ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲಾಗದ ಕಾಂಗ್ರೆಸ್ ಮೈಪರಚಿಕೊಳ್ಳುತ್ತಿರೋದ್ಯಾಕೆ? - Mahanayaka

ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲಾಗದ ಕಾಂಗ್ರೆಸ್ ಮೈಪರಚಿಕೊಳ್ಳುತ್ತಿರೋದ್ಯಾಕೆ?

sudeep
06/04/2023

ಕನ್ನಡದ ಜನಪ್ರಿಯ ನಟ ಕಿಚ್ಚ ಸುದೀಪ್ ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಎಂಬ ವಿಚಾರ ಬುಧವಾರ(05/04/2023)ದಂದು ಭಾರೀ ಚರ್ಚೆಗೀಡಾಯಿತು. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಸುದೀಪ್ ವಿರುದ್ಧ ಕಿಡಿಕಾರಿದರು. ಪ್ರಗತಿ ಪರರಂತೂ ಏನೂ ಅನಾಹುತವೇ ಸಂಭವಿಸಿದಂತೆ ಪೋಸುಕೊಟ್ಟರು. ಈ ಎಲ್ಲ ಬೆಳವಣಿಗೆಯ ನಂತರ ಸುದೀಪ್ ಹಾಗೂ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕರೆದ ಪತ್ರಿಕಾಗೋಷ್ಠಿಯಲ್ಲಿ ಸುದೀಪ್, ನಾನು ಸಿಎಂ ಬೊಮ್ಮಾಯಿ ಹಾಗೂ ಕೆಲವರ ಪರವಾಗಿ ಪ್ರಚಾರ ಮಾಡುವುದಾಗಿ ಘೋಷಿಸಿದರು.

ಸುದೀಪ್ ಅವರ ಪತ್ರಿಕಾಗೋಷ್ಠಿಯ ಬಳಿಕ ಸುದೀಪ್ ಅವರ ಹೇಳಿಕೆ ಸಾಕಷ್ಟು ಟ್ರೋಲ್ ಗೀಡಾಯಿತು. ಪ್ರಗತಿಪರರಂತೂ ಸುದೀಪ್ ಈ ರೀತಿ ಮಾಡಬಾರದಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ದಾಳಿ ನಡೆಸಿದರು. ಕೆಲವರಂತೂ ನಟರು ಸಾಮಾಜಿಕ ಕಳಕಳಿಯನ್ನು ಹೊಂದಿದವರಲ್ಲ ಎಂಬ ತೀರ್ಮಾನಕ್ಕೆ ಬಂದರು.

ಸಿನಿಮಾ ನಟರು ರಾಜಕೀಯಕ್ಕೆ ಬೆಂಬಲ ನೀಡುವುದು ಇದೇ ಮೊದಲ ಬಾರಿಗೆ ಎಂಬಂತಹ ವಾತಾವರಣ ನಿನ್ನೆ ಸೃಷ್ಟಿಯಾಯಿತು. ಸುದೀಪ್ ಬಿಜೆಪಿಯನ್ನು ಬೆಂಬಲಿಸಿರುವುದು ಒಂದು ಅಪರಾಧ ಎಂಬಂತೆಯೇ ವಿಶ್ಲೇಷಿಸಲಾಯಿತು. ಹಾಗಿದ್ದರೆ, ಸುದೀಪ್ ಕಾಂಗ್ರೆಸ್ ಗೆ ಸೇರಿದ್ದರೆ ಮಾತ್ರ ಒಳ್ಳೆಯ ವ್ಯಕ್ತಿಯೇ? ಒಳ್ಳೆಯ ನಟರೇ? ಒಳ್ಳೆಯ ಸಾಮಾಜಿಕ ಕಳಕಳಿ ಹೊಂದಿದವರೇ? ಅನ್ನೋ ಪ್ರಶ್ನೆಗಳಿಗೆ ಕಾಂಗ್ರೆಸ್ ನ ಪ್ರಗತಿಪರರು ಉತ್ತರಿಸಬೇಕಿದೆ.

ಕಳೆದ ಬಾರಿ ಖ್ಯಾತ ನಿರ್ದೇಶಕ ಎಸ್.ನಾರಾಯಣ್ ಅವರು ಕಾಂಗ್ರೆಸ್ ಗೆ ಸೇರ್ಪಡೆಗೊಂಡರು. ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಎಸ್.ನಾರಾಯಣ್ ಅವರನ್ನು ಕಾಂಗ್ರೆಸ್ ಪಕ್ಷದ ನಾಯಕರು ನಡೆಸಿಕೊಂಡ ರೀತಿ ಹೇಗಿತ್ತು ಅನ್ನೋದನ್ನು ಎಲ್ಲ ಪ್ರಗತಿಪರರು ಮತ್ತೊಮ್ಮೆ ಕಣ್ಣು ಬಿಟ್ಟು ನೋಡಿದರೆ, ಸುದೀಪ್ ಮಾಡಿರೋದೇ ಸರಿ ಎಂದು ಒಪ್ಪಿಕೊಳ್ಳುತ್ತೀರೇನೋ… ಕಾಂಗ್ರೆಸ್ ಸೇರ್ಪಡೆಯ ಮೊದಲ ಕಾರ್ಯಕ್ರಮದಲ್ಲೇ ಡಿ.ಕೆ.ಶಿವಕುಮಾರ್ ಅವರು ಎಸ್.ನಾರಾಯಣ್ ಅವರ ಜೊತೆಗೆ ನಡೆದುಕೊಂಡ ರೀತಿ ಅತ್ಯಂತ ಕೇವಲವಾಗಿತ್ತು. ತನ್ನ ಪಕ್ಕದಲ್ಲಿ ಕುಳಿತುಕೊಳ್ಳಲು ಮುಂದಾದ ಎಸ್.ನಾರಾಯಣ್ ಅವರನ್ನು ಸೌಜನ್ಯಯುತವಾಗಿ ಬೇರೆ ಸ್ಥಳದಲ್ಲಿ ಕುಳಿತುಕೊಳ್ಳಲು ಹೇಳದೇ,  ದೊಡ್ಡಸ್ಥಿಕೆ, ದರ್ಪದಿಂದ ನಡೆಸಿಕೊಂಡು ಅವರಿಗೆ ಮುಜುಗರ ಸೃಷ್ಟಿಸಲಾಯಿತು. ಪಕ್ಷಕ್ಕೆ ಸೇರ್ಪಡೆಯಾಗುವವರನ್ನು ಈ ರೀತಿಯಾಗಿ ಯಾವುದಾದರೂ ಪಕ್ಷ ನಡೆಸಿಕೊಳ್ಳುತ್ತಾ? ಪಕ್ಷದ ದೊಡ್ಡ ಸಿದ್ಧಾಂತ ಮಾತನಾಡುವವರಿಗೆ  ಪಕ್ಷದ ವೇದಿಕೆಗೆ ಬರುವವರನ್ನು ಹೇಗೆ ನಡೆಸಿಕೊಳ್ಳಬೇಕು ಅನ್ನೋ ಕನಿಷ್ಠ ಜ್ಞಾನ ಕೂಡ ಇಲ್ಲದಿರುವುದು ನಿಜಕ್ಕೂ ಅಚ್ಚರಿಯೇ ಸರಿ.

ಬಾಲ್ ಕಾಂಗ್ರೆಸ್ ನ ಅಂಗಳದಲ್ಲಿತ್ತು:

ಕಿಚ್ಚ ಸುದೀಪ್ ಅವರು ಚುನಾವಣೆ ಘೋಷಣೆಯಾಗುವುದಕ್ಕೂ ಮೊದಲೇ ಕಾಂಗ್ರೆಸ್ ನಾಯಕರ ಜೊತೆಗೆ ಗುರುತಿಸಿಕೊಂಡಿದ್ದರು. ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ದೊಡ್ಡ ಸುದ್ದಿಯಾಗಿದ್ದರು.  ಕಾಂಗ್ರೆಸ್ ನ ಕಾರ್ಯಕ್ರಮಕ್ಕೆ ಸುದೀಪ್ ಬರುತ್ತಾರೆ ಎಂದು ಸುಳ್ಳು ಹೇಳಿ ಜನರನ್ನು ಸೇರಿಸಿ, ಜನರ ಆಕ್ರೋಶಕ್ಕೆ ಕಾರಣವಾದ ಘಟನೆ ಕೂಡ ಇನ್ನೂ ಕಣ್ಣ ಮುಂದೆಯೇ ಇದೆ. ಸುದೀಪ್ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿರುವಾಗಲೇ ಅವರನ್ನು ಸರಿಯಾಗಿ ಬಳಸಿಕೊಳ್ಳದೇ, ಇದೀಗ ಅವರು ತಮ್ಮ ಅವಕಾಶಗಳನ್ನು ಹುಡುಕಿ ಬೇರೆಡೆಗೆ ಹೋದಾಗ, ಅವರ ಮೇಲೆ ಕೋಪ ತೋರಿಸುವುದು, ವೈಯಕ್ತಿಕ ನಿಂದನೆ ಮಾಡುವುದು ಎಷ್ಟು ಸರಿ? ಕಾಂಗ್ರೆಸ್ ನಾಯಕರು ಮೊದಲು ಪಕ್ಷದ ಕಾರ್ಯಕರ್ತರನ್ನು, ಮುಖಂಡರನ್ನು ಗೌರವಿಸುವುದನ್ನು ಕಲಿಯಬೇಕಿದೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ಹಾಗೂ ಡಿ.ಕೆ.ಶಿವಕುಮಾರ್ ಅವರು ಕಾರ್ಯಕರ್ತರ ಮೇಲೆ ರೇಗಾಡುತ್ತಿರುವುದು, ಅವರ ಮೇಲೆ ಹಲ್ಲೆ ಮಾಡುತ್ತಿರುವ ಎಷ್ಟೋ ಪ್ರಸಂಗಗಳು ನಡೆದಿವೆ. ದೊಡ್ಡ ಪಕ್ಷ ಎಂಬ ದೊಡ್ಡಸ್ಥಿಕೆ, ಕಾಂಗ್ರೆಸ್ ನ್ನು ದೇಶದಲ್ಲಿ ಈ ಹೀನಾಯ ಸ್ಥಿತಿಗೆ ತಂದಿದೆ. ಆದರೆ ಈ ವಾಸ್ತವಾಂಶವನ್ನು ಕಾಂಗ್ರೆಸ್ ಎಂದಿಗೂ ಒಪ್ಪಿಕೊಳ್ಳುವುದಿಲ್ಲ.

–ಗಣೇಶ್ ಕೆ.ಪಿ.


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ