ಒಂದೆಡೆ ಕ್ರೂರಿ ಪೋಷಕರು, ಇನ್ನೊಂದೆಡೆ ಪ್ರಿಯಕರ | ಪ್ರೀತಿಗೆ ಬಿದ್ದವಳು ನೇಣಿಗೆ ಶರಣಾದಳು!
ಹೈದರಾಬಾದ್: ಪಾಲಕರ ನಿರಂತರ ಕಿರುಕುಳ ಹಾಗೂ ತನ್ನ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳದ ಪ್ರಿಯಕರನ ವರ್ತನೆಗಳಿಂದ ಬೇಸತ್ತ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ತೆಲಂಗಾಣದ ಮೈಲಾರ್ದೇವ್ ಪಲ್ಲಿಯ 20 ವರ್ಷ ವಯಸ್ಸಿನ ಲಿಜಾ ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ. ಒಡಿಶಾ ಮೂಲದ ಈಕೆಯ ತಂದೆ 20 ವರ್ಷಗಳ ಹಿಂದೆ ತೆಲಂಗಾಣಕ್ಕೆ ಬಂದು ಲಕ್ಷ್ಮೀಗುಡ ಎಂಬಲ್ಲಿ ವಾಸವಿದ್ದರು.
ಇದೇ ಪ್ರದೇಶದಲ್ಲಿ ವಾಸವಿದ್ದ 20 ವರ್ಷ ವಯಸ್ಸಿನ ಅಪ್ಸರ್ ಹಾಗೂ ಲಿಜಾ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಕಾಲೇಜಿಗೆ ಹೋಗುತ್ತಿದ್ದ ಇವರ ನಡುವೆ ಪ್ರೀತಿ ಹುಟ್ಟಿದ್ದು, ಇವರಿಬ್ಬರ ಪ್ರೀತಿ ಮನೆಯವರಿಗೆ ತಿಳಿದಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿಯ ಕುಟುಂಬ ಅಪ್ಸರ್ ಗೆ ವಾರ್ನಿಂಗ್ ನೀಡಿದ್ದರು. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಮಗಳ ಬಳಿಯಲ್ಲಿ ವಿಚಿತ್ರವಾಗಿ ನಡೆದುಕೊಂಡ ಪೋಷಕರು, ಲಿಜಾಳ ಕೂದಲು ಕತ್ತರಿಸಿ ಆಕೆಯನ್ನು ವಿರೂಪಗೊಳಿಸಿದ್ದರು. ಆಕೆ ಮನೆಯಿಂದ ಹೊರಗೆ ಹೋಗಬಾರದು ಎನ್ನುವ ಕಾರಣಕ್ಕಾಗಿ ಪೋಷಕರು ಕ್ರೂರಿಗಳಂತೆ ನಡೆದುಕೊಂಡಿದ್ದಾರೆ.
ಇತ್ತ ಅಪ್ಸರ್ ಲಿಜಾಳನ್ನು ಬಿಟ್ಟಿರಲಾಗದೇ ಆಕೆಗೆ ಕರೆ ಮಾಡಿ ಮಾತನಾಡಿದ್ದಾನೆ. ಈ ವೇಳೆ ಅವರ ನಡುವೆ ಏನು ಸಂಭಾಷಣೆ ನಡೆದಿದೆ ಎನ್ನುವುದು ತಿಳಿದು ಬಂದಿಲ್ಲ.ಅಪ್ಸರ್ ಜೊತೆಗೆ ಮಾತನಾಡಿದ ಕೆಲವೇ ಹೊತ್ತಿನಲ್ಲಿ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈಕೆ ಆತ್ಮಹತ್ಯೆ ಮಾಡಿಕೊಂಡ ಬಳಿಕ ಅಪ್ಸರ್ 135 ಬಾರಿ ಯುವತಿಗೆ ಕರೆ ಮಾಡಿದ್ದಾನೆ. ಯುವತಿ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಆತ ಪದೇ ಪದೇ ಕರೆ ಮಾಡಿದ್ದಾನೆ. ಮಗಳನ್ನು ವಿರೂಪಗೊಳಿಸಿ ಮಾನಸಿಕವಾಗಿ ಖನ್ನತೆಗೆ ಜಾರುವಂತೆ ಮಾಡಿರುವ ಕ್ರೂರಿ ಪೋಷಕರು ಇದೀಗ ಅಪ್ಸರ್ , ಪದೇ ಪದೇ ಕರೆ ಮಾಡಿ ಕಿರುಕುಳ ನೀಡಿದ್ದಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುವಕನ ಮೇಲೆ ಆರೋಪ ಹಾಕಿ ತಾವು ಬಚಾವ್ ಆಗಲು ಪ್ರಯತ್ನಿಸಿದ್ದಾರೆ.