ಅಕ್ಷಯ್ ಕಲ್ಲೇಗ ಮೇಲೆ 50ಕ್ಕೂ ಹೆಚ್ಚು ಬಾರಿ ತಲವಾರು ಬೀಸಿದ್ದ ಕೊಲೆಗಾರರು: 2 ಸಾವಿರ ರೂ.ನಲ್ಲಿ ಮುಗಿಯಬೇಕಿದ್ದ ವಿಚಾರ ಕೊಲೆಯಲ್ಲಿ ಅಂತ್ಯ!
ಪುತ್ತೂರು: ಟೀಮ್ ಕಲ್ಲೇಗ ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರ ಬರ್ಬರ ಹತ್ಯೆಯ ಬಳಿಕ ಇದೀಗ ಘಟನೆಯ ಬಗ್ಗೆ ಹಲವು ಮಾಹಿತಿಗಳು ಹೊರ ಬರುತ್ತಿದೆ.
ಖಾಸಗಿ ಬಸ್ ಆನಂದ್ ನ ನಿರ್ವಾಹಕ ಶಿವಪ್ರಸಾದ್ ಅವರು ನವೆಂಬರ್ 6ರಂದು ಬೈಕ್ ನಲ್ಲಿ ಬರುತ್ತಿದ್ದಾಗ ಇಲ್ಲಿನ ಕಾಲೇಜೊಂದರ ವಿದ್ಯಾರ್ಥಿಗೆ ಡಿಕ್ಕಿ ಹೊಡೆದಿದ್ದರು. ಇದರಿಂದಾಗಿ ವಿದ್ಯಾರ್ಥಿಗೆ ಗಾಯವಾಗಿತ್ತು. ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ನೀಡಿದ ನಂತರ ಬೈಕ್ ಸವಾರ ಶಿವಪ್ರಸಾದ್ ಗೆ ಅಕ್ಷಯ್ ಕಲ್ಲೇಗ ಕರೆ ಮಾಡಿ, ಗಾಯಾಳುವಿನ ಚಿಕಿತ್ಸೆ ಭರಿಸಲು 2 ಸಾವಿರ ರೂ ನೀಡುವಂತೆ ತಿಳಿಸಿದ್ದರು. ಆದ್ರೆ ಇದಕ್ಕೆ ಶಿವಪ್ರಸಾದ್ ಒಪ್ಪಿರಲಿಲ್ಲ. ಕೇಸ್ ನಲ್ಲೇ ನೋಡಿಕೊಳ್ಳೋಣ ಎಂದರು. ಇಂತಹ ಸಣ್ಣ ವಿಷಯವನ್ನು ಕೇಸ್ ನಲ್ಲಿ ನೋಡಿಕೊಳ್ಳುವ ಬದಲು ಚಿಕಿತ್ಸಾ ವೆಚ್ಚ ನೀಡಿ ಮುಗಿಸಿಕೊಳ್ಳಿ ಎಂದು ಅಕ್ಷಯ್ ಹೇಳಿದ್ದಾರೆ. ಈ ವಿಚಾರವನ್ನು ಶಿವಪ್ರಸಾದ್ ಅವರ ಸ್ನೇಹಿತ ಚೇತನ್ ಕುಮಾರ್ ಗೆ ತಿಳಿಸಿದ್ದಾರೆ. ಚೇತನ್ ಕೂಡ ಕೇಸ್ ನಲ್ಲೇ ನೋಡಿಕೊಳ್ಳೋಣ ಎಂದಿದ್ದಾರೆ. ಈ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಪರಸ್ಪರ ಮಾತಿನ ಚಕಮಕಿಯ ನಂತರ, ರಾತ್ರಿ ವೇಳೆ ಫೋನ್ ನಲ್ಲಿ ಮಾತನಾಡುವುದಕ್ಕಿಂತ ಧಂ ಇದ್ರೆ ಕಲ್ಲೇಗಕ್ಕೆ ಬಂದು ಮಾತನಾಡಿ ಎಂಬ ಸವಾಲುಗಳು ಬಂದಿವೆ.
ಹೀಗಾಗಿ ಚೇತನ್ ಕುಮಾರ್ ತನ್ನ ಸ್ನೇಹಿತರಾದ ಮನೀಶ್ ಪಡೀಲ್, ಮಂಜುನಾಥ್, ಕೇಶವ ಪಡೀಲ್ ಸೇರಿಕೊಂಡು ಕಲ್ಲೇಗಕ್ಕೆ ಬಂದಿದ್ದು, ಇತ್ತ ಅಕ್ಷಯ್ ಕುಮಾರ್ ವಿಖ್ಯಾತ್ ಮತ್ತು ಅಲ್ತಾಫ್ ಜೊತೆಗೆ ಕಲ್ಲೇಗಕ್ಕೆ ಬಂದಿದ್ದಾರೆ. ಪರಸ್ಪರ ಮಾತಿನ ಚಕಮಕಿ ನಡೆಯುತ್ತಿದ್ದಂತೆಯೇ ಚೇತನ್ ತಂಡ, ತಾವು ಬಂದಿದ್ದ ಕಾರಿನೊಳಗಿನಿಂದ ತಲವಾರು ತೆಗೆದು ಅಕ್ಷಯ್ ಗೆ ಬೀಸಿದ್ದಾರೆ. ಅಕ್ಷಯ್ ಜೊತೆಗಿದ್ದ ಎಂಬವರು ತಡೆಯಲು ಪ್ರಯತ್ನಿಸಿದರೂ, ಮಾರಕಾಸ್ತ್ರಗಳಿಂದ ತಪ್ಪಿಸಿಕೊಂಡು ಸ್ಥಳದಿಂದ ಓಡಿದ್ದಾರೆ. ಅಕ್ಷಯ್ ಕೂಡ ಸ್ಥಳದಿಂದ ಓಡಲು ಬೈಕ್ ನಲ್ಲಿ ಕುಳಿತುಕೊಳ್ಳಲು ಯತ್ನಿಸಿದಾಗ ಮಂಜುನಾಥ್ ಬೈಕ್ ಕೀ ಕಿತ್ತೆಸೆದಿದ್ದಾನೆ. ಮನಿಶ್ ತನ್ನ ಬಳಿಯಿದ್ದ ತಲವಾರಿನಿಂದ ಅಕ್ಷಯ್ ಗೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಅಕ್ಷಯ್ ಓಡಿದರೂ ಬಿಡದೇ ಅಟ್ಟಾಡಿಸಿ ಸುಮಾರು 50ಕ್ಕೂ ಹೆಚ್ಚು ಬಾರಿ ತಲವಾರಿನಿಂದ ದಾಳಿ ನಡೆಸಿದ್ದಾರೆ.
ತಲವಾರು ದಾಳಿ ನಡೆದ ವೇಳೆ ಅಕ್ಷಯ್ ಕಲ್ಲೇಗದ ಪಕ್ಕದಲ್ಲೇ ಇದ್ದ ರಿಕ್ಷಾ ಪಾರ್ಕ್ ಬಳಿ ಬಂದು ರಸ್ತೆ ದಾಟಿ ಪಕ್ಕದ ಮಾಸ್ಟರ್ ಪ್ಲಾನರಿ ಸಂಸ್ಥೆಯವರ ಖಾಲಿ ಜಾಗದಲ್ಲಿ ದುಷ್ಕರ್ಮಿಗಳ ಕೈಗೆ ಸಿಕ್ಕಿದ್ದಾರೆ. ಮುಖ, ಕೈ, ಕಾಲುಗಳಿಗೆ ತಲವಾರಿನಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಕೇವಲ 2 ಸಾವಿರ ರೂಪಾಯಿ ನೀಡಿ ಮುಗಿಸಿ ಬಿಡಬೇಕಾಗಿದ್ದ ಒಂದು ಸಣ್ಣ ಕೇಸ್, ಪರಸ್ಪರ ಸವಾಲು, ಮಾತಿನ ಚಕಮಕಿಯೊಂದಿಗೆ ಆರಂಭವಾಗಿ ಪ್ರತಿಭಾನ್ವಿತ ಯುವಕನೋರ್ವನ ಹತ್ಯೆಯಲ್ಲಿ ಮುಕ್ತಾಯವಾಗಿದೆ. ಅಕ್ಷಯ್ ಕಲ್ಲೇಗ ಹತ್ಯೆಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಕಣ್ಣೀರು ಮಿಡಿದಿದ್ದಾರೆ. ಈ ರೀತಿಯ ಘಟನೆಗಳು ತಾಲೂಕಿನಲ್ಲಿ ನಡೆಯಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬೆಳೆದು ನಿಂತಿದ್ದ ಮಗನನ್ನು ಕಳೆದುಕೊಂಡ ಪೋಷಕರ ಮೂಕರೋದನೆ, ಕೇಳುವವರು ಯಾರು ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.