“ಕಸವು ಕಸದ ಬುಟ್ಟಿಗೆ ಸೇರಿತು” | ಎನ್.ಮಹೇಶ್ ಬಿಜೆಪಿ ಸೇರ್ಪಡೆ ಹಿನ್ನೆಲೆ ಪರ-ವಿರೋಧ ಚರ್ಚೆ!
ಬೆಂಗಳೂರು: ಮಾಜಿ ಶಿಕ್ಷಣ ಸಚಿವ, ಕೊಳ್ಳೇಗಾಲ ಶಾಸಕರಾದ ಎನ್.ಮಹೇಶ್ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳಾಗುತ್ತಿದ್ದು, ಎನ್.ಮಹೇಶ್ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ವಿಚಾರದಲ್ಲಿ ಹಲವು ಟ್ರೋಲ್ ಗಳು ಹಾಗೂ ಅದಕ್ಕೆ ಉತ್ತರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಬಂದಿದೆ.
ಬಿಜೆಪಿ ಸೇರ್ಪಡೆಗೆ ಯಡಿಯೂರಪ್ಪ ಜೊತೆಗೆ ಚರ್ಚಿಸಿರುವುದಾಗಿ ಎನ್.ಮಹೇಶ್ ಸ್ಪಷ್ಟಪಡಿಸಿದ್ದಾರೆ ಎಂಬ ಮಾಧ್ಯಮವೊಂದರ ವರದಿಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಸೃಷ್ಟಿಯಾಗಿದೆ. ಎನ್.ಮಹೇಶ್ ಅವರು ಈ ಹಿಂದೆ ತಮ್ಮ ಭಾಷಣಗಳಲ್ಲಿ ಬಹುಜನ ಸಿದ್ಧಾಂತದ ಪರವಾಗಿ ಮಾತನಾಡಿದ್ದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದ್ದು, ಎನ್.ಮಹೇಶ್ ಅವರ ಚಿತ್ರಗಳನ್ನು ಎಡಿಟ್ ಮಾಡಿ ಆರೆಸ್ಸೆಸ್ ಚಡ್ಡಿ ಹಾಕಿರುವಂತೆ ಚಿತ್ರಿಸಲಾಗಿದೆ.
ಎನ್.ಮಹೇಶ್ ಅವರು ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ವಿಡಿಯೋವನ್ನು ವೈರಲ್ ಮಾಡಲಾಗಿದ್ದು, ಈ ವಿಡಿಯೋದಲ್ಲಿ ಮಾತನಾಡಿದ್ದ ಎನ್.ಮಹೇಶ್, ಬಿಎಸ್ ಪಿ ಸ್ಥಾಪಕ ಕಾನ್ಶಿರಾಮ್ ಅವರ ಮಾತನ್ನು ಉಲ್ಲೇಖಿಸಿ ಪಕ್ಷ ಬಿಟ್ಟು ಹೋಗುವವರಿಗೆ ಅವರು ಹೇಳಿದ ಮಾತನ್ನು ವಿವರಿಸುತ್ತಾ, “ಕಸವು ಕಸದ ಬುಟ್ಟಿಗೆ ಸೇರಿತು” ಎಂದು ಮಹೇಶ್ ಹೇಳಿದ್ದರು. ಈ ವಿಚಾರವನ್ನು ಪ್ರಸ್ತಾಪಿಸಿ, ಇದೀಗ ಕಸವು ಕಸದ ಬುಟ್ಟಿಗೆ ಸೇರಿದೆ ಎಂದು ಎನ್.ಮಹೇಶ್ ಅವರಿಗೆ ಟಾಂಗ್ ನೀಡಲಾಗಿದೆ.
ಎನ್.ಮಹೇಶ್ ಅವರು ಬಿಎಸ್ ಪಿಗೆ ರಾಜೀನಾಮೆ ನೀಡಿಲ್ಲ, ಅವರನ್ನು ಉಚ್ಛಾಟನೆ ಮಾಡುವ ಮೂಲಕ ಅವರ ರಾಜಕೀಯ ಭವಿಷ್ಯವನ್ನು ನಾಶ ಮಾಡಲು ಯತ್ನಿಸಲಾಗಿದೆ ಎಂದು ಅವರ ಅಭಿಮಾನಿಗಳು ವಾದಿಸಿದರೆ, ಎನ್.ಮಹೇಶ್ ಅವರು ಬಿಜೆಪಿ ಪಕ್ಷದ ಜೊತೆಗೆ ಒಪ್ಪಂದ ಮಾಡಿಕೊಂಡು ಬಿಎಸ್ ಪಿಯ ಪಕ್ಷ ಸಿದ್ಧಾಂತಕ್ಕೆ ದ್ರೋಹ ಮಾಡಿದ್ದಾರೆ ಹಾಗಾಗಿ ಎನ್.ಮಹೇಶ್ ಅವರನ್ನು ಉಚ್ಛಾಟನೆ ಮಾಡಲಾಗಿದೆ ಎಂದು ಎನ್,ಮಹೇಶ್ ವಿರೋಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎನ್.ಮಹೇಶ್ ಅವರನ್ನು ಸಮರ್ಥಿಸುವವರ ವಿರುದ್ಧವೂ ಎನ್.ಮಹೇಶ್ ವಿರೋಧಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ವ್ಯಕ್ತಿಯೋರ್ವರನ್ನು ಬ್ಲ್ಯೈಂಡ್(ಕುರುಡು) ಆಗಿ ಹಿಂಬಾಲಿಸುವುದು ಮೂರ್ಖತನ, ಬಹು ಎಂಬ ಪದವನ್ನು ಮರೆತ ಎನ್.ಮಹೇಶ್ ಮನು ವಿನ ಜೊತೆಗೆ ತೆರಳಿದ್ದಾರೆ ಎಂದು ಟೀಕಿಸಿದ್ದಾರೆ.
ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಯತ್ನ?
ಕೊಳ್ಳೇಗಾಲದಲ್ಲಿ ಎನ್.ಮಹೇಶ್ ಸ್ಪರ್ಧೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು. ಇದೀಗ ಎನ್.ಮಹೇಶ್ ಅವರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎನ್ನುವ ಸುದ್ದಿಯ ಬೆನ್ನಲ್ಲೇ ಕಾಂಗ್ರೆಸ್ ಇದರ ಲಾಭವನ್ನು ಪಡೆದುಕೊಳ್ಳಲು ಮುಂದಾಗಿದೆ ಎಂದು ಹೇಳಲಾಗಿದೆ. ಎನ್.ಮಹೇಶ್ ವಿರುದ್ಧ ಬಹುಜನ ವಿರೋಧಿ ಪದಗಳನ್ನು ಬಳಸುವ ಮೂಲಕ ಎನ್.ಮಹೇಶ್ ವಿರುದ್ಧ ಜನಾಭಿಪ್ರಾಯ ಬರಲು ಕಾಂಗ್ರೆಸ್ ಪ್ರಯತ್ನಿಸಿದೆ ಎನ್ನುವ ಆರೋಪಗಳು ಕೂಡ ಕೇಳಿ ಬಂದಿದೆ.
ನಾನು ಚಳುವಳಿ ಹಿನ್ನೆಲೆಯಿಂದ ಬೆಳೆದು ಬಂದವನು
“ಟೀಕೆ ಮಾಡುವವರು ಮಾಡಲಿ, ನಾನು ಚಳುವಳಿ ಹಿನ್ನೆಲೆಯಿಂದ ಬೆಳೆದು ಬಂದವನು ರಾಜಕೀಯದ ಏರಿಳಿತಗಳನ್ನು ಬಹಳಷ್ಟು ಕಡಿಮೆ ಸಮಯದಲ್ಲಿ ನಾನು ಕಂಡಿದ್ದೀನಿ. ಹಾಗಾಗಿ ಟೀಕೆಗಳಿಗೆ ನಾನು ಏನೂ ಹೇಳುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಟೀಕೆಗಳು ಸಹಜ. ನನಗೆ ನನ್ನ ಕೆಲಸದಲ್ಲಿ ನಂಬಿಕೆ ಇದೆ. ನನ್ನ ಕ್ಷೇತ್ರದ, ರಾಜ್ಯದ ಜನರ ಪರವಾಗಿ ನಾನು ಕೆಲಸ ಮಾಡ್ತೀನಿ ಅಷ್ಟೇ…”- ಎನ್.ಮಹೇಶ್ ಎಂದು ಬರೆದಿರುವ ಪೋಸ್ಟ್ ನ್ನು ಎನ್.ಮಹೇಶ್ ಅಭಿಮಾನಿಗಳು ಶೇರ್ ಮಾಡಿದ್ದಾರೆ.