ಕರ್ಮಠ ಮತಾಂಧತೆಯೂ ತಾಲಿಬಾನ್ ಸಂಸ್ಕೃತಿಯೂ | ನಾ ದಿವಾಕರ - Mahanayaka
11:34 PM Wednesday 5 - February 2025

ಕರ್ಮಠ ಮತಾಂಧತೆಯೂ ತಾಲಿಬಾನ್ ಸಂಸ್ಕೃತಿಯೂ | ನಾ ದಿವಾಕರ

mathandhate
09/09/2021

ಮತಧಾರ್ಮಿಕ ಮೂಲಭೂತವಾದ ಮತ್ತು ಮತಾಂಧತೆ ದೇಶ ಭಾಷೆಗಳ ಗಡಿಯನ್ನು ಮೀರಿ ಬೆಳೆದಿರುವ ಒಂದು ಜಾಗತಿಕ ಸಮಸ್ಯೆ. ಕಳೆದ ಐದಾರು ದಶಕಗಳಲ್ಲಿ ಜಾಗತಿಕ ಬಂಡವಾಳಶಾಹಿಯು ತನ್ನ ಮಾರುಕಟ್ಟೆ ವಿಸ್ತರಣೆಗಾಗಿ ಉತ್ತೇಜಿಸುತ್ತಲೇ ಬಂದಿರುವ ಬಲಪಂಥೀಯ ರಾಜಕಾರಣದ ಒಂದು ಆಯಾಮವನ್ನು ಹಲವು ದೇಶಗಳಲ್ಲಿ ಹರಡಿರುವ ಬಲಪಂಥೀಯ ರಾಜಕಾರಣದಲ್ಲಿ ಮತ್ತು ಇದಕ್ಕೆ ಪೂರಕವಾಗಿ ಬೇರೂರಿ ಬೆಳೆಯುತ್ತಿರುವ ಮತಾಂಧತೆಯಲ್ಲಿ ಗುರುತಿಸಬಹುದು. ವಸಾಹತು ಯುಗದಲ್ಲಿ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಔದ್ಯೋಗಿಕ ಬಂಡವಾಳವನ್ನು ಅಸ್ತ್ರವನ್ನಾಗಿ ಬಳಸಿಕೊಂಡು ತೃತೀಯ ವಿಶ್ವದ ರಾಷ್ಟ್ರಗಳಲ್ಲಿ ನೆಲೆ ಕಂಡುಕೊಂಡಿದ್ದ ಪಶ್ಚಿಮ ರಾಷ್ಟ್ರಗಳು, ನವ ಉದಾರವಾದದ ಡಿಜಿಟಲ್ ಯುಗದಲ್ಲಿ ತನ್ನ ಬಾಹುಗಳನ್ನು ವಿಸ್ತರಿಸಲು ಬಲಪಂಥೀಯ ರಾಜಕಾರಣವನ್ನು ಅವಲಂಬಿಸಿದೆ. ಇದರ ಒಂದು ಮುಖವನ್ನು ತಾಲಿಬಾನ್ ಆಕ್ರಮಿತ ಆಫ್ಘಾನಿಸ್ತಾನದಲ್ಲಿ ಕಾಣುತ್ತಿದ್ದೇವೆ.

‘ ತಾಲಿಬಾನ್ ’ ಇಂದು ಜಾಗತಿಕ ರಾಜಕೀಯ ಸಂಕಥನದ ಕೇಂದ್ರ ವಸ್ತುವಾಗಿ ಪರಿಣಮಿಸಿದೆ. ಭಯೋತ್ಪಾದನೆ, ಜಿಹಾದ್, ಮತಾಂಧತೆ ಮತ್ತು ಮತೀಯ ರಾಜಕಾರಣಕ್ಕೆ ಸಂವಾದಿಯಾಗಿ ತಾಲಿಬಾನ್ ಬಳಕೆಯಾಗುತ್ತಿರುವುದು ಅಚ್ಚರಿಯೇನಲ್ಲ. ಏಕೆಂದರೆ ಒಂದು ಭೌಗೋಳಿಕ ರಾಷ್ಟ್ರದಲ್ಲಿ ತನ್ನ ಕರ್ಮಠ ಮತೀಯ ಸಿದ್ಧಾಂತಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿ, ಹತ್ತು ವರ್ಷಗಳ ಕಾಲ ಲಕ್ಷಾಂತರ ಜನರನ್ನು ಅಂಧಕಾರದಲ್ಲಿರಿಸಿದ ಇತಿಹಾಸಕ್ಕೆ ತಾಲಿಬಾನ್ ಸಾಕ್ಷಿಯಾಗಿದೆ. ವಿಶ್ವದ ಇತರೆಡೆಗಳಲ್ಲಿ ಮೂಲಭೂತವಾದಿಗಳಿಗೆ, ಮತಾಂಧ ಶಕ್ತಿಗಳಿಗೆ ಮತ್ತು ರಾಜಕೀಯ ಅಧಿಕಾರಕ್ಕಾಗಿ ಹಂಬಲಿಸುವ ಧಾರ್ಮಿಕ ಮೂಲಭೂತವಾದಿ ಸಂಘಟನೆಗಳಿಗೆ ತಾಲಿಬಾನ್ ಅಧಿಕಾರ ರಾಜಕಾರಣದ ನೀಲನಕ್ಷೆಯನ್ನೇ ಒದಗಿಸಿದೆ.

ಭಾರತದಲ್ಲಿಯೂ ಸಹ ಸಾರ್ವಜನಿಕ ಚರ್ಚೆಗಳಲ್ಲಿ, ಮಾಧ್ಯಮಗಳ ಸುದ್ದಿ ಪ್ರಸರಣದಲ್ಲಿ ಮತ್ತು ರಾಜಕೀಯ ಸಂಕಥನಗಳಲ್ಲಿ ‘ತಾಲಿಬಾನ್’ ಪದವನ್ನು ಮತಾಂಧತೆಗೆ, ಮೂಲಭೂತವಾದಕ್ಕೆ ಸಂವಾದಿಯಾಗಿ ಬಳಸಲಾಗುತ್ತಿದೆ. ಮತಾಂಧತೆ ಮತ್ತು ಧಾರ್ಮಿಕ ಮೂಲಭೂತವಾದ ಶೂನ್ಯದಿಂದ ಸೃಷ್ಟಿಯಾದ ವಿದ್ಯಮಾನಗಳಲ್ಲ ಎನ್ನುವುದನ್ನು ಕಳೆದ ಒಂದು ಶತಮಾನದ ಭಾರತೀಯ ಇತಿಹಾಸದಲ್ಲೇ ಗುರುತಿಸಲು ಸಾಧ್ಯ. ಬಂಡವಾಳಶಾಹಿಯ ಅಭಿವೃದ್ಧಿಯಾಗುತ್ತಿರುವಂತೆಲ್ಲಾ, ಜನಸಮುದಾಯಗಳು ಅಭಿವೃದ್ಧಿಯ ಅಂಚಿಗೆ ತಳ್ಳಲ್ಪಡುತ್ತವೆ. ಅವಕಾಶವಂಚಿತ ಸಮುದಾಯಗಳು ತಮ್ಮ ಮೂಲ ನೆಲೆಗಳನ್ನೇ ಕಳೆದುಕೊಳ್ಳುತ್ತವೆ. ಶೋಷಿತ ಸಮುದಾಯಗಳು ಒಂದೆಡೆ ಮಾರುಕಟ್ಟೆ ಆರ್ಥಿಕತೆ ಮತ್ತೊಂದೆಡೆ ಅಧಿಕಾರ ರಾಜಕಾರಣದ ಕರಾಳ ಆಡಳಿತ ನೀತಿಗಳಿಂದ ಜರ್ಝರಿತವಾಗುತ್ತವೆ. ಈ ಪರಿಸ್ಥಿತಿಗಳಲ್ಲಿ ನೊಂದ ಜನಸಮುದಾಯಗಳ ಆಕ್ರೋಶ ಮತ್ತು ಪ್ರತಿರೋಧ ಹೆಚ್ಚಾದಂತೆಲ್ಲಾ, ಈ ಪ್ರತಿರೋಧದ ದನಿಗಳನ್ನು ಅಡಗಿಸುವ ಶಾಸನ ಬದ್ಧ ಪ್ರಯತ್ನಗಳೂ ಹೆಚ್ಚಾಗುತ್ತಲೇ ಹೋಗುತ್ತವೆ.

ಈ ಸನ್ನಿವೇಶದಲ್ಲಿ ಜನಸಮುದಾಯಗಳಲ್ಲಿ ಮಡುಗಟ್ಟಿರುವ ಪ್ರತಿರೋಧವನ್ನು ಭೇದಿಸಲು ಬಲಪಂಥೀಯ ರಾಜಕಾರಣ ಮತ್ತು ಈ ರಾಜಕಾರಣದ ಮೂಲ ಸೆಲೆ, ಮತೀಯವಾದ ಒಂದು ಪ್ರಬಲ ಅಸ್ತ್ರವಾಗಿ ಪರಿಣಮಿಸುತ್ತದೆ. ಭಾರತದಂತಹ ವಿಭಿನ್ನ ಧರ್ಮಗಳ, ವೈವಿಧ್ಯಮಯ ಸಂಸ್ಕೃತಿಗಳ ನೆಲದಲ್ಲಿ ಮತೀಯವಾದ ಸುಲಭವಾಗಿ ಬೇರೂರಲು ಸಾಧ್ಯವಾಗುತ್ತದೆ. ಈ ಪ್ರಕ್ರಿಯೆಯ ಆರಂಭವನ್ನು ಸಾವರ್ಕರ್, ಗೋಲ್ವಾಲ್‍ಕರ್ ಮುಂತಾದ ಹಿಂದೂ ಮತೀಯವಾದದ ಪ್ರವರ್ತಕರ ಚಿಂತನೆಗಳಲ್ಲೇ ಗುರುತಿಸಬಹುದು. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಉಗಮಿಸಿದ ಈ ಚಿಂತನೆಗಳಿಗೆ ಪೂರಕವಾಗಿ ಅಂದಿನ ಮುಸ್ಲಿಂಲೀಗ್, ಜಿನ್ನಾ ಮುಂತಾದ ನಾಯಕರ ಗರಡಿಯಲ್ಲಿ ಬೆಳೆದ ಮುಸ್ಲಿಂ ಮೂಲಭೂತವಾದವೇ ದೇಶದ ವಿಭಜನೆಗೂ ಕಾರಣವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಇಂದು ನಾವು ವಿಭಜನೆಯ ಸಂದರ್ಭದ ಕತ್ತು ಸೀಳುವ ಕ್ರೌರ್ಯವನ್ನು ಸ್ಮರಿಸಲು ಒಂದು ದಿನವನ್ನೂ ನಿಗದಿಪಡಿಸಿದ್ದೇವೆ. ಈ ಕ್ರೌರ್ಯದ ಹಿಂದಿರುವ ಕರಾಳ ಚಹರೆಗಳಿಗಾಗಲೀ, ಚರಿತ್ರೆಗಾಗಲೀ ಮುಖಾಮುಖಿಯಾಗದೆ ಹೋದರೆ ನಮಗೆ ಭಾರತದಲ್ಲಿ ಇಂದು ತಾಂಡವಾಡುತ್ತಿರುವ ಮತಾಂಧತೆ ಮತ್ತು ಮತೀಯವಾದದ ಕ್ರೌರ್ಯ ಶೂನ್ಯದಿಂದ ಉದ್ಭವಿಸಿದ ವಿದ್ಯಮಾನದಂತೆಯೇ ಕಾಣಲು ಸಾಧ್ಯ. ಪ್ರಜ್ಞಾವಂತ ಸಮಾಜವಾಗಿ ನಾವು ಈ ಚಹರೆಗಳನ್ನು ಭೇದಿಸಿ ನೋಡಿದಾಗ ನಮಗೆ ಇಂದಿನ ತಾಲಿಬಾನ್ ಅಂದೇ ಕಾಣುವುದೂ ಸಾಧ್ಯ. ಈ ಮುಖಾಮುಖಿಗೆ ವಿಮುಖರಾದವರಿಗೆ ಮಾತ್ರವೇ ಜಾವೆದ್ ಅಖ್ತರ್, ನಾಸಿರುದ್ದಿನ್ ಶಾ ಮುಂತಾದವರು ದೇಶದ್ರೋಹಿಗಳಾಗಿ, ಧರ್ಮಭಷ್ಟರಾಗಿ ಕಾಣಲು ಸಾಧ್ಯ. ಭಾರತದಲ್ಲಿ ಭಿನ್ನ ಚಿಂತನೆಯ ವಿರುದ್ಧ, ಭಿನ್ನ ಚಿಂತಕರ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ಧಾಳಿಯನ್ನು ಗಮನದಲ್ಲಿಟ್ಟುಕೊಂಡೇ ಕವಿ ಜಾವೆದ್ ಅಖ್ತರ್ ಭಾರತದಲ್ಲೂ ಆರೆಸ್ಸೆಸ್ ಮತ್ತು ಹಿಂದುತ್ವ ಕಾಲಾಳುಗಳು ತಾಲಿಬಾನ್ ತಂತ್ರಗಾರಿಕೆಯನ್ನು ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ಆಫ್ಘಾನ್‍ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಿರುವುದನ್ನು ಸಂಭ್ರಮಿಸುವ ಭಾರತದ ಮುಸ್ಲಿಮರ ಮನಸ್ಥಿತಿಯ ಬಗ್ಗೆ ಖ್ಯಾತ ನಟ ನಾಸಿರುದ್ದಿನ್ ಶಾ ಎಚ್ಚರಿಸಿದ್ದಾರೆ.

ಈ ಇಬ್ಬರೂ ಖ್ಯಾತನಾಮರ ಅಭಿಪ್ರಾಯಗಳು ಮತಾಂಧತೆಯ ವಿರುದ್ಧ, ಮೂಲಭೂತವಾದದ ವಿರುದ್ಧ ಇರುವುದು ಸ್ಪಷ್ಟ. ಆದರೆ ಇಬ್ಬರೂ ವಿಭಿನ್ನ ಕಾರಣಗಳಿಗಾಗಿ ಮತೀಯವಾದಿಗಳ ಬೌದ್ಧಿಕ ಧಾಳಿಗೊಳಗಾಗಿದ್ದಾರೆ. ಮೂಲಭೂತವಾದಿ ಹಿಂದುತ್ವವಾದಿಗಳಿಗೆ ಜಾವೆದ್ ಅಖ್ತರ್ ದೇಶದ್ರೋಹಿಯಾಗಿ ಕಂಡರೆ, ಮುಸ್ಲಿಂ ಮೂಲಭೂತವಾದಿಗಳಿಗೆ ನಾಸಿರುದ್ದಿನ್ ಧರ್ಮಭ್ರಷ್ಟರಂತೆ ಕಾಣುತ್ತಾರೆ. ತಾಲಿಬಾನ್ ಸಂಸ್ಕೃತಿ ಎಂದರೇನು ಎಂದು ವ್ಯಾಖ್ಯಾನಿಸಲು ಇದಕ್ಕಿಂತಲೂ ಉತ್ತಮ ನಿದರ್ಶನ ಬೇಕಿಲ್ಲ ಎನಿಸುತ್ತದೆ. ನವ ಉದಾರವಾದ ಮತ್ತು ಜಾಗತೀಕರಣ ಪ್ರಕ್ರಿಯೆ ಭಾರತದಲ್ಲಿ ಕ್ಷಿಪ್ರ ಗತಿಯಲ್ಲಿ ಸಾಗುತ್ತಿರುವುದಕ್ಕೆ ಪೂರಕವಾಗಿಯೇ ಮುಸ್ಲಿಂ ಮತಾಂಧತೆ ಮತ್ತು ಮತೀಯವಾದವೂ ಬೆಳೆಯುತ್ತಿರುವುದನ್ನು ಅಲ್ಲಗಳೆಯುವುದು  ದೊಡ್ಡ ಪ್ರಮಾದವೇ ಆಗುತ್ತದೆ. ಕಾಶ್ಮೀರ ವಿವಾದದಲ್ಲೂ ಸಹ ಕಾಶ್ಮೀರಿಗಳ ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಗಳನ್ನು ನುಂಗಿಹಾಕಿ ಅಲ್ಲಿನ ಮೂಲಭೂತವಾದಿ ಮುಸ್ಲಿಂ ಸಂಘಟನೆಗಳು, ಇಡೀ ಕಾಶ್ಮೀರವನ್ನು ಇಸ್ಲಾಮಿಕ್ ಅಸ್ಮಿತೆಯಲ್ಲಿ ಮುಳುಗಿಸಿದ್ದನ್ನೂ ಈ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿಸಬೇಕಿದೆ.

ಆರೆಸ್ಸೆಸ್ ಅಥವಾ ವಿಶ್ವಹಿಂದೂ ಪರಿಷತ್ ಮತ್ತಾವುದೇ ಹಿಂದೂ ಅಥವಾ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳನ್ನು ತಾಲಿಬಾನ್‍ ನೊಡನೆ ಹೋಲಿಸುವುದು ಮೇಲ್ನೋಟಕ್ಕೆ ಅತಿಶಯ ಎನಿಸಬಹುದು. ಸಂಘಟನಾತ್ಮಕವಾಗಿ ಅಥವಾ ನೇರ ರಾಜಕಾರಣದ ಹಿನ್ನೆಲೆಯಲ್ಲಿ ಇಂತಹ ಹೋಲಿಕೆಗಳು ಉತ್ಪ್ರೇಕ್ಷಿತ ಎನಿಸಲೂಬಹುದು. ಆದರೆ ಭಾರತದ ಸಾಂಸ್ಕೃತಿಕ ರಾಜಕಾರಣವನ್ನೇ ಸೂಕ್ಷ್ಮವಾಗಿ ಗಮನಿಸಿ, 1947ರ ವಿಭಜನೆಯ ಹತ್ಯಾಕಾಂಡಗಳಿಂದ 2013ರ ಮುಝಫರ್‍  ನಗರದ ಗಲಭೆಗಳವರೆಗಿನ ಕರಾಳ ಪುಟಗಳನ್ನು ತಿರುವಿ ಹಾಕಿದಾಗ ಅಲ್ಲಿ ನಮಗೆ ತಾಲಿಬಾನ್ ಅನುಸರಿಸಿದ ಅನೇಕ ಕುಟಿಲ ತಂತ್ರಗಾರಿಕೆಗಳ ದರ್ಶನವಾಗುತ್ತದೆ. ಇಲ್ಲಿ ಹಿಂದೂ ಮೂಲಭೂತವಾದಿ ಸಂಘಟನೆಗಳನ್ನು ಪ್ರತ್ಯೇಕಿಸಿ ನೋಡುವುದಕ್ಕಿಂತಲೂ, ಈ ಮತೀಯವಾದಕ್ಕೆ ಪೂರಕವಾಗಿ ಮತ್ತು ಇದರಿಂದ ಉತ್ತೇಜಿತರಾಗಿ ಬೆಳೆದುಬಂದ ಮುಸ್ಲಿಂ ಮತಾಂಧತೆಯನ್ನೂ ಪರಾಮರ್ಶಿಸಿದಾಗ ತಾಲಿಬಾನ್ ಸಂಸ್ಕೃತಿ ಭಾರತದಲ್ಲಿ ಎಷ್ಟು ಬೇರೂರಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಭಯೋತ್ಪಾದನೆ ಮತ್ತು ತತ್ಸಂಬಂಧಿತ ಬಾಂಬ್ ಸ್ಫೋಟಗಳನ್ನು ಹೊರಗಿಟ್ಟು ನೋಡಿದರೂ, ಕಳೆದ ಮೂರು ದಶಕಗಳಲ್ಲಿ ಭಾರತದಲ್ಲಿ ನಡೆದಿರುವ, ಇಂದಿಗೂ ನಡೆಯುತ್ತಿರುವ ಮತಾಂಧರ ಧಾಳಿ ತಾಲಿಬಾನ್ ಸಂಸ್ಕೃತಿಯನ್ನೇ ನೆನಪಿಸುತ್ತದೆ. 1961ರ ಜಬಲ್ಪುರ, 1969ರ ಅಹಮದಾಬಾದ್, 1980ರ ಮೊರಾದಾಬಾದ್, 1984ರ ಭಿವಂಡಿ ಮತ್ತು ಸಿಖ್ ವಿರೋಧಿ ದಂಗೆಗಳು, 1989ರ ಭಗಲ್ಪುರ, 1989-92ರ ಅಯೋಧ್ಯೆ ರಥಯಾತ್ರೆಯ ಗಲಭೆಗಳು, 1993ರ ಮುಂಬಯಿ, 2002ರ ಗುಜರಾತ್, 2009ರ ಮೀರತ್, 2013ರ ಮುಝಫರ್‍ನಗರ ಮತ್ತು ಇತ್ತೀಚಿನ 2020ರ ದೆಹಲಿ ಈ ಎಲ್ಲ ಗಲಭೆಗಳಲ್ಲಿ ನಡೆದಿರುವ ಹತ್ಯಾಕಾಂಡಗಳು ಮತ್ತು ದೌರ್ಜನ್ಯಗಳು ಮತಾಂಧತೆಯ ಫಲವೇ ಆಗಿದೆಯಲ್ಲವೇ ? ಈ ಗಲಭೆಗಳಿಗೆ ಯಾರು ಕಾರಣ ಎನ್ನುವುದು ಸುಸ್ಪಷ್ಟ ಆದರೆ ಏನು ಕಾರಣ ಎಂದು ಯೋಚಿಸಿದಾಗ, ನಮ್ಮ ಮುಂದೆ ತಾಲಿಬಾನ್ ಒಂದು ಸಂಕೇತದಂತೆ ಕಾಣುತ್ತದೆ.

ಒಂದು ನಿರ್ದಿಷ್ಟ ಮತಧರ್ಮದ ಶ್ರೇಷ್ಠತೆಯನ್ನು ಪ್ರತಿಪಾದಿಸುವುದು ಮತಶ್ರದ್ಧೆ ಎನಿಸಿಕೊಳ್ಳುತ್ತದೆ, ಈ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತಾ ಅನ್ಯ ಧರ್ಮಗಳನ್ನು ಅಲ್ಲಗಳೆಯುವುದು ಮತ್ತು ನಿಕೃಷ್ಟವಾಗಿ ಕಾಣುವುದು ಧಾರ್ಮಿಕ ಅಂಧಶ್ರದ್ಧೆ ಎನಿಸಿಕೊಳ್ಳುತ್ತದೆ. ಈ ಅಂಧಶ್ರದ್ಧೆ ಮತ್ತು ಶ್ರೇಷ್ಠತೆಯ ಅಹಮಿಕೆ ಸಾಂಸ್ಕೃತಿಕ ಪಾರಮ್ಯಕ್ಕಾಗಿ ಹಂಬಲಿಸುವ ಸಾಧನಗಳಾಗಿ ಪರಿಣಮಿಸಿದಾಗ, ಮತಾಂಧತೆ ಸೃಷ್ಟಿಯಾಗುತ್ತದೆ. ಉಳಿದೆಲ್ಲಾ ಮತಧರ್ಮಗಳನ್ನು ನಿರಾಕರಿಸುತ್ತಾ ತನ್ನ ನಿರ್ದಿಷ್ಟ ಮತಧರ್ಮದ ನಂಬಿಕೆಗಳನ್ನೇ ಜನಸಾಮಾನ್ಯರ ಮೇಲೆ ಹೇರುವ ಒಂದು ಪ್ರಕ್ರಿಯೆ ಈ ಮತಾಂಧತೆಯಿಂದಲೇ ಆರಂಭವಾಗುತ್ತದೆ. ತಮ್ಮ ಧಾರ್ಮಿಕ ನಂಬಿಕೆಗಳಿಗೆ ಪವಿತ್ರ ಗ್ರಂಥಗಳನ್ನೋ ಅಥವಾ ಪ್ರಾಚೀನ ಕಾಲದ ಧರ್ಮೋಪದೇಶಗಳನ್ನೋ ಆಧಾರವಾಗಿಟ್ಟುಕೊಂಡು, ಈ ನಂಬಿಕೆಗಳನ್ನು ಧಿಕ್ಕರಿಸುವ ಅಥವಾ ನಿಯಮಗಳನ್ನು ಮೀರುವ ಎಲ್ಲ ಶಕ್ತಿಗಳನ್ನೂ ಇಲ್ಲವಾಗಿಸುವ ಒಂದು ಧೋರಣೆ ಮತೀಯವಾದಿ ಫ್ಯಾಸಿಸಂಗೆ ಎಡೆಮಾಡಿಕೊಡುತ್ತದೆ.

ತಾಲಿಬಾನ್ ಈ ಧೋರಣೆಗೆ ಬದ್ಧವಾಗಿದೆ. ಬಹುಪಾಲು ಇಸ್ಲಾಂ ವಿದ್ವಾಂಸರೇ ಒಪ್ಪದಂತಹ ಕೆಲವು ನಿಯಮಗಳನ್ನು ತಾಲಿಬಾನ್ ಪವಿತ್ರ ಖುರಾನ್ ಹೆಸರಿನಲ್ಲಿ, ಅಲ್ಲಾಹ್‍ ನ ಹೆಸರಿನಲ್ಲಿ, ಇಸ್ಲಾಂ ಧರ್ಮದ ಮೂಲ ತತ್ವಗಳ ಹೆಸರಿನಲ್ಲಿ ಜಾರಿಗೊಳಿಸುತ್ತಾ ಹೋಗುತ್ತದೆ. ಇದರ ಒಂದು ಪರ್ವವನ್ನು ತಾಲಿಬಾನ್ ತನ್ನ ಹತ್ತು ವರ್ಷದ (1991-2001) ಆಳ್ವಿಕೆಯಲ್ಲಿ ಪ್ರದರ್ಶಿಸಿದ್ದು, ಇಂದು ತಾಲಿಬಾನ್ ಆಕ್ರಮಿಸಿಕೊಂಡ ಕೂಡಲೇ ಸಾವಿರಾರು ಮುಸ್ಲಿಮರೂ ಸಹ ಆಫ್ಘಾನಿಸ್ತಾನವನ್ನು ತೊರೆಯಲು ಹಂಬಲಿಸಿದ್ದು ಈ ಮತಾಂಧತೆಯ ಕ್ರೌರ್ಯ ಎಷ್ಟು ಪರಿಣಾಮಕಾರಿಯಾಗಿರಬಹುದು ಎನ್ನುವುದನ್ನು ಸೂಚಿಸುತ್ತದೆ. ಜನಸಾಮಾನ್ಯರ ಬದುಕುವ ಹಕ್ಕನ್ನೂ ಕಸಿದುಕೊಳ್ಳುವಂತಹ ಒಂದು ಕರ್ಮಠ ಸಿದ್ಧಾಂತವನ್ನು ತಾಲಿಬಾನ್ ಇಸ್ಲಾಂ ಹೆಸರಿನಲ್ಲಿ ಅನುಸರಿಸುತ್ತದೆ.

ಸಹಜವಾಗಿಯೇ ಇಂತಹ ಕ್ರೂರ ಆಡಳಿತ ವ್ಯವಸ್ಥೆಯನ್ನು ಸಂಭ್ರಮಿಸುವ ಮನಸುಗಳು ಯಾವುದೇ ದೇಶದಲ್ಲಿದ್ದರೂ ಪ್ರಶ್ನಾರ್ಹವಾಗುತ್ತವೆ. ನಾಸಿರುದ್ದಿನ್ ಶಾ ಇದನ್ನೇ ಹೇಳಿದ್ದಾರೆ. ಭಾರತದಲ್ಲಿ ತಾಲಿಬಾನ್ ಆಳ್ವಿಕೆಯ ತದ್ರೂಪನ್ನು ನಾವು ಕಂಡಿಲ್ಲ ಎಂದರೆ ಅದಕ್ಕೆ ಕಾರಣ ಈ ದೇಶದ ಬಹುಪಾಲು ಜನತೆ ಮತಾಂಧತೆಯ ಪ್ರಭಾವದಿಂದ ಹೊರತಾಗಿದ್ದಾರೆ, ಜಾತ್ಯತೀತತೆ ಈ ದೇಶದ ಬಹುಸಂಖ್ಯಾತ ಜನತೆಯ ಅಂದರೆ ದಲಿತರ, ಶೋಷಿತರ ಸಂಸ್ಕøತಿಯಲ್ಲಿ ಅಡಗಿದೆ. ಆದರೆ ಕಳೆದ ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣದಲ್ಲಿ ಕೋಮು ಗಲಭೆಗಳು, ಹತ್ಯಾಕಾಂಡಗಳ ಹೊರತಾಗಿಯೂ ಹಿಂದುತ್ವವಾದದ ಒಂದು ಕರ್ಮಠ ಸಿದ್ಧಾಂತವನ್ನು ಜನಸಾಮಾನ್ಯರ ಮೇಲೆ ಹೇರುವ ಪ್ರಯತ್ನಗಳು ನಡೆಯುತ್ತಿರುವುದನ್ನೂ ಅಲ್ಲಗಳೆಯಲಾಗುವುದಿಲ್ಲ.

ಒಂದು ಕಾಲದಲ್ಲಿ ಮುಂಬಯಿ, ಅಹಮದಾಬಾದ್ ನಂತರದಲ್ಲಿ ಗುಜರಾತ್, ಕರ್ನಾಟಕದ ಕರಾವಳಿ ಪ್ರದೇಶಗಳು ಈ ಕರ್ಮಠ ಸಿದ್ಧಾಂತ ಮತ್ತು ಮತಾಂಧತೆಯ ಪ್ರಯೋಗಾಲಯಗಳಾಗಿ ಪರಿಣಮಿಸಿರುವುದನ್ನು ಇತಿಹಾಸವೇ ದಾಖಲಿಸಿದೆ. ಗ್ರಾಹಂ ಸ್ಟೈನ್ ಎಂಬ ಕ್ರೈಸ್ತ ಪಾದ್ರಿಯ ಭೀಕರ ಹತ್ಯೆಯಿಂದ ಗೌರಿ ಲಂಕೇಶ್ ಹತ್ಯೆಯವರೆಗೆ ಈ ಮತಾಂಧತೆಯ ಕ್ರೂರ ಸ್ವರೂಪ ವಿಭಿನ್ನ ಆಯಾಮಗಳಲ್ಲಿ ಅನಾವರಣಗೊಂಡಿದೆ. ನವ ಉದಾರವಾದ ಮತ್ತು ಬಲಪಂಥೀಯ ರಾಜಕಾರಣದ ಪ್ರಾಬಲ್ಯ ಹೆಚ್ಚುತ್ತಿರುವುದಕ್ಕೆ ಪೂರಕವಾಗಿಯೇ ಈ ಮತಾಂಧರ ಧಾಳಿಗಳೂ ನಡೆಯುತ್ತಾ ಬಂದಿರುವುದನ್ನು ಗಮನಿಸದೆ ಇರಲಾಗದು. ಈ ಮನಸ್ಥಿತಿಯೇ ಅಕ್ಲಾಖ್‍ನಂತಹ ಅಮಾಯಕ ಮುಸ್ಲಿಮನನ್ನು ದನದ ಮಾಂಸದ ತುಂಡು ಮನೆಯಲ್ಲಿಟ್ಟ ಕಾರಣಕ್ಕೆ ಬಲಿತೆಗೆದುಕೊಳ್ಳುತ್ತದೆ. ಈ ಮನಸ್ಥಿತಿಯಿಂದಲೇ ಅಧಿಕೃತ ಪರವಾನಗಿಯೊಂದಿಗೆ ಸಾಕಾಣಿಕೆಗಾಗಿ ಗೋವುಗಳನ್ನು ಕೊಂಡೊಯ್ಯುತ್ತಿದ್ದ ಪೆಹ್ಲುಖಾನ್ ಗೋರಕ್ಷಕರ ಹಲ್ಲೆಗೆ ಬಲಿಯಾಗುತ್ತಾನೆ.

ಗೋ ರಕ್ಷಣೆ, ಲವ್ ಜಿಹಾದ್ ಮತ್ತು ಇತರ ನಿರ್ದಿಷ್ಟ ಮತೀಯ ದೃಷ್ಟಿಕೋನದ ಧಾರ್ಮಿಕ ಚಿಂತನೆಗಳಿಗೆ ಭಾರತದಲ್ಲಿ ಅಸಂಖ್ಯಾತ ಅಮಾಯಕರು ಬಲಿಯಾಗುತ್ತಲೇ ಇದ್ದಾರೆ. ತಾಲಿಬಾನ್ ಆಳ್ವಿಕೆಯ ಆಫ್ಘಾನಿಸ್ತಾನದಲ್ಲಿ ಹಿಜಬ್ ಧರಿಸದ ಅಥವಾ ಹಾಡು ಹೇಳುವ ಮುಸ್ಲಿಂ ಮಹಿಳೆ ಮತಾಂಧರಿಗೆ ಬಲಿಯಾಗುತ್ತಾಳೆ, ಭಾರತದಲ್ಲಿ ತಾನು ಇಷ್ಟಪಟ್ಟ ಹಿಂದೂ ಯುವಕನಲ್ಲಿ ಅನುರಕ್ತಳಾಗುವ ಮುಸ್ಲಿಂ ಮಹಿಳೆ ಹಲ್ಲೆಗೊಳಗಾಗುತ್ತಾಳೆ ಅಥವಾ ಹತ್ಯೆಗೀಡಾಗುತ್ತಾಳೆ. ಎರಡೂ ಕುಟುಂಬಗಳೂ ಮತಾಂಧರ ಧಾಳಿ ಎದುರಿಸಬೇಕಾಗುತ್ತದೆ. ಗೋ ರಕ್ಷಣೆಯ ಹೆಸರಿನಲ್ಲಿ ದೇಶಾದ್ಯಂತ ಸೃಷ್ಟಿಯಾಗಿರುವ ಅನಧಿಕೃತ ಸೇನಾನಿಗಳು ಕಾನೂನು, ಶಾಸನಗಳನ್ನೂ ಮೀರಿ ಯಾರ ಮೇಲಾದರೂ ಹಲ್ಲೆ ನಡೆಸುವ ಸ್ವಾತಂತ್ರ್ಯವನ್ನೂ ಗಳಿಸಿದ್ದಾರೆ. ತಾಲಿಬಾನ್ ಆಳ್ವಿಕೆಯಲ್ಲಿ ಇದು ಸಹಜ ಪ್ರವೃತ್ತಿಯಾಗಿರುತ್ತದೆ.

ಈ ಮನಸ್ಥಿತಿ ಏಕೆ ಬಲಗೊಳ್ಳುತ್ತಾ ಹೋಗುತ್ತಿದೆ ? ಸಂವಿಧಾನಬದ್ಧರಾಗಿ ಚುನಾಯಿತರಾದ ಒಬ್ಬ ಸಂಸತ್ ಸದಸ್ಯ ತೇಜಸ್ವಿ ಸೂರ್ಯ ತಮ್ಮ ಟ್ವೀಟ್ ಒಂದರಲ್ಲಿ “ ಈ ಕಾರು ಟಿಆರ್‍ಎಸ್ ಪಕ್ಷದ್ದು. ಆದರೆ ಅದರ ಚಾಲಕ ರಜಾಕರ್ ಸಮುದಾಯದವನು. ನಮ್ಮಲ್ಲಿ ಹರಿಯುತ್ತಿರುವುದು ಸರ್ದಾರ್ ಪಟೇಲ್ ಅವರ ರಕ್ತ, ನಾವೀಗ ರಜಾಕರ್ ರಾಜ್ ಕೊನೆಗೊಳಿಸಲು ಪಣ ತೊಡಬೇಕಿದೆ ” (ಡೆಕ್ಕನ್ ಹೆರಾಲ್ಡ್) ಎಂದು ಹೇಳಿರುವುದನ್ನು ಇಲ್ಲಿ ಗಮನಿಸಬೇಕು. ರಜಾಕರ್ ಸಮುದಾಯ ರಜಾಕ್ ಆಳ್ವಿಕೆಯಲ್ಲಿ ಸೈನ್ಯದಲ್ಲಿದ್ದ ಸೇನಾನಿಗಳು, ಸ್ವಾತಂತ್ರ್ಯಾನಂತರದಲ್ಲಿ ಸೈಕಲ್ ರಿಕ್ಷಾ, ಜಟಕಾ, ಟ್ಯಾಕ್ಸಿ ಚಾಲನೆಯಲ್ಲಿ ತಮ್ಮ ಜೀವನ ಸವೆಸುತ್ತಿರುವ ಒಂದು ಸಣ್ಣ ಸಮುದಾಯ ಇದು. ಇಂತಹ ಒಂದು ಅಮಾಯಕ ಸಮುದಾಯವನ್ನು, ಇತಿಹಾಸದ ಕರಾಳ ಪರ್ವದೊಂದಿಗೆ ಸಮೀಕರಿಸಿ, ನಿರ್ನಾಮ ಮಾಡುವ ಮನಸ್ಥಿತಿಯನ್ನು ಹೇಗೆ ವಿಶ್ಲೇಷಿಸಬೇಕು ?

ಭಿನ್ನ ಚಿಂತಕರನ್ನು ಪಾಕಿಸ್ತಾನಕ್ಕೆ ರವಾನಿಸುವ, ಈಗ ಆಫ್ಘಾನಿಸ್ತಾನಕ್ಕೆ ರವಾನಿಸುವ, ಗುಂಡಿಟ್ಟುಕೊಲ್ಲುವ, ಅಥವಾ ಅನ್ಯ ಮತದ ಜನಸಮುದಾಯಗಳನ್ನು ಇಡಿಯಾಗಿ ತಾಲಿಬಾನ್‍ನೊಡನೆ ಹೋಲಿಕೆ ಮಾಡುವ ಪ್ರವೃತ್ತಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಹೆಚ್ಚಾಗುತ್ತಿರುವುದನ್ನು ಗಮನಿಸಬೇಕಿದೆ. ಮೂಲಭೂತವಾದ ಮತ್ತು ಮತಾಂಧತೆಗೆ ಭಾರತದ್ದೇ ಆದ ಒಂದು ವೈಶಿಷ್ಟ ಲಕ್ಷಣಗಳಿವೆ ಎನ್ನುವುದನ್ನು ನಾವು ನೆನಪಿಡಬೇಕು. ಸಂಸದರ ಹೇಳಿಕೆಗಳು, ಸಂಘಪರಿವಾರದ, ಬಿಜೆಪಿ ನಾಯಕರ ಮುಸ್ಲಿಂ ವಿರೋಧಿ ಘೋಷಣೆಗಳು ಈ ಲಕ್ಷಣಗಳ ಚೌಕಟ್ಟಿನಲ್ಲೇ ವ್ಯಕ್ತವಾಗುತ್ತವೆ. ಈ ಚಿಂತನಾ ಕ್ರಮವನ್ನು ಮತ್ತು ಚಿಂತನಾವಾಹಿನಿಯನ್ನು ಇಂದಿನ ಕಾಲಘಟ್ಟದ ತಾಲಿಬಾನ್ ಸಂಸ್ಕೃತಿಯೊಡನೆ ಹೋಲಿಕೆ ಮಾಡುವುದಕ್ಕೆ ಸಾಕಷ್ಟು ಚಾರಿತ್ರಿಕ ಪುರಾವೆಗಳೂ ದೊರೆಯುತ್ತವೆ. ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆಯನ್ನು ಮುಕ್ತ ಕಂಠದಿಂದ ಸ್ವಾಗತಿಸಿದ ಕೆಲವು ಮುಸ್ಲಿಂ ಮುಲ್ಲಾಗಳೂ, ಮತೀಯವಾದಿಗಳೂ ನಮ್ಮ ನಡುವೆ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ.

ಈ ಮನಸ್ಥಿತಿಯನ್ನು ನಾವಿಂದು ಗುರುತಿಸಬೇಕಿದೆ. ಗ್ರಾಹಂ ಸ್ಟೈನ್ಸ್ , ಧಬೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶ್ ಇವರೆಲ್ಲರೂ ಬಲಿಯಾಗಿರುವುದು ಈ ಮನಸ್ಥಿತಿಗೆ ಮತ್ತು ಈ ಮನಸ್ಥಿತಿಯನ್ನು ತಮ್ಮ ಸಾಂಸ್ಕೃತಿಕ ರಾಜಕಾರಣದ ತಾತ್ವಿಕ ನೆಲೆಯನ್ನಾಗಿ ಪರಿಗಣಿಸಿದ್ದ ಮತಾಂಧ ಶಕ್ತಿಗಳ ಕ್ರೌರ್ಯಕ್ಕೆ. ಈ ಕ್ರೌರ್ಯ ಸಮಾಜದ ಆಂತರ್ಯದಲ್ಲಿ ಬೇರೂರಿರುವುದರಿಂದಲೇ ಅನಂತಮೂರ್ತಿ ಸಾವಿಗೆ, ದೊರೆಸ್ವಾಮಿಯವರ ಸಾವಿಗೆ, ಸ್ಟ್ಯಾನ್ ಸ್ವಾಮಿಯವರ ಸಾವಿಗೆ ಸಂಭ್ರಮಿಸುವ ಮನಸ್ಸುಗಳೂ ಸೃಷ್ಟಿಯಾಗುತ್ತದೆ. ಗ್ರಾಹಂ ಸ್ಟೇನ್ಸ್ ಅವರನ್ನು ಬೆಂಕಿಯಲ್ಲಿ ಸುಟ್ಟ ಶಕ್ತಿಗಳೇ ಅವರ ದಾರುಣ ಅಂತ್ಯವನ್ನು ಸಂಭ್ರಮಿಸಿದ ಸಂದರ್ಭವನ್ನೂ ನೋಡಿದ್ದೇವಲ್ಲವೇ ? ಈ ಮನಸ್ಥಿತಿ ಶೂನ್ಯದಿಂದ ಉದ್ಭವಿಸಿರುವುದೇ ? ಅಲ್ಲ ಎಂದಾದರೆ ಇದಕ್ಕೆ ಕಾರಣಕರ್ತರು ಯಾರು ? ಈ ಪ್ರಶ್ನೆಗಳಿಗೆ ದೊರೆಯುವ ಉತ್ತರವೇ ನಮಗೆ ತಾಲಿಬಾನ್ ಸಂಸ್ಕೃತಿಯ ಸ್ಥೂಲ ಪರಿಚಯವನ್ನೂ ಮಾಡಿಸುತ್ತದೆ.

ಬಂಡವಾಳಶಾಹಿ ಆರ್ಥಿಕತೆ, ನವ ಉದಾರವಾದದ ಮಾರುಕಟ್ಟೆ ನೀತಿಗಳು, ಬಲಪಂಥೀಯ ರಾಜಕಾರಣ ಮತ್ತು ಮತಾಂಧ ರಾಜಕಾರಣ ಈ ನಾಲ್ಕೂ ವಿದ್ಯಮಾನಗಳು ಪರಸ್ಪರ ಪೂರಕವಾಗಿಯೇ ಬೆಳೆದುಬಂದಿರುವುದನ್ನು ಈ ಸಂದರ್ಭದಲ್ಲಿ ಗಮನಿಸಬೇಕಿದೆ. ಭಾರತದಲ್ಲೂ ಇದೇ ಮತಾಂಧತೆಯನ್ನು ಪೋಷಿಸುವ ಆಡಳಿತ ನೀತಿಗಳು ಸಂವಿಧಾನದ ಚೌಕಟ್ಟಿನಲ್ಲೇ ಜಾರಿಯಾಗುತ್ತಿರುವುದನ್ನೂ ಗಮನಿಸಬೇಕಿದೆ. ತ್ರಿಪುರಾದಲ್ಲಿ ಇತ್ತೀಚೆಗೆ ಕಮ್ಯುನಿಸ್ಟ್ ಪಕ್ಷದ ಕಚೇರಿಯ ಮೇಲೆ ನಡೆದಿರುವ ರಾಜಕೀಯ ಪ್ರೇರಿತ ಧಾಳಿ, ಮಂಗಳೂರಿನ ಡೈವೈಎಫ್‍ವೈ ಕಚೇರಿಯ ಮೇಲೆ ನಡೆದಿರುವ ಧಾಳಿ ಇವೆಲ್ಲವೂ ಬಲಗೊಳ್ಳುತ್ತಿರುವ ಬಲಪಂಥೀಯ ರಾಜಕಾರಣಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಇತಿಹಾಸವನ್ನು ಅಲ್ಲಗಳೆಯುತ್ತಾ ಶತಮಾನಗಳ ಚಾರಿತ್ರಿಕ ಹೆಜ್ಜೆಗಳನ್ನು ಅಳಿಸಿಹಾಕುತ್ತಾ ತನ್ನ ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ಪೂರಕವಾದ ಸನ್ನಿವೇಶವನ್ನು ಸೃಷ್ಟಿಸುತ್ತಿರುವ ಹಿಂದುತ್ವ ರಾಜಕಾರಣವನ್ನು ತುಲನಾತ್ಮಕವಾಗಿ ವಿಶ್ಲೇಷಿಸಿದಾಗ ಈ ಸಮೀಕರಣದಿಂದಾಚೆಗೂ ಕಾಣಬಹುದಾದ ವಾಸ್ತವಗಳು ನಮಗೆ ಗೋಚರಿಸುತ್ತವೆ.

ಸಾಂಕೇತಿಕವಾಗಿ ಬಳಸಬಹುದಾದ ‘ ತಾಲಿಬಾನ್ ’ ಎಂಬ ಪದದ ವಿಶಾಲಾರ್ಥವನ್ನೂ ಮೀರಿದ ಒಂದು ವಿಕೃತ ಮನಸ್ಥಿತಿ ಭಾರತದ ಮತೀಯವಾದಿ ರಾಜಕಾರಣದಲ್ಲಿ, ಮತಾಂಧತೆಯ ಸಾಂಸ್ಕೃತಿಕ ನೆಲೆಗಳಲ್ಲಿ ಕಾಣಬಹುದಾಗಿದೆ. ಹಿಂದೂ ಮತ್ತು ಮುಸ್ಲಿಂ ಮೂಲಭೂತವಾದಿಗಳಲ್ಲಿ ಸಮಾನವಾಗಿ ಕಾಣಬಹುದಾದ ಈ ಧೋರಣೆಯ ವಿರುದ್ಧ ಹೋರಾಡುವುದು ಪ್ರಜ್ಞಾವಂತ ಸಮಾಜದ ಹೊಣೆ. ಈ ಪ್ರಜ್ಞೆ ನಮ್ಮೊಳಗೆ ಜಾಗೃತವಾದರೆ ಸಾರ್ಥಕವಾದೀತು.

na divakara

ನಾ ದಿವಾಕರ

 

ಇತ್ತೀಚಿನ ಸುದ್ದಿ