ಕೆಲಸ ಹುಡುಕಿ ಬಂದ ಮಲಯಾಳಿ ನರ್ಸ್ ಗೆ ಜ್ಯೂಸ್ ನೀಡಿದ | ಮಧ್ಯ ರಾತ್ರಿ ಎಚ್ಚರವಾದಾಗ ಬೆಳಕಿಗೆ ಬಂತು ಘೋರ ಘಟನೆ!
ನೋಯ್ಡಾ: ಕೆಲಸ ಹುಡುಕಿಕೊಂಡು ಹೋದ ಮಲಯಾಳಿ ನರ್ಸ್ ನ್ನು ಫ್ಲ್ಯಾಟ್ ಗೆ ಕರೆದುಕೊಂಡು ಹೋಗಿ ಮಾದಕ ದ್ರವ್ಯ ನೀಡಿ ಅತ್ಯಾಚಾರ ನಡೆಸಿರುವ ಘಟನೆ ನಡೆದಿದ್ದು, ಕೇರಳ ಮೂಲದ ಮಲಯಾಳಿ ನರ್ಸ್ ಮೇಲೆ ಇಂತಹದ್ದೊಂದು ದೌರ್ಜನ್ಯ ನಡೆದಿದೆ.
23 ವರ್ಷ ವಯಸ್ಸಿನ ಮಲಯಾಳಿ ನರ್ಸ್ ಕೆಲಸ ಹುಡುಕುತ್ತಿದ್ದು, ದೆಹಲಿಗೆ ತೆರಳಿದ್ದರು. ಅಲ್ಲಿ ಆಕೆಯ ಸ್ನೇಹಿತನೋರ್ವ, ವ್ಯಕ್ತಿಯೋರ್ವನನ್ನು ಸಂಪರ್ಕಿಸುವಂತೆ ಸಲಹೆ ನೀಡಿದ್ದ. ಸ್ನೇಹಿತನ ಸಲಹೆಯಂತೆ ನರ್ಸ್ ಈತನನ್ನು ಸಂಪರ್ಕಿಸಿದಾಗ ತನ್ನ ಫ್ಲ್ಯಾಟ್ ಗೆ ಬರುವಂತೆ ಹೇಳಿದ್ದ.
ಆರೋಪಿ ಕೂಡ ಮಲಯಾಳಿಯಾಗಿದ್ದು, ಹೀಗಾಗಿ ಯುವತಿ ಆತನನ್ನು ನಂಬಿದ್ದಳು. ಪ್ಲ್ಯಾಟ್ ಗೆ ಬಂದ ನರ್ಸ್ ನ್ನು ಬಹಳ ವಿಶ್ವಾಸದಲ್ಲಿ ಮಾತನಾಡಿಸಿದ್ದ ಆರೋಪಿ, ತನ್ನ ಪತ್ನಿ ಹೊರಗೆ ಹೋಗಿದ್ದಾಳೆ, ಈಗ ಬರುತ್ತಾಳೆ ಎಂದು ಕಥೆ ಹೇಳಿದ್ದಾನೆ. ಬಳಿಕ ನರ್ಸ್ ಗೆ ಕುಡಿಯಲು ಜ್ಯೂಸ್ ನೀಡಿದ್ದಾನೆ.
ಜ್ಯೂಸ್ ಕುಡಿದ ತಕ್ಷಣವೇ ನರ್ಸ್ ಪ್ರಜ್ಞೆ ಕಳೆದುಕೊಂಡಿದ್ದಾರೆ. ಮಧ್ಯ ರಾತ್ರಿ ಆಕೆಗೆ ಎಚ್ಚರವಾದಾಗ ತೀವ್ರವಾದ ಮೈಕೈ ನೋವು ಕಾಣಿಸಿಕೊಂಡಿದ್ದು, ಅತ್ಯಾಚಾರ ನಡೆದಿದೆ ಎಂದು ತಿಳಿದು ಬಂದಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ನರ್ಸ್ ತಿಳಿಸಿದ್ದಾರೆ.
ಘಟನೆ ಸಂಬಂಧ ನೋಯ್ಡಾ ಸೆಕ್ಟರ್ 24ರ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಯ ವಿರುದ್ಧ ಅತ್ಯಾಚಾರ, ಮಾದಕ ದ್ರವ್ಯ ಆಹಾರದಲ್ಲಿ ಬೆರೆಸಿ ನೀಡಿರುವುದು ಮೊದಲಾದ ಆರೋಪಗಳಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.