ಕೇರಳಿಗರೇ ಭಾಗ್ಯವಂತರು! |  ಲಾಕ್ ಡೌನ್ ವೇಳೆ ಪಿಣರಾಯಿ ವಿಜಯನ್ ಎಂತಹ ಕೊಡುಗೆ ನೀಡಿದ್ದಾರೆ ಗೊತ್ತಾ? - Mahanayaka
6:00 PM Wednesday 11 - December 2024

ಕೇರಳಿಗರೇ ಭಾಗ್ಯವಂತರು! |  ಲಾಕ್ ಡೌನ್ ವೇಳೆ ಪಿಣರಾಯಿ ವಿಜಯನ್ ಎಂತಹ ಕೊಡುಗೆ ನೀಡಿದ್ದಾರೆ ಗೊತ್ತಾ?

pinarayi vijayan
08/05/2021

ತಿರುವನಂತಪುರಂ: ಕೇರಳ ರಾಜ್ಯದಲ್ಲಿ ಒಬ್ಬರೇ ಒಬ್ಬರು ಆಹಾರ ಅಥವಾ ಚಿಕಿತ್ಸೆ ಇಲ್ಲದೇ ಸಾಯಬಾರದು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದು, ಬುಡಕಟ್ಟು ಪ್ರದೇಶಗಳ ಜನರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ  ಅವರು, ಕೇರಳದ ಪ್ರತಿಯೊಬ್ಬ ನಾಗರಿಕನಿಗೂ ಸರ್ಕಾರದ ಆಸರೆ, ನೆರವು ನೀಡುವುದಾಗಿ ಘೋಷಿಸಿದರು. ಕೇರಳದಲ್ಲಿ ಯಾರು ಕೂಡ ಹಸಿವಿನಿಂದ ಹಾಗೂ ಚಿಕಿತ್ಸೆ ಇಲ್ಲದೇ ಬಳಲಬಾರದು. ಒಂದು ವೇಳೆ ಇಂತಹ ಸ್ಥಿತಿಯಲ್ಲಿ ಯಾವುದಾದರೂ ಪ್ರದೇಶದ ಜನರಿದ್ದರೆ, ತಕ್ಷಣವೇ ಈ ಪಟ್ಟಿಯನ್ನು ಸರ್ಕಾರಕ್ಕೆ ನೀಡಬೇಕು ಎಂದು ಅವರು ಆದೇಶ ನೀಡಿದರು.

ಲಾಕ್ ಡೌನ್ ಅವಧಿಯಲ್ಲಿ ಔಷಧಿಗಳು ಹಾಗೂ ಅಗತ್ಯ ವಸ್ತುಗಳನ್ನು ಕೊಳ್ಳುವ ಶಕ್ತಿ ಇಲ್ಲದವರ ಪಟ್ಟಿಯನ್ನು ಸಿದ್ಧಪಡಿಸಬೇಕು.  ಕೆಲವು ಪ್ರದೇಶಗಳಲ್ಲಿ ಭಿಕ್ಷುಕರು ಇದ್ದರೂ, ಅವರಿಗೆ ಸರ್ಕಾರದಿಂದ ಆಹಾರ ನೀಡುವ ವ್ಯವಸ್ಥೆ ಮಾಡಬೇಕು. ಅವರಲ್ಲಿ ಬದುಕುವ ಭರವಸೆಯನ್ನು ಮೂಡಿಸಬೇಕು ಎಂದು ಪಿಣರಾಯಿ ವಿಜಯನ್ ಅಧಿಕಾರಿಗಳಿಗೆ ಸೂಚಿಸಿದರು.

ರಾಜ್ಯದ ಪ್ರತಿಯೊಬ್ಬರಿಗೂ ಆಹಾರ ಸರಿಯಾಗಿ ದೊರೆಯುತ್ತಿದೆಯೇ ಎನ್ನುವುದನ್ನು ಅಧಿಕಾರಿಗಳು ಖಾತ್ರಿಪಡಿಸಬೇಕು. ಇದರಲ್ಲಿ ಪ್ರಮುಖವಾಗಿ ಮನೆಯಿಲ್ಲದೇ ನಗರಗಳಲ್ಲಿ ಮತ್ತಿತರ ಪ್ರದೇಶಗಳಲ್ಲಿ ವಾಸಿಸುವವರಿಗೆ ಆಹಾರ ದೊರಕುತ್ತಿದೆಯೇ ಎನ್ನುವುದನ್ನು ಖಚಿತಪಡಿಸಬೇಕು. ಅವರಿಗೆ ಸರ್ಕಾರದ ವತಿಯಿಂದ ಉತ್ತಮ ಊಟ ಒದಗಿಸಬೇಕು ಎಂದು ಪಿಣರಾಯಿ ಆದೇಶಿಸಿದರು.

ಬುಡಕಟ್ಟು ಪ್ರದೇಶಗಳಿಗೆ ಹೆಚ್ಚಿನ ಗಮನ ನೀಡಬೇಕು. ವಿವಿಧ ಪ್ರದೇಶಗಳಲ್ಲಿ ಇವರು ಕೆಲಸ ಮಾಡುತ್ತಾರೆ. ಹಾಗಾಗಿ ಇವರಿಗೆ ಕಡ್ಡಾಯವಾಗಿ ಪರೀಕ್ಷೆ ನಡೆಸಿ, ಔಷಧಿಗಳನ್ನು ಒದಗಿಸಬೇಕು ಎಂದು ಅವರು ಆದೇಶಿಸಿದರು.

ಇನ್ನೂ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಬದಲು ಇತರ ವಾಹನಗಳಿಗೆ ಅವಕಾಶ ನೀಡಬೇಕು. ಒಂದು ಪಂಚಾಯತ್ ನಲ್ಲಿ ಕನಿಷ್ಠ 5 ಮತ್ತು ಪುರಸಭೆ ವ್ಯಾಪ್ತಿಯಲ್ಲಿ 10 ವಾಹನಗಳು ಇರಬೇಕು ಎಂದು ಪಿಣರಾಯಿ ವಿಜಯನ್ ಸೂಚಿಸಿದರು.

ಇನ್ನೂ ವಾರ್ಡ್ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಗಳನ್ನು ಮಾಡಬೇಕು. ಮನೆ ಮನೆಗಳಿಗೆ ಆರೋಗ್ಯ ಸಿಬ್ಬಂದಿ ತೆರಳಿ ಮೌಲ್ಯಮಾಪನ ಮಾಡುವುದು ಕಡ್ಡಾಯವಾಗಿದೆ.  ಪಂಚಾಯತ್ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಚೈನ್ ಲಿಂಕ್ ಮುರಿಯಲು ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಅಧಿಕಾರಿಗಳು ವರದಿ ನೀಡಬೇಕು ಎಂದು ಸೂಚಿಸಿದ ಅವರು,  ಪ್ರತಿ ಕುಟುಂಬವೂ ಸುರಕ್ಷಿತವಾಗಿರಬೇಕು. ಹಾಗಾಗಿ ಪ್ರತಿ ವ್ಯಕ್ತಿಯೂ ಕೊರೊನಾ ಸೋಂಕಿನಿಂದ ಪಾರಾಗಲು ಜನರಿಗೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಆರೋಗ್ಯ ಕಾರ್ಯಕರ್ತರು ಮನೆಮನೆಗೂ ತೆರಳಿ ಅರಿವು ಮೂಡಿಸಿ ಎಂದು ತಿಳಿಸಿದರು.

ಇನ್ನೂ ಕಟ್ಟಡ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳಲು ವಾಹನ ವ್ಯವಸ್ಥೆ ಮಾಡಬೇಕು. ಅಥವಾ ಕೆಲಸದ ಸ್ಥಳದಲ್ಲಿಯೇ ನಿಂತು ಕೆಲಸ ಮಾಡಲು ಅವಕಾಶ ನೀಡಲಾಗಿದೆ ಎಂದು ಪಿಣರಾಯಿ ವಿಜಯನ್ ತಿಳಿಸಿದರು.

ಒಟ್ಟಿನಲ್ಲಿ ಪಿಣರಾಯಿ ವಿಜಯನ್ ಕೇರಳದಲ್ಲಿ ಕೊನೆಯ ಸ್ಥಾನದಲ್ಲಿ ಭಿಕ್ಷುಕರನ್ನು ಕೂಡ ತಮ್ಮ ಪಟ್ಟಿಯಿಂದ ಬಿಡದೇ ಅವರ ಕಾಳಜಿಗಾಗಿ ಕ್ರಮಕೈಗೊಂಡಿದ್ದಾರೆ. ಕರ್ನಾಟಕದಲ್ಲಿ ಇಂತಹ ಕ್ರಮಗಳನ್ನು ಊಹಿಸಲೂ ಸಾಧ್ಯವಿಲ್ಲದಂತಹ ಪರಿಸ್ಥಿತಿ ಉಂಟಾಗಿದೆ. ಅಣ್ಣಮ ದೇವಿ ಕರ್ನಾಟಕ ಮುಖ್ಯಮಂತ್ರಿಗೂ ಇಂತಹ ಬುದ್ಧಿ ಕೊಡಲಿ ಎಂದಷ್ಟೇ ಪ್ರಾರ್ಥಿಸಬೇಕಷ್ಟೆ.

ಇತ್ತೀಚಿನ ಸುದ್ದಿ