಮರದ ಪಾತ್ರೆಯ ನೀರಿನಲ್ಲಿ ಈಜಿಸಿ ತರಬೇಕು
ಆ ಕರ್ಂಗೋಲು ತರಲು ಯಾರು ಬಲ್ಲರು ?
ಮಂಗಾರ ಮಾನಿಗ ಅವಳಾದರೆ ಬಲ್ಲಳು
ಕಾಂತಾರ ಕರಿಯ ಕುರೋವು ಅವನಾದರೆ ಬಲ್ಲನು
‘ಕಟ್ಟಿದ’ ಮಕ್ಕಳು ಅವರಾದರೆ ಬಲ್ಲರು
ಯಾರು ಮದುಮಗಳೆ (ಹೆಂಗಸು) ಬಾಗಿಲು ತೆಗೆಯಿರಿ
ಬಾಗಿಲು ತೆಗೆಯುವ ಉಪಾಯವನ್ನು ತಿಳಿಯೇನು
ಬೀಗದ ಕೈ ಹಿಡಿದು ಚಿಲಕವನ್ನು ಜಾರಿಸಿರಿ
ಯಾರು ಒಡತಿಯೆ ಒಡೆಯನನ್ನು ಎಚ್ಚರಿಸಿರಿ
ಒಡೆಯನನ್ನು ಎಚ್ಚರಿಸುವ ಉಪಾಯವನ್ನು ತಿಳಿಯೆನು
ಗಿಂಡ್ಯೆ ನೀರು ಕೊಂಡು ಹೋಗಿ ಒಡೆಯನನ್ನು ಎಚ್ಚರಿಸಿರಿ
ಯಾರು ಒಡತಿಯೆ ಮಗುವನ್ನು ಎಚ್ಚರಿಸಿರಿ
ಮಗುವನ್ನು ಎಚ್ಚರಿಸುವ ಉಪಾಯವನ್ನು ತಿಳಿಯೆನು
ಬಟ್ಟಲು ಹಾಲು ಕೊಂಡು ಹೋಗಿ ಮಗುವನ್ನು ಎಬ್ಬಸಿರಿ
ಒಡೆಯ ಇದ್ದಾರೊ ಇಲ್ಲವೋ ದೇಯಿ ಮದುಮಗಳೇ
ಕರೆದರೆ ಕೂಗಿದರೆ ‘ಕೂಟಕ್ಕೆ’ ಹೋದರು
ಕೂಟದಲ್ಲಿ ಒಡೆಯ ಏನು ಮಾಡಿದರು ?
ಹಂಡೆ ಕೊಂಡು ಹೋಗಿ (ಹಾಲು) ಕರೆಯಲು ಎಮ್ಮೆ ತಂದರು
ಗಿಂಡ್ಯೆ ಕೊಂಡು ಹೋಗಿ ಹಾಲು ಕರೆಯಲು ದನ ತಂದರು
ಕಾರಿ ಕಬಿಲ ಎಂಬ ಎತ್ತುಗಳನ್ನು ತಂದರು
*ಕಾಣದ ಕಟದ ಎಂಬ ಆಳುಗಳನ್ನು ನೇಮಿಸಿದರು
*ಕೊಂಕಣ’ ‘ಬಂಕಣ’ ಎಂಬ ಗದ್ದೆ ಮಾಡಿದರು
ಕಟ್ಟೆ ಹುಣಿಯ ಮೇಲೆ ತೆಂಗು ನೆಡಿಸಿದರು
ಬಳ್ಳಿಗೆ ಮೇಲಾದ ಬಾಳೆ ಬೆಳೆಸಿದರು
ಬೆಟ್ಟಿನಲ್ಲಿ ಮೇಲಾದ ಹಲಸು ಬೆಳೆಸಿದರು
ಕಾಡಿಗೆ ಮೇಲಾದ ‘ಶಾಂತಿ’ ಮರ ಬೆಳೆಸಿದರು
ಪಡು ‘ಪದೋಳಿ’ಯಲ್ಲಿ ಕಂಚಿಯ ಗಂಟೆ ಜೊಡಿಸಲು
ಕಂಚಿಯ ಗಂಟೆ ಜೋಡಿಸಲು ‘ನಾಲಗೆ’ ತುಂಡಾಯಿತು
ಮೂಡು ‘ಪದೊಳಿ’ ಮುತ್ತಿನ ಗಂಟೆ ಜೊಡಿಸಲು
ಮುತ್ತಿನ ಗಂಟೆ ಜೋಡಿಸಲು ಮುರಿದು ಹೋಯಿತು
ನಾಲ್ಕೆತ್ತು ತಿರುಗಿಸಲು ಕಾಣದ ಕಟದ
ನಾಲ್ಕೆತ್ತು ತಿರುಗಿಸಲು (ಹೂಡಲು) ನೇಗಿಲು ಇರಲಿಲ್ಲ
ಕಾಸರಕನ ಮರ ಕಡಿದು ನೇಗಿಲು ಮಾಡಿಸಬೇಕು
ನಾಲ್ಕೆತ್ತು ಹೂಡು ಕಾಣದ ಕಟದ
ನಾಲ್ಕೆತ್ತು ಹೂಡಲು ನೊಗ ಇರಲಿಲ್ಲ
ಹಲಸಿನ ಮರಕಡಿದು ನೊಗವೊಂದು ಕೆತ್ತಿಸಬೇಕು
ನಾಲ್ಕೆತ್ತು ಹೂಡಲು ‘ಗುಂಡಲ’ ಇರಲಿಲ್ಲ
‘ಪಾವೊರಿ’ಯನ್ನು ಹಿಡಿದು ‘ಗುಂಡಲ’ ಹಾಕಬೇಕು
ನಾಲ್ಜೆತ್ತು ಹೂಡಲು ಕೊರಳ ಹಗ್ಗ ಇರಲಿಲ್ಲ
ಕೇರೆಯನ್ನು ಹಿಡಿದು ಕೊರಳ ಹಗ್ಗ ತೊಡಿಸಬೇಕು
ನಾಲ್ಕೆತ್ತು ಹೂಡಲು ಕೋಂಟು ಹಗ್ಗ ಇರಲಿಲ್ಲ
ಸರ್ಪವನ್ನು ಹಿಡಿದು ಕೋಂಟು ಹಗ್ಗ ಹಾಕಬೇಕು
ನಾಲ್ಕೆತ್ತು ಹೂಡಲು ಕಟ್ಟುವ ಹಗ್ಗ ಇರಲಿಲ್ಲ
ಒಳ್ಳೆ ಹಾವನ್ನು ಹಿಡಿದು ಕಟ್ಟುವ ಹಗ್ಗ ಹಾಕಬೇಕು
ನಾಲ್ಕೆತ್ತು ಹೂಡಲು ಬೆತ್ತವೂ ಇರಲಿಲ್ಲ
ಬುಳೆಕ್ಕರಿ ಹಾವನ್ನು ಹಿಡಿದು ಪೀಲಿ ಬೆತ್ತ ನೆಯ್ಯಬೇಕು
ನಾಲ್ಕೆತ್ತು ಹೂಡಲು ಪಣೊರು ಇರಲಿಲ್ಲ
ಅರಣೆಯನ್ನು ಹಿಡಿದು ಪಣೊರು ಬಡಿಯಬೇಕು
ನಾಲ್ಕೆರು ಹೂಡಲು ಪತ್ತೊಂಜಾನಿ ಇರಲಿಲ್ಲ
ಉಂಬುಳು ಹಿಡಿದು ಸಣ್ಣ ಮೊಳೆ ಹೊಡೆಯಬೇಕು
ನಾಲ್ಕೆತ್ತು ಹೂಡು ಕಾಣದ ಕಟದ
ಪಡುದಿಕ್ಕಿಗೊಮ್ಮೆ ಹೂಡು ಕಾನದ ಕಾಟದ
ಮೂಡುದಿಕ್ಕಿಗೊಮ್ಮೆ ಹೂಡು ಕಾಣದ ಕಾಟದ
ಎರಡು ಸಾಲು ಹೂಡಿಸಿದ ಕಿನ್ನಿ ಮಾನಿ ಒಡೆಯ
ಎರಡನೆಯ ಸಾಲಿಗೆ ಹಟ್ಟಿಗೊಬ್ಬರ ಹಾಕಿಸಿದರ ಒಡೆಯ
ಐದು ಸಾಲು ಹೂಡಿಸಿದ ನಾರಾಯಣ ಬ್ರಾಹ್ಮಣ
ಐದು ಸಾಲಿಗೆ ಆಢಿ ಗೊಬ್ಬರ ಹಾಕಿಸಿದರು ಒಡೆಯ
ಮೂಡಣಕ್ಕೆ ಹೋಗಬೇಕು ಬಿಳಿ ‘ಕಯಮೆ’ ತರಬೇಕು
ಪಡುವಣಕ್ಕೆ ಹೋಗಬೇಕು ಕಪ್ಪು ‘ಕಯಮೆ’ ತರಬೇಕು
ಒಂದು ಗದ್ದೆಗೆ ಒಂದು ತಳಿ ಬಿತ್ತಬೇಕು
ಮತೋಂದು ಗದ್ದೆಗೆ ಮತ್ತೊಂದು ತಳಿ ಬಿತ್ತಬೇಕು
ಮೂರರಲ್ಲಿ ಮೂರನೆಯ ನೀರು ಇಳಿಸಿದ್ದಾರೆ ಒಡೆಯ
ಏಳರಲ್ಲಿ ಏಳನೇ ನೀರು ನಿಲ್ಲಿಸಿದ್ದಾರೆ ಒಡೆಯ
ಅದೊಂದು ಮೊಳಕೆಯಾಯಿತು ಸೂಜಿ ಮೊಳಕೆಯಾಯ್ತು
ಅದೊಂದು ಚಿಗುರಿತು ಹಿಂಗಾರ ಮಾಲೆ ಚಿಗುರಿತು
ಭತ್ತ ಹಣ್ಣಾಯಿತು ಹಳದಿ ವರ್ಣವಾಯಿತು
ಪೈರು ಹಣ್ಣಾಯಿತು ಕೇದಗೆ ವರ್ಣವಾಯಿತು
ನಿಂತು ಬೆಳೆಯಲು ಗಿಳಿಯಣ್ಣ ಬಿಡಲಿಲ್ಲ
ಗಿಳಿಯಣ್ಣ ನನ್ನು ಹಿಡಿದು ಪಂಜರದಲ್ಲಿ ಹಾಕಬೇಕು
ಪಂಜರದಲ್ಲಿ ಗಿಳಿಯಣ್ಣ ಓದಿದಂತೆ ಕೇಳಿಸುತ್ತದೆ
ನೆಲ ಹಿಡಿದು ಬೆಳೆಯಲು ಹಂದಿಯಣ್ಣ ಬಿಡಲಿಲ್ಲ
ಹಂದಿಯಣ್ಣ ನನ್ನು ಹಿಡಿದು ಗೂಡಿನಲ್ಲಿ ಹಾಕಬೇಕು
ಗೂಡಿನಲ್ಲಿ ಹಂದಿಯಣ್ಣ ಜಿಗಿದಂತೆ ಆಗುತ್ತದೆ
ಕೆಯ್ ಕೊಯ್ಯಲು ‘ಪರುಕತ್ತಿ’ ತರಬೇಕು
ಕೆಯ್ ಕಟ್ಟಲು ‘ಸೋಣಬಳ್ಳಿ’ ತರಬೇಕು
ಕೆಯ್ ಹೊರಬೇಕು ಅಂಗಳಕ್ಕೆ ತರಬೇಕು
ಕೆಯ್ ಹೊಡೆಯಲು ಕಲ್ಲಿನ ಮಂಚ ತರಬೇಕು
ಕುಂಟು ಪೊರಕೆಯಲ್ಲಿ ಗುಡಿಸಿ ತರಬೇಕು
ಗಾಳಿಸುವ ಗೆರಸೆಯಲ್ಲಿ ಗಾಳಿಸಿ ತರಬೇಕು
ರಾಶಿ ಮಾಡಿದ ಭತ್ತ ಮಾಳಿಗೆ ಮನೆ ಇರಬೇಕು
ಮಾಯಿ ತಿಂಗಳಲ್ಲಿ ಭತ್ತ ತೋಡಿಸಿದ್ದಾರೆ ಒಡೆಯ
ಕರ್ಂಗೋಲಿನ ಮಕ್ಕಳಿಗೆ ಗೆರಸೆ ತುಂಬಿಕೊಡಬೇಕು
ಒಡೆಯ ಒಡತಿ ಗುಣುಗುಣು ಹೇಳುತ್ತಾರೆ
ಐವರಿಗೆ ಐದು ಪಡಿ ಬೇರೆಯೇ ಆಳೆಯಿರಿ
ಐವರಿಗೆ ಐದು ವೀಳ್ಯ ಬೇರೆಯೇ ಹಿಡಿಯಿರಿ
ಹಾಗೆ ಹೇಳುವುದಾದರೆ ಮುಂಜಾನೆಯವರೆಗಿದೆ.
(ಟಿಪ್ಪಣಿಯಲ್ಲಿ ಹಾಡು, ಕುಣಿತ ಮತ್ತು ಸಂಪ್ರದಾಯಗಳ ಮಾಹಿತಿಗಳನ್ನು ಬೆಳ್ತಂಗಡಿ ತಾಲ್ಲೂಕಿನ ಉಜಿರೆ ಗ್ರಾಮದ ಪೆರ್ಲ ಎಂಬ ಸ್ಥಳದಲ್ಲಿ ವಾಸಿಸುವ ಆದಿ ದ್ರಾವಿಡ ಜನಾಂಗದವರಿಂದ ಸಂಗ್ರಹಿಸಿಲಾಗಿದೆ ಎಂಬುದಾಗಿ ಡಾ.ಚಿನ್ನಪ್ಪ ಗೌಡರು ದಾಖಲಿಸಿದ್ದಾರೆ -ವರ್ಷಗಳು 1985, 1986, 1987)
ಕರಂಗೋಲು ಪೂಜೆಯ ವಿನ್ಯಾಸ:
ಕರಂಗೋಲು ಯಾತ್ರೆ ಅಥವಾ ಕುಣಿತ ಮುಗಿದು ಒಂದೆರಡು ದಿನಗಳ ನಂತರ ಪೂಜೆಯನ್ನು ನಡೆಸಲಾಗುತ್ತದೆ. ಎಡೆಯನ್ನು ಬಡಿಸಿ ಕಾನದ ಕಟದರನ್ನು ಕರಂಗೋಲು ಯಾತ್ರೆಯು ಸುಗಮವಾಗಿ ನಡೆಯಲು ಅಭಯ ಆಶೀರ್ವಾದ ಮಾಡಿದಕ್ಕಾಗಿ ಕೈ ಮುಗಿದು ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಅವಲಕ್ಕಿ, ಬೆಲ್ಲ, ಬಾಳೆಹಣ್ಣು, ಶೇಂದಿ ಮತ್ತು ಕೋಳಿ ಪಧಾರ್ಥದ ಎಢೆಗಳನ್ನು ಬಡಿಸಲಾಗುತ್ತದೆ .ಕೊನೆಗೆ ಇದೇ ಎಡೆಗಳನ್ನು ಒಟ್ಟು ಮಾಡಿ ಪ್ರಸಾದದ ರೂಪದಲ್ಲಿ ಪೂಜೆಗೆ ಬಂದವರಿಗೆ ಹಂಚಲಾಗುತ್ತದೆ. ಈ ಮೂಲಕ ಆ ವರ್ಷದ ಕರಂಗೋಲು ಕುಣಿತ, ತಿರುಗಾಟ, ಆರಾಧನೆ , ಪೂಜೆಯ ಪ್ರಕ್ರಿಯೆಗಳು ಮುಗಿಯುತ್ತವೆ. ಈ ಮೂಲಕ ಇಡೀ ಕರಂಗೋಲು ಕುಣಿತ ಲೌಕಿಕ ನೆಲೆಯಿಂದ ಅಲೌಕಿಕ ನೆಲೆಗೆ ಹಬ್ಬಿ ಜಾತಿ /ಸಮುದಾಯದ ಪರಿಧಿಯನ್ನು ಮೀರಿ ಒಂದು “ಸೆಕ್ಯುಲರ್ ಮತ್ತು ಧಾರ್ಮಿಕತೆ ನೆಲೆ”ಯನ್ನು ನಿರ್ಮಿಸಿ ನಾಡಿನ ಎಲ್ಲಾ ಜಾತಿ ಸಮುದಾಯದವರಿಗೆ ಸಮ್ರಧ್ದಿ, ಅದ್ರಷ್ಟ, ಮಂಗಳಕರ, ಭದ್ರತೆ ಹಾಗೂ ಆರೋಗ್ಯದ ಭಾವನೆಯನ್ನು ಕಟ್ಟಿಕೊಡುವ ,ಖಾತರಿಪಡಿಸುವ ಸಮಾಜೋ–ಮಾನಸಿಕ ಕೆಲಸವನ್ನು ಅದು ಯಶಸ್ವಿಯಾಗಿ ನಿರ್ವಹಿಸುತ್ತದೆ . ಹೀಗೆ ಲೌಕಿಕ ನೆಲೆಯಿಂದ ಅಲೌಕಿಕ ನೆಲೆಗೆ ವಿಸ್ತರಿಸಿಕೊಳ್ಳುವ ಕರಂಗೋಲು ಕುಣಿತದ ವಿವಿಧ ಆಯಾಮಗಳನ್ನು ಡಾ.ಚಿನ್ನಪ್ಪ ಗೌಡರು ಕ್ರೋಡಿಕರಿಸುತ್ತಾರೆ ;
- ಅಲೌಕಿಕ ವೀರರ ಆರಾಧನೆಯ ಪರಿಕಲ್ಪನೆಯನ್ನು ಪಡೆದುಕೊಂಡಿದೆ
- ಅನಿಷ್ಥವನ್ನು ತೊಡೆದುಹಾಕುವ ಮಾಂತ್ರಿಕತೆಯ ಶಕ್ತಿ ಇಲ್ಲಿಯ ಯೋಧರಿಗೆ ಇದೆ ಎಂಬ ನಂಬಿಕೆಯು ಕುಣಿತದ ರೀತಿ ಮತ್ತು ಸಂಪ್ರದಾಯದಿಂದ ಸ್ಪಷ್ಟವಾಗುತ್ತದೆ
3.ವಾರ್ಷಿಕವಾಗಿ ಆವರ್ತನೆಗೊಳ್ಳುವ ಈ ಕರ್ಂಗೋಲು ಕುಣಿತವು ಜಾತ್ಯಧಾರಿತ ಮತ್ತು ಶ್ರೇಣಿಕ್ರತ ಮತ್ತು ಸಾಮಾಜಿಕ ವ್ಯವಸ್ಥೆಯ ಚಾರಿತ್ರಿಕ ಉತ್ಪನ್ನವಾಗಿದೆ ಮತ್ತು ಆ ವ್ಯವಸ್ಥೆಯಲ್ಲಿ ತನ್ನ ಅರ್ಥ ಮತ್ತು ಸಾರ್ಥಕ್ಯವನ್ನು ಕಂಡುಕೊಳ್ಳುವ ಕ್ರಿಯೆಯಾಗಿದೆ
- ತಮ್ಮ ಜನಾಂಗದ ಸಾಂಸ್ಕೃತಿಕ ವೀರರ ‘ವ್ಯಕ್ತಿತ್ವ’ಗಳನ್ನು ಕಲಾತ್ಮಕವಾಗಿ ಪ್ರತಿನಿಧಿಸಿ, ಸಂಘರ್ಷ, ಕೊಲೆ, ಶೋಷಣೆ, ಬಡತನಗಳನ್ನು ಉದಾತ್ತೀಕರಿಸುವ ಆದಿ ದ್ರಾವಿಡ (ಶಬ್ದವನ್ನು ಬದಲಾಯಿಸಲಾಗಿದೆ) ಜನಾಂಗದ ಆಲೋಚನೆಗಳನ್ನು ಇಲ್ಲಿ ಕಾಣಬಹುದು
- ತುಳುನಾಡಿನ ಜನಾಂಗಗಳ ಅಧ್ಯಯನ ಮತ್ತು ಇತಿಹಾಸದಲ್ಲಿ ಪ್ರಮುಖ ಆಕರವಾಗಿ ಬಳಸಿಕೊಳ್ಳಬಹುದು
- ಹಾಡಿನ ಸಾಂಪ್ರದಾಯಿಕ ರಮ್ಯ ಕಥನಗುಣ, ಕುಣಿತ , ವೇಷ ಭೂಷಣ ಮತ್ತು ಸಂಪ್ರದಾಯಗಳ ಅರ್ಥಗಳು ಅಲೌಕಿಕತೆಯ ಪರಿಕಲ್ಪನೆಯನ್ನು ಸ್ಪಷ್ಟಪಡಿಸುತ್ತದೆ ( ಡಾ. ಕೆ.ಚಿನ್ನಪ್ಪ ಗೌಡ; ಸಿರಿ, ಪುಟ; 400)
ಕರಂಗೋಲು ಕುಣಿತದ ಸಾಮಾಜಿಕ, ಧಾರ್ಮಿಕ ಹಾಗೂ ಮಾಂತ್ರಿಕ ನೆಲೆಗಳು :
ಕರಂಗೋಲು ಪಾಡ್ದನಗಳು ಅಥವಾ ಪ್ರದರ್ಶನಗಳು ವ್ಯಕ್ತಪಡಿಸುವ ಅರ್ಥಗಳಿಗೆ ಮಾತ್ರ ಕರಂಗೋಲು ಸೀಮಿತವಾಗಿಲ್ಲ. ಪಾಡ್ದನ, ಪ್ರದರ್ಶನಗಳನ್ನು ಮೀರಿ ಅದರ ಅರ್ಥ ಮತ್ತು ಮಹತ್ವಗಳು ವ್ಯಾಪಿಸಿವೆ ಎಂಬಂತೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಒಟ್ಟು ಕಾನದ ಕಟದರ ಜೀವನ ವಿವರಗಳು, ಆದಿ ದ್ರಾವಿಡ ಜನಾಂಗದ ಸಾಮಾಜಿಕ ಬದುಕು, ಆ ಜನಾಂಗದ ಸಾಂಸ್ಕೃತಿಕ ಹಾಗೂ ಆರ್ಥಿಕ ಸಂಬಂಧಗಳು, ಊಳಿಗಮಾನ್ಯ ವ್ಯವಸ್ಥೆ ಮತ್ತು ಅದರ ಜೊತೆಗಿನ ಸಂಘರ್ಷ ಮತ್ತು ತುಳುನಾಡಿನ ಒಟ್ಟು ಸಾಂಸ್ಕೃತಿಕ ಬದುಕಿನಲ್ಲಿ ಸಂಧಿ ಪಾಡ್ದನಗಳಂತಹ ಮೌಕಿಕ ಸಾಹಿತ್ಯಗಳು ಇತ್ಯಾದಿಗಳನ್ನು ಒಟ್ಟಾರೆಯಾಗಿ ನಾನು ‘ಕರಂಗೋಲಿನ ಪಠ್ಯ’ ಅಂತ ಕರೆಯುತ್ತೇನೆ- ಇವೆಲ್ಲವೂ ಅಖಂಡವಾಗಿ “ಕರಂಗೋಲು ಪರಂಪರೆಯ” ಅರ್ಥವನ್ನು ನಿರ್ವಹಿಸುತ್ತಿವೆ. ಈ ನೆಲೆಯಲ್ಲಿ ಕರಂಗೋಲಿನ ಬಹು ಆಯಾಮಗಳ ಅರ್ಥಗಳನ್ನು ಲೌಕಿಕ ಮತ್ತು ಅಲೌಕಿಕ ಎರಡು ನೆಲೆಗಳಲ್ಲಿಯೂ ಅರ್ಥೈಸಿಕೊಳ್ಳಬೇಕಾಗಿದೆ. ಈ ಆರ್ಥೈಸಿಕೊಳ್ಳುವ ಪ್ರಕ್ರಿಯೆ ಸಂಕೀರ್ಣವಾಗಿದ್ದು ಸಮಾಜೋ -ಧಾರ್ಮಿಕತೆಯ (socio –religious) ಶಿಸ್ತನ್ನು ಅದು ನಮ್ಮಿಂದ ನಿರೀಕ್ಷಿಸುವಂತೆ ಗೋಚರವಾಗುತ್ತದೆ.
- ಕರಿಯ ಕೋಲು, ಕರಿಯಂಗಾಳು, ಕರಂಗೋಲು : ಕರಂಗೋಲು ಅಂದರೆ ಕರಿಯ ಬಣ್ಣದ ಕೋಲು, ಕರದಲ್ಲಿ ಹಿಡಿದುಕೊಳ್ಳುವ ಕೋಲು ಎಂದೆಲ್ಲಾ ಅರ್ಥೈಸಲಾಗಿದೆ. ಕರಂಗೋಲಿಗೆ ಈ ಎಲ್ಲಾ ಅರ್ಥಗಳು ಇರುವಂತಿದೆ. “ಕರಿಯ ಕೋಲು” ಎರಡು ವಿಚಾರಗಳನ್ನು ಸೂಚಿಸುತ್ತದೆ—a) ಕರದಲ್ಲಿ ಹಿಡಿದುಕೊಳ್ಳುವ ಕೋಲು; ಅದು ಒಂದು ಅಲುಂಬುಡದ ಕೋಲು ಮತ್ತೊಂದು #ಕರಿಯ ನೆಕ್ಕಿಯ ಕೋಲು ( ಮಾಹಿತಿ: ಮೋನಪ್ಪ ನೀರಾಡಿ, ಆದಿ ದ್ರಾವಿಡ, ಕಣಿಯೂರು, ಬೇಬಿ ಸುವರ್ಣ, ಅಧ್ಯಕ್ಷರು ಮಾಲಾಡಿ ಗ್ರಾಮ ಪಂಚಾಯತ್, ಬೆಳ್ತಂಗಡಿ ತಾಲ್ಲೂಕು) ಕರಂಗೋಲು ಪಾತ್ರಧಾರಿಗಳು ಕರಿಯ ನೆಕ್ಕಿಯ ಸೊಪ್ಪಿನ ಸೂಡಿ ಹಿಡಿದುಕೊಂಡು ಕುಣಿತವನ್ನು ಮಾಡುತ್ತಾರೆ.ಕೊನೆಗೆ ಮಕ್ಕಳು ಮತ್ತು ಇತರ ಜನರ ಮೈಮೇಲೆ ನೆಕ್ಕಿಯ ಸೊಪ್ಪುನ್ನು ಬೀಸಿ ನಿವಾಳಿಸಲಾಗುತ್ತದೆ.ಇದು ಸೋಂಕು ಅಥವಾ ಅನಿಷ್ಟಗಳನ್ನು ನಿವಾಳಿಸುವ ಕ್ರಮವೇ ಆಗುತ್ತದೆ. ಬೇಬಿ ಸುವರ್ಣರು ತಿಳಿಸಿದಾಗೆ ಚಿಕ್ಕ ಮಕ್ಕಳಿಗೆ ಕೊಡುವ “ಚಿನ್ಹೆ”ಯ ಮತ್ತು “ಸೋಂಕಿನ” ಮಾತ್ರೆ”ಗಳನ್ನು ಕರಿಯ ನೆಕ್ಕಿಯ ಸೊಪ್ಪಿನಿಂದಲೇ ತಯಾರಿಸಲಾಗುತ್ತದೆ. ಈ ನೆಲೆಯಲ್ಲಿ ಕರಿಯ ನೆಕ್ಕಿ ತುಂಬಾ ಔಷಧೀಯ ಗುಣಗಳನ್ನು ಹೊಂದಿದ್ದು ಜನಪದ ಮತ್ರು ಆಯುರ್ವೇದ ಔಷಧೀಯ ಪದ್ಧತಿಯಲ್ಲಿ ಬಲು ಪ್ರಮುಖವಾದ ಸ್ಥಾನವನ್ನು ಹೊಂದಿದೆ. ನುಸಿ ಅಂತಹ ಕೀಟಗಳನ್ನು ನೆಕ್ಕಿಯ ಹೊಗೆ ಹಾಕಿ ಓಡಿಸುವ ಸಾಂಪ್ರದಾಯಿಕ ಪಧ್ಧತಿಯನ್ನು ರೈತರು ಇಟ್ಟುಕೊಂಡಿದ್ದರು. ಈ ನೆಲೆಯಲ್ಲಿ ಕಾನದ ಕಟದರಿಗೆ ಜನಪದ ಔಷಧೀಯ ಪಧ್ಧತಿಯ ಅರಿವಿದ್ದು ಜನರ ರೋಗಗಳನ್ನು ಅನಿಷ್ಟಗಳನ್ನು ನಿವಾರಣೆ ಮಾಢುತ್ತಿದ್ದರು ಎಂಬುದನ್ನು ಕರಂಗೋಲು ಸೂಚ್ಯವಾಗಿಸುತ್ತದೆ. ಈ ಮುಖ್ಯ ವಿಚಾರವನ್ನು ಕರಂಗೋಲು ಪಾತ್ರಧಾರಿಗಳ ಕೈಗೆ ನೆಕ್ಕಿಯ ಸೊಪ್ಪನ್ನು ಕೊಟ್ಟು ನಿರ್ವಹಿಸುತ್ತದೆ ಬೇರೆ ಮಾತುಗಳಲ್ಲಿ ಹೇಳುವುದಾದರೆ ಕರಂಗೋಲು ಕುಣಿತ ಮಾಡುವ ಆ ಇಬ್ಬರು ಪಾತ್ರಧಾರಿಗಳು ಟ್ರಾನ್ಸ್ ಏರಿಸಲ್ಪಟ್ಟ ಕಾನದ ಕಟದರೆ ಆಗಿರುತ್ತಾರೆ ಹೊರತು ಅವರು ಬರೀ ಅವರ ಪಾತ್ರಧಾರಿಗಳಲ್ಲ.
- b) ಅಲುಂಬುಡದ ಕೋಲು:
ಪಾಜೇಗುಡ್ಢೆಯ ನೀರು ತೆಗೆಯುವ ಎಪಿಸೋಡ್ ನಲ್ಲಿ ಅಲುಂಬುಡದ ಕೋಲನ್ನು ಪಾಡ್ದನಗಳು ಅಲೌಕಿಕಕ್ಕೆ ಏರಿಸಿವೆ. ಮೂಲತಃ ಮ್ರದುವಾಗಿರುವ ಅಲುಂಬುಡ ಗಿಡದ ಕೋಲನ್ನು ಬಳಸಿ ಕಲ್ಲನ್ನು ಅಗೆದು ಕಾನದ ಕಟದರು ನೀರು ತೆಗೆದ ಅಸಾಮಾನ್ಯತೆಯನ್ನು ಪಾಡ್ದನಗಳು ವ್ಯಕ್ತಪಡಿಸುತ್ತವೆ. ಈ ರೀತಿ ಉಲ್ಲೇಖಗೊಳ್ಳುವ ಅಲುಂಬುಡ ಔಷಧೀಯ ಗುಣವನ್ನು ಹೊಂದಿದ್ದು ಅದರ ಬಳಕೆಯನ್ನು ಕಾನದ ಕಟದರು ಮಾಡುತ್ತಿದ್ದರು ಎಂಬ ಸೂಚನೆಯನ್ನು ಪಾಡ್ದನಗಳು ಕೊಡುತ್ತೀವೆ. ಮೂಲತಃ ಅಲುಂಬುಡದ ಗಿಡ ಮ್ರದುವಾಗಿದ್ದರೂ ಅದರ ಕೋಲಿನಿಂದ ಮನುಷ್ಯರ ದೇಹಕ್ಕೆ ಪೆಟ್ಟು ಕೊಟ್ಟರೆ ಮೇಲು ಮೈಗೆ ಏನೂ ಗಾಯವಾದಂತೆ ಕಂಡುಬರದಿದ್ದರೂ ದೇಹದ ಒಳಗೆ ನುಜ್ಜು ಗುಜ್ಜಾಗುತ್ತದೆ; ರಕ್ತ ಹೆಪ್ಪುಗಟ್ಟುತ್ತದೆ. (ಮಾಹಿತಿ : ದಾಸಪ್ಪ ಎಡಪದವು ) ಈ ಹಿನ್ನೆಲೆಯಲ್ಲಿ ಅಲುಂಬುಡ ಕೋಲಿನ ಅಲೌಕಿಕತೆಯನ್ನು ಕರಂಗೋಲಿಗೆ ಸಂಬಂಧಿಸಿದೆ ಎಂಬುದಾಗಿ ಕಂಡು ಬರುತ್ತದೆ.
- c) ಕರಿಯಂಗಾಳು, ಕರಂಗೋಲು , ಸುಟ್ಟ ಕಾಳು:
ಕರಂಗೋಲು ಪಾಡ್ದನದ ಕೇಂದ್ರ ಇರುವುದೇ ಕಾನದ ಕಟದರು ಭತ್ತದ ವಿಶೇಷ ತಳಿಯಾದ ಅತಿಕಾರೆ ಬೀಜವನ್ನು ತುಳುನಾಡಿಗೆ ತಂದು ಕ್ರಷಿ ಮಾಡುವ ಸಂದರ್ಭದಲ್ಲಿ ಎದುರಿಸುವ ಪಂಥಾಹ್ವಾನಗಳು, ಅಡೆ ತಡೆಗಳನ್ನು ಎದುರಿಸಿ ಅವುಗಳನ್ನು ಮೀರಿದರಲ್ಲಿ ಇದೆ. ಕಾನದ ಕಟದರು ಅತಿಕಾರೆ ಭತ್ತದ ಕ್ರಷಿ ಮಾಡಬೇಕೆಂದು ನಿಶ್ಚಯಿಸಿಕೊಂಡು ಅದರ ತಳಿಯನ್ನು ಕೊಡಲು ತುಳುನಾಡಿನ ಯಾವ ಜನರು ಮುಂದೆ ಬರುವುದಿಲ್ಲ . ಇದರಿಂದ ಬೇಸತ್ತ ಕಾನದ ಕಟದರು ಕಡ್ತಿಕಲ್ಲ ಘಾಟಿಯ ಮೂಲಕ ದಾಟಿ ಇಕ್ಕೇರಿಯ ಕಡೆಗೆ ಪ್ರಯಾಣ ಬೆಳೆಸಿ ಅಲ್ಲಿಂದ ಅತಿಕಾರೆ ತಳಿಯನ್ನು ಸಂಗ್ರಹಿಸಿಕೊಂಡು ಬರುತ್ತಾರೆ. ಇಕ್ಕೇರಿಯ ಜನ ಅತಿಕಾರೆಯ ತಳಿಯನ್ನು ಕೊಟ್ಟರೂ ಅದನ್ನು ಸುಟ್ಟು ಕೊಡುತ್ತಾರೆ. ಅದಕ್ಕೆ ಅದು ಕರಿಯಂಗಾಳು (ಸುಟ್ಟ ಕಾಳು /ಧಾನ್ಯ) > ಕರಂಗೋಲು ಎಂದೆನಿಸಿಕೊಳ್ಳುತ್ತದೆ. ಅತಿಕಾರೆಯನ್ನು ತರುವಲ್ಲಿ ಕಾನದ ಕಟದರು ಎದುರಿಸಿದ ಕಷ್ಟಗಳನ್ನು ಪಾಡ್ದನ ಬೇರೆ ಬೇರೆ ರೀತಿಯಾಗಿ ವಿವರಿಸುತ್ತದೆ. ಮಾದೆರಿನ ದೊಡ್ಡ ಕಾಡು ತಿರುಗಿಸಿ ತರಬೇಕು, ಕೊಟ್ಟೆಯ ಮುಳ್ಳಿನಲ್ಲಿ ಸಿಕ್ಕಿಸಿ ತರಬೇಕು, ನೆಕ್ಕಿ ಸೊಪ್ಪಿನಲ್ಲಿ ಬೀಸಿ ತರಬೇಕು, ಕೊಟ್ಟೆಯ ಮುಳ್ಳಿನಲ್ಲಿ ಸಿಕ್ಕಿಸಿ ತರಬೇಕು, ಇಟ್ಟೆಯ ಸೊಪ್ಪಿನಲ್ಲಿ ಹೊದಿಸಿ ತರಬೇಕು, ಗೆರಟೆಯ ನೀರಿನಲ್ಲಿ ಮುಳುಗಿಸಿ ತರಬೇಕು; ಇಂತಹ ಪಂಥಗಳ ಜೊತೆ ಸೆಣಸಾಡಿ ಸುಟ್ಟ ಅತಿಕಾರೆಯನ್ನು ತರುತ್ತಿದ್ದಾಗ ಇನ್ನೇನು ಕಡ್ತಿಕಲ್ಲ ಘಾಟಿ ಇಳಿಯಬೇಕು ಎನ್ನುವಷ್ಟರಲ್ಲಿ ಚವುಂಡಿ ಎಂಬ ಗಡಿ ರಕ್ಷಕಿ ಕಾನದ ಕಟದರಿಗೆ ದಾರಿಯೇ ಬಿಟ್ಟು ಕೊಡುವುದಿಲ್ಲ. ಕೊನೆಗೆ ಜಗಳ ತಾರಕಕ್ಕೇರಿ ಕೊನೆಗೆ ಕಾನದ ಕಟದರಿಗೆ ಅತಿಕಾರೆಯನ್ನು ಚವುಂಡಿ ಕೊಟ್ಟು ಕಳುಹಿಸಿತ್ತಾಳೆ. ಹೀಗೆ ಸಾಹಸದಿಂದ ಸುಟ್ಟ ಅತಿಕಾರೆ ಕಾಳನ್ನು ಬಿತ್ತಿ ಭತ್ತವನ್ನು ಬೇಳೆಯುತ್ತಾರೆ. ಸುಟ್ಟ ಕಾಳಿಂದ ಭತ್ತವನ್ನು ಬೆಳೆದಿದ್ದೇ ಕಾನದ ಕಟದರ ಮಾಂತ್ರಿಕತೆ ಮತ್ತು ಆ ಅತಿಕಾರೆಯೇ ಮಾಂತ್ರಿಕ ಬೆಳೆ… ಅದುವೇ ಕಾನದ ಕಟದರ ಕಾರ್ನಿಕತೆ. ಈ ಕಾರಣಕ್ಕೆ ಕಾನದ ಕಟದರ ಅಲೋಕಿಕ ನೆಲೆಗೆ ವ್ಯಾಪಿಸಿ ಜನರಿಂದ ಆರಾಧನೆಗೊಳ್ಳುವಂತಾಗುತ್ತದೆ. ಈ ಮಾಂತ್ರಿಕ ಪ್ರಕ್ರಿಯೆಯನ್ನು ಆದಿ ದ್ರಾವಿಡ ಸಮುದಾಯ ತಲೆಮಾರಿಂದ ತಲೆಮಾರಿಗೆ ಕರಂಗೋಲು ಕುಣಿತದ ಮೂಲಕ ದಾಟಿಸುತ್ತಾ ಬಂದಿದೆ.
ಸಂಶೋಧನಾಕಾರರಿಂದ, ಬೇರೆ ಬೇರೆ ಬರಹಗಾರರಿಂದ ಕರಂಗೋಲು ಅಂದರೆ ಕರದಲ್ಲಿ ಹಿಡಿಯುವ ಕೋಲು, ಕರಿಯ ಬಣ್ಣದ ಕೋಲು, ಕರಿಯಂಗಾಳು ಎಂದೆಲ್ಲಾ ಆರ್ಥೆಸಿಕೊಂಡಿದ್ದನ್ನು ನಾವು ಈಗಾಗಲೇ ವಿಶ್ಲೇಷಣೆಗೆ ಒಳಪಡಿಸಿದ್ದೇವೆ. ಕರಂಗೋಲು ಕುಣಿತದ ಅರ್ಥವನ್ನು ಇನ್ನೂ ಮುಂದುವರಿದು ಕೊಡಲು ಯತ್ನಿಸಿದ್ದಾರೆ. ಕರಂಗೋಲು ವೇಷಧಾರಿಗಳಿಗೂ ಕೊಂರ್ಗು ಪಕ್ಕಿಯ ಬಣ್ಣಕ್ಕೂ ಸಂಬಂಧವಿದೆ (ಏರ್ಯ ಲಕ್ಷ್ಮಿ ನಾರಾಯಣ ಆಳ್ವ), ಮಂಗಾರ ಮಾನಿಗ ಕುರೋವು ದಂಪತಿಗಳ ಮಕ್ಕಳಿಗೆ ಮಾತ್ರ ಕರಂಗೋಲು ತರಲು ಸಾಧ್ಯ– ಆ ಮಕ್ಕಳೇ ಕಾರಣಿಕದ ಜೇರ್ಲು-ಅದುವೇ ಕರಂಗೋಲು” (ಡಾ. ಕೆ.ಚಿನ್ನಪ್ಪ ಗೌಡ ) ಎಂದೆಲ್ಲಾ ವಿಶ್ಲೇಷಿಸಿದ್ದಾರೆ. ಇದಕ್ಕೆ ವೈರುಧ್ಯವಾಗಿ ಡಾ.ಕೆ.ಚಿನ್ನಪ್ಪ ಗೌಡರು “…..ಪಠ್ಯದ ವಿವರಗಳನ್ನು ಕ್ರೋಢಿಕರಿಸಿ “ಕಾರಣಿಕದ ಕೋಲು” ಕರಂಗೋಲು ಎಂದು ಅರ್ಥ ಮಾಡುವ ಮನಸ್ಸಾಗುತ್ತದೆ” ಎಂದೆನ್ನುತ್ತಾರೆ. (ಸಿರಿ; ಪುಟ,398)