ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ತಡೆಯಾಜ್ಞೆ ತಂದ ಈಶ್ವರಪ್ಪ ಪುತ್ರ ಕಾಂತೇಶ್! - Mahanayaka
11:14 AM Sunday 22 - December 2024

ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ತಡೆಯಾಜ್ಞೆ ತಂದ ಈಶ್ವರಪ್ಪ ಪುತ್ರ ಕಾಂತೇಶ್!

k e kantesh
01/05/2024

ಬೆಂಗಳೂರು:  ಖಟ್ಟರ್ ಹಿಂದುತ್ವವಾದಿ, ಮಾಜಿ ಉಪ ಮುಖ್ಯಮಂತ್ರಿ,  ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ(K.S.Eshwarappa) ಅವರ ಪುತ್ರ ಕೆ.ಇ.ಕಾಂತೇಶ್ ಅವರು ತಮ್ಮ ವಿರುದ್ಧ ಮಾನಹಾನಿ ವರದಿ ಪ್ರಸಾರ ಮಾಡದಂತೆ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್‌ನಿಂದ ಮಾಧ್ಯಮಗಳ ವಿರುದ್ಧ ಏಕಪಕ್ಷೀಯವಾದ ಮಧ್ಯಂತರ ತಡೆಯಾಜ್ಞೆಯನ್ನು ತಂದಿದ್ದಾರೆ.

ಕೆ.ಇ.ಕಾಂತೇಶ್ ಅವರು ಸಲ್ಲಿಸಿದ್ದ ದಾವೆಯ ವಿಚಾರಣೆ ನಡೆಸಿದ ಬೆಂಗಳೂರಿನ 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಡಿ.ಪಿ.ಕುಮಾರಸ್ವಾಮಿ,  ಈ ಪ್ರತಿಬಂಧಕಾಜ್ಞೆ ನೀಡಿದರು.

ಕೆ.ಇ.ಕಾಂತೇಶ್ ಅವರು 50 ಪ್ರತಿವಾದಿಗಳನ್ನು ಉಲ್ಲೇಖಿಸಿದ್ದು, ಅಷ್ಟೂ ಪ್ರತಿವಾದಿಗಳು, ಅವರ ಪ್ರತಿನಿಧಿಗಳು, ಸೇವಕರು, ಏಜೆಂಟರು, ಆಡಳಿತಗಾರರು ಅಥವಾ ಅವರಿಂದ ನಿಯೋಜಿಸಲ್ಪಟ್ಟವರು ಯಾರೇ ಆದರೂ ದೂರಿನಲ್ಲಿ ಉಲ್ಲೇಖಿಸಿದ ರೀತಿ ಮಾನಹಾನಿ ಮಾಡುವಂತಹ ಮಾಹಿತಿ ಪ್ರಸಾರ ಮಾಡಬಾರದು ಎಂದು ಉಲ್ಲೇಖಿಸಲಾಗಿದೆ.

ಅಶ್ಲೀಲ ವಿಡಿಯೊ ಪ್ರಸಾರ, ಫೋಟೋ, ವರದಿ ಮುದ್ರಣ, ಅವುಗಳ ಹಂಚಿಕೆ ಮಾಡಬಾರದು. ಇದಕ್ಕೆ ಪ್ರತಿಬಂಧಕಾಜ್ಞೆ ನೀಡಲಾಗಿದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.

ಇದರಂತೆ, ಪ್ರತಿವಾದಿಗಳಿಗೆ ನೋಟಿಸ್, ಸಮನ್ಸ್ ಜಾರಿ ಮಾಡಿದ ನ್ಯಾಯಾಲಯವು ಈ ದಾವೆಯ ವಿಚಾರಣೆಯನ್ನು ಆಗಸ್ಟ್ 3ಕ್ಕೆ ಮುಂದೂಡಿದೆ.

ಕಾಂತೇಶ್ ದಾವೆಯಲ್ಲಿ ಏನಿದೆ?:

ಮಾಜಿ ಉಪಮುಖ್ಯಮಂತ್ರಿ ಕೆ ಈಶ್ವರಪ್ಪ ಅವರ ಪುತ್ರ ಕೆ ಇ ಕಾಂತೇಶ್ ಅವರ ಪರವಾಗಿ ವಕೀಲ ಎಂ ವಿನೋದ್ ಕುಮಾರ್‌ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಪ್ರತಿವಾದಿಗಳ ಸ್ಥಾನದಲ್ಲಿರುವ ಇಂಟರ್ನೆಟ್, ಟಿವಿ ಮಾಧ್ಯಮ, ಪತ್ರಿಕೆಗಳಲ್ಲಿ ದೂರುದಾರರ (K.E. Kantesh) ವಿರುದ್ಧ ಆಕ್ಷೇಪಾರ್ಹವಾದ ಸುದ್ದಿ ಪ್ರಸಾರವಾಗುತ್ತಿದೆ. ಈ ಮೂಲಕ ದೂರುದಾರರ ವರ್ಚಸ್ಸು ಹಾಳು ಮಾಡಲು ಪ್ರಯತ್ನಿಸಲಾಗುತ್ತಿದೆ. ಲೋಕಸಭಾ ಚುನಾವಣೆ ರಾಜಕೀಯವಾಗಿ ಮಹತ್ವ ಪಡೆದುಕೊಂಡ ಸಂದರ್ಭವಾದ ಕಾರಣ, ದೂರುದಾರರಿಗೆ ಮಾನಹಾನಿಯಿಂದ ರಕ್ಷಣೆ ಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ