ಈ ಬಾರಿ ಭೀಮಾ ಕೊರೆಗಾಂವ್ ವಿಜಯೋತ್ಸವ ಆಚರಣೆಗೆ ಅವಕಾಶ ಇಲ್ಲ? - Mahanayaka
12:21 PM Wednesday 1 - January 2025

ಈ ಬಾರಿ ಭೀಮಾ ಕೊರೆಗಾಂವ್ ವಿಜಯೋತ್ಸವ ಆಚರಣೆಗೆ ಅವಕಾಶ ಇಲ್ಲ?

26/12/2020

ಪುಣೆ: ಭೀಮಾ ಕೋರೆಗಾಂವ್ ಯುದ್ಧ. ದಲಿತ ಸೈನಿಕರು ಪೇಶ್ವೆಗಳ ಹುಟ್ಟಡಗಿಸಿದ ರೋಚಕ ಯುದ್ಧ. 30 ಸಾವಿರಕ್ಕೂ ಅಧಿಕ ಮೇಲ್ಜಾತಿ ಪೇಶ್ವೆ ಸೈನಿಕರನ್ನು ಕೇವಲ 300 ದಲಿತ ಸೈನಿಕರು ಹೊಡೆದುರುಳಿಸಿದ ಇತಿಹಾಸ. ದಲಿತರ ಸ್ವಾಭಿಮಾನವನ್ನು ಮತ್ತೆ ಎದ್ದು ನಿಲ್ಲಿಸಿದ ಭೀಮಾ ಕೋರೆಗಾಂವ್ ಯುದ್ಧದ ಸೈನಿಕರಿಗೆ ಪ್ರತೀ ವರ್ಷ ದೇಶದ ಲಕ್ಷಾಂತರ ಜನರು  ಯುದ್ಧ ಭೂಮಿಗೆ ತೆರಳಿ ಗೌರವ ಸಲ್ಲಿಸುತ್ತಾರೆ. ಆದರೆ ಈ ಬಾರಿ ಕೊವಿಡ್ 19 ಹಿನ್ನೆಲೆಯಲ್ಲಿ ಜನರು ಕೊರೆಗಾಂವ್ ವೀರ ಭೂಮಿಗೆ ಹೋಗಲು ಅವಕಾಶ ನೀಡಲಾಗಿಲ್ಲ.

ಪ್ರತೀ ವರ್ಷದಂತೆ ಈ ಬಾರಿಯೂ ಜನವರಿ 1ರಂದು ಕೋರೆಗಾಂವ್ ಯುದ್ಧ ಭೂಮಿಯಲ್ಲಿ ಕಾರ್ಯಕ್ರಮ ಆಯೋಜಿಸಲು ವಿವಿಧ ಸಂಘಟನೆಗಳು ಅನುಮತಿ ಕೋರಿದ್ದವು. ಆದರೆ, ಕೊವಿಡ್ ಹಿನ್ನೆಲೆಯಲ್ಲಿ ಅವಕಾಶ ನಿರಾಕರಿಸಲಾಗಿದೆ.

ಜನವರಿ 1ರಂದು ಈ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಗೊಳಿಸುವ ಬಗ್ಗೆಯೂ ಇಲ್ಲಿನ ಜಿಲ್ಲಾಡಳಿತ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.

ಡಿಸೆಂಬರ್ 30ರ ಮಧ್ಯರಾತ್ರಿಯಿಂದ 2021ರ ಜನವರಿ 2ರವರೆಗೆ ಕೋರೆಗಾಂವ್ ಸ್ಮಾರಕದ ಸುತ್ತಮುತ್ತಲಿನ ಪ್ರದೇಶಗಳಲ್ಲಿ 144 ಜಾರಿ ಮಾಡಲು ಸ್ಥಳೀಯ ಜಿಲ್ಲಾಧಿಕಾರಿ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಈ ಬಾರಿ ಕೋರೆಗಾಂವ್ ವೀರ ಯೋಧರಿಗೆ ತಮ್ಮ ಮನೆಗಳಲ್ಲಿಯೇ ಗೌರವ ಸೂಚಿಸುವಂತೆ ಜಿಲ್ಲಾಡಳಿತ ಹೇಳಿದೆ.

ಕೊವಿಡ್ ಹಿನ್ನೆಲೆಯಲ್ಲಿ ಕೊರೆಗಾಂವ್ ಯುದ್ಧ ಭೂಮಿಗೆ ತೆರಳಲು ಸಾಧ್ಯವಾಗದಿದ್ದರೂ, ಇಲ್ಲಿಗೆ ಹೋಗಲು ಕಾತರದಿಂದ ಕಾಯುತ್ತಿರುವವರು ಬೇಸರ ಮಾಡಿಕೊಳ್ಳಬೇಕಾಗಿಲ್ಲ. ಈ ಬಾರಿ ಕೊರೆಗಾಂವ್ ಪ್ರತಿಕೃತಿ ತಯಾರಿಸಿ ನಿಮ್ಮ ಮನೆಗಳಲ್ಲಿ ಬಂಧುಮಿತ್ರರ ಜೊತೆಗೆ ವಿಜಯೋತ್ಸವ ಆಚರಿಸಬಹುದು. ಈ ಆಚರಣೆ ಮುಂದೆ ಪ್ರತಿ ಮನೆಗಳ ಹಬ್ಬವಾಗಿ ಆಚರಿಸಲ್ಪಡಲು ಸಾಧ್ಯವಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ. ಈ ನಿಟ್ಟಿನಲ್ಲಿ ಹಲವು ಸಂಘಟನೆಗಳೂ ಕೂಡ ಯೋಚನೆ ಮಾಡಿವೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ