ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ಪತ್ನಿ, ಖ್ಯಾತ ಚಳುವಳಿಗಾರ್ತಿ ವಿಜಯ ಮಹೇಶ್ ನಿಧನ
ಚಾಮರಾಜನಗರ: ಮಾಜಿ ಶಿಕ್ಷಣ ಸಚಿವ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ಪತ್ನಿ, ಖ್ಯಾತ ಲೇಖಕಿ ವಿಜಯ ಮಹೇಶ್ ಅವರು ನಿನ್ನೆ ತಡ ರಾತ್ರಿ 11 ಗಂಟೆಗೆ ನಿಧನರಾಗಿದ್ದಾರೆ. ಅವರ ಅಪಾರ ಅಭಿಮಾನಿಗಳು ಇದೀಗ ದುಃಖ ತಪ್ತರಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ದುಃಖಗಳನ್ನು ವ್ಯಕ್ತಪಡಿಸಿದ್ದಾರೆ.
66 ವರ್ಷ ವಯಸ್ಸಿನ ವಿಜಯ ಮಹೇಶ್ ಅವರು, ಮೈಸೂರಿನ ಇತಿಹಾಸಗಳನ್ನು ತಮ್ಮ ಪುಸ್ತಕಗಳಲ್ಲಿ ತೆರೆದಿಟ್ಟಿರುವವರು. ಮೂಲನಿವಾಸಿ ಸಿದ್ಧಾಂತಗಳ ಬಗ್ಗೆ ಅವರು ಬರೆದ ಪುಸ್ತಕಗಳು ಇಂದಿಗೂ ದೇಶದ ಇತಿಹಾಸವನ್ನು ತೆರೆದಿಡುತ್ತಿದೆ. ವಿಜಯ ಮಹೇಶ್ ಅವರು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ಸಾಧನೆಗಳ ಹಿಂದಿನ ಅದ್ಭುತ ಶಕ್ತಿ ಕೂಡ ಆಗಿದ್ದಾರೆ. ಇದೀಗ ಅವರನ್ನು ಕಳೆದುಕೊಂಡಿರುವ ದುಃಖ ಎಲ್ಲರನ್ನು ಆವರಿಸಿದೆ.
ಮೂಲತಃ ಕನಕಪುರದವರಾಗಿರುವ ವಿಜಯಾ ಮಹೇಶ್ ಅವರು, ತಮ್ಮ ಕಾಲೇಜು ದಿನಗಳಲ್ಲಿ ಶಾಸಕ ಎನ್.ಮಹೇಶ್ ಅವರಿಗೆ ಪರಿಚಯವಾಗುತ್ತಾರೆ. ಇಬ್ಬರ ನಡುವೆ ಪ್ರೀತಿ ಹುಟ್ಟಿ ದಾಂಪತ್ಯಕ್ಕೆ ಕಾಲಿಡುತ್ತಾರೆ. ಅಂದಿನಿಂದ ಇಂದಿನ ವರೆಗೂ ಬಹಳ ಅನ್ಯೋನ್ಯತೆಯ ಸಾರ್ಥಕ ಜೀವನವನ್ನು ನಡೆಸಿದ್ದರು. ಮೈಸೂರಿನ ಆಕ್ಸಿಸ್ ಬ್ಯಾಂಕ್ ನ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿದ್ದ ವಿಜಯ ಮಹೇಶ್ ಅವರು, ಬಹುಜನ ಚಳುವಳಿಗೂ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು. ವಿದ್ಯಾರ್ಥಿಗಳ, ಎನ್.ಮಹೇಶ್ ಅಭಿಮಾನಿಗಳ ಪ್ರೀತಿಯ ಅಕ್ಕಾ ಆಗಿದ್ದರು.
ವಿಜಯ ಮಹೇಶ್ ಅವರ ಅಂತ್ಯಕ್ರಿಯೆಯು ಬೆಂಗಳೂರಿನ ಕನಕಪುರ ರಸ್ತೆಯ ರವಿಶಂಕರ್ ಗುರೂಜಿ ಆಶ್ರಮದ ಬಳಿಯಿರುವ ಕಾನ್ಶಿರಾಮ್ ಫೌಂಡೇಶನ್ ನಲ್ಲಿ ನೆರವೇರಿಸಲಾಗುವುದು ಎಂದು ತಿಳಿದು ಬಂದಿದೆ.