ಪೂನಾ ಒಪ್ಪಂದದ ಅನ್ಯಾಯ, ಮೀಸಲಾತಿ ವಿರೋಧಿ ಈಶ್ವರಪ್ಪ, ಜಾತಿವಾದಿ ಬಿ.ಸಿ.ನಾಗೇಶ್: ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ
ಉಡುಪಿ: ಪೂನಾ ಒಪ್ಪಂದದಿಂದ ದಲಿತರಿಗೆ ಆಗಿರುವ ಅನ್ಯಾಯ ವಿರೋಧಿಸಿ ಹಾಗೂ ಮೀಸಲಾತಿ ವಿರೋಧಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಜಾತಿವಾದಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ನಡೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನಾ ಜಾಥ ಹಾಗೂ ಪ್ರತಿಕೃತಿ ದಹನ ಕಾರ್ಯಕ್ರಮ ವನ್ನು ಶನಿವಾರ ಆಯೋಜಿಸಲಾಗಿತ್ತು.
ನಗರದ ಬೋರ್ಡ್ ಹೈಸ್ಕೂಲ್ ನಿಂದ ಹೊರಟ ಪ್ರತಿಭಟನಾ ಜಾಥ ಹಾಗೂ ಈಶ್ವರಪ್ಪ ಹಾಗೂ ಬಿ.ಸಿ.ನಾಗೇಶ್ ಅವರ ಪ್ರತಿಕೃತಿಯ ಅಣಕು ಶವಯಾತ್ರೆಯು ಕೆ.ಎಂ.ರೋಡ್, ಕೋರ್ಟ್ ರಸ್ತೆ, ಜೋಡುಕಟ್ಟೆ ಮಾರ್ಗವಾಗಿ ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಸಮಾಪ್ತಿಗೊಂಡಿತು. ಬಳಿಕ ನಡೆದ ಪ್ರತಿಭಟನಾ ಸಭೆಯಲ್ಲಿ ಈಶ್ವರಪ್ಪ ಹಾಗೂ ಬಿ.ಸಿ.ನಾಗೇಶ್ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಹಿರಿಯ ಚಿಂತಕ ಪ್ರೊ. ಫಣಿರಾಜ್ ಮಾತನಾಡಿ ಪೂನಾ ಒಪ್ಪಂದವನ್ನು ದಲಿತರು ಎಲ್ಲ ರಾಜಕೀಯ ಪಕ್ಷಗಳಿಗೆ ಸವಾಲು ಆಗಿ ಕೊಡಬೇಕು. ಇದನ್ನು ಜಾರಿಗೆ ತರುವ ಪಕ್ಷಗಳಿಗೆ ಮಾತ್ರ ಮತ ಹಾಕಬೇಕು. ಆ ಮೂಲಕ ಇದನ್ನು ರಾಜಕೀಯ ಹೋರಾಟವನ್ನಾಗಿ ಮಾಡಬೇಕು ಎಂದು ತಿಳಿಸಿದರು.
ದಸಂಸ ಅಂಬೇಡ್ಕರ್ ವಾದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ಸಿಪಿಎಂ ಮುಖಂಡ ಬಾಲಕೃಷ್ಣ ಶೆಟ್ಟಿ ಮಾತನಾಡಿದರು.
ದಸಂಸ ಮುಖಂಡರಾದ ಶ್ಯಾಮ್ ರಾಜ್ ಬಿರ್ತಿ, ಮಂಜುನಾಥ್ ಬಾಳ್ಕುದ್ರು, ಪರಮೇಶ್ವರ ಉಪ್ಪೂರು, ಧರ್ಮಗುರು ಫಾ.ವಿಲಿಯಂ ಮಾರ್ಟಿಸ್, ನಗರಸಭಾ ಸದಸ್ಯ ರಮೇಶ್ ಕಾಂಚನ್, ಕ್ರೈಸ್ತ ಸಂಘಟಗಳ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಕೋಟ, ಇದ್ರೀಸ್ ಹೂಡೆ, ಅಫ್ವಾನ್ ಹೂಡೆ, ಪ್ರೊ.ಸಿರಿಲ್ ಮಥಾಯಸ್, ಶಶಿಧರ್ ಗೊಲ್ಲ ಇದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka