ಕೊಕ್ಕಡ ಮಸೀದಿ ವಿವಾದ; ಪ್ರಭಾರ ಮುಖ್ಯ ಶಿಕ್ಷಕರಿಗೆ ಮಾರ್ಗ ಸೂಚಿ ನಿಯಮಗಳ ಉರುಳು!
ಬೆಳ್ತಂಗಡಿ: ಕೊಕ್ಕಡ ಮಸೀದಿ ಉದ್ಘಾಟನೆ ಕಾರ್ಯಕ್ರಮಕ್ಕೆ ಶಾಲಾ ಮಕ್ಕಳನ್ನು ಕರೆದೊಯ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಗ ಸೂಚಿ ನಿಯಮಗಳನ್ನು ಉಲ್ಲಂಘಿಸಿ ಮಕ್ಕಳನ್ನು ಕರೆದೊಯ್ಯಲಾಗಿದೆ ಎಂದು ಪ್ರಭಾರ ಮುಖ್ಯ ಶಿಕ್ಷಕರನ್ನು 10 ದಿನ ರಜೆ ಮೇಲೆ ಕಳುಹಿಸಿ ಈ ಬಗ್ಗೆ ತನಿಖೆ ನಡೆಸಲು ಸಮಗ್ರ ಶಿಕ್ಷಣದ ಜಿಲ್ಲಾ ಉಪ ಯೋಜನಾ ಸಮನ್ವಯಾಧಿಕಾರಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶರು ಆದೇಶ ನೀಡಿದ್ದಾರೆ.
ನವೀಕರಣಗೊಂಡ ಮಸೀದಿಯ ಉದ್ಘಾಟನೆ ಮಾ.19ರಂದು ನಡೆದಿತ್ತು. ಶಾಲಾ ಅವಧಿಯಲ್ಲಿ ಮಾರ್ಗಸೂಚಿ ಉಲ್ಲಂಘಿಸಿ ವಿದ್ಯಾರ್ಥಿಗಳನ್ನು ಮಸೀದಿ ಉದ್ಘಾಟನೆಗೆ ಕಳುಹಿಸಿರುವ ಬಗ್ಗೆ ಬಗ್ಗೆ ಇದೀಗ ವಿವಾದ ಎದ್ದಿದೆ.
ಶಾಲಾ ಮುಖ್ಯೋಪಾಧ್ಯಾಯರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿದ ಶೋಕಾಸ್ ನೋಟಿಸಿಗೆ ಮುಖ್ಯೋಪಾಧ್ಯಾಯರು ಉತ್ತರವನ್ನು ನೀಡಿದ್ದರು ಎಂದು ಹೇಳಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ವರದಿಯನ್ನು ಡಿ.ಡಿ.ಪಿ.ಐವರಿಗೆ ಸಲ್ಲಿಸಿದ್ದರು. ಇದೀಗ ಶಾಲಾ ಅವಧಿಯಲ್ಲಿ ಶಾಲಾ ಮಾರ್ಗಸೂಚಿ ನಿಯಮಗಳನ್ನು ಉಲ್ಲಂಘಿಸಿ ವಿದ್ಯಾರ್ಥಿಗಳನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಕಳುಹಿಸಿರುವ ಬಗ್ಗೆ ಬಂದಿರುವ ದೂರಿನ ಬಗ್ಗೆ ತನಿಖೆ ನಡೆಸಿ, ವರದಿ ನೀಡುವಂತೆ ಡಿಡಿಪಿಐಯವರು ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಮಂಜುಳಾ ಕೆ.ಎಲ್ ರವರಿಗೆ ಆದೇಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಭಾರ ಮುಖ್ಯ ಶಿಕ್ಷಕ ಸೌಹಾರ್ದ ದೃಷ್ಟಿಯಿಂದ ನವೀಕರಣಗೊಂಡ ಮಸೀದಿಗೆ ಮಕ್ಕಳನ್ನು ಕಳುಹಿಸಿದ್ದರು ಎನ್ನಲಾಗಿದೆ. ಈ ಬಗ್ಗೆ ಇಲ್ಲಿನ ಕೆಲವು ಬಿಜೆಪಿ ಪರ ಸಂಘಟನೆಗಳು ಅಪಸ್ವರ ಎಬ್ಬಿಸಿದ್ದವು. ಇದು ಜಿಲ್ಲೆಯಾದ್ಯಂತ ವ್ಯಾಪಕ ಚರ್ಚೆಯಾಗಿತ್ತು.
ಹಿಂದೂ ಮಕ್ಕಳನ್ನು ಮಸೀದಿ ಉದ್ಘಾಟನೆಗೆ ಕರೆಯಲಾಗಿದೆ ಇದು ಮತಾಂತರಕ್ಕೆ ನೀಡಿದ ಕುಮ್ಮಕ್ಕು ಎಂಬೆಲ್ಲ ವಿವಾದಗಳನ್ನು ಸೃಷ್ಟಿಸಲಾಗಿದೆ. ಸೌಹಾರ್ದ ದೃಷ್ಟಿಯಿಂದ ಮಸೀದಿಗೆ ಮಕ್ಕಳನ್ನು ಶಿಕ್ಷಕರು ಕಳುಹಿಸಿದ್ದರು. ಮಸೀದಿಯಲ್ಲಿ ಕೂಡ ಸೌಹಾರ್ದತೆಯಿಂದ ಎಲ್ಲ ಮಕ್ಕಳನ್ನೂ ನೋಡಿಕೊಳ್ಳಲಾಗಿದೆ. ಆದರೂ ಕೆಲವರು ವಿವಾದ ಸೃಷ್ಟಿಸಿದ್ದಾರೆ ಎಂದು ಸಾರ್ವಜನಿಕರು ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಎಲ್ಲ ಬೆಳವಣಿಗಳ ಬಳಿಕ ಇದೀಗ ಮಾರ್ಗ ಸೂಚಿಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಲಾಗಿದೆ.
ಬಹುತೇಕ ಶಾಲೆಗಳ ಪ್ರವಾಸಗಳು ದೇವಸ್ಥಾನಗಳಿಗೆ ಭೇಟಿ ನೀಡುವ ಕಾರ್ಯಕ್ರಮಗಳೇ ಆಗಿರುತ್ತದೆ. ಈ ವೇಳೆ ಹಿಂದೂ, ಮುಸ್ಲಿಮ್, ಕ್ರೈಸ್ತ, ಬೌದ್ಧ ಎಲ್ಲ ಧರ್ಮಗಳ ಮಕ್ಕಳೂ ಆ ತಂಡದಲ್ಲಿರುತ್ತಾರೆ. ಇವೆಲ್ಲ ವಿವಾದಕ್ಕೀಡಾಗುವುದಿಲ್ಲ. ಆದರೆ, ಮಸೀದಿಗೆ ಹೋಗಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಚಾರ ಇದೀಗ ದೊಡ್ಡ ವಿಚಾರವಾಗಿದೆ. ಭಜನ ಮಂದಿರಗಳು, ದೇವಸ್ಥಾನಗಳ ಉದ್ಘಾಟನೆಗಳಿಗೂ ಮಕ್ಕಳನ್ನು ಆಹ್ವಾನಿಸುತ್ತಾರೆ. ಇದೊಂದು ಸೌಹಾರ್ದಯುತವಾದ ಕಾರ್ಯಕ್ರಮ ಇದರಿಂದ ಮುಂದೆ ಮಕ್ಕಳು ಸರ್ವಧರ್ಮೀಯರೊಂದಿಗೆ ಸೌಹಾರ್ದಯುತವಾದ ಬದುಕಲು ಸಾಧ್ಯವಾಗುತ್ತದೆ. ಇದನ್ನು ಒಂದು ವಿವಾದವಾಗಿ ಮಾಡುವುದು ಎಷ್ಟು ಸರಿ? ಶಿಕ್ಷಣ ಇಲಾಖೆ ಈ ಸಂಬಂಧ ಯೋಚಿಸಬೇಕಿದೆ. ಇದಲ್ಲದೇ ಕೊವಿಡ್ ನಿಯಮಗಳ ಹೆಸರಿನಲ್ಲಿ ಅನಗತ್ಯವಾಗಿ ಪ್ರಭಾರ ಮುಖ್ಯ ಶಿಕ್ಷಕರನ್ನು ಸಿಲುಕಿಸುವುದು ಸರಿಯಾದ ಕ್ರಮವಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ರಾಜಕೀಯ ಮಾಡಲು ಸಾಕಷ್ಟು ವಿಚಾರಗಳಿದೆ. ಮಕ್ಕಳ ಮನಸ್ಸಿನ ಕೊಕ್ಕಡ ಶಾಲೆಯ ಮುಗ್ಧ ಶಿಕ್ಷಕರನ್ನು ಈ ರೀತಿಯಾಗಿ ಸಿಲುಕಿಸುವುದು ಸರಿಯಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.