ಉಪೇಂದ್ರ ಅವರೇ… ಅಂಬೇಡ್ಕರ್ ಅವರನ್ನು ಅಧ್ಯಯನ ಮಾಡಿ!
“ಇತಿಹಾಸ ತಿಳಿಯದವನು ಇತಿಹಾಸ ಸೃಷ್ಟಿಸಲಾರ” ಎಂಬ ಅಂಬೇಡ್ಕರ್ ಅವರ ಮಾತುಗಳ ಬಗ್ಗೆ ನಟ, ಪ್ರಜಾಕೀಯ ಸ್ಥಾಪಕ ಉಪೇಂದ್ರ ಮಾತನಾಡಿರುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ ಅವರು ಕ್ಷಮೆಯಾಚಿಸಿದ್ದಾರೆ.
“ ಇತಿಹಾಸ ತಿಳಿಯದವನು ಇತಿಹಾಸ ಸ್ರಷ್ಠಿಸಲಾರ” ಎಂಬುದು ಡಾಕ್ಟರ್ ಅಂಬೇಡ್ಕರ್ ರವರ ಹೇಳಿಕೆ ಎಂಬುದು ತಿಳಿದಿರಲಿಲ್ಲ. ಯಾರೋ ಇಂಗ್ಲೀಷ್ ರವರ ಬರಹ ಎಂದು ತಿಳಿದು ತಪ್ಪು ಮಾತನಾಡಿದೆ. ದಯವಿಟ್ಟು ಕ್ಷಮಿಸಿ ಎಂದು ಉಪೇಂದ್ರ ಟ್ವೀಟ್ ಮಾಡಿ ಕ್ಷಮೆ ಕೇಳಿದ್ದಾರೆ.
ನಟ ಉಪೇಂದ್ರ ಅವರು ಪ್ರಸ್ತುತ ರಾಜಕೀಯ ವ್ಯವಸ್ಥೆಗಳು ಸರಿ ಇಲ್ಲ. ಅದನ್ನು ಸರಿಪಡಿಸಬೇಕು ಎಂಬೆಲ್ಲ ಮಾತುಗಳನ್ನಾಡುತ್ತಿದ್ದಾರೆ. ಆದರೆ, ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿಯೇ ರಾಜಕೀಯ ಹುದುಗಿದೆ ಎನ್ನುವ ವಾಸ್ತವವನ್ನು ಉಪೇಂದ್ರ ಅವರು ಅರಿತಿಲ್ಲ.
ದೇಶದ ರಾಜಕೀಯ ವ್ಯವಸ್ಥೆಯನ್ನು ಬದಲಿಸಬೇಕಾದರೆ, ಸಾಮಾಜಿಕ ಬದಲಾವಣೆಯಾಗಬೇಕು ಎನ್ನುವುದನ್ನು ಅಂಬೇಡ್ಕರರು ಒತ್ತಿ ಹೇಳಿದ್ದಾರೆ. ಬಹುಶಃ ನಟ ಉಪೇಂದ್ರ ಅವರು ಈಗ ತಪ್ಪು ಮಾಡಿ ಕ್ಷಮೆ ಯಾಚಿಸುವುದಕ್ಕಿಂತಲೂ, ಅಂಬೇಡ್ಕರ್ ಅವರನ್ನು ಅಧ್ಯಯನ ನಡೆಸುವುದು ಉತ್ತಮ. ಉಪೇಂದ್ರ ಅವರ ಹೇಳಿಕೆಯಿಂದ ಸಾಕಷ್ಟು ಜನರಿಗೆ ನೋವಾಗಿದೆ. ಆದರೆ, ಅಂಬೇಡ್ಕರ್ ಅವರು ಹೇಳಿದ ಮಾತಿನ ಒಳಾರ್ಥವನ್ನು ಉಪೇಂದ್ರ ಅವರು ತಿಳಿದುಕೊಳ್ಳಲು ಇದೊಂದು ಅವಕಾಶವಾಗಲಿ.
ಉಪೇಂದ್ರ ಅವರು ಸೂಪರ್ ಎಂಬ ಒಂದು ಸಿನಿಮಾ ಮಾಡಿದ ಬಳಿಕ, ರಾಜಕೀಯದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿರುವುದು ಕಂಡು ಬಂತು. ಆದರೆ, ಸಿನಿಮಾ ಸಾಮಾನ್ಯ ಗ್ರಹಿಕೆ, ಊಹೆಗಳಿಂದ ಕೂಡಿರುತ್ತದೆ. ಆದರೆ, ಸಮಾಜದ ಸ್ಥಿತಿ ಬೇರೆಯದ್ದೇ ಆಗಿರುತ್ತದೆ. ನಿಜವಾದ ಭಾರತವನ್ನು ಅರಿಯಬೇಕಾದರೆ, ಅಂಬೇಡ್ಕರ್ ಅವರ ಕಣ್ಣುಗಳಿಂದ ಭಾರತವನ್ನು ನೋಡಬೇಕಿದೆ. ಅಥವಾ ದೇಶದ ಸಂವಿಧಾನದ ಕಣ್ಣುಗಳಿಂದ ದೇಶವನ್ನು ನೋಡಬೇಕಿದೆ. ಉಪೇಂದ್ರ ಅವರ ಪ್ರಜಾಕೀಯ ಪಕ್ಷ ದೇಶದಲ್ಲಿ ನಡೆಯುತ್ತಿರುವ ಅಕ್ರಮ, ಅನ್ಯಾಯಗಳ ಬದಲಾವಣೆಯ ಬಗ್ಗೆ ಮಾತನಾಡಲಿ. ಆದರೆ ಅಂಬೇಡ್ಕರ್ ಅವರು ಹೇಳಿರುವ ಮಾತನ್ನು ಉಪೇಂದ್ರ ಅವರು ಮತ್ತೆ ಮತ್ತೆ ನೆನಪು ಮಾಡಿಕೊಳ್ಳಲಿ. ಈ ದೇಶದ ನಿಜವಾದ ಇತಿಹಾಸವನ್ನು ಅರಿಯದೇ, ಈ ದೇಶವನ್ನು ಬದಲಾವಣೆ ಮಾಡಲು ನಿಮ್ಮಂದ ಸಾಧ್ಯವೇ ಇಲ್ಲ. ಅಂಬೇಡ್ಕರ್ ಅವರನ್ನು ಉಪೇಂದ್ರ ಅವರು ಇನ್ನಾದರೂ ಅಧ್ಯಯನ ಮಾಡಲಿ.
-ಮಹಾನಾಯಕ ಬಳಗ
“ ಇತಿಹಾಸ ತಿಳಿಯದವನು ಇತಿಹಾಸ ಸ್ರಷ್ಠಿಸಲಾರ” ಎಂಬುದು ಡಾಕ್ಟರ್ ಅಂಬೇಡ್ಕರ್ ರವರ ಹೇಳಿಕೆ ಎಂಬುದು ತಿಳಿದಿರಲಿಲ್ಲ. ಯಾರೋ ಇಂಗ್ಲೀಷ್ ರವರ ಬರಹ ಎಂದು ತಿಳಿದು ತಪ್ಪು ಮಾತನಾಡಿದೆ. ದಯವಿಟ್ಟು ಕ್ಷಮಿಸಿ 🙏🙏🙏
— Upendra (@nimmaupendra) May 16, 2021