ಕೋಳಿಗಳ ಹೊಡೆದಾಟದ ಮನಸ್ಥಿತಿ ಜೂಜುಕೋರನಿಗೆ ಲಾಭ: ರಾಜಕೀಯ ಕೊಲೆಗಳು ಮತ್ತು ನಡೆಯುತ್ತಿರುವ ಚರ್ಚೆಗಳು - Mahanayaka
5:12 PM Wednesday 11 - December 2024

ಕೋಳಿಗಳ ಹೊಡೆದಾಟದ ಮನಸ್ಥಿತಿ ಜೂಜುಕೋರನಿಗೆ ಲಾಭ: ರಾಜಕೀಯ ಕೊಲೆಗಳು ಮತ್ತು ನಡೆಯುತ್ತಿರುವ ಚರ್ಚೆಗಳು

chicken fight
31/07/2022

ADS

ಕರಾವಳಿಯಲ್ಲಿ ಕೆಲವೇ ದಿನಗಳ ಅಂತರದಲ್ಲಿ ಮೂವರು ಯುವಕರ ಬರ್ಬರ ಹತ್ಯೆಯಾಗಿದೆ. ಇದರೊಂದಿಗೆ  ಪ್ರತೀ ಬಾರಿಯಂತೆಯೇ ಈ ಬಾರಿಯೂ ಚುನಾವಣೆ ಸಮೀಪಿಸುತ್ತಿರುವಂತೆಯೇ ಕೊಲೆಗಳ ರಾಜಕೀಯ ಆರಂಭವಾಗಿದೆ. ಬೆಂಗಳೂರಿನಂತಹ ಪ್ರದೇಶಗಳಲ್ಲಿ ಬಿರಿಯಾನಿ, ಮದ್ಯದ ಹೊಳೆ ಹರಿಸುವ ರಾಜಕಾರಣ ಇದ್ದರೆ, ಇತ್ತ ಕರಾವಳಿಯಲ್ಲಿ ಚುನಾವಣೆಗಳ ಮತಗಳು ಬಾಳಿ ಬದುಕಬೇಕಾದ ಯುವಕರ ರಕ್ತದಿಂದ ನಿರ್ಧಾರವಾಗುತ್ತಿದೆ ಎನ್ನುವ ನೋವು ಇದೀಗ ಇಡೀ ಕರಾವಳಿಯಲ್ಲಿ ಆವರಿಸಿದೆ.

ಮೂವರು ಯುವಕರ ಹತ್ಯೆಯಾದರೂ ಇನ್ನೂ ಕೂಡ ಕೆಲವರು ಪ್ರತಿಕಾರದ ಬಗ್ಗೆ ಮಾತನಾಡುತ್ತಿರುವುದು, ಯಾಕೆ ಕೆಲವರ ಮನಸ್ಥಿತಿ ಇಷ್ಟೊಂದು ದುಸ್ಥಿತಿಯಲ್ಲಿದೆ ಎಂದು ಆಲೋಚಿಸುವಂತೆ ಮಾಡಿದೆ. ಆದರೂ ಈ ನಡುವೆ ಕೊಲೆ ರಾಜಕೀಯದ ವಿರುದ್ಧ ಯುವಕರ ಜಾಗೃತರಾಗಿರೋದು ಆಶಾದಾಯಕ ಬೆಳವಣಿಗೆ ಎಂಬ ವಿಮರ್ಶೆಗೆ ಕಾರಣವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಹಿಂಸಾತ್ಮಕ ವಿಚಾರಗಳ ಬಗ್ಗೆ ಚರ್ಚೆ ಮಾಡುವಾಗಿ ಸಾಮಾನ್ಯವಾಗಿ ಜನರು,  “ಕಟ್ಟದ ಕೋರಿ ಕಟ್ಟಡೇ ಪೋಪಿನಿ”(ಅಂಕದ ಕೋಳಿ ಕೋಳಿ ಅಂಕದಲ್ಲೇ ಹೋಗೋದು) ಎಂತ ಹೇಳುತ್ತಾರೆ.  ಇದು ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯರು ಹಿಂದಿನಿಂದಲೂ ಕಿರಿಯರನ್ನು ಎಚ್ಚರಿಸಲು ಬಳಸಿದ ಗಾದೆಯೂ ಹೌದು. ಆದರೆ ಈ ಗಾದೆಯನ್ನು ಕಿರಿಯರು ಮರೆತ ಫಲವೋ ಏನೋ, ಪರಸ್ಪರ ದ್ವೇಷ, ಅಸೂಯೆಗಳು ಸಮುದಾಯಗಳ ಯುವಕ ನಡುವೆ ಆವರಿಸಿದೆ.

ಕೋಳಿ(ಹುಂಜ)ಗಳ ಹೋರಾಟದ ಗುಣ, ಜೂಜುಕೋರನಿಗೆ ಲಾಭ ತಂದುಕೊಡುತ್ತದೆ.  ಒಂದು ಹುಂಜನನ್ನು ಕಂಡರೆ ಇನ್ನೊಂದು ಹುಂಜ ಕಾಳಗಕ್ಕೆ ಇಳಿಯುತ್ತದೆ. ಕೋಳಿಯ ಈ ಗುಣವನ್ನು ಬಳಸಿಕೊಂಡ ಜೂಜುಕೋರ ಕೋಳಿಗಳ ರಕ್ತದ ಮೇಲೆ ಬಂಡವಾಳ ಹೂಡಿ, ತಾನು ಲಾಭಗಳಿಸಿಕೊಳ್ಳುತ್ತಾನೆ. ಕೋಳಿಗಳಿಗೆ ಸಾಯುವವರೆಗೂ ತನ್ನ ಸಾವಿಗೆ ಯಾರು ಕಾರಣ ಅನ್ನೋದೇ ತಿಳಿದಿರುವುದಿಲ್ಲ. ಇಂತಹ ಒಂದು ದುಸ್ಥಿತಿ ಕೊಲೆ ರಾಜಕಾರಣದಲ್ಲಿ ಇಂದು ಸಮಾಜದಲ್ಲಿ ಕಾಣುವಂತಾಗಿದೆ. ಯುವಕರ ಹೋರಾಟದ ಮನಸ್ಥಿತಿಗಳನ್ನು ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ರಾಜ್ಯಾದ್ಯಂತ ಚರ್ಚೆಯಾಗುತ್ತಿವೆ.

ರಾಜಕಾರಣಿಗಳು ಏನು ತಪ್ಪು ಮಾಡಿದರೂ, ಪಕ್ಷಕ್ಕಾಗಿ, ಸಿದ್ಧಾಂತಕ್ಕಾಗಿ ಅವರನ್ನು ಸಮರ್ಥಿಸಿಕೊಳ್ಳಬೇಕು ಎಂದು ಜನರು ಸುಮ್ಮನಿದ್ದರೆ, ಮುಂದೊಂದು ದಿನ, ಮಾತನಾಡುವ ಹಕ್ಕನ್ನೇ ಕಳೆದುಕೊಳ್ಳುವ ಹಂತಕ್ಕೆ ಸಮಾಜ ತಲುಪಬಹುದು ಎನ್ನುವುದಕ್ಕೆ ಇಂದಿನ ಸಾಮಾಜಿಕ ದುಸ್ಥಿತಿಯೇ ಜೀವಂತ ಸಾಕ್ಷಿ ಎಂಬ ಚರ್ಚೆಗಳು ಕೇಳಿ ಬಂದಿವೆ.

ಇನ್ನೇನು ತಮ್ಮ ಕುಟುಂಬಕ್ಕೆ ಆಧಾರವಾಗುತ್ತಾರೆ ಎಂಬಂತಹ ಸನ್ನಿವೇಶ ಸೃಷ್ಟಿಯಾಗುವಾಗಲೇ ಸಾರ್ವಜನಿಕ ಸ್ಥಳಗಳಲ್ಲೇ ಯುವಕರನ್ನು ಬರ್ಬರವಾಗಿ ಹತ್ಯೆ ಮಾಡಿರುತ್ತಾರೆ. ಹತ್ಯೆ ಮಾಡಿದವರು ಸಿಗುತ್ತಾರೆಯೇ ಹೊರತು. ಮಾಡಿಸಿದವರು ಸಿಗುವುದಿಲ್ಲ  ಎನ್ನುವ ಮಾತುಗಳು ಇದೀಗ ಸಾರ್ವಜನಿಕವಾಗಿ ಕೇಳಿ ಬಂದಿದೆ.

ಹರ್ಷನ ಕೊಲೆಯಾದಾಗಲೂ ಇದು ರಾಜಕೀಯ ಕೊಲೆ ಎಂದು ಸಾಕಷ್ಟು ಜನರು ಮಾತನಾಡಿಕೊಂಡಿದ್ದರು. ಪ್ರವೀಣ್ ನ ಹತ್ಯೆಯಾದಾಗ, ಇದೊಂದು ರಾಜಕೀಯಕ್ಕಾಗಿ ನಡೆದ ಕೊಲೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಮಸೂದ್, ಫಾಝಿಲ್ ಕೊಲೆಯಾದಾಗಲೂ ಜನರು ಹೇಳಿದಿಷ್ಟೇ, ಪ್ರತಿ ಬಾರಿ ಚುನಾವಣೆಯಾದಾಗಲೂ ಇಲ್ಲಿ ಕೊಲೆ ಸಾಮಾನ್ಯವಾಗಿದೆ ಅಂತ. ಇಂದು ಕರಾವಳಿಯಲ್ಲಿ ಒಬ್ಬರ ಹಿಂದೊಬ್ಬರಂತೆ ಮೂವರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಸ್ವಲ್ಪ ದಿನಗಳಾದ ಬಳಿಕ ಜನರು ಇದನ್ನು ಮರೆತು ಬಿಡುತ್ತಾರೆ. ಮತ್ತೆ ಸಿದ್ಧಾಂತಗಳು, ಪಕ್ಷಗಳಿಗಾಗಿ ತ್ಯಾಗಗಳನ್ನು ಮಾಡುವ ಮಾನಸಿಕತೆ ಬೆಳೆಯುತ್ತದೆ. ಹಾಗಾದರೆ ಇದಕ್ಕೆಲ್ಲ ಕೊನೆ ಎಂದು ಎನ್ನುವ ಪ್ರಶ್ನೆಗಳಿಗೆ ಯುವಕರೇ ಉತ್ತರ ಕೊಡಬೇಕಿದೆ.

ಪ್ರವೀಣ್ ನೆಟ್ಟಾರು, ಮಸೂದ್, ಫಾಝಿಲ್ ಇವರ್ಯಾರು ಕೂಡ ಸಮಾಜ ಬಾಹಿರವಾಗಿರಲಿಲ್ಲ. ಜನರೊಂದಿಗೆ ಬೆರೆಯುತ್ತಿದ್ದ ಯುವಕರಾಗಿದ್ದರು ಆದರೂ ಇವರ ಕೊಲೆ ನಡೆದಿದೆ. ಈ ಕೊಲೆಗಳಿಂದ ಲಾಭ ಪಡೆಯಲು ಯತ್ನಿಸಿದವರು ಯಾರು ಎನ್ನುವ ಗಟ್ಟಿ ಧ್ವನಿ ಇಂದು ದಕ್ಷಿಣ ಕನ್ನಡ ಮಾತ್ರವಲ್ಲ ಇಡೀ ರಾಜ್ಯದಲ್ಲೇ ಕೇಳಿ ಬರುತ್ತಿದೆ.

ADS

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ