ಕೆನೆಪದರ — ಒಳಮೀಸಲಾತಿ ಮತ್ತು ದಲಿತರ ಸ್ಥಿತಿ –ದಮ್ಮಪ್ರಿಯ, ಬೆಂಗಳೂರು
ಬಾಬಾಸಾಹೇಬ್ ಡಾ ಅಂಬೇಡ್ಕರ್ ರವರು 1949 ನವೆಂಬರ್ 26 ರಂದು ಭಾರತ ದೇಶಕ್ಕೆ ಸಂವಿಧಾನವನ್ನು ಅರ್ಪಿಸುತ್ತಾ, “ನನ್ನ ಜನರು ಈ ದೇಶವನ್ನು ಆಳುವ ದೊರೆಗಳಾಗಬೇಕು ನಾನು ಅದನ್ನು ಕಣ್ಣಾರೆ ನೋಡಬೇಕು” ಎಂಬ ಮಹಾದಾಸೆಯ ಮಾತುಗಳನ್ನಾಡುತ್ತಾರೆ. ನನ್ನ ಸಂವಿಧಾನ ಬಹಳ ಪವಿತ್ರವಾಗಿದ್ದು, ಯಥಾವತ್ತಾಗಿ ಜಾರಿಯಾದರೆ ಸಾರ್ವಜನಾಂಗಕ್ಕೂ ಸಮಾನತೆಯನ್ನು ಒದಗಿಸುವುದಾಗಿದೆ. ಆದರೆ ನನ್ನ ಸಂವಿಧಾನ ಯಥಾವತ್ತಾಗಿ ಜಾರಿಯಾಗುತ್ತದೆ ಎನ್ನುವ ನಂಬಿಕೆ ನನಗೆ ಇಲ್ಲವಾಗಿದೆ. ಸಂವಿಧಾನವನ್ನು ಜಾರಿ ಮಾಡುವ ಜಾಗದಲ್ಲಿ ಸಂವಿಧಾನದ ವಿರೋಧಿಗಳು ಕುಳಿತುಕೊಂಡರೆ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯೇ ಧ್ವಂಸವಾಗುತ್ತದೆ ಎಂದಿದ್ದಾರೆ. ಆದರೆ ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರು ಸಂವಿಧಾನದ ಮೂಲ ಆಶಯಗಳು ಮಾತ್ರ ಈಡೇರದೆ ಮೂಲೆಗುಂಪಾಗಿವೆ ಎನ್ನಬಹುದು.
ಬಾಬಾಸಾಹೇಬರು ಸಂವಿದಾನವನ್ನು ದೇಶಕ್ಕೆ ಅರ್ಪಿಸುತ್ತ, ಸಂವಿಧಾನದಲ್ಲಿನ ಸಮಾನತೆಯ ಆಶಯಗಳು ಯಥಾವತ್ತಾಗಿ ಜಾರಿಯಾದಲ್ಲಿ ಕೇವಲ 10 ವರ್ಷಗಳಲ್ಲಿ ಈ ದೇಶ ಪ್ರಭುದ್ದ ಭಾರತವಾಗುತ್ತದೆ, ಅಂತಹ ಸಂದರ್ಭದಲ್ಲಿ ಯಾವ ಜಾತಿಯ ಜನರಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಮೀಸಲಾತಿಯ ಅಗತ್ಯವಿರುವುದಿಲ್ಲ ಎಂದು ಸ್ವತಃ ತಾವೇ ಹೇಳಿದ್ದರು. ಆದರೆ ಬಾಬಾಸಾಹೇಬರ ಕಂಡ ಕನಸುಗಳು ನನಸಾಗಿವೆಯೇ ಒಮ್ಮೆ ಅವಲೋಕಿಸಬೇಕಿದೆ.
ಆದರೆ ಇತ್ತೀಚೆಗೆ ಬಹಳ ಸುದ್ದಿಯಲ್ಲಿರುವ ವಿಚಾರ ಎಂದರೆ ಕೆನೆಪದರ, ದಲಿತರಲ್ಲಿ ಒಳ ಮೀಸಲಾತಿ ವ್ಯವಸ್ಥೆ ಜಾರಿಯಾಗಬೇಕು. ದಲಿತರಲ್ಲಿ ಬಲಿತರಿಂದ ಅಸಹಾಯಕ ದಲಿತ ಜನಾಂಗದವರಿಗೆ ಬಹಳ ಅನ್ಯಾಯವಾಗುತ್ತಿದೆ ಅವರಿಗೂ ನ್ಯಾಯ ಸಿಗಬೇಕಿದೆ. ಒಳಮೀಸಲಾತಿ ತಕ್ಷಣ ಜಾರಿಯಾದರೆ ಬಹಳ ಒಳ್ಳೆಯದು ಮಾನ್ಯ ಮುಖ್ಯಮಂತ್ರಿಗಳು ತಕ್ಷಣ ಜಾರಿಮಾಡಬೇಕು ಎಂದೆಲ್ಲಾ ಮಾತನಾಡುತ್ತಿದ್ದಾರೆ. ಇವೆಲ್ಲಾ ಮನುವಾದಿಗಳು ದಲಿತರಿಗೆ ಸಿಗುತ್ತಿರುವ ಸವಲತ್ತುಗಳನ್ನು ತಪ್ಪಿಸಲು ತಂತ್ರಗಳೇ ಆಗಿವೆ. ಇಂತಹ ವಿಚಾರಗಳನ್ನು ಹೆಚ್ಚು ಮಾತನಾಡುತ್ತಿರುವವರು ಯಾರು ದಲಿತರೇ ಅಲ್ಲ, ದಲಿತರ ಪರವಾಗಿದ್ದೇವೆ ಎಂದು ತೋರಿಸಿಕೊಳ್ಳುತ್ತಿರುವ ಸೆಕ್ಯುಲರ್ ಬ್ರಾಹ್ಮಣರು. ಇವರುಗಳು ಇದರ ಬಗ್ಗೆ ಪತ್ರಿಕೆಗಳಲ್ಲಿ ಬರೆಯುತ್ತಿದ್ದಾರೆ. ಇತರೆ ದಲಿತೇತರ ಚಿಂತಕರು ಸಹ ಇದಕ್ಕೆ ಪುಸಲಾಯಿಸುವವರಂತೆ ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಇವರುಗಳಿಗೆ ದಲಿತರ ಮೀಸಲಾತಿ, ಒಳಮೀಸಲಾತಿ ಬಗ್ಗೆ ಯಾಕಿಷ್ಟು ಕಾಳಜಿ ಎನ್ನುವ ಅನುಮಾನಗಳು ಸಹಜವಾಗಿವೆ. ಕೆನೆಪದರ ಮೀಸಲಾತಿ ಅಥವಾ ಒಳ ಮೀಸಲಾತಿ ಎನ್ನುವುದು ದಲಿತರಿಗೆ ಮಾತ್ರ ಎನ್ನುವಂತೆ ಬಿಂಬಿಸುವ ಇವರುಗಳು ಈ ದೇಶದಲ್ಲಿ ಸಂವಿಧಾನಿಕವಾಗಿ ಮೀಸಲಾತಿಯ ಹೆಚ್ಚು ಸವಲತ್ತು ಪಡೆಯುತ್ತಿರುವವರು ಯಾರು ಎನ್ನುವುದರ ಬಗ್ಗೆ ಮಾತನಾಡುತ್ತಿಲ್ಲ ಯಾಕೆ ? ದಲಿತರ ಮೀಸಲಾತಿ ವಿಚಾರ ಬಂದಾಗ ಮಾತ್ರ ಯಾಕೆ ಎಲ್ಲರು ತಮ್ಮ ಮೂಗು ತುರಿಸುತ್ತಿದ್ದಾರೆ ?
ಮಾತನಾಡುವವರು ಮಾತನಾಡಲಿ, ಬರೆಯುವವರು ಅದರ ಬಗ್ಗೆ ಏನೇ ಬರೆಯಲಿ, ಆದರೆ ದಲಿತರು, ಒಳ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವವರು ಒಮ್ಮೆ ಬಾಬಾಸಾಹೇಬರ ಚಿಂತನೆಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡರೆ ಅಷ್ಟೇ ಸಾಕು. ಕಳೆದ ಮೂರೂ ನಾಲಕ್ಕು ದಶಕಗಳಿಂದ ಈ ಹೋರಾಟ ನಡೆಯುತ್ತಿದ್ದರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದ ನಮ್ಮನ್ನು ಆಳುತ್ತಿರುವ ಮನುವಾದಿ ಚಿಂತನೆಗಳ ಸರ್ಕಾರಗಳು ಇಂದು ದಲಿತರ ಒಳಮೀಸಲಾತಿ ಮತ್ತು ಕೆನೆಪದರದ ವ್ಯವಸ್ಥೆಯ ಬಗ್ಗೆ ತಕ್ಷಣ ಗರಿಗೆದರಿ ಮಾತನಾಡುವ ಅಗತ್ಯ ಏಕೆ ಸೃಷ್ಠಿಯಾಯಿತು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಿದೆ.
ಬಾಬಾಸಾಹೇಬರು ತನ್ನ ಕೊನೆಯ ಕ್ಷಣಗಳಲ್ಲಿ ಆಡಿದ ಮಾತುಗಳು ಇವತ್ತಿಗೂ ಪ್ರಸ್ತುತವಾಗಿವೆ. ನನ್ನ ಜನರು ಕೇವಲ ದಿನನಿತ್ಯದ ಬದುಕಿಗಾಗಿ ಹೋರಾಟ ಮಾಡುವ ಸ್ಥಿತಿಯಲ್ಲಿದ್ದಾರೆ. ಅವರಿಗೆ ತಕ್ಷಣ ಸಂವಿಧಾನ ಅದರ ಆಶಯಗಳ ಬಗ್ಗೆ ಏನೇ ಹೇಳಿದರು ಈಗ ಅರ್ಥವಾಗದು, ಎಂದು ನನ್ನ ಜನರಿಗೆ ಸಂವಿಧಾನ ಮತ್ತು ಅದರ ಆಶಯಗಳ ಬಗ್ಗೆ ಅರಿವಾಗುತ್ತದೋ ಅಂದು ಈ ದೇಶದಲ್ಲಿ ಗುಲಾಮಿ ಮನಸ್ಥಿತಿ, ಮನುವಾದದ ಮನಸ್ಥಿತಿ ದೂರವಾಗಿ ಎಲ್ಲರು ಒಗ್ಗಟ್ಟಾಗಿ ದೇಶವನ್ನು ಆಳಲು ಮುಂದಾಗುತ್ತಾರೆ. ಅಂತಹ ದಿನಗಳು ಬಂದಾಗ ಈ ದೇಶದ ಪಟ್ಟಭದ್ರ ಹಿತಾಶಕ್ತಿಗಳು ಮಾಯವಾಗಿ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಲಿತ ಜನಾಂಗವೇ ರಾಜಕೀಯ ವ್ಯವಸ್ಥೆಯನ್ನು ನಿರ್ಧಾರ ಮಾಡುವವರಾಗುತ್ತಾರೆ ಎಂದಿದ್ದಾರೆ.
ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ದಲಿತರಿಗೆ ಮಾಡಿರುವ ಸವಲತ್ತುಗಳು ಕೇವಲ ಶೂನ್ಯವಾಗಿದ್ದು. ಇದೆ ಮೋದಿ ಸರ್ಕಾರ ಮತ್ತೊಮ್ಮೆ 2024 ಕ್ಕೆ 400 ಸೀಟುಗಳಿಗೂ ಹೆಚ್ಚು ಜನರು ನಮ್ಮ ಪಕ್ಷದಿಂದ ಗೆದ್ದು ಸರ್ಕಾರ ರಚಿಸಿದ ಮರುಕ್ಷಣವೇ ಸಂವಿಧಾನವನ್ನು ಬದಲಾಯಿಸುವುದು, ದಲಿತ ಹಿಂದುಳಿದ ಅಲ್ಪ ಸಂಖ್ಯಾತರ ಮೀಸಲಾತಿಯನ್ನು ಕಿತ್ತುಹಾಕಬೇಕು ಎನ್ನುವ ಮಾತುಗಳು ದಲಿತರನ್ನು ಹಿಂದುಳಿದವರನ್ನು ಅಲ್ಪ ಸಂಖ್ಯಾತರನ್ನು ಒಗ್ಗೂಡುವಂತೆ ಮಾಡಿತು. ಎಲ್ಲರು ಮೋದಿ ಸರ್ಕಾರದ ವಿರುದ್ಧ ಮತ ಚಲಾವಣೆಗೆ ಮುಂದಾದರು, ಕಳೆದ ಬಾರಿ ಮೀಸಲು ಕ್ಷೇತ್ರದಿಂದ ಗೆದ್ದಿದ್ದ 79 ಜನ ಮೀಸಲು ಕ್ಷೇತ್ರದ ನಾಯಕರಲ್ಲಿ ಬಹುತೇಕರು ಸೋಲನ್ನು ಅನುಭವಿಸಿ ಬಿಜೆಪಿಯ ಪಕ್ಷದ ಓಟಿನ ಬ್ಯಾಂಕ್ ರಾಜಕಾರಣವನ್ನು ಬುಡಸಮೇತ ಅಲುಗಾಡುವಂತೆ ಮಾಡಿಬಿಟ್ಟರು.
ಇಡೀ ದೇಶದಲ್ಲಿ ಎಚ್ಚೆತ್ತ ಪ್ರಜ್ಞಾವಂತ ದಲಿತ ನಾಯಕರು ಎಲ್ಲರನ್ನು ಒಂದೇ ವೇದಿಕೆಗೆ ತಂದು ಸಂವಿಧಾನ ಉಳಿವಿಗಾಗಿ ನಾವು ಹೋರಾಟ ಮಾಡುವ ಅಗತ್ಯವಿದೆ ಎಂದು ಹೋರಾಡಲು ಮುಂದಾದರು, ಇದರಿಂದ ರಾಜ್ಯ ಮಟ್ಟದ ಮತ್ತು ರಾಷ್ಟ್ರ ಮಟ್ಟದ ಚುನಾವಣೆಯಲ್ಲಿ ಮೋದಿ ಗುಂಪಿಗೆ ಮತ್ತು ಬಿಜೆಪಿ ಪಕ್ಷಕ್ಕೆ ಬಾರಿ ಹಿನ್ನೆಡೆಯಾಯಿತು. ಇದನ್ನು ಅರಿತ ಬಿಜೆಪಿ ಮತ್ತು ಮನುವಾದಿ ಸರ್ಕಾರಗಳು, ಜೊತೆಗೆ ಸೆಕ್ಯುಲರ್ ಬ್ರಾಹ್ಮಣ ಚಿಂತಕರು, ದಲಿತರಿಗೆ ಅರಿವಾಗದಂತೆಯೇ ಒಳಮೀಸಲಾತಿಯ ಕಿಡಿಯನ್ನು ಹಚ್ಚಿ ಅವರವರಲ್ಲೇ ಕಚ್ಚಾಡುವ ವ್ಯವಸ್ಥೆ ನಿರ್ಮಾಣವಾದರೆ ದಲಿತರ ಓಟ್ ಛಿದ್ರವಾಗಲು ಸಾಧ್ಯ ಎನ್ನುವ ಇಕ್ಕಮತ್ತಿನ ರಾಜಕಾರಣ ನಡೆಸಲು ಮುಂದಾದರು.
ಬಾಬಾಸಾಹೇಬರು ಹೇಳಿದಂತೆ ದಲಿತರೆಲ್ಲಾ ಒಂದಾದರೆ ಆಳುವ ದೊರೆಗಳಾಗುತ್ತಾರೆ, ಇವರನ್ನು ಒಂದಾಗಲು ಬಿಡದಂತೆ ನೋಡಿಕೊಳ್ಳುವುದೇ ಮನುವಾದಿ ಪಕ್ಷಗಳ ತಂತ್ರಗಳು ಎಂದಿದ್ದರು. ಅದನ್ನೇ ಈಗಲೂ ಬಿಜೆಪಿ ಮತ್ತು ಮೋದಿ ಪಡೆಗಳು ಸುಪ್ರೀಂಕೋರ್ಟ್ ಎನ್ನುವ ಅಸ್ತ್ರವನ್ನು ಬಳಸಿ ತಮ್ಮ ಬೇಳೆಕಾಳು ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ಇಂದು ದಲಿತರಲ್ಲಿ ಬಲಿತರಾಗಿರುವವರನ್ನು ಕೈ ಬಿಡಬೇಕು, ಮೀಸಲಾತಿ ಸವಲತ್ತುಗಳಿಂದ ತೆಗೆಯಬೇಕು, ಅವರಿಗೆ ಮೀಸಲಾತಿ ಪಡೆಯುವ ಯಾವ ಅರ್ಹತೆಯು ಇಲ್ಲ. ದಲಿತರಲ್ಲಿರುವ ಅಸಹಾಯಕರಿಗೆ ನ್ಯಾಯ ಸಿಗಬೇಕು ಎಂದು ಬೊಬ್ಬೆಯಿಡುವ ಸಕ್ಯುಲರ್ ವಾದಿಗಳಿಗೆ ಕೆಲವು ವಿಚಾರಗಳು ಮನನವಾಗಬೇಕಿದೆ.
ಇಡೀ ದೇಶದಲ್ಲಿ ಸಾವಿರಾರು ವರ್ಷಗಳಿಂದ ಜಾತಿಯ ಶ್ರೇಷ್ಠತೆಯಲ್ಲಿ ದಲಿತರನ್ನು ಹಿಂಸಿಸಿ ಜೀತದಾಳುಗಳನ್ನಾಗಿ ಮಾಡಿಕೊಂಡು ಇಡೀ ಸಂಪತ್ತನ್ನೇ ತಮ್ಮ ಕಪಿಮುಷ್ಠಿಯಲ್ಲಿ ಬಂದಿಸಿಕೊಂಡು ಮೆರೆಯುತ್ತಿರುವಾಗ ಮತ್ತೆ ಮೋದಿ ಸರ್ಕಾರ ಶೇಕಡ10% ಮೀಸಲಾತಿಯನ್ನು ನೀಡಿತು. ಬ್ರಾಹ್ಮಣರು ಈಗಾಗಲೇ ಸಾಮಾಜಿಕವಾಗಿ ರಾಜಕೀಯವಾಗಿ ಧಾರ್ಮಿಕವಾಗಿ ಶೈಕ್ಷಣಿಕವಾಗಿ ಎಲ್ಲವನ್ನೂ ಅನುಭಿಸುತ್ತಿರುವವರು. ಅವರಿಗೆ ಯಾಕೆ ಮತ್ತೆ ಮೀಸಲಾತಿ ಸೌಲಭ್ಯ ನೀಡಬೇಕು ಎಂದು ಈ ಸೆಕ್ಯುಲರ್ ವಾದಿಗಳು ಮಾತನಾಡಲಿಲ್ಲ. ದಲಿತರಲ್ಲಿರುವ ಕೇವಲ ಬೆರಳೆಣಿಕೆಯಷ್ಟಿರುವ ರಾಜಕೀಯ ನಾಯಕರ ಅಭಿವೃದ್ಧಿಯನ್ನು ಕಂಡು ದಲಿತರೆಲ್ಲರೂ ಅಭಿವೃದ್ದಿಯಾಗಿದ್ದಾರೆ ಎಂದು ಮಾತನಾಡುವವರಿಗೆ ಕೇವಲ ಶೇಕಡ 3 ರಿಂದ 4 % ರಷ್ಟಿರುವ ಬ್ರಾಹ್ಮಣ ಸಮುದಾಯದವರು ಶೇಕಡ 97% ರಷ್ಟು ಉದ್ಯೋಗದಲ್ಲಿ, ಅಧಿಕಾರದಲ್ಲಿ, ಆಸ್ತಿಯಲ್ಲಿ ಸಂಪತ್ತಿನಲ್ಲಿ, ಸಂಸತ್ತಿನಲ್ಲಿ ಹಾಗು ಜಾತಿಯ ಶ್ರೇಷ್ಠತೆಯಲ್ಲಿರುವಾಗ ಇವರಿಗೆ ಯಾಕೆ EWS ಹೆಸರಲ್ಲಿ ಮತ್ತೆ ಶೇಕಡ 10 % ಮೀಸಲಾತಿಯ ಅವಶ್ಯಕವಾದರೂ ಏನಿತ್ತು ಎನ್ನುವುದನ್ನು ಸೆಕ್ಯುಲರ್ ವಾದಿಗಳು ಮತ್ತು ಮೋದಿ ಸರ್ಕಾರ ಒಮ್ಮೆ ಯೋಚಿಸಬೇಕಿದೆ.
ಇವರುಗಳಲ್ಲಿರುವ ಸಂಪತ್ತಿನ ಕ್ರೂಢೀಕರಣ, ಅಧಿಕಾರದಲ್ಲಿನ ಅಸಮಾನತೆ ಇವುಗಳನ್ನು ಬಯಲಿಗೆಳೆಯಲೇಬೇಕಿದೆ, ಕಳೆದ ಒಂದು ದಶಕದಿಂದ ಜಾತಿಯ ಆಧಾರಿತ ಜನಗಣತಿ ಬೇಡ ಎನ್ನುವ ನಮ್ಮ ಕೇಂದ್ರ ಸರ್ಕಾರ, ನಾವೆಲ್ಲ ಒಂದು ನಾವೆಲ್ಲ ಹಿಂದೂ ಎಂದು ಒಂದು ಕಡೆ ಮಾತನಾಡುತ್ತದೆ, ಆದರೆ ಒಳಗೊಳಯೇ ಈ ದೇಶದಲ್ಲಿರುವ ಕೇವಲ ಶೇಕಡ 3 ರಿಂದ 4 ರಷ್ಟಿರುವ ಬ್ರಾಹ್ಮಣ ಶಾಹಿಯ ಜನರು ಕೆನೆಪದರದಲ್ಲಿದ್ದು ಶತಮಾನಗಳ ಕಾಲ ಜನರನ್ನು ಮೂಢರನ್ನಾಗಿಸಿ ದೇವರು ದಿಂಡಿರು ಭಜನೆ ಹೋಮ ಹವನದ ನೆಪದಲ್ಲಿ ಇಡೀ ವ್ಯವಸ್ಥೆಯೊಳಗೆ ಜಾತಿಯ ವಿಷ ಬೀಜ ಬಿತ್ತಿ ಮತ್ತೆ ಯಾರಿಗೂ ಅರಿವಾಗದಂತೆ ಶೇಕಡ 10%, ಮೀಸಲಾತಿಯನ್ನು ಅನುಭವಿಸುತ್ತಿದ್ದಾರೆ. ಇವರಿಗಳ ಆಸ್ತಿಯ ವಿವರ ದೇಶದ ಸಂಪತ್ತಿನ ಶೇಕಡ 97% ರಷ್ಟು ಕ್ರೂಢೀಕರಿಸಲಾಗಿದೆ. ಇದನ್ನು ಮೊದಲು ಬಯಲಿಗೆ ಎಳೆಯಲೇ ಬೇಕು. ಈ ಜನರ ಮೋಸವನ್ನು ಬೀದಿಗೆಳೆಯಬೇಕು, ದೇಶದಲ್ಲಿ ಕೆನೆಪದರದ ಎಂದು ಮಾತನಾಡುವ ಮೂಢರಿಗೆ ಇದು ಅರ್ಥವಾಗಬೇಕು. ಇದುವರೆವಿಗೂ ರಾಜಕೀಯದಲ್ಲಿ ಎಷ್ಟು ಜನ ದಲಿತರು ಮುಖ್ಯವಾಹಿನಿಯಲ್ಲಿ ಇದ್ದಾರೆ, ಎಷ್ಟು IAS ಗಳು ಸರ್ಕಾರದ ಅಧೀನ ಕಾರ್ಯದರ್ಶಿಗಳಾಗಿದ್ದಾರೆ, ಎಷ್ಟು ಜನ ದಲಿತರು ವಿದ್ಯಾಸಂಸ್ಥೆಯ ಮಾಲೀಕರಾಗಿದ್ದಾರೆ, ಅಷ್ಟೇ ಏಕೆ ಯಾವ ದಲಿತ ಬಂಡವಾಳ ಶಾಹಿಗಳು ಲಕ್ಷಾಂತರ ಕೋಟಿ ರೂಪಾಯಿಗಳನ್ನು ಭಾರತದ ಬ್ಯಾಂಕುಗಳಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿದ್ದಾರೆ, ಶೇಕಡ ಎಷ್ಟು ಜನ ಸುಪ್ರೀಂಕೋರ್ಟ್ ನ್ಯಾಯಾಧೀಶರಿದ್ದಾರೆ, IIT, IIM ಗಳಂತಹ ಸಂಸ್ಥೆಗಳಲ್ಲಿ ಇದುವರೆವಿಗೂ ಎಷ್ಟು ದಲಿತ ಮಕ್ಕಳು ಕೆನೆಪದರದ ಸವಲತ್ತುಗಳನ್ನು ಬಳಸಿಕೊಂಡಿದ್ದಾರೆ ಇವುಗಳೆಲ್ಲವನ್ನು ಬಯಲಿಗೆಳೆಯಬೇಕಲ್ಲವೇ, ಎಷ್ಟು ದಲಿತ ಮಠ ಮಾನ್ಯಗಳಿಗೆ ಸರ್ಕಾರ ತನ್ನ ಬೊಕ್ಕಸದಿಂದ ಹಣವನ್ನು ರಾಜಕಾರಣಿಗಳು ನೀಡಿದ್ದಾರೆ, ಅಂತಹ ಬೊಕ್ಕಸದ ಹಣ ಜಾತಿವಾಗಿಗಳ ಮಠಗಳಿಗೆ ಸೇರಿವೆಯೇ ಹೊರತು ದಲಿತರ ಉದ್ದಾರಕ್ಕೆ ಅಲ್ಲ, ಹಾಗಾದರೆ ಯಾರು ಕೆನೆಪದರದ ಸವಲತ್ತುಗಳಿಂದ ವಂಚಿತರಾಗಿರುವವರು, ಇವೆಲ್ಲವನ್ನು ಬಯಲಿಗೆಳೆಯಬೇಕು ನಂತರ ಕೆನೆಪದರದ ಬಗ್ಗೆ ಮಾತನಾಡೋಣ !
ಇತ್ತೀಚೆಗೆ ನಡೆದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಚುನಾವಣೆಯಲ್ಲಿ ದಲಿತರ ಓಟ್ ಬ್ಯಾಂಕಿನ ಗಾತ್ರ ಮೋದಿ ಸರ್ಕಾರಕ್ಕೆ ದೊಡ್ಡ ಪೆಟ್ಟು ಕೊಟ್ಟಿತು, ದಲಿತರು ಒಂದಾದರೆ ಬಿಜೆಪಿಗೆ ಉಳಿಗಾಲವಿಲ್ಲ ಎಂದು ಅರಿತ ಮೋದಿ ಭಕ್ತರು ಕಾನೂನನ್ನೇ ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ನ್ಯಾಯಾಂಗವನ್ನು ಇಷ್ಟ ಬಂದ ಹಾಗೆ ಬಳಸಿಕೊಳ್ಳುತ್ತಿದ್ದಾರೆ. ಇದರ ಮೂಲಕ ದಲಿತರ ಒಗ್ಗಟ್ಟನ್ನು ಹೊಡೆದು ತಾವು ದೊರೆಗಳಾಗಿಯೇ ಉಳಿದುಕೊಳ್ಳಬಹುದು ಎಂದು ಅರಿತ ಮನುವಾದಿಗಳು ಕೆನೆಪದರದ ನೆಪಹೂಡ್ದಿ ದಲಿತರೆಲ್ಲರು ಹೊಡೆದಾಡುವ ಮನಸ್ಥಿತಿಯನ್ನು ಸೃಷ್ಠಿಸಿ “ತಂದಿಕ್ಕಿ ತಮಾಷೆ ನೋಡಿ” ತಮ್ಮ ಬೇಳೆಕಾಳು ಬೇಯಿಸಿಕೊಳ್ಳುತ್ತಿದ್ದಾರೆ. ಕರ್ನಾಟಕದ ಮಟ್ಟಿಗೆ ಯೋಚಿಸುವುದಾದರೆ ಇಲ್ಲಿ ಹೊಲೆಯ ಮತ್ತು ಮಾದಿಗ ಈ ಎರಡು ಜಾತಿಗಳು ಒಳ ಮೀಸಲಾತಿಯ ಗುಂಗಲ್ಲಿ ಎರಡು ಬಣಗಳಾಗಿವೆ. ಈ ಬಣಗಳನ್ನು ಒಟ್ಟಿಗೆ ಒಂದೇ ವೇದಿಕೆಗೆ ತರುವ ಪ್ರಯತ್ನವನ್ನು ಮಾನ್ಯ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್, ಜಿ ಪರಮೇಶ್ವರ್, ಹೆಚ್ ಸಿ ಮಹದೇವಪ್ಪ, ಕೆ ಹೆಚ್ ಮುನಿಯಪ್ಪ ರವರ ನಾಯಕರುಗಳ ನೇತೃತ್ವತ ಸರ್ಕಾರ ಪ್ರಯತ್ನ ನಡೆಸುತ್ತಿದ್ದು, ಬಿಜೆಪಿಯ ಆಡಳಿತಕ್ಕೆ ಬಹುಪಾಲು ಹೊಡೆತ ಬಿದ್ದಿದೆ.
ಕಳೆದ 2019 ರ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಕೇವಲ ಒಂದೇ ಒಂದು MP ಗೆದ್ದುಕೊಂಡಿದ್ದರೆ, ಈ ಬಾರಿ 9 ಗೆದ್ದು ಬೀಗಿದೆ, ಕಳೆದ ಬಾರಿ 25 MP ಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ 17 ಕ್ಕೆ ಕುಸಿದಿದ್ದು ಬಿಜೆಪಿಯ ಆಡಳಿತದ ವೈಖರಿಗೆ ಹಿನ್ನಡೆಯಾಗಿದೆ. ಇದರಿಂದ ಕರ್ನಾಟಕದಲ್ಲಿ ಅಧಿಕಾರವನ್ನು ಕಳೆದುಕೊಂಡು ಮೂಲೆಯಲ್ಲಿ ಕುಳಿತ ಪಕ್ಷವಾಗಿದೆ. ಇನ್ನು ದೇಶದ ಮಟ್ಟಿಗೆ ಯೋಚಿಸುವುದಾದರೆ ಕಳೆದ ಬಾರಿ ಕೇವಲ 50 ರಿಂದ 60 ರಷ್ಟಿದ್ದ ಕಾಂಗ್ರೇಸ್ ಪಕ್ಷದ ಎಂಪಿಗಳು ಈ ಬಾರಿ INDIA ಮೈತ್ರಿ ಕೂಟದಿಂದ ಬಲದಿಂದ ವಿರೋಧಪಕ್ಷವನ್ನು ಗಿಟ್ಟಿಸಿಕೊಂಡಿದೆ. ಕಾಂಗ್ರೇಸ್ ಪಕ್ಷದ ಮೂಲ ಓಟ್ ಬ್ಯಾಂಕ್ ಎಂದರೆ ದಲಿತರು ಹಿಂದುಳಿದವರು ಮತ್ತು ಮುಸಲ್ಮಾನರು ಹಾಗು ಮೇಲ್ವರ್ಗದ ಪ್ರಜ್ಞಾವಂತ ಜನರು ಮತ್ತು ಚಿಂತಕರು.
ಈಗ ಬಿಜೆಪಿಯ ಮುಂದಿರುವ ಸವಾಲೆಂದರೆ ಮುಂದಿನ ಚುನಾವಣೆಗಳಷ್ಟರಲ್ಲಿ ದಲಿತರ ಒಗ್ಗಟ್ಟನ್ನು ಛಿದ್ರಗೊಳಿಸಿ ಅವರುಗಳು ಕಚ್ಚಾಡುವಂತೆ ಮಾಡಿ ದಲಿತರ ಓಟುಗಳನ್ನು ಹೊಡೆದು ತಮ್ಮ ಬೇಳೆಕಾಳು ಬೇಯಿಸಿಕೊಳ್ಳುವ ಬಹುದೊಡ್ಡ ಹುನ್ನಾರವಷ್ಟೇ ಹೊರತು ನಿಜವಾಗಿಯೂ ದಲಿತ ಸಮುದಾಯದ ಹಿಂದುಳಿದ ಜನಾಂಗದ ಉದ್ಧರವಲ್ಲ ಎನ್ನಬಹುದು. ಆದರೆ ಸಂವಿಧಾನದ ಆಶ್ರಯದಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಡುತ್ತಿರುವ ನಮ್ಮಗಳ ಗುರಿ ಅಧಿಕಾರ ಹಿಡಿಯುವುದೇ ಹೊರತು ಆಳುವ ಪಕ್ಷಗಳ ಮುಂದೆ ನಿಂತು ಮೀಸಲಾತಿಯ ಭಿಕ್ಷೆ ಬೇಡುವುದಾಗಬಾರದು. ಮೀಸಲಾತಿ ಎನ್ನುವುದು ಸರ್ವಜನಾಂಗದ ಜಾತಿಯ ಆಧಾರಿತ ಸವಲತ್ತುಗಳೇ ಹೊರತು, ಒಂದೇ ಜಾತಿಗೆ ಸೀಮಿತವಾದುದ್ದಲ್ಲ. ಇದನ್ನು ಸಾಮಾನ್ಯ ಜನರು ಅರಿಯಬೇಕಿದೆ. ಮೀಸಲಾತಿ ಮಾತನಾಡುವ ಮೊದಲು ಯಾವ ಜನಾಂಗದ ಹತ್ತಿರ ಎಷ್ಟೆಷ್ಟು ಸಂಪತ್ತು ಕ್ರೂಡೀಕರಣವಾಗಿದೆ, ಅಧಿಕಾರವೆಂಬುದು ಯಾರ ಕಪಿ ಮುಷ್ಠಿಯಲ್ಲಿ ಕುಳಿತಿದೆ, ಸಾಮಾಜಿಕ ಮತ್ತು ಆರ್ಥಿಕ ಭದ್ರತೆ ಎನ್ನುವುದು ಯಾರ ಕೈವಶವಾಗಿದೆ ಎನ್ನುವುದನ್ನು ಮೊದಲು ಬಯಲಿಗೆಳೆಯಬೇಕಿದೆ. ನಂತರ ನಮ್ಮ ಬೂಟಾಟಿಕೆಯ ರಾಜಕಾರಣಿಗಳು, ಚಿಂತಕರು, ಬರಹಗಾರರು ಇಂತಹ ಒಳ ಮೀಸಲಾತಿ ಮತ್ತು ಕೆನೆಪದರದ ನಿರ್ಧಾರಕ್ಕೆ ಮುಂದಾಗಲಿ.
ಮಾನ್ಯ ದಲಿತ ಬಂಧುಗಳೇ ಬಾಬಾಸಾಹೇಬರ ಕನಸು ನನಸಾಗಬೇಕಾದರೆ ಮೊದಲು ಬೇರೆಯವರು ದಿಕ್ಕು ತಪ್ಪಿಸುವ ಪಾಶಕ್ಕೆ ಬಲಿಯಾಗದೆ, ಅಧಿಕಾರದ ಗದ್ದುಗೆಯ ಕಡೆಗೆ ಎಲ್ಲರು ಒಗ್ಗಟ್ಟಿನಿಂದ ಸಾಗಬೇಕಿದೆ. “Political power is master key” ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಮೋದಿ ಅಧಿಕಾರಕ್ಕೆ ಬಂದ ತಕ್ಷಣ ಬ್ರಾಹ್ಮಣರಿಗೆ ಶೇಕಡ 10% ಮೀಸಲಾತಿ ನೀಡಿದರು. ರಾಜ್ಯದಲ್ಲಿ ಮಾನ್ಯ ಯಡಿಯೂರಪ್ಪ ನವರು ಮುಖ್ಯಮಂತ್ರಿಯಾದರು ಮಠಗಳಿಗೆ ಲಕ್ಷಾಂತರ ಕೋಟಿ ದೇಣಿಗೆಯ ರೂಪದಲ್ಲಿ ಹಣ ನೀಡಿದರು. ಆದರೆ ದಲಿತರು ಸಂವಿಧಾನವನ್ನು ಅರಿತು ಅಧಿಕಾರಕ್ಕೆ ಬರುವ ಮೊದಲೇ ನಮ್ಮನ್ನು ಹೊಡೆದು ಆಳುವ ನೀತಿಯನ್ನು ಜಾರಿ ಮಾಡುತ್ತಿರುವುದು ನಮ್ಮ ಕಣ್ಣೆದುರಿನ ಬಹು ದೊಡ್ಡ ಮೋಸವಾಗಿದೆ. ಒಳ ಮೀಸಲಾತಿ ಮತ್ತು ಕೆನೆಪದರ ವ್ಯವಸ್ಥೆ ಜಾರಿಯಾದದ್ದೇ ಆದರೆ ಬಾಬಾಸಾಹೇಬರ ಕನಸ್ಸು ನುಚ್ಚು ನೂರಾಗುತ್ತದೆ. ದಲಿತರ ಸರ್ವನಾಶಕ್ಕೆ ಭದ್ರ ಬುನಾದಿಯಾಗುತ್ತದೆ. ಮುಂದೊಂದು ದಿನ ಸಂವಿಧಾನಕ್ಕೆ ಇದೆ ಬಹುದೊಡ್ಡ ಅಪಾಯವೆಂದರು ತಪ್ಪಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth