ಕೋಟ್ಯಾಧಿಪತಿಗಳಿಗೆ ಮಾತ್ರವೇ ಪ್ರಧಾನಿ ಮೋದಿಯ ಹೃದಯ ಮಿಡಿಯುತ್ತದೆ, ರೈತರಿಗೆ ಅಲ್ಲ | ಪ್ರಿಯಾಂಕಾ ಗಾಂಧಿ ವಾದ್ರಾ ಟೀಕೆ
11/02/2021
ಲಕ್ನೋ: ಪ್ರಧಾನಿ ನರೇಂದ್ರ ಮೋದಿಯ ಹೃದಯ ಕೋಟ್ಯಾಧಿಪತಿಗಳಿಗೆ ಮಾತ್ರವೇ ಮಿಡಿಯುತ್ತದೆ. ರೈತರಿಗಾಗಿ ಮಿಡಿಯುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ.
ಉತ್ತರ ಪ್ರದೇಶದ ಸಹರಾನ್ ಪುರದಲ್ಲಿ ಕಿಸಾನ್ ಮಹಾಪಂಚಾಯತ್ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಪ್ರಿಯಾಂಕಾ, 1955ರಲ್ಲಿ ಅಂದಿನ ಪ್ರಧಾನಿ ಪಂಡಿತ್ ಜವಹರಲಾಲ್ ನೆಹರೂರವರು ಬೆಳೆ ಸಂಗ್ರಹಣೆ ವಿರುದ್ಧ ಕಾನೂನು ತಂದಿದ್ದರು. ಬಿಜೆಪಿ ಸರ್ಕಾರ ಅದನ್ನು ತೆಗೆದುಹಾಕಿತು. ಈಗಿನ ಕೃಷಿ ಕಾಯ್ದೆ ಬಿಲಿಯನೇರ್ ಗಳಿಗೆ ಮಾತ್ರ ಸಹಾಯವಾಗಲಿದೆ ಎಂದು ಹೇಳಿದರು.
ಈ ದೇಶದ ದೊಡ್ಡ ದೊಡ್ಡ ಉದ್ಯಮಿಗಳು, ಹಣ ಇರುವವರು ರೈತರ ಉತ್ಪನ್ನಗಳಿಗೆ ಬೆಲೆ ನಿಗದಿಪಡಿಸುತ್ತಾರೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ರೈತರಿಗೇನೂ ಲಾಭವಿಲ್ಲ ಎಂದು ಅವರು ತಿಳಿಸಿದರು.
ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೂತನ ಕೃಷಿ ಕಾಯ್ದೆಯನ್ನು ತೆಗೆದುಹಾಕಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.