ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ಗಮನ ಸೆಳೆದ 900 ಕೆ.ಜಿ. ಧಾನ್ಯಗಳ ಬೃಹತ್ ತಿರಂಗ

ಸೋಮವಾರ ದೇಶದೆಲ್ಲೆಡೆ ಸ್ವಾತಂತ್ರ್ಯ ಸಂಭ್ರಮ. ಎಲ್ಲೆಲ್ಲೂ ತಿರಂಗಾವೇ ಕಾಣುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶ್ರೀಕ್ಷೇತ್ರ ಕುದ್ರೋಳಿಯ ರಾಜಗೋಪುರದ ಮುಂಭಾಗದ ನೆಲದಲ್ಲಿ 900 ಕೆ.ಜಿ. ಧಾನ್ಯಗಳ ಬೃಹತ್ ತಿರಂಗ ರಚನೆಯಾಗಿದೆ.
ಈ ಬೃಹತ್ ತಿರಂಗ 38 ಫೀಟ್ ಅಗಲವನ್ನು ಹೊಂದಿದೆ. ತಲಾ 300 ಕೆಜಿ ಮಸ್ಸೂರು ದಾಲ್, ಸಬ್ಬಕ್ಕಿ, ಹೆಸರು ಕಾಳುಗಳನ್ನು ಬಳಸಲಾಗಿದೆ. ಫೋಮ್ ನಲ್ಲಿ ರಚಿಸಿರುವ ಅಶೋಕ ಚಕ್ರ 8 ಫೀಟ್ ಅಗಲವಿದೆ. ಅಲ್ಲದೆ ತಿರಂಗದ ಅಲಂಕಾರಕ್ಕೆ 54 ಕಲಶ, 138 ಬಾಳೆ ಎಲೆಯಲ್ಲಿ ಅಕ್ಕಿ ಎಲೆಯಡಿಕೆ, ಚೆಂಡು ಹೂಗಳನ್ನು ಬಳಸಲಾಗಿದೆ. ಜೊತೆಗೆ ಕ್ಯಾರೆಟ್, ಮೂಲಂಗಿ, ಬೆಂಡೆಯಿಂದ ಮಾಡಿರುವ 75 ಅಕ್ಷರದಲ್ಲೂ ತಿರಂಗದ ಕಲ್ಪನೆಯನ್ನು ಮೂಡಿಸಲಾಗಿದೆ.
ಫೋಟೋ ಜರ್ನಲಿಸ್ಟ್ ಸತೀಶ್ ಇರಾ ಅವರ ಪರಿಕಲ್ಪನೆ ಹಾಗೂ ಖ್ಯಾತ ಫೋಟೋ ಗ್ರಾಫರ್, ಕಲಾವಿದ ಪುನೀತ್ ಶೆಟ್ಟಿಯವರ ಕೈಚಳದಲ್ಲಿ ಈ ಬೃಹತ್ ತಿರಂಗವು ಅದ್ಭುತವಾಗಿ ಮೂಡಿ ಬಂದಿದೆ.
ಶ್ರೀಕ್ಷೇತ್ರದ ಗುರು ಬೆಳದಿಂಗಳು ಹಾಗೂ ಗೋಕರ್ಣನಾಥ ಸೇವಾದಳ ತಂಡ ಸಹಕರಿಸಿದೆ. ಆ. 13ರ ಮಧ್ಯಾಹ್ನದಿಂದಲೇ ಈ ತಿರಂಗ ರಚನೆಗೆ ಸಾಮಗ್ರಿಗಳನ್ನು ಖರೀದಿಸಲಾಗಿದೆ. ರಾತ್ರಿ 9ರಿಂದ ತಿರಂಗದ ಸ್ಕೆಚ್ ತಯಾರಿಸಲಾಗಿದ್ದು, ಆ. 14ರ ಬೆಳಗ್ಗೆ 11ರ ವೇಳೆಗೆ ತಿರಂಗ ಸಂಪೂರ್ಣಗೊಂಡಿದೆ.
ಇಂದು ಬೆಳಗ್ಗೆ ಸ್ವಲ್ಪ ಮಳೆ ಬಂದರೂ ಅದೃಷ್ಟವಶಾತ್ ತಿರಂಗ ಹಾಳಾಗದಿರುವುದು ವಿಶೇಷವೆನಿಸಿದೆ. ಕೇಂದ್ರದ ಮಾಜಿ ಸಚಿವ, ಶ್ರೀಕ್ಷೇತ್ರ ಕುದ್ರೋಳಿಯ ಅಭಿವೃದ್ಧಿ ರೂವಾರಿ ಜನಾರ್ದನ ಪೂಜಾರಿಯವರು ಈ ಬೃಹತ್ ತಿರಂಗವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನು ನೋಡಲು ಸಾವಿರಾರು ಮಂದಿ ಆಗಮಿಸುತ್ತಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka