ಕಾವಾಡಿ ದಂಪತಿಗೆ ಮಗಳಾದ ಆನೆ: ಬಂಡೀಪುರದಲ್ಲೊಂದು ಎಲಿಫೆಂಟ್ ವಿಸ್ಪರರ್ಸ್

ಚಾಮರಾಜನಗರ: ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದ ‘ದಿ ಎಲಿಫೆಂಟ್ ವಿಸ್ಪರರ್ಸ್’ ಕಿರುಚಿತ್ರದಲ್ಲಿ ವಿಶ್ವದ ಗಮನ ಸೆಳೆದ ಬೆಳ್ಳಿ–ಬೊಮ್ಮನ್ ಬಂಡೀಪುರದಲ್ಲೂ ಇದ್ದಾರೆ!
ಅಂದರೆ, ಅವರ ರೀತಿಯಲ್ಲೇ ಕಾವಾಡಿ ದಂಪತಿ ಸ್ವಂತ ಮಗುವಿನಂತೆ ತಾಯಿಂದ ಬೇರ್ಪಟ್ಟಿರುವ ಆನೆ ಮರಿಯೊಂದನ್ನು ಸಲಹುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ರಾಂಪುರ ಆನೆ ಶಿಬಿರದ ಕಾವಾಡಿ ರಾಜು ಮತ್ತು ರಮ್ಯಾಗೆ ‘ವೇದಾ’ ಮೊದಲನೇ ಹೆಣ್ಣು ಮಗಳು ! ಈ ವೇದಾ ಮತ್ಯಾರೂ ಅಲ್ಲ. ಕಳೆದ ಏಳು ತಿಂಗಳ ಹಿಂದೆ ನುಗು ವಲಯದ ಅರಣ್ಯದಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ 7 ತಿಂಗಳ ಹೆಣ್ಣು ಆನೆಮರಿ. ಕೆಲವೇ ವರ್ಷಗಳ ಹಿಂದೆ ವಿವಾಹವಾಗಿರುವ ರಾಜು ಮತ್ತು ರಮ್ಯಾ ಮಡಿಲು ಸೇರಿರುವ ವೇದಾರಿಗೆ ಮೊದಲ ಮಗುವಿನ ಪಾಲನೆಯ ಅನುಭವ ನೀಡುತ್ತಿದ್ದಾಳೆ.
ಏಳು ತಿಂಗಳ ಹಿಂದೆ ನುಗು ಅರಣ್ಯ ಪ್ರದೇಶದಲ್ಲಿ ಈ ಆನೆಮರಿ ಕಾಡಿನಲ್ಲಿ ತಾಯಿಯಿಂದ ಬೇರ್ಪಟ್ಟಾಗ 14 ದಿನಗಳ ಮರಿ. ನಿಂತ ಜಾಗದಲ್ಲೇ ನಿಂತು ಕಾದು ಕನಲಿದರೂ ಅಮ್ಮ ಬರಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಆನೆ ಮರಿಯನ್ನು ರಕ್ಷಣೆ ಮಾಡಿತು. ಮೈಸೂರು ಮೃಗಾಲಯಕ್ಕೆ ಕಳುಹಿಸಲು ನಿರ್ಧರಿಸಿ ಕೊನೆಗೆ ರಾಂಪುರ ಶಿಬಿರಕ್ಕೆ ಕರೆತರಲಾಯಿತು. ವೇದಾ ಎಂದು ಹೆಸರು ನಾಮಕರಣ ಮಾಡಲಾಯಿತು.
ವೇದಾ ಆರಂಭಿಕ ದಿನಗಳಲ್ಲಿ ಬೆಚ್ಚುತ್ತಿದ್ದಳು. ಫಾರೆಸ್ಟರ್ ಜಗದೀಶ್ ನ್ಯಾಮಗೌಡರ್ ಪಾಲನೆ ಮಾಡಿದರು. ಕೆಲವು ವಾರಗಳ ನಂತರ ರಾಜು ಮತ್ತು ರಮ್ಯಾ ಮಡಿಲಿಗೆ ವೇದಾಳನ್ನು ಇಡಲಾಯಿತು. ಅಲ್ಲಿಂದ ಆನೆ ಮರಿಯೊಂದಿಗಿನ ಸಂಬಂಧ ಚಿಗುರೊಡೆಯಿತು.
ತಮಿಳುನಾಡಿನ ತೆಪ್ಪಕಾಡಿನ ಬೆಳ್ಳಿ–ಬೊಮ್ಮನ್ ‘ದಿ ಎಲಿಫೆಂಟ್ ವಿಸ್ಪರರ್ಸ್’ನ ಕಿರುಚಿತ್ರದಲ್ಲಿ ಆನೆಮರಿ ಜತೆ ಹೊಂದಿರುವ ಭಾವಾನುಬಂಧ ಇಲ್ಲೂ ಏರ್ಪಟ್ಟಿತು.
ರಾಜು ಮತ್ತು ರಮ್ಯಾ ಅವರು ವೇದಾಳನ್ನು ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ. ಪ್ರತಿದಿನ ಗ್ಲೂಕೋಸ್ ಮಿಶ್ರಿತ ಹಾಲನ್ನು ಬಾಟಲಿಗೆ ತುಂಬಿಸಿ ಕುಡಿಸಲಾಗುತ್ತಿದೆ. ನಿದ್ರಿಸುವ ಸಮಯ ಬಿಟ್ಟು ಎಲ್ಲ ವೇಳೆಯಲ್ಲಿಯೂ ರಾಜು ಮನೆಯ ಮುಂದೆ ನಿಂತು ಚಿನ್ನಾಟವಾಡುತ್ತಿರುವ ವೇದಾ ಮನೆಯಂಗಳದ ಮಗುವಾಗಿದ್ದಾಳೆ. ರಾಜು ಮತ್ತು ರಮ್ಯಾ ಈಗ ಬೆಳ್ಳಿ–ಬೊಮ್ಮನ್ ಆಗಿಬಿಟ್ಟಿದ್ದಾರೆ.
ವೇದಾ ನಮ್ಮ ಮಗು:
ಆನೆ ಮರಿ ವೇದಾ ನಮಗೆ ಮಗುವಿದ್ದಂತೆ. ಇದನ್ನು ನೋಡಿಕೊಳ್ಳಲು ನಮಗೆ ತುಂಬಾ ಖುಷಿಯಾಗುತ್ತದೆ ಎಂದು ಹೇಳುವ ಕಾವಾಡಿ ರಾಜು ಮತ್ತು ರಮ್ಯಾ ಸಂಕೋಚದ ಕಾರಣಕ್ಕೆ ಮಾತು ಕಡಿಮೆಯಾಡುತ್ತಾರೆ. ಆದರೆ ವೇದಾಳ ಮೇಲೆ ಹೆಚ್ಚು ಪ್ರೀತಿ ಇಟ್ಟುಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw