ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್‌ ಲೈನ್‌ ಉದ್ಘಾಟಿಸಿದ ಪ್ರಧಾನಿ ಮೋದಿ | ಕೇರಳ-ಕರ್ನಾಟಕ ವಾಣಿಜ್ಯ ಬೆಳವಣಿಗೆ ಸಹಕಾರಿ - Mahanayaka

ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್‌ ಲೈನ್‌ ಉದ್ಘಾಟಿಸಿದ ಪ್ರಧಾನಿ ಮೋದಿ | ಕೇರಳ-ಕರ್ನಾಟಕ ವಾಣಿಜ್ಯ ಬೆಳವಣಿಗೆ ಸಹಕಾರಿ

05/01/2021

ನವದೆಹಲಿ:  ಕೊಚ್ಚಿ-ಮಂಗಳೂರು ನೈಸರ್ಗಿಕ ಅನಿಲ ಪೈಪ್‌ಲೈನ್‌ ನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಉದ್ಘಾಟಿಸಿದ್ದು, 450 ಕಿ.ಮೀ. ಉದ್ದದ ನೈಸರ್ಗಿಕ ಅನಿಲ ಪೈಪ್‌ಲೈನ್‌ನ್ನು ದೇಶಕ್ಕೆ ನೀಡಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.

ಗೈಲ್‌ ಇಂಡಿಯಾ ಲಿಮಿಟೆಡ್‌ 450 ಕಿ.ಮೀ. ಉದ್ದದ ನೈಸರ್ಗಿಕ ಅನಿಲ ಪೈಪ್‌ ಲೈನ್‌ ನ್ನು ನಿರ್ಮಿಸಿದ್ದು, ಇದು  ಪ್ರತಿದಿನ 12 ದಶಲಕ್ಷ ಮೆಟ್ರಿಕ್‌ ಸ್ಟಾಂಡರ್ಡ್‌ ಕ್ಯೂಬಿಕ್‌ ಮೀಟರ್‌ ಪ್ರಸರಣ ಸಾಮರ್ಥ್ಯವನ್ನು ಹೊಂದಿದೆ.  ಕೊಚ್ಚಿಯ ಎಲ್‌ಎನ್‌ಜಿ ಟರ್ಮಿನಲ್‌ನಿಂದ ಮಂಗಳೂರಿಗೆ ನೈಸರ್ಗಿಕ ಅನಿಲ ಕೊಂಡೊಯ್ಯಲಾಗುತ್ತದೆ. ಎರ್ನಾಕುಳಂ, ತ್ರಿಶೂರು, ಪಾಲಕ್ಕಾಡು, ಮಲಪ್ಪುರ, ಕೋಳಿಕ್ಕೋಡ್‌, ಕಣ್ಣೂರು, ಕಾಸರಗೋಡು ಜಿಲ್ಲೆಗಳ ಮೂಲಕ ನೈಸರ್ಗಿಕ ಅನಿಲ ಪೈಪ್‌ಲೈನ್‌ ಹಾದುಹೋಗುತ್ತದೆ.

ಗೈಲ್‌ ಪೈಪ್‌ ಲೈನ್‌ ಯಶಸ್ವಿಗೊಳಿಸುವ ಮೂಲಕ ಕೇರಳ ಹಾಗೂ ಕರ್ನಾಟಕದಲ್ಲಿ ವಾಣಿಜ್ಯ ವಲಯದಲ್ಲಿ ಬೆಳವಣಿಗೆಯಾಗಲಿದೆ. ಪೆಟ್ರೋ ಕೆಮಿಕಲ್‌, ರಾಸಾಯನಿಕ ಗೊಬ್ಬರಗಳಿಗೆ ಶುದ್ಧವಾದ ಇಂಧನ ಪೈಪ್‌ ಲೈನ್‌ ಮೂಲಕ ಪೂರೈಕೆಯಾಗಲಿದೆ. ಮಲ್ಟಿಪಲ್‌ ಅನಿಲ ಆಧರಿತ ಕೈಗಾರಿಕೆಗಳಿಗೆ ಬೆಳೆಯಲು ಅವಕಾಶ ಸೃಷ್ಟಿಸಲಿದೆ. ಉಭಯ ರಾಜ್ಯಗಳ ಜನರ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಇದು ದಾರಿಯಾಗಲಿದೆ ಎಂದು ಇದೇ ವೇಳೆ ಮಾಹಿತಿ ನೀಡಲಾಗಿದೆ.

ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೇರಳ ಕರ್ನಾಟಕ ರಾಜ್ಯಪಾಲರು, ಕೇರಳ ಸಿಎಂ ಪಿಣರಾಯಿ ವಿಜಯನ್, ಕರ್ನಾಟಕ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಪೆಟ್ರೋಲಿಯಂ ನೈಸರ್ಗಿಕ ಅನಿಲ ಇಲಾಖೆ ಸಚಿವರು ಭಾಗವಹಿಸಿದ್ದರು. ಆನ್ ಲೈನ್ ಮೂಲಕವೇ ಉದ್ಘಾಟನಾ ಕಾರ್ಯಕ್ರಮ ನಡೆಯಿತು.

ಇತ್ತೀಚಿನ ಸುದ್ದಿ