ವಿಷ್ಣುವರ್ಧನ್ ಪ್ರತಿಮೆ ಧ್ವಂಸ ಮಾಡಿದವರು ಸಿಕ್ಕಿ ಹಾಕಿಕೊಳ್ಳಬೇಡಿ | ಕಿಡಿಗೇಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಕಿಚ್ಚ
ಬೆಂಗಳೂರು: ಸಾಹಸಸಿಂಹ ವಿಷ್ಣುವರ್ಧನ್ ಅವರ ಪ್ರತಿಮೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಕಿಚ್ಚ ಸುದೀಪ್, ಕಿಡಿಗೇಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದು, “ನೀವು ಸಿಕ್ಕಿಹಾಕಿಕೊಳ್ಳಬೇಡಿ, ಸಿಕ್ಕಿ ಹಾಕಿಕೊಂಡರೆ ವಿಷ್ಣುವರ್ಧನ್ ಅವರ ಅಭಿಮಾನಿಗಳು ನಿಮ್ಮನ್ನು ಪ್ರತಿಮೆ ಒಡೆದದ್ದಕ್ಕಿಂತ ಹೀನಾಯವಾಗಿ ಹೊಡೆದು ಹಾಕುತ್ತಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವಿಟ್ಟರ್ ನಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಅವರು, ‘ಪ್ರತಿಮೆ ಒಡೆದು ಹಾಕಿದ ಕಿಡಿಗೇಡಿಗಳು ದಯವಿಟ್ಟು ಸಿಕ್ಕಿಹಾಕಿಕೊಳ್ಳಬೇಡಿ, ಸಿಕ್ಕಿಹಾಕಿಕೊಂಡರೆ.. ನೀವು ಯಾರು ಅಂತ ಗೊತ್ತಾದರೆ ವಿಷ್ಣುವರ್ಧನ್ ಅವರು ಸಂಪಾದಿಸಿರುವ ಅಷ್ಟೂ ಜನ ಅಭಿಮಾನಿಗಳು ಸೇರಿ ನೀವು ಪ್ರತಿಮೆ ಒಡೆದು ಹಾಕಿದ್ದಕ್ಕಿಂತ ಹೀನಾಯವಾಗಿ ಹೊಡೆದು ಹಾಕುತ್ತಾರೆ. ನಿಮ್ಮ ಹೆಸರು ಹೊರಗೆ ಬಂದರೆ ಮುಂದೆ ನಡೆಯುವುದನ್ನು ಖಂಡಿತವಾಗಿ ಯಾರೂ ತಡೆಯಲು ಆಗಲ್ಲ. ಆ ಮೂರ್ತಿ ಏನು ಬಿಡಿ, ಅದರ ಅಪ್ಪನ ಹಾಗಿದ್ದು ಮೂರ್ತಿ ಕಟ್ಟುತ್ತೇವೆ. ಅದು ಬೇರೆ ವಿಷಯ.. ದಯವಿಟ್ಟು ಸಿಕ್ಕಿಹಾಕಿಕೊಳ್ಳಬೇಡಿ ಎಂದು ಸೈಲೆಂಟಾಗಿ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ವಿಷ್ಣುವರ್ಧನ್ ಪ್ರತಿಮೆಯನ್ನು ಕಿಡಿಗೇಡಿಗಳು ರಾತ್ರೋ ರಾತ್ರಿ ಧ್ವಂಸ ಮಾಡಿದ್ದರು. ಈ ಸಂಬಂಧ ವಿಷ್ಣುವರ್ಧನ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕಿಚ್ಚ ಸುದೀಪ್ ವಿಷ್ಣು ಅಭಿಮಾನಿಗಳಿಗೆ ಧ್ವನಿಯಾಗಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಕಂಡು ಬಂದಿದೆ. ನಟ ಅನಿರುದ್ಧ್ ಅವರು ಕೂಡ ಪ್ರತಿಮೆ ಒಡೆದು ಹಾಕಿರುವವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಕೇವಲ ವಿಷ್ಣುವರ್ಧನ್ ಅವರ ಮಾತ್ರವಲ್ಲದೇ ಎಲ್ಲ ಪ್ರತಿಮೆಗಳ ಬಳಿ ಗುಪ್ತವಾಗಿ ಸಿಸಿ ಕ್ಯಾಮರಗಳನ್ನು ಪೊಲೀಸರು ಅಳವಡಿಸಬೇಕಿದೆ. ಪ್ರತಿಮೆಗಳನ್ನು ಒಡೆದು ಹಾಕಿ ಜನರ ನೆಮ್ಮದಿ ಹಾಳು ಮಾಡುವ ಮಾನಸಿಕ ಅಸ್ವಸ್ಥರ ಕೃತ್ಯಕ್ಕೆ ಇದರಿಂದ ಬ್ರೇಕ್ ಬೀಳುತ್ತದೆ. ಬೀಡಾ ಅಂಗಡಿಗಳಲ್ಲಿ ಕೂಡ ಸಿಸಿ ಕ್ಯಾಮರ ಇಡುತ್ತಿದ್ದಾರೆ. ಆದರೆ, ಪ್ರತಿಮೆಗಳ ಬಳಿ ಯಾಕೆ ಇಡುತ್ತಿಲ್ಲ. ಸಿಸಿ ಕ್ಯಾಮರ ದೃಶ್ಯಾವಳಿಗಳಿಂದ ಕಿಡಿಗೇಡಿಗಳನ್ನು ಸುಲಭವಾಗಿ ಬಂಧಿಸಬಹುದಿತ್ತಲ್ಲವೇ? ಎನ್ನುವ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
To those ******** who broke the statue of my hero and my idol VishnuSir,,
Here is my advice,,,,,,, pic.twitter.com/C6zTglMIy3— Kichcha Sudeepa (@KicchaSudeep) December 26, 2020