ಚುನಾವಣಾ ಕಣದಿಂದ ಹಿಂದೆ ಸರಿದ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ
ಕುಂದಾಪುರ: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಐದು ಬಾರಿ ಗೆಲುವು ಸಾಧಿಸಿ ಕುಂದಾಪುರದ ವಾಜಪೇಯಿ ಎಂದೇ ಖ್ಯಾತರಾಗಿದ್ದ ಬಿಜೆಪಿಯ ಹಾಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ಸ್ವಇಚ್ಛೆಯಿಂದ ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ.
ಸೋಮವಾರ ಸಂಜೆ ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸುವ ಮೂಲಕ ಅವರು ಈ ನಿರ್ಧಾರವನ್ನು ಬಹಿರಂಗ ಪಡಿಸಿದ್ದಾರೆ. ಕರಾವಳಿಯ ಜನಪ್ರಿಯ ರಾಜಕಾರಣಿ ಎನಿಸಿರುವ ಇವರು ಕುಂದಾಪುರದಿಂದ ಸತತ ಐದು ಬಾರಿ ಸ್ಪರ್ಧಿಸಿ ನಾಲ್ಕು ಬಾರಿ ಬಿಜೆಪಿ ಶಾಸಕರಾಗಿ ಹಾಗೂ ಒಮ್ಮೆ ಪಕ್ಷೇತರರಾಗಿ ನಿಂತು ಭಾರೀ ಅಂತರದ ಜಯ ದಾಖಲಿಸುತ್ತಾ ಬಂದಿದ್ದಾರೆ. ಈ ಬಾರಿ ಮತ್ತೆ ಸ್ಪರ್ಧಿಸುವ ಸಿದ್ದತೆಯಲ್ಲಿ ಇದ್ದರು.
‘ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಸತತವಾಗಿ ಒಟ್ಟು 5 ಅವಧಿಗೆ ನನ್ನನ್ನು ಬಹುನಿರೀಕ್ಷೆಯೊಂದಿಗೆ ಆಯ್ಕೆ ಮಾಡಿದ ನನ್ನ ಕ್ಷೇತ್ರದ ಎಲ್ಲಾ ಜಾತಿ, ಧರ್ಮದ ಮತದಾರ ಬಾಂಧವರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ’ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ವಇಚ್ಛೆಯಿಂದ ಸ್ಪರ್ಧಿಸದೇ ಇರಲು ನಿಶ್ಚಯಿಸಿದ್ದೇನೆ. ನಾನು ಶಾಸಕನಾಗಿ ಕರ್ತವ್ಯ ನಿರ್ವಹಿಸಿದ ಅವಧಿಯಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಿ ಅತ್ಯಂತ ನಿಷ್ಠೆಯಿಂದ ನನ್ನ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಕುಂದಾಪುರ ವಿಧಾನಸಭಾ ಕ್ಷೇತ್ರವು ಬಹಳಷ್ಟು ಗ್ರಾಮೀಣ ಭಾಗಗಳನ್ನು ಹೊಂದಿರುವ ಕ್ಷೇತ್ರವಾಗಿದ್ದು, ಈ ಕ್ಷೇತ್ರದ ಎಲ್ಲಾ ವರ್ಗದ ಮತದಾರರಿಗೂ ತಮ್ಮ ಬೇಡಿಕೆಗಳನ್ನು ಹೇಳಿಕೊಳ್ಳಲು ಅವಕಾಶ ಕೊಟ್ಟು ಅದರ ನೋವು ಸಂಕಷ್ಟಗಳಿಗೆ ಸ್ಪಂದಿಸಿ ಜನರ ಆಶೋತ್ತರಗಳನ್ನು ಈಡೇರಿಸಿದ ಸಂತೃಪ್ತಿ ನನಗಿದೆ.
ಎಲ್ಲಾ ಐದೂ ಚುನಾವಣೆಗಳಲ್ಲಿಯೂ ನನ್ನನ್ನು ದಾಖಲೆ ಮತಗಳ ಅಂತರಗಳಿಂದ ಚುನಾಯಿಸಿ ಕಳುಹಿಸಿದ ಕ್ಷೇತ್ರದ ಎಲ್ಲಾ ಮತದಾರರನ್ನೂ ವಿಶ್ವಾಸಕ್ಕೆ ಪಡೆದು ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿ ಕ್ಷೇತ್ರದ ಮತದಾರ ರಿಂದ ಪ್ರೀತಿ ವಿಶ್ವಾಸ ಗಳಿಸಿದ ಬಗ್ಗೆ ನನಗೆ ಹೆಮ್ಮೆ ಇದೆ.
ಐದು ಬಾರಿ ಕ್ಷೇತ್ರದ ಶಾಸಕನಾಗಿ ಸೇವೆ ಸಲ್ಲಿಸುವ ಅವಧಿಯಲ್ಲಿ ನಡೆದ ಲೋಕಸಭಾ, ವಿಧಾನಸಭೆ, ವಿಧಾನಪರಿಷತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ಚುನಾವಣೆಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಅಭೂತಪೂರ್ವ ಗೆಲುವಿಗೆ ದುಡಿದಿರುವ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ, ಪ್ರಮುಖರಿಗೆ ಹಾಗೂ ಅಭಿಮಾನಿಗಳಿಗೆ ನಾನು ಯಾವತ್ತೂ ಚಿರ ಋಣಿಯಾಗಿರುತ್ತೇನೆ.
ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ನನಗೆ ಮಾರ್ಗದರ್ಶನ ನೀಡಿದ ಹಾಗೂ ಸಹಕಾರ ನೀಡಿದ ಪಕ್ಷದ ಪ್ರಮುಖರಿಗೆ, ಎಲ್ಲ ಹಿರಿ-ಕಿರಿಯ ಸ್ನೇಹಿತರಿಗೆ, ಅಧಿಕಾರಿ ವರ್ಗದವರಿಗೆ, ಮಾಧ್ಯಮದವರಿಗೆ ಹಾಗೂ ಕ್ಷೇತ್ರದ ಎಲ್ಲ ಮತದಾರರಿಗೂ ನನ್ನ ಮನಃಪೂರ್ವಕ ಕೃತಜ್ಞತೆಗಳು.
ಮತದಾರರು ನನ್ನ ಮೇಲೆ ಇಟ್ಟ ಪ್ರೀತಿ ಮತ್ತು ನಂಬಿಕೆಯೇ ಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರವಾಗಿ ಕರ್ತವ್ಯ ನಿರ್ವಹಿಸಲು ಪ್ರೇರಣೆಯಾಗಿದ್ದು, ಅದಕ್ಕಾಗಿ ನಾನು ನನ್ನ ಸಮಸ್ತ ಮತಬಾಂಧವರಿಗೂ ಮತ್ತೊಮ್ಮೆ ಕೃತಜ್ಞತೆಯನ್ನು ಸಲ್ಲಿಸುತ್ತಾ, ನಾನು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಭಾರತೀಯ ಜನತಾ ಪಾರ್ಟಿಯಿಂದ ಆಯ್ಕೆಯಾಗಲು ಅವಕಾಶ ಕೊಟ್ಟ ಪಕ್ಷಕ್ಕೂ ಹಾಗೂ ನಾನು ಪಕ್ಷೇತರರಾಗಿ ನಿಂತು ಗೆಲ್ಲಲು ಸಹಕರಿಸಿದ ಎಲ್ಲರಿಗೂ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಸ್ಪರ್ಧಿಸುವ ಅಭ್ಯರ್ಥಿಗೆ ಎಲ್ಲಾ ಮತಬಾಂಧವರೂ ಸಹಕಾರ ನೀಡಬೇಕಾಗಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಅವರು ಪತ್ರಿಕಾ ಹೇಳಿಕೆ ಯಲ್ಲಿ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw