“ಕೇರಳ ಕರ್ನಾಟಕ ಗಡಿ ಮುಚ್ಚುವ ತೀರ್ಮಾನ ಸರಿಯಲ್ಲ” - Mahanayaka
4:04 PM Wednesday 11 - December 2024

“ಕೇರಳ ಕರ್ನಾಟಕ ಗಡಿ ಮುಚ್ಚುವ ತೀರ್ಮಾನ ಸರಿಯಲ್ಲ”

24/02/2021

ಮಂಗಳೂರು: ಕೇರಳದಲ್ಲಿ ಕೊರೋನ ಸೋಂಕು ಹೆಚ್ಚಳ ಮುಂದಿಟ್ಟು ದಕ್ಷಿಣ ಕನ್ನಡ ಜಿಲ್ಲೆಗೆ   ಹೊಂದಿಕೊಂಡಿರುವ ಕೇರಳದ ಗಡಿಗಳನ್ನು ಮುಚ್ಚುವ, ಕೊರೋನ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ ಪಡಿಸುವ ದಕ್ಷಿಣ ಕನ್ನಡ ಜಿಲ್ಲಾಡಳಿತದ ತೀರ್ಮಾನ‌ ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಲಿದ್ದು ಸರಕಾರ ತಕ್ಷಣವೇ ಗಡಿ ಮುಚ್ಚುವ, ಪರೀಕ್ಷಾ,ವರದಿ ಕಡ್ಡಾಯ ನಿರ್ಧಾರವನ್ನು  ಹಿಂಪಡೆಯಬೇಕು ಎಂದು ಡಿವೈಎಫ್ ಐ ದ.ಕ. ಜಿಲ್ಲಾ ಸಮಿತಿ ಒತ್ತಾಯಿಸಿದೆ.

ಕೊರೋನ‌ ಮೊದಲ ಹಂತದಲ್ಲಿ ತಿಂಗಳುಗಳ ಕಾಲದ ಗಡಿ ಮುಚ್ಚುಗಡೆಯಿಂದ ಮಂಗಳೂರಿನ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಕಾಸರಗೋಡು ಭಾಗದ ಸಾವಿರಾರು ಜನ ಕನ್ನಡಿಗರು ಉದ್ಯೋಗ, ವ್ಯಾಪಾರಕ್ಕಾಗಿ ಮಂಗಳೂರನ್ನೇ ಅವಲಂಬಿಸಿದ್ದು, ಆ ಸಂದರ್ಭದಲ್ಲಿ ತಮ್ಮ ದುಡಿಮೆಯ ಅವಕಾಶಗಳನ್ನೇ ಕಳೆದು ಕೊಂಡು ಬೀದಿಗೆ ಬಂದಿದ್ದರು. ಈಗ ನಿಧಾನವಾಗಿ ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿರುವಾಗ, ಗಡಿನಾಡಿನ ಸಾವಿರಾರು ವಿದ್ಯಾರ್ಥಿಗಳು ಫೀಸು ಕಟ್ಟಿ ಪರೀಕ್ಷೆಗಳಿಗೆ ಸಿದ್ದರಾಗುತ್ತಿರುವಾಗ ದಿಢೀರನೆ, ಏಕಾಏಕಿ ಗಡಿ ಮುಚ್ಚುವುದು ಆಘಾತಕಾರಿ ಮಾತ್ರ ಅಲ್ಲ, ಅವೈಜ್ಞಾನಿಕವೂ ಹೌದು. ಈ ರೀತಿ ಜನಸಾಮಾನ್ಯರ ಬದುಕಿನ‌ ಜೊತೆ ಚೆಲ್ಲಾಟವಾಡುವುದು ಯಾವುದೇ ಕಾರಣಕ್ಕೂ ಸಮರ್ಥನೀಯವೂ ಅಲ್ಲ ಎಂದು ಸಂಘಟನೆ ಹೇಳಿದೆ.

ಗಡಿಗಳನ್ನು ಮುಚ್ಚುವುದರಿಂದ ಕೊರೋನ ನಿಯಂತ್ರಣಕ್ಕೆ ಬರುತ್ತದೆ ಎಂಬುದಕ್ಕೆ ಯಾವುದೇ ಸರಿಯಾದ ಆಧಾರ ಇಲ್ಲ. ಈ ಹಿಂದೆ ತಿಂಗಳುಗಳ ಕಾಲ ಗಡಿ ಮುಚ್ಚಿದಾಗ ಕೊರೋನ ಸೋಂಕು ಅತ್ಯಂತ ವೇಗವಾಗಿ ಹರಡಿತ್ತು.  ಜಿಲ್ಲೆಯಲ್ಲಿ ಕೊರೋನ ಮುಂಜಾಗರೂಕತೆ ಕ್ರಮಗಳನ್ನು ಜಾರಿಗೊಳಿಸುವಲ್ಲಿ, ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವಿಧಾನಗಳನ್ನು ನಿಯಮಬದ್ದಗೊಳಿಸುವಲ್ಲಿ ವೈಫಲ್ಯಗಳು ಇನ್ನೂ ಮುಂದುವರಿದಿದೆ. ಹಾಗಿರುತ್ತಾ ಗಡಿ ಮುಚ್ಚುವುದರಿಂದ ಪ್ರಾಯೋಗಿಕವಾಗಿ ಯಾವ ಪ್ರಯೋಜನವೂ ಆಗುವುದಿಲ್ಲ. ಬದಲಿಗೆ ಚೇತರಿಸಿಕೊಳ್ಳಲು ಪರದಾಡುತ್ತಿರುವ ಜನ ಸಾಮಾನ್ಯರ ಬದುಕಿಗೆ ಕೊಡಲಿ ಪೆಟ್ಟು ಬೀಳುತ್ತದೆ. ಜಿಲ್ಲಾಡಳಿತ ಗಡಿ ಮುಚ್ಚುವ ತೀರ್ಮಾನ ಹಿಂಪಡೆದು ಜನರ ಆತಂಕ ದೂರ ಮಾಡಬೇಕು ಎಂದು ಡಿವೈಎಫ್ಐ ಆಗ್ರಹಿಸುತ್ತದೆ ಎಂದು ದ ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ