ಮದ್ಯ ಕುಡಿಯಲು ಹಣ ನೀಡಲಿಲ್ಲ ಎಂದು ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ ಪತಿ
ಬೆಂಗಳೂರು: ಮದ್ಯ ಕುಡಿಯಲು ಹಣ ನೀಡಲಿಲ್ಲ ಎಂದು ಪತ್ನಿಯ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಹತ್ಯೆ ಮಾಡಿರುವ ಘಟನೆ ಹೆಣ್ಣೂರಿನ ಶೆಡ್ ವೊಂದರಲ್ಲಿ ನಡೆದಿದ್ದು, ಕೃತ್ಯದ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಲಕ್ಷ್ಮೀಪುರ ಮೂಲದ ಮಲ್ಲಿಕಮ್ಮ ಮೃತಪಟ್ಟವರಾಗಿದ್ದು, ವೀರೇಶ್ ಎಂಬಾತ ಹತ್ಯೆ ಆರೋಪಿಯಾಗಿದ್ದಾನೆ. ತನ್ನ ಮೊದಲ ಪತಿಯ ಸಾವಿನ ನಂತರ ಮಲ್ಲಿಕಮ್ಮ ಅವರು ವೀರೇಶ್ ನನ್ನು ಎರಡನೇ ವಿವಾಹವಾಗಿದ್ದರು. ಆದರೆ ವೀರೇಶ್ ತನ್ನ ತೀವ್ರವಾದ ಕುಡಿತದ ಚಟವನ್ನು ಪೂರೈಸಲು ಮಲ್ಲಿಕಮ್ಮಗೆ ದಿನ ನಿತ್ಯ ಹಣಕ್ಕಾಗಿ ಪೀಡಿಸಿ ಹಿಂಸಿಸಿ ಆಕೆಯ ಜೀವನವನ್ನೇ ನರಕ ಮಾಡಿದ್ದ. ಇದೀಗ ಭೀಕರವಾಗಿ ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಜೂನ್ 10ರಂದು ಈ ಘಟನೆ ನಡೆದಿದ್ದು, ನೆರೆಹೊರೆಯ ವ್ಯಕ್ತಿಗಳು ಮಲ್ಲಿಕಮ್ಮಳ ಮೃತದೇಹವನ್ನು ಕಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯ ನಂಬರ್ ಗೆ ಕರೆ ಮಾಡಿದ್ದಾರೆ. ಆದರೆ ಆತ ಸಂಪರ್ಕಕ್ಕೆ ಸಿಕ್ಕಿಲ್ಲ. ಮಹಿಳೆಯ ಸಂಬಂಧಿಗೆ ಕರೆ ಮಾಡಿದಾಗ ವೀರೇಶ್ ನ ಅನ್ಯಾಯಗಳನ್ನು ಅವರು ತಿಳಿಸಿದ್ದಾರೆ. ಇದೀಗ ವೀರೇಶ್ ಈ ಕೊಲೆಯನ್ನು ಮಾಡಿದ್ದಾನೆ ಎನ್ನುವ ಪೊಲೀಸರ ಅನುಮಾನ ಬಲವಾಗಿದ್ದು, ಆತನ ಬಂಧನದ ಬಳಿಕ ಪ್ರಕರಣದ ಸತ್ಯಾಸತ್ಯತೆಗಳು ಬಯಲಾಗಬೇಕಿದೆ. ಈ ನಿಟ್ಟಿನಲ್ಲಿ ಹೆಣ್ಣೂರು ಠಾಣಾ ಪೊಲೀಸರು ಆರೋಫಿಯ ಪತ್ತೆಗೆ ಬಲೆ ಬೀಸಿದ್ದಾರೆ.