ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಪ್ರಕರಣ: ದಿಲ್ಲಿಯಲ್ಲಿ ಪ್ರಮುಖ ಆರೋಪಿಯ ಬಂಧನ

ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ತನಿಖಾ ಸಂಸ್ಥೆಯು (ಎಸ್ಐಎ) ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆ (ಎಲ್ಒಸಿ) ಮೂಲಕ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಮಾದಕವಸ್ತುಗಳ ಕಳ್ಳಸಾಗಣೆಗೆ ಸಂಬಂಧಿಸಿದ ಪ್ರಕರಣದ ಪ್ರಮುಖ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಿದೆ.
ಮೇ 30 ಮತ್ತು 31 ರ ಮಧ್ಯರಾತ್ರಿ ಪೂಂಚ್ ನ ಕರ್ಮಾರಾ ಪ್ರದೇಶದ ಗಡಿ ಬೇಲಿ ಬಳಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಮಾದಕವಸ್ತುಗಳೊಂದಿಗೆ ತನ್ನ ಮೂವರು ಸಹಚರರನ್ನು ಬಂಧಿಸಿದ ನಂತರ ಪೂಂಚ್ ನಿವಾಸಿ ಮೊಹಮ್ಮದ್ ಜಾವೇದ್ ಸ್ಥಳದಿಂದ ಪರಾರಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 6 ರಂದು ಪ್ರಕರಣವನ್ನು ಕೈಗೆತ್ತಿಕೊಂಡ ನಂತರ ಎಸ್ಐಎ ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಇರುವಿಕೆಯನ್ನು ಪತ್ತೆಹಚ್ಚಿತು. ನಂತರ ಶೋಧ ಕಾರ್ಯಾಚರಣೆ ನಡೆಸಿದ ವಿಶೇಷ ತಂಡವು ಬಂಧಿಸಿದೆ.
ಇದಕ್ಕೂ ಮುನ್ನ ಮೊಹಮ್ಮದ್ ಫಾರೂಕ್ (26), ಮೊಹಮ್ಮದ್ ರಿಯಾಜ್ (23) ಮತ್ತು ಮೊಹಮ್ಮದ್ ಜುಬೈರ್ (22) ಅವರನ್ನು ಎಕೆ ಅಸಾಲ್ಟ್ ರೈಫಲ್, ಎರಡು ಪಿಸ್ತೂಲಲ್ ಗಳು, ಆರು ಗ್ರೆನೇಡ್ ಗಳು, 10 ಕೆಜಿ ಐಇಡಿ ಮತ್ತು 20 ಪ್ಯಾಕೆಟ್ ಶಂಕಿತ ಹೆರಾಯಿನ್ ನೊಂದಿಗೆ ಬಂಧಿಸಿತ್ತು.