ಕೊರಗಜ್ಜನ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿದ ಕಿಡಿಗೇಡಿಗಳು | ಸಾಮಾಜಿಕ ಸಾಮರಸ್ಯ ಕದಡಲು ಯತ್ನ
ಉಳ್ಳಾಲ: ಕೊರಗಜ್ಜನ ಕಟ್ಟೆಯ ಕಾಣಿಕೆ ಹುಂಡಿಗೆ ಕಾಂಡೋಮ್ ಹಾಕಿ ಅಪಚಾರ ಎಸಗಿರುವ ಘಟನೆ ಉಳ್ಳಾಲ ಜಂಕ್ಷನ್ ನಲ್ಲಿರುವ ಕೊರಗಜ್ಜನ ಕಟ್ಟೆಯ ಬಳಿಯಲ್ಲಿ ನಡೆದಿದ್ದು, ವಾರ್ಷಿಕ ಕೋಲೋತ್ಸವದ ಹಿನ್ನೆಲೆಯಲ್ಲಿ ಹುಂಡಿ ತೆರೆದಾಗ ಘಟನೆ ಬೆಳಕಿಗೆ ಬಂದಿದೆ.
ಕಾಣಿಕೆ ಹುಂಡಿಗೆ ಬಿಜೆಪಿ ನಾಯಕರ ಭಾವ ಚಿತ್ರಗಳಿರುವ ಪೋಸ್ಟರ್ ವೊಂದನ್ನೂ ಹಾಕಲಾಗಿದ್ದು, ಬಿಜೆಪಿ ನಾಯಕರ ಚಿತ್ರವನ್ನು ವಿರೂಪಗೊಳಿಸಿ, ಸಿಎಂ ಪುತ್ರ ವಿಜಯೇಂದ್ರ ಅವರ ಕತ್ತಲ್ಲಿ ಶಿಲುಬೆಯ ಹಾರದ ಚಿತ್ರವನ್ನು ಬಿಡಿಸಲಾಗಿದೆ. ಈ ಚಿತ್ರದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಅವರ ಚಿತ್ರಗಳೂ ಇವೆ.
ಇನ್ನೂ ಸಾಮಾಜಿಕ ಸಾಮರಸ್ಯ ಕದಡುವ ಕೆಲವು ಸಾಲುಗಳನ್ನೂ ಪೋಸ್ಟರ್ ನಲ್ಲಿ ಬರೆದಿದ್ದು, ದೇವಲೋಕದಿಂದ ಹೊರಹಾಕಲ್ಪಟ್ಟ ದೂತರು ಸೇಡಿನ ಸ್ವಭಾವ ಹೊಂದಿದ್ದು, ವಿಗ್ರಹಗಳ ಮೂಲಕ ಭೂಲೋಕದ ಜನರನ್ನು ಭ್ರಷ್ಟರಾಗಿಸಿ ನಕಲಿ ದೇವರಾಗಿ ಅನಾಧಿಕಾಲದಿಂದಲೂ ಮೆರೆಯಲ್ಪಡುತ್ತಿವೆ. ರಕ್ತ ಹೀರುವ ಸೊಳ್ಳೆಗಳಂತೆ ದೋಚಿ ಬಾಚಿ ತಿಂದು ತೇಗುವ ಈ ಹಡಬೆ ರಾಜಕಾರಣಿಗಳನ್ನು ಹೊಡೆದುಕೊಲ್ಲಬೇಕಿದೆ ಎಂದು ಬರೆಯಲಾಗಿದೆ.
ಈ ಪೋಸ್ಟರ್ ನ್ನು ಗಮನಿಸಿದರೆ, ಉದ್ದೇಶ ಪೂರ್ವಕವಾಗಿ ಸಾಮಾಜಿಕ ಸಾಮರಸ್ಯ ಮೂಡಿಸುವ ಪ್ರಯತ್ನವಾಗಿದೆ ಎಂದು ಕಂಡು ಬಂದಿದೆ. ಜೊತೆಗೆ ಅನಗತ್ಯ ವಿವಾದ ಹಾಗೂ ಸಮುದಾಯಗಳ ನಡುವೆ ದ್ವೇಷ ಬೆಳೆಸುವ ಉದ್ದೇಶ ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಪೊಲೀಸರು ಪಾರದರ್ಶಕವಾಗಿ ತನಿಖೆ ಮಾಡಬೇಕಿದೆ ಎನ್ನುವ ಮಾತುಗಳು ಕೇಳಿ ಬಂದಿದೆ.