ಖಾಸಗಿ ಆಸ್ಪತ್ರೆಯ ಧನದಾಹಕ್ಕೆ ಕೊರೊನಾ ಸೋಂಕಿತ ಬಲಿ | ಹಣ ಇಲ್ಲದೇ ಮೃತದೇಹ ಬಿಟ್ಟು ಹೋದ ಕುಟುಂಬಸ್ಥರು

ಬೆಂಗಳೂರು: ಒಂದೆಡೆ ಸರ್ಕಾರದ ನಿರ್ಲಕ್ಷ್ಯ ಇನ್ನೊಂದೆಡೆ ಖಾಸಗಿ ಆಸ್ಪತ್ರೆಗಳು ಧನದಾಹದಿಂದ ಇಡೀ ರಾಜ್ಯವೇ ನಲುಗುತ್ತಿದ್ದು, ಕೊರೊನಾ ಮಹಾಮಾರಿಯ ನಡುವೆ ಖಾಸಗಿ ಆಸ್ಪತ್ರೆಗಳು ಹೆಮ್ಮಾರಿಯಾಗುತ್ತಿವೆ.
ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿರುವ ಈ ಘಟನೆಯ ವಿರುದ್ಧ ಇಡೀ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಬಡ ಕುಟುಂಬದ ವ್ಯಕ್ತಿಯೋರ್ವರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದು, ಅವರಿಗೆ ಸರಿಯಾಗಿ ಚಿಕಿತ್ಸೆ ನೀಡದೇ ಸಾಯಲು ಬಿಟ್ಟ ಆಸ್ಪತ್ರೆ ಸಿಬ್ಬಂದಿ, ಕುಟುಂಬಸ್ಥರಿಗೆ ಮೃತದೇಹ ನೀಡಲು ಕೂಡ ನಿರಾಕರಿಸಿದೆ.
ನನ್ನ ತಂದೆಗೆ 4 ದಿನಗಳಿಂದ ಸ್ವಲ್ಪ ಜ್ವರ ಕೆಮ್ಮು ಇತ್ತು. ಆ ನಂತರ ನಾವು ಚೆಕ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ಬಂತು. ಬಿಬಿಎಂಪಿ ಅವರಿಗೆ ನಾವು ಕರೆ ಮಾಡಿದೆವು. ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮೊದಲ ಕೊಂಬಿಯಾ ಏಷ್ಯಾ ಆಸ್ಪತ್ರೆಗೆ ಹೋದೆವು. ಒಂದು ಗಂಟೆಯ ಬಳಿಕ ಅಲ್ಲಿ ಮೊದಲು 50 ಸಾವಿರ ಹಣ ಕಟ್ಟುವಂತೆ ಹೇಳಿದರು. ಆದರೆ ನಮ್ಮ ಬಳಿ ಇರಲಿಲ್ಲ. 20 ಸಾವಿರ ಕಟ್ಟಿದೆವು. ಆಸ್ಪತ್ರೆಯಲ್ಲಿ ಯಾವುದೇ ಚಿಕಿತ್ಸೆ ಕೂಡ ಅವರಿಗೆ ನೀಡಲಿಲ್ಲ. ಇದೇ ಸಂದರ್ಭದಲ್ಲಿ ನಮಗೆ ವಿಡಿಯೋ ಕಾಲ್ ಮಾಡಿದ ತಂದೆ. ಆಸ್ಪತ್ರೆಯಲ್ಲಿ ಇದ್ದರೆ ನನ್ನನ್ನು ಸಾಯಿಸಿ ಬಿಡುತ್ತಾರೆ ಬೇರೆ ಆಸ್ಪತ್ರೆಗೆ ಸೇರಿಸು ಎಂದು ಹೇಳಿದರು. ಆದರೆ ಆಸ್ಪತ್ರೆಯವರು ಶೇ.30ರಷ್ಟು ಕೊರನಾದಿಂದ ಗುಣಮುಖರಾಗಿದ್ದಾರೆ ಎಂದರು. ಆದರೆ ಎರಡು ದಿನಗಳಲ್ಲೇ ಅಪ್ಪ ತೀರಿ ಹೋಗಿದ್ದಾರೆ ಎಂದು ಹೇಳಿದ್ದಾರೆ ಎಂದು ಮೃತರ ಪುತ್ರಿ ಹೇಳಿದ್ದಾರೆ.
ಅಪ್ಪ ತೀರಿ ಹೋದರೂ ಕಳೆದ 4 ದಿನಗಳಿಂದಲೂ ಮೃತದೇಹ ಆಸ್ಪತ್ರೆಯಲ್ಲಿಯೇ ಇದೆ. ಆಸ್ಪತ್ರೆ ಸಿಬ್ಬಂದಿ 4 ಲಕ್ಷ ಬಿಲ್ ಕಟ್ಟುವಂತೆ ಹೇಳಿದ್ದಾರೆ. ನಮ್ಮಲ್ಲಿ 4 ಲಕ್ಷ ಹಣ ಇಲ್ಲವಾದ್ದರಿಂದ ನೀವೇ ಅಂತ್ಯಸಂಸ್ಕಾರ ಮಾಡಿ ಎಂದು ನಾವು ಹೇಳಿ ಊರಿಗೆ ತೆರಳಿದ್ದೇವೆ ಎಂದು ಅವರು ಹೇಳಿದ್ದಾರೆ..
39 ವರ್ಷ ವಯಸ್ಸಿನ ಮೃತ ವ್ಯಕ್ತಿ ಮೂಲತಃ ವಿಜಯಪುರದವರಾಗಿದ್ದಾರೆ. ಐದು ವರ್ಷದಿಂದ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ತಮ್ಮ ಕುಟುಂಬದ ಜೊತೆಗೆ ವಾಸವಿದ್ದರು. ಇದೀಗ ಇವರು ಕೊರೊನಾಕ್ಕೆ ಬಲಿಯಾದರೂ ಎನ್ನುವುದಕ್ಕಿಂತಲೂ ದುಷ್ಟ ವ್ಯವಸ್ಥೆಗೆ ಬಲಿಯಾದರು ಎಂದು ಹೇಳಬಹುದಷ್ಟೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ. ಕೊರೊನಾ ಹೆಸರಿನಲ್ಲಿ ಜನರನ್ನು ಕೊಲ್ಲುತ್ತಿರುವ ವ್ಯವಸ್ಥೆಯ ಬಗ್ಗೆ ಸರ್ಕಾರ ಗಮನ ಹರಿಸಲಿ. ಇಂತಹ ಘಟನೆಗಳು ಆಸ್ಪತ್ರೆಯ ಮೇಲೆ, ವೈದ್ಯರ ಮೇಲೆ ಜನರು ಇಟ್ಟಿರುವ ನಂಬಿಕೆಯನ್ನು ಕಳೆದುಕೊಳ್ಳುವಂತಾಗುತ್ತದೆ ಎನ್ನುವ ಆಕ್ರೋಶಗಳು ಘಟನೆಯ ಹಿಂದೆಯೇ ಕೇಳಿ ಬಂದಿದೆ.