ಉಡುಪಿ ಶ್ರೀಕೃಷ್ಣ ಮಠದಲ್ಲಿ ವೈಭವದ ವಿಟ್ಲಪಿಂಡಿ ಉತ್ಸವ ಸಂಪನ್ನ

ಉಡುಪಿಯಲ್ಲಿ ಅಷ್ಟಮಿಯ ಪ್ರಯುಕ್ತ ನಡೆಯುವ ವಿಟ್ಲಪಿಂಡಿ ಮಹೋತ್ಸವ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು.
ಎರಡು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಕೃಷ್ಣದೇವರ ಮೆರವಣಿಗೆ ನಡೆಸಲಾಗುವ ವಿಟ್ಲಪಿಂಡಿ ಮಹೋತ್ಸವವೆಂದರೆ ವೈಭವದ ಹಬ್ಬ. ಇಂದು ಚಿನ್ನದ ರಥದಲ್ಲಿ ಕೃಷ್ಣದೇವರ ಮೆರವಣಿಗೆ ನಡೆಯಿತು.
ಚಾತುರ್ಮಾಸ್ಯ ಕಾಲವಾದ ಕಾರಣ ಉತ್ಸವ ಮೂರ್ತಿಯನ್ನು ಹೊರ ತರುವಂತಿಲ್ಲ, ಹಾಗಾಗಿ ಅಷ್ಟಮಿಗೆಂದೇ ತಯಾರಿಸಲಾಗುವ ಮಣ್ಣಿನ ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ಅಷ್ಟಮಠಗಳ ಸುತ್ತಲೂ ರಥ ಬೀದಿಯಲ್ಲಿ ಕೊಂಡೊಯ್ಯಲಾಯಿತು. ಈ ವೇಳೆ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಸಾಂಪ್ರದಾಯಿಕ ವೇಷದಾರಿ ಗೊಲ್ಲರು ಮೊಸರಿನ ಕುಡಿಕೆಗಳನ್ನು ಒಡೆಯುತ್ತಾ ಸಾಗಿದಂತೆ ಪ್ರದಕ್ಷಿಣಕಾರವಾಗಿ ಚಿನ್ನದ ರಥದಲ್ಲಿ ದೇವರ ಮೆರವಣಿಗೆ ನಡೆಯಿತು. ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು ಪೂಜೆ ನಡೆಸಿ, ಬಳಿಕ ರಥದ ಮುಂದೆ ಭಕ್ತರೊಡನೆ ಸಾಗಿ ಬಂದರು. ಹುಲಿ ವೇಷ ಸೇರಿದಂತೆ ಬಗೆ ಬಗೆಯ ವೇಷಧಾರಿಗಳು ಶ್ರೀ ಕೃಷ್ಣನ ಲೀಲೋತ್ಸವಕ್ಕೆ ಸಾಕ್ಷಿಯಾದರು. ಎಂಟು ಮಠಗಳ ಅಂಗಳದಲ್ಲಿ ನಿಂತ ಭಕ್ತರು ಕೃಷ್ಣ ಜಪ ಮಾಡುತ್ತಾ ಚಿನ್ನದ ರಥಕ್ಕೆ ಕೈಮುಗಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka