ದ್ವಿತೀಯ ಪಿಯ ಪರೀಕ್ಷೆ ರದ್ದು; ಮೌಲ್ಯಮಾಪನ ಹೇಗೆ ನಡೆಯುತ್ತದೆ? | ಸಚಿವರು ಏನಂದ್ರು ಗೊತ್ತಾ?
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಈ ಬಾರಿ ರದ್ದು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶುಕ್ರವಾರ ತಿಳಿಸಿದ್ದಾರೆ.
ಈ ಸಂಬಂಧ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ಈಗ ಮಾಡದೇ ಇರಲು ತೀರ್ಮಾನ ಕೈಗೊಳ್ಳಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿರುವ ರಾಜ್ಯಗಳನ್ನು ಸಂಪರ್ಕಿಸಿ, ನೀವು ವಿದ್ಯಾರ್ಥಿಗಳಿಗೆ ಫಲಿತಾಂಶ ಹೇಗೆ ನೀಡುತ್ತೀರಿ ಎಂದು ಕೇಳಿದ್ದೇವೆ. ಆದರೆ, ಈ ಬಗ್ಗೆ ಯಾರು ಕೂಡ ಮಾನದಂಡಗಳ ಖಚಿತತೆ ನೀಡಿಲ್ಲ. ನಮ್ಮ ರಾಜ್ಯದಲ್ಲಿ ಸೂಕ್ತವಾದ ನಿರ್ಧಾರ ಕೈಗೊಂಡ ಬಳಿಕ ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಪ್ರಥಮ ಪಿಯುಸಿಯಲ್ಲಿ ತೆಗೆದುಕೊಂಡಿರುವ ಅಂಕಗಳ ಆಧಾರದಲ್ಲಿ ಗ್ರೆಡೇಷನ್ ನೀಡಲಾಗುವುದು ಎಂದು ಸುರೇಶ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಳೆದ ವರ್ಷ ಅಂದರೆ, ಮೊದಲ ವರ್ಷದ ಪಿಯುಸಿಯನ್ನು ಎಲ್ಲಾ ಕಾಲೇಜುಗಳ ಮಕ್ಕಳು ಡಿಸ್ಟ್ರಿಕ್ಟ್ ಲೆವೆಲ್ ಮಟ್ಟದಲ್ಲಿ ಎದುರಿಸಿದ್ದರು. ಅದರ ಆಧಾರದ ಮೇಲೆ ಗ್ರೇಡಿಂಗ್ ನೀಡುತ್ತೇವೆ. ಆದರೆ, ನಾನು ತುಂಬಾ ಓದಿದ್ದೇನೆ, ತುಂಬಾ ಶ್ರಮಪಟ್ಟಿದ್ದೇನೆ ಎನ್ನುವ ಮಕ್ಕಳ ಸಂಖ್ಯೆ ಕೂಡ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರು ಬೇಸರ ಮಾಡುವ ಅಗತ್ಯವಿಲ್ಲ, ಕೊವಿಡ್ ಮುಗಿದ ಬಳಿಕ ಅಂತಹ ಮಕ್ಕಳಿಗೆ ಪರೀಕ್ಷೆ ಮಾಡುವ ಚಿಂತನೆ ನಡೆಸುತ್ತೇವೆ ಎಂದು ಅವರು ಹೇಳಿದರು.