ಆರು ವರ್ಷಗಳ ನಿರ್ಲಕ್ಷ್ಯ: ಕೆಳ್ಳಹಳ್ಳಿ ಸೇತುವೆ ಮರೀಚಿಕೆ! | ಸಂಪರ್ಕ ಕಡಿತದಿಂದ ಸಂಕಷ್ಟ

ಕೊಟ್ಟಿಗೆಹಾರ: ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಕೆಳ್ಳಹಳ್ಳಿ ಗ್ರಾಮದಲ್ಲಿ 2019ರ ಭಾರೀ ಮಳೆಗೆ ಕೊಚ್ಚಿ ಹೋದ ಸೇತುವೆಯ ಪుನರ್ನಿರ್ಮಾಣದ ನಿರೀಕ್ಷೆಯಲ್ಲಿ ಗ್ರಾಮಸ್ಥರು ಆರು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಸೇತುವೆ ಇಲ್ಲದಿರುವುದರಿಂದ ಗ್ರಾಮಸ್ಥರ ದಿನನಿತ್ಯದ ಸಂಚಾರ ಮತ್ತು ಕೃಷಿ ಚಟುವಟಿಕೆಗಳು ಬೃಹತ್ ಸವಾಲಾಗಿ ಪರಿಣಮಿಸಿವೆ.
ಸೇತುವೆ ಕುಸಿತದಿಂದ ಗ್ರಾಮಸ್ಥರಿಗೆ ಭಾರೀ ಸಂಕಷ್ಟ:
ಬಾಳೂರು ಗ್ರಾಮವನ್ನು ಬಣಕಲ್, ಗುಡ್ಡಹಟ್ಟಿ ಸೇರಿದ ಹತ್ತಿರದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಕೆಳ್ಳಹಳ್ಳಿ ಸೇತುವೆ ಮಳೆಗೆ ಕೊಚ್ಚಿಹೋದ ಬಳಿಕ ಗ್ರಾಮವು ಪೂರ್ತಿಯಾಗಿ ಸಂಪರ್ಕವಿಲ್ಲದ ದ್ವೀಪದಂತಾಗಿದೆ. ಸುಮಾರು 30 ಕುಟುಂಬಗಳಿರುವ ಈ ಗ್ರಾಮದಲ್ಲಿ ರೈತರ ಜಮೀನುಗಳು ಹಳ್ಳದ ಇನ್ನೊಂದು ಭಾಗದಲ್ಲಿದ್ದು, ಪ್ರತಿದಿನವೂ ಪೈರಿನ ನೋಡಿಕೊಳ್ಳಲು ಅವರು ನದಿಯನ್ನು ದಾಟಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ಸೇತುವೆ ಇಲ್ಲದ ಕಾರಣ ಬಾಳೂರಿನಿಂದ ಬಣಕಲ್ ತಲುಪಲು ಸಾಧಾರಣವಾಗಿ 5 ಕಿ.ಮೀ. ಬೇಕಾದರೆ, ಇದೀಗ 25 ಕಿ.ಮೀ. ದೂರ ಸುತ್ತಿ ತೆರಳಬೇಕಾಗಿದೆ. ಇದು ರೈತರ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದ್ದು, ನಿಯಮಿತವಾಗಿ ಕೃಷಿಗೆ ತೆರಳಲು ಸಾಧ್ಯವಾಗದೇ, ಭತ್ತದ ಬೆಳೆ ಕೈಬಿಡಬೇಕಾದ ಸ್ಥಿತಿ ಎದುರಾಗಿದೆ.
ನಿರ್ಲಕ್ಷ್ಯ, ಪ್ರಭಾವಿತರ ಧ್ವನಿ ಕೇಳಿಸದ ಸರ್ಕಾರ!:
ಗ್ರಾಮಸ್ಥರು ಹಲವಾರು ಬಾರಿ ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದ್ದರೂ, ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ಅಧಿಕಾರಿಗಳು “ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ, ಶೀಘ್ರದಲ್ಲಿಯೇ ಕಾಮಗಾರಿ ಆರಂಭವಾಗುತ್ತದೆ” ಎಂಬ ವಾಗ್ದಾನ ನೀಡಿದರೂ, ಈವರೆಗೂ ಯಾವುದೇ ಚಟುವಟಿಕೆ ಆರಂಭವಾಗಿಲ್ಲ.
ವಿದ್ಯಾರ್ಥಿಗಳಿಗೂ ಸಂಕಷ್ಟ:
ಕೇವಲ ರೈತರ ಸಮಸ್ಯೆಯಷ್ಟೇ ಅಲ್ಲ, ಶಾಲಾ–ಕಾಲೇಜು ವಿದ್ಯಾರ್ಥಿಗಳು ಕೂಡ ದೊಡ್ಡ ಮಟ್ಟದ ತೊಂದರೆ ಅನುಭವಿಸುತ್ತಿದ್ದಾರೆ. ಬಣಕಲ್ ಕಡೆಗೆ ಸರಳವಾಗಿ ಹೋಗುವ ಮಾರ್ಗವಿಲ್ಲದ ಕಾರಣ, ವಿದ್ಯಾರ್ಥಿಗಳು ಕೊಟ್ಟಿಗೆಹಾರದ ಮೂಲಕ ಸುತ್ತುವಂತಾಗಿದೆ. ಇದು ಸಮಯ ಮತ್ತು ಆರ್ಥಿಕ ಖರ್ಚು ಹೆಚ್ಚಿಸುವುದರ ಜೊತೆಗೆ, ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೂ ತೊಂದರೆ ಉಂಟುಮಾಡುತ್ತಿದೆ.
ಗ್ರಾಮಸ್ಥರ ಒತ್ತಾಯ –- ತಕ್ಷಣ ಸೇತುವೆ ನಿರ್ಮಾಣ ಮಾಡಬೇಕು!
ಸೇತುವೆ ಇಲ್ಲದ ಕಾರಣ ಮೆಕಾನಿಕಲ್ ಯಂತ್ರಗಳು, ವಾಹನಗಳು, ಕಾರ್ಮಿಕರು ತಲುಪುವುದು ಅಸಾಧ್ಯವಾಗಿರುವುದರಿಂದ, ಕೃಷಿ ವ್ಯವಹಾರವೇ ನಿಂತುಹೋಗಿದೆ. ಈ ಸಮಸ್ಯೆ ಶೀಘ್ರದಲ್ಲಿಯೇ ಪರಿಹಾರವಾಗಬೇಕೆಂದು ಗ್ರಾಮಸ್ಥರು ಕೋರಿದ್ದಾರೆ. ಸರ್ಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಹಸ್ತಕ್ಷೇಪ ಮಾಡಿ, ಸೇತುವೆ ನಿರ್ಮಾಣ ಕಾರ್ಯ ಪ್ರಾರಂಭಿಸಬೇಕು ಎಂಬುದೇ ಈ ಭಾಗದ ಜನರ ಒತ್ತಾಯವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: