ದಲಿತ ಸಿಎಂ ರೇಸ್ ನಲ್ಲಿರುವ ಪರಮೇಶ್ವರ್ ಕ್ಷೇತ್ರದಲ್ಲೇ ಅಪ್ರಾಪ್ತ ಬಾಲಕ, ದಲಿತ ವ್ಯಕ್ತಿಯಿಂದ ಮಲ ಬಾಚಿಸಿದ ಕೆಎಸ್ ಆರ್ ಟಿಸಿ ಅಧಿಕಾರಿಗಳು! - Mahanayaka

ದಲಿತ ಸಿಎಂ ರೇಸ್ ನಲ್ಲಿರುವ ಪರಮೇಶ್ವರ್ ಕ್ಷೇತ್ರದಲ್ಲೇ ಅಪ್ರಾಪ್ತ ಬಾಲಕ, ದಲಿತ ವ್ಯಕ್ತಿಯಿಂದ ಮಲ ಬಾಚಿಸಿದ ಕೆಎಸ್ ಆರ್ ಟಿಸಿ ಅಧಿಕಾರಿಗಳು!

koratagere
08/11/2024

ಕೊರಟಗೆರೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಸ್ವಕ್ಷೇತ್ರದಲ್ಲೇ 10 ವರ್ಷದ ಅಪ್ರಾಪ್ತ ಬಾಲಕ ಹಾಗೂ ದಲಿತ ವ್ಯಕ್ತಿಯೊಬ್ಬರಿಂದ ಮಲಬಾಚಿಸಿರುವ ಅಮಾನವೀಯ ಘಟನೆ ವರದಿಯಾಗಿದೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಇಂತಹದೊಂದು ಅಮಾನವೀಯ ಘಟನೆ ನಡೆದಿದೆ. ಇದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ. ಮಾನವರನ್ನು ಬಳಸಿ ಇಂತಹ ಕೆಲಸಗಳನ್ನು ಮಾಡಿಸ ಬಾರದು ಎನ್ನುವ ನಿಯಮಗಳಿದ್ದರೂ ಕೆಎಸ್ ಆರ್ ಟಿಸಿ ಅಧಿಕಾರಿಗಳು ಶೌಚಾಲಯದ ಪಿಟ್ ತುಂಬಿ ಹರಿಯುತ್ತಿದ್ದನ್ನ ದಲಿತರಿಂದ ಸ್ವಚ್ಛಗೊಳಿಸುವ ಕೆಲಸ ಮಾಡಿಸಿದ್ದಾರೆ.

ತುಮಕೂರು ಜಿಲ್ಲೆಯ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಪಟ್ಟಣದ ಹೃದಯಭಾಗದಲ್ಲಿರುವ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ನಾಗರೀಕ ‌ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ನಿಲ್ದಾಣದ ಒಳಗಿರುವ ಸಾರ್ವಜನಿಕ ಶೌಚಾಲಯದ ಪಿಟ್ ತುಂಬಿ ಹರಿಯುತ್ತಿದ್ದನ್ನ ದಲಿತರಿಂದ ಸ್ವಚ್ಚಗೊಳಿಸುವ ಕೆಲಸ ಮಾಡಿಸಲಾಗಿದೆ. ತುಮಕೂರು ಮೂಲದ ಪರಿಶಿಷ್ಟ ಜಾತಿಗೆ ಸೇರಿದ 10 ವರ್ಷದ ಬಾಲಕಾರ್ಮಿಕ ಹಾಗೂ ಓರ್ವ ವ್ಯಕ್ತಿ ನಿಲ್ದಾಣದಲ್ಲಿ ಮಲವನ್ನ ಸ್ವಚ್ಚಗೊಳಿಸುತ್ತಿದ್ದ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದಲಿತರ ಪರ ಭಾಷಣ ಬಿಗಿಯುವ ಡಾ.ಜಿ.ಪರಮೇಶ್ವರ್ ಕ್ಷೇತ್ರದಲ್ಲೇ ಇಂತಹದ್ದೊಂದು ಅಮಾನವೀಯತೆ ನಡೆದಿದ್ದರೂ, ಈ ಬಗ್ಗೆ ಇನ್ನೂ ಯಾವುದೇ ಕ್ರಮಕೈಗೊಳ್ಳಲು ಅಧಿಕಾರಿಗಳು ಮುಂದಾಗಿಲ್ಲ ಎನ್ನುವುದು ದುರಂತ ಎನ್ನುವ ಮಾತುಗಳು ಸದ್ಯ ಕೇಳಿ ಬಂದಿದೆ.

ದಲಿತರಿಂದ ಮಲ ಸ್ವಚ್ಚಗೊಳಿಸುವ ಕೆಲಸ ಮಾಡಿಸುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಸಿಬ್ಬಂದಿ ಮಾಧ್ಯಮದವರನ್ನ ಕಂಡ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾನೆ. ಮಾಧ್ಯಮದವರು ಬಾಲಕನನ್ನ ಮಾತನಾಡಿಸಿದ ವೇಳೆ ಶೌಚಾಲಯದ ನಿರ್ವಹಣೆ ಮಾಡುತ್ತಿದ್ದ ಕುಮಾರಣ್ಣ ಎಂಬುವರು ನಮಗೆ ಈ ಕೆಲಸ ಮಾಡುವಂತೆ ಹೇಳಿದ್ದಾರೆ, ನಾನು ಪರಿಶಿಷ್ಟ ಜಾತಿಗೆ  ಸೇರಿದ್ದು ತನಗೆ 10 ವರ್ಷ ವಯಸ್ಸು ಎಂದು ಬಾಲಕ ಹೇಳಿಕೊಂಡಿದ್ದಾನೆ.

ಮಾಧ್ಯಮದವರ ಜೊತೆಗೆ ಮಾತನಾಡುತ್ತಿದ್ದ ಬಾಲಕನಿಗೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಸಿಬ್ಬಂದಿ ದೂರದಿಂದಲೇ ಕೈಸನ್ನೆ ಮಾಡಿ ಮಾತನಾಡದಂತೆ ಗದರಿಸುತ್ತಾನೆ. ಕೂಡಲೇ ಬಾಲಕ ತಾವು ಕೆಲಸ ಮಾಡಲು ಬಳಸುತ್ತಿದ್ದ ಗುದ್ದಲಿ, ಬಾಣಲಿ ತೆಗೆದುಕೊಂಡು ಅಸಹಾಯಕತೆಯಿಂದ ಅಲ್ಲಿಂದ ಶೌಚಾಲಯದ ಕಡೆ ತೆರಳಿದ್ದು ಸಿಬ್ಬಂದಿಯ ದೌರ್ಜನ್ಯಕ್ಕೆ ಸಾಕ್ಷಿಯಾಯಿತು.

ಪಟ್ಟಣ ಪಂಚಾಯ್ತಿಯಲ್ಲಿ ಇರುವ ಸೆಪ್ಟಿಕ್ ಟ್ಯಾಂಕ್ ಯಂತ್ರದ ಮೂಲಕ ತುಂಬಿದ ಶೌಚಗುಂಡಿಯನ್ನ ಸ್ವಚ್ಚಗೊಳಿಸದೇ ನಿಲ್ದಾಣದ ಸಿಬ್ಬಂದಿ ನಿರ್ಲಕ್ಷ್ಯ ಮಾಡಿದ್ದಾರೆ. ಶೌಚಗುಂಡಿ ತುಂಬಿ ನಿಲ್ದಾಣದ ಫ್ಲಾಟ್ ಫಾರಂಗೆ ಹರಿಯತೊಡಗಿದೆ. ಇದು ನಿಲ್ದಾಣದಲ್ಲಿ ದುರ್ನಾತ ಆವರಿಸಿ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವಂತ ಪರಿಸ್ಥಿತಿ ಉಂಟುಮಾಡಿದೆ.  ಇದನ್ನು ದಲಿತ ವ್ಯಕ್ತಿ ಹಾಗೂ  10 ವರ್ಷದ ಬಾಲ ಕಾರ್ಮಿಕನಿಂದ ಜವಾಬ್ದಾರಿಯುತ ಕೆಎಸ್ ಆರ್ ಟಿಸಿ ಅಧಿಕಾರಿಗಳೇ ನಡೆಸಿರುವುದು ಆಘಾತ ಸೃಷ್ಟಿಸಿದೆ.

ಬಸ್ ನಿಲ್ದಾಣದೊಳಗೆ ನೂರಾರು ಪ್ರಯಾಣಿಕರ ಸಮ್ಮುಖದಲ್ಲೇ ಸುಡುವ ಬಿಸಿಲಿನಲ್ಲಿ ಬರೀ ಮೈಯಲ್ಲಿದ್ದ ದಲಿತ ಬಾಲಕ ಮಲವನ್ನು ಬಾಚುತ್ತಿದ್ದಾನೆ, ಬರೀಗೈಯಲ್ಲೇ ಅವರನ್ನು ಕೆಲಸ ಮಾಡಿಸುತ್ತಿರುವುದು ಕಂಡು ಬಂದಿದೆ.

ಮಾನವನಿಂದ ಮಲ ಹೊರುವ ಪದ್ದತಿ ನಿಷೇಧ ಹಾಗೂ ಬಾಲಕಾರ್ಮಿಕ ಪದ್ದತಿ ನಿಷೇಧ ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ಅಧಿಕಾರಿಗಳ ಸಮ್ಮುಖದಲ್ಲೆ ಉಲ್ಲಂಘನೆಯಾಗಿರುವುದು ನಿಜಕ್ಕೂ ದುರಂತ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಸ್ವಕ್ಷೇತ್ರದಲ್ಲಿರುವ ಬಸ್ ನಿಲ್ದಾಣದಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಅಧಿಕಾರಿ, ಸಿಬ್ಬಂದಿಗಳು ನಿರ್ಭೀತಿಯಿಂದ ದಲಿತರ ಕೈಯಲ್ಲಿ ಇಂತಹ ಅನಿಷ್ಟದ ಕೆಲಸ ಮಾಡಿಸಿರುವುದು ಸಚಿವರ ಆಡಳಿತ ಸಾಮರ್ಥ್ಯವನ್ನು ಅಣಕಿಸಿದೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿದೆ ಎನ್ನಲಾಗಿದೆ.  ತಕ್ಷಣವೇ ಸಂಬಂಧಪಟ್ಟವರ ವಿರುದ್ಧ ಸಚಿವರೇ ಮುಂದೆ ನಿಂತು ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ