ಕರಾಟೆ ಶಿಕ್ಷಕ ದಂಪತಿಗಳ ಮೇಲೆ ಲಾಠಿ ಪ್ರಹಾರ:  ಎಎಸ್ಸೈ ಮೇಲೆ ಕ್ರಮಕ್ಕೆ ಗೃಹಮಂತ್ರಿಗೆ ಮನವಿ - Mahanayaka
2:59 AM Friday 20 - September 2024

ಕರಾಟೆ ಶಿಕ್ಷಕ ದಂಪತಿಗಳ ಮೇಲೆ ಲಾಠಿ ಪ್ರಹಾರ:  ಎಎಸ್ಸೈ ಮೇಲೆ ಕ್ರಮಕ್ಕೆ ಗೃಹಮಂತ್ರಿಗೆ ಮನವಿ

karate
08/06/2021

ಮುದ್ದೇಬಿಹಾಳ:  ಕಾರಣವಿಲ್ಲದೆ ಕರಾಟೆ ಶಿಕ್ಷಕ ದಂಪತಿಗಳ ಮೇಲೆ ಲಾಠಿ ಪ್ರಹಾರ ನಡೆಸಿ ಅವರನ್ನು ಗಾಯಗೊಳಿಸಿದ ಭಟ್ಕಳ ಗ್ರಾಮೀಣ ಠಾಣೆಯ ಎಎಸ್ಸೈ ಅವರನ್ನು ಸೇವೆಯಿಂದ ಅಮಾನುತುಗೊಳಿಸಿ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ವಿಜಯಪುರ ಜಿಲ್ಲಾ ಕರಾಟೆ ಶಿಕ್ಷಕರ ಸಂಘದ ಪದಾಧಿಕಾರಿಗಳು ಗೃಹಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷ ಶಿವಕುಮಾರ ಶಾರದಳ್ಳಿ ಮತ್ತಿತರ ಪದಾಧಿಕಾರಿಗಳು, ಭಟ್ಕಳ ತಾಲೂಕಿನ ಹೆಬಳೆ ಗಾಂಧಿನಗರದ ನಿವಾಸಿ ಕರಾಟೆ ಶಿಕ್ಷಕ ಉಮೇಶ ಮೋಗೇರ ಅವರು ತಮ್ಮ ಮನೆಯ ಪಕ್ಕದಲ್ಲೇ ತರಕಾರಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ವಾರದಲ್ಲಿ 3 ದಿನ ಸಂಪೂರ್ಣ ಲಾಕ್ ಡೌನ್ ಹಿನ್ನೆಲೆ ಅಂಗಡಿ ಬಂದ್ ಮಾಡಿದ್ದರು. ಆದರೆ ಮಾವಿನಹಣ್ಣಿನ ವ್ಯಾಪಾರ ಮಾಡುವ ಬೀದಿಬದಿ ವ್ಯಾಪಾರಸ್ಥರು ಪೊಲೀಸರು ಬರುವುದನ್ನು ಕಂಡು 10-12 ಬುಟ್ಟಿಗಳನ್ನು ಮೋಗೇರ ಅವರ ಅಂಗಡಿ ಬಳಿ ಇಟ್ಟು ತೆರಳಿದ್ದರು. ಪೊಲೀಸರು ಬರುವಿಕೆ ಅರಿತ ಕೆಲ ಯುವಕರು ಮೋಗೇರ ಅವರ ಮನೆಯ ಅಂಗಳಕ್ಕೆ ಓಡಿ ಬಂದಿದ್ದರು. ಇದನ್ನು ಕಂಡ ಎಎಸ್ಸೈ  ಅವರು ಹಣ್ಣಿನ ಬುಟ್ಟಿಯ ಬಗ್ಗೆ ವಿಚಾರಿಸುವ ನೆಪದಲ್ಲಿ ಉಮೇಶ ಮೇಲೆ ಲಾಠಿಯಿಂದ ಹಲ್ಲೆ ನಡೆಸಿದ್ದಾರೆ. ಇದನ್ನು ಕಂಡು ಬಿಡಿಸಲು ಬಂದ ಅವರ ಪತ್ನಿಗೂ ಲಾಠಿಯಿಂದ ಥಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಪೊಲೀಸರ ಏಟಿನಿಂದ ಗಾಯಗೊಂಡಿದ್ದ ದಂಪತಿ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅಲ್ಲಿನ ಶಾಸಕ ಸುನೀಲ ನಾಯ್ಕ್ ಅವರಿಗೂ ಪೊಲೀಸರ ದುರ್ವರ್ತನೆ ವಿರುದ್ಧ ದೂರು ಸಲ್ಲಿಸಿದ್ದಾರೆ.


Provided by

ಆದರೂ ಇದುವರೆಗೂ ದುರ್ವರ್ತನೆ ತೋರಿದವರ ಮೇಲೆ ಕ್ರಮ ಜಾರಿಯಾಗಿಲ್ಲ. ಗೃಹಮಂತ್ರಿಗಳು ಈ ಬಗ್ಗೆ ಗಂಭೀರ ಕ್ರಮ ಕೈಕೊಳ್ಳದೇ ಹೋದಲ್ಲಿ ರಾಜ್ಯವ್ಯಾಪಿ ಇರುವ ಕರಾಟೆ ಶಿಕ್ಷಕರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಯಾವುದೇ ತಪ್ಪು ಮಾಡದ ದಂಪತಿಯನ್ನು ವಿಚಾರಿಸುವ ನೆಪದಲ್ಲಿ ಹಲ್ಲೆ ನಡೆಸಿರುವುದು ತಪ್ಪು. ಇದನ್ನು ಕರಾಟೆ ಶಿಕ್ಷಕರ ಸಂಘಟನೆ ಉಗ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ