ದೊಡ್ಡಣ್ಣ ಮುಖಕ್ಕೆ ಪತ್ರ ಎಸೆದು ಅವಮಾನ, ಸುಮಲತಾ-ರಾಕ್ ಲೈನ್ ವಿಡಿಯೋ ತಿರುಚಲು ಯತ್ನ | ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ - Mahanayaka
4:19 AM Wednesday 11 - December 2024

ದೊಡ್ಡಣ್ಣ ಮುಖಕ್ಕೆ ಪತ್ರ ಎಸೆದು ಅವಮಾನ, ಸುಮಲತಾ-ರಾಕ್ ಲೈನ್ ವಿಡಿಯೋ ತಿರುಚಲು ಯತ್ನ | ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪ

kumaraswamy vs sumalatha
09/07/2021

ಬೆಂಗಳೂರು: ಅಂಬರೀಷ್ ಸ್ಮಾರಕ ವಿಚಾರದಲ್ಲಿ ಅಂದಿನ ಸಿಎಂ ಆಗಿದ್ದ ಕುಮಾರಸ್ವಾಮಿ ಬಳಿಗೆ ಸ್ಯಾಂಡಲ್ ವುಡ್ ನ  ಹಿರಿಯ ನಟ ದೊಡ್ಡಣ್ಣ ಹಾಗೂ ಶಿವರಾಂ ಅವರು ಹೋದಾಗ ಹಿರಿಯ ನಟರು ಎಂದೂ ನೋಡದೇ ಕುಮಾರಸ್ವಾಮಿ ಪತ್ರವನ್ನು ಮುಖಕ್ಕೆ ಎಸೆದು ಅವಮಾನ ಮಾಡಿದ್ದರು ಎಂದು  ಮಂಡ್ಯ ಸಂಸದೆ ಸುಮಲತಾ ಆರೋಪಿಸಿದ್ದಾರೆ ಎಂದು ವರದಿಯಾಗಿದೆ.

ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ ಒಪ್ಪಿಗೆ ನೀಡಲು ಮನಸ್ಸಿಲ್ಲದ ಕುಮಾರಸ್ವಾಮಿ ಹಿರಿಯ ನಟರನ್ನು ಅವಮಾನಿಸಿ ಕಣ್ಣೀರು ಹಾಕಿಸಿ ಕಳುಹಿಸಿದ್ದರು ಎಂದು ಸುಮಲತಾ ಗಂಭೀರ ಆರೋಪ ಮಾಡಿದ್ದಾರೆ.

ಮಂಡ್ಯದಲ್ಲಿ ನಡೆದಿರುವ ಗಣಿ ಅಕ್ರಮಗಳ ಬಗ್ಗೆ ಕುಮಾರಸ್ವಾಮಿ ಯಾಕೆ ಅಷ್ಟು ತಲೆಕೆಡಿಸಿಕೊಂಡಿದ್ದಾರೆ? ಎಂದು ಪ್ರಶ್ನಿಸಿದ ಸುಮಲತಾ, ಅವರಿಗೆ ಸಂಬಂಧವಿಲ್ಲದ ವಿಚಾರವಾದರೆ ಅವರು ಯಾಕೆ ಆತಂಕಪಡಬೇಕು ಎಂದು  ಪ್ರಶ್ನಿಸಿದ ಅವರು, ಸದ್ಯದಲ್ಲಿಯೇ ಮುಖ್ಯಮಂತ್ರಿ ಹಾಗೂ ಗಣಿ ಸಚಿವರನ್ನು ಭೇಟಿ ಮಾಡಿ ಮಾಹಿತಿ ನೀಡುತ್ತೇನೆ ಎಂದು ಅವರು ಹೇಳಿದರು.

ಇನ್ನೂ ಸುಮಲತಾ ಹಾಗೂ ಕುಮಾರಸ್ವಾಮಿ ಮಾತಿನ ಸಮರಕ್ಕೆ ರಾಕ್ ಲೈನ್ ವೆಂಕಟೇಶ್ ಕೂಡ ಎಂಟ್ರಿಯಾಗಿದ್ದು,  ಅಂಬರೀಷ್ ಕುಟುಂಬದ ಬಗ್ಗೆ ಕುಮಾರಸ್ವಾಮಿ ಅವಹೇಳನಾಕಾರಿಯಾಗಿ ಮಾತನಾಡುತ್ತಿದ್ದರು. ಈ ಹಿಂದೆ ಚುನಾವಣೆ ವೇಳೆ ನನ್ನ ಹಾಗೂ ಸುಮಲತಾ ಮಧ್ಯೆ ಅಪಾರ್ಥ ಕಲ್ಪಿಸಿ ಪ್ರಚಾರ ನಡೆಸಲು ಯತ್ನಿಸಿದ್ದರು ಎಂದು ಆರೋಪಿಸಿದರು.

ಚುನಾವಣೆ ಸಂದರ್ಭದಲ್ಲಿ ಇಬ್ಬರು ನಡೆದುಕೊಂಡು ಹೋಗುವ ಸಿಸಿ ಕ್ಯಾಮರ ದೃಶ್ಯವನ್ನು ಪಡೆದು ಅದನ್ನು ತಿರುಚಿ ಅಪಪ್ರಚಾರ ನಡೆಸಲು ಪಿತೂರಿ ಮಾಡಿದ್ದರು ಎಂದು ಅವರದ್ದೇ ಚಾನೆಲ್ ನಲ್ಲಿದ್ದ ಅಂಬರೀಷ್ ಅಭಿಮಾನಿಯೊಬ್ಬ ಈ ವಿಚಾರ ನಮ್ಮ ಗಮನಕ್ಕೆ ತಂದಿದ್ದರು ಎಂದು ಅವರು ಆರೋಪಿಸಿದರು.

ಅಂಬರೀಷ್ ಸ್ಮಾರಕದ ವಿಚಾರದಲ್ಲಿ ದೊಡ್ಡಣ್ಣ ಅವರನ್ನು 2 ಗಂಟೆಗಳ ಕಾಲ ಕಾಯಿಸಿ, ಬಳಿಕ ಅವರ ಮುಖಕ್ಕೆ ಪತ್ರ ಎಸೆದು ಅವರನ್ನು ಹಿಂದಕ್ಕೆ ನೀವು ಕಳಿಸಿಲ್ಲವೇ ಎಂದು ರಾಕ್ ಲೈನ್ ವೆಂಕಟೇಶ್ ಪ್ರಶ್ನಿಸಿದರು.

ಇತ್ತೀಚಿನ ಸುದ್ದಿ