ಮಸೀದಿ ಮುಂದೆ ಮಾರಮ್ಮನ ಕೊಂಡೋತ್ಸವ: ತಮಿಳುನಾಡಿನ ಕನ್ನಡಿಗರ ಭಾವೈಕ್ಯತೆ - Mahanayaka
5:25 AM Thursday 12 - December 2024

ಮಸೀದಿ ಮುಂದೆ ಮಾರಮ್ಮನ ಕೊಂಡೋತ್ಸವ: ತಮಿಳುನಾಡಿನ ಕನ್ನಡಿಗರ ಭಾವೈಕ್ಯತೆ

talawadi
09/03/2023

ಚಾಮರಾಜನಗರ: ಅಪ್ಪಟ ಕನ್ನಡಿಗರೇ ಇರುವ ತಮಿಳುನಾಡಿನ ತಾಳವಾಡಿಯಲ್ಲಿ ಹಿಂದೂ–ಮುಸ್ಲಿಂ ಭಾವೈಕ್ಯತೆ ಸಾರುವ ಮಾರಮ್ಮನ ಕೊಂಡೋತ್ಸವ ಇಂದು ವಿಜೃಂಭಣೆಯಿಂದ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿಯಲ್ಲಿ ಮಾರಮ್ಮನ ಜಾತ್ರೆ ಪ್ರಯುಕ್ತ ಮಸೀದಿ ಮುಂಭಾಗದಲ್ಲೇ ಕೊಂಡೋತ್ಸವ ನಡೆಯಿತು. ಈ ಮೂಲಕ ಹಿಂದೂ- ಮುಸ್ಲಿಂ ಭಾವೈಕ್ಯತೆಗೆ ತಾಳವಾಡಿ ಸಾಕ್ಷಿಯಾಯಿತು. ಸುಮಾರು 150 ವರ್ಷಗಳಿಂದ ಈ ಕೊಂಡೋತ್ಸವ ನಡೆಯುತ್ತಾ ಬಂದಿದ್ದು, ತಾಳವಾಡಿ ಫಿರ್ಕಾದ 58 ಗ್ರಾಮಗಳು ಸೇರಿದಂತೆ ಚಾಮರಾಜನಗರ, ತಮಿಳುನಾಡಿನ ಈರೋಡ್, ಕೊಯಮತ್ತೂರು ಸೇರಿದಂತೆ ವಿವಿಧೆಡೆಯಿಂದ ಸಾವಿರಾರು ಭಕ್ತರು ಧಾರ್ಮಿಕ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಗ್ರಾಮದ ಮುಖ್ಯ ಬೀದಿಯಲ್ಲಿರುವ ಮಾರಮ್ಮನ ದೇಗುಲದ ಪಕ್ಕ ಮಸೀದಿ ಇದೆ. ಇದರ ಗೋಡೆಗೆ ಅಂಟಿಕೊಂಡಂತೆ ಟಿಪ್ಪುಸುಲ್ತಾನ್ ಕಾಲದಲ್ಲಿ ನಿರ್ಮಾಣವಾಗಿರುವ ವೇಣುಗೋಪಾಲ ಸ್ವಾಮಿ ಗುಡಿ ಇದೆ. ಮಸೀದಿ ಮುಂಭಾಗದಲ್ಲೇ ಕೊಂಡೋತ್ಸವ ಜರುಗುವುದು ಈ ಜಾತ್ರೆಯ ವಿಶೇಷ.ನಾಲ್ಕು ದಶಕದ ಹಿಂದೆ ಜಾತ್ರೆ ಸಂಬಂಧ ಘರ್ಷಣೆಯಾಗಿತ್ತು. ನಂತರ ಊರಿನ ಎಲ್ಲಾ ಕೋಮಿನ ಮುಖಂಡರು ಕುಳಿತು ಚರ್ಚಿಸಿ ಯಾವುದೇ ಗಲಾಟೆಗೆ ಅವಕಾಶ ನೀಡದಂತೆ ಸಮಾಜದಲ್ಲಿ ಸಾಮರಸ್ಯ ಕಾಪಾಡುವುದರೊಂದಿಗೆ ಜಾತ್ರಾ ಮಹೋತ್ಸವ ಆಚರಣೆಗೆ ಮುಂದಾಗಿದ್ದರು. ಅಂದಿನಿಂದಲೂ ಸಾಮಾರಸ್ಯದಿಂದ ಮಸೀದಿ ಮುಂಭಾಗ ಕೊಂಡೋತ್ಸವ ನಡೆದುಕೊಂಡು ಬಂದಿದೆ.

ಗೊರವರ ಕುಣಿತ, ವೀರಗಾಸೆ, ಬೀರೇದೇವರ ಕುಣಿತ ಇತ್ಯಾದಿ ಜಾನಪದ ಕಲಾ ತಂಡಗಳು ಮತ್ತು ಮಂಗಳ ವಾದ್ಯಗಳೊಂದಿಗೆ ಅದ್ದೂರಿಯಾಗಿ ಉತ್ಸವ ನಡೆದಿದೆ. ಜಾತ್ರೆ ವೇಳೆ ಯಾರ ಮನೆಯಲ್ಲಿಯೂ ಘಾಟು, ಒಗ್ಗರಣೆ, ಕರಿದ ತಿನಿಸು, ಮಾಂಸಾಹಾರ ಮಾಡುವುದಿಲ್ಲ. ಜೊತೆಗೆ, ಸತ್ತವರ ಶವವನ್ನು ಊರೊಳಗೆ ತರುವಂತಿಲ್ಲ. ಇದನ್ನು ಎಲ್ಲಾ ಕೋಮಿನವರು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದಾರೆ.ಜಾತ್ರೆಯ ಅಂಗವಾಗಿ ಗ್ರಾಮದ ಒಂದೊಂದು ಜನಾಂಗದವರಿಗೂ ನಿರ್ಧಿಷ್ಟ ಜವಾಬ್ದಾರಿ ವಹಿಸಿ ಅಚ್ಚುಕಟ್ಟಾಗಿ ಕೊಂಡೋತ್ಸವ ನಡೆಯಿತು. ಅರ್ಚಕ ಶಿವಣ್ಣ 60 ಅಡಿ ಉದ್ದ 4 ಅಡಿ ಆಳದ ಕೊಂಡ ಹಾಯ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ