ಅಪ್ರಾಪ್ತ ಬಾಲಕಿ ಹಾಗೂ ಆಕೆಯ ಸಹೋದರಿಗೆ ಲೈಂಗಿಕ ಕಿರುಕುಳ: ಅಪರಾಧಿಗೆ ಶಿಕ್ಷೆ ಪ್ರಕಟ - Mahanayaka

ಅಪ್ರಾಪ್ತ ಬಾಲಕಿ ಹಾಗೂ ಆಕೆಯ ಸಹೋದರಿಗೆ ಲೈಂಗಿಕ ಕಿರುಕುಳ: ಅಪರಾಧಿಗೆ ಶಿಕ್ಷೆ ಪ್ರಕಟ

kundapura
08/10/2022

ಕುಂದಾಪುರ: ಅಪ್ರಾಪ್ತ ಬಾಲಕಿ ಹಾಗೂ ಆಕೆ ಸೋದರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೇಲಿನ ದೋಷಾರೋಪಣೆಗಳು ನ್ಯಾಯಾಲಯದಲ್ಲಿ ರುಜುವಾತಾಗಿದ್ದು ಅಪರಾಧಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀನಿವಾಸ ಸುವರ್ಣ ಅವರು ತೀರ್ಪು ನೀಡಿದರು.


Provided by

2015ರಲ್ಲಿ ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಹೋಟೆಲ್ ಉದ್ಯೋಗಿಯಾಗಿದ್ದ ಕಿಶನ್ (27) ಶಿಕ್ಷೆಗೊಳಗಾದ ಅಪರಾಧಿ.

ಪ್ರಕರಣದ ವಿವರ: ಕೋಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2015 ರಲ್ಲಿ ಈ ಘಟನೆ ನಡೆದಿದ್ದು ಕಿಶನ್ ಅಪ್ರಾಪ್ತೆ ಕಾಲೇಜು ಮುಗಿಸಿ ಮನೆಗೆ ತೆರಳುವಾಗ ಅಡ್ಡಗಟ್ಟಿ ಆಕೆಯನ್ನು ಪ್ರೀತಿಸುವುದಾಗಿ ಬಲವಂತದಿಂದ ಕೈ ಹಿಡಿದು ಎಳೆದು ಲೈಂಗಿಕ ಕಿರುಕುಳ ನೀಡಿದ್ದ. ಇದಾದ ಬಳಿಕ ಆಕೆ ಸೋದರಿಯನ್ನು ಕೂಡ ಅಡ್ಡಗಟ್ಟಿದ್ದು ಆಕೆ ಆತನಿಂದ ತಪ್ಪಿಸಿಕೊಂಡಿದ್ದಳು. ಈ ಘಟನೆ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಅಂದಿನ ಪಿಎಸ್ ಐ ಕಬ್ಬಾಳರಾಜ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.


Provided by

ಮೊದಲಿಗೆ ಕುಂದಾಪುರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, 2019 ರಲ್ಲಿ ಉಡುಪಿಯಲ್ಲಿ ಪೋಕ್ಸೋ ವಿಶೇಷ ನ್ಯಾಯಾಲಯ ಸ್ಥಾಪಿತವಾದ ಬಳಿಕ ಇಲ್ಲಿಯೇ ವಿಚಾರಣೆ ಮುಂದುವರೆದಿತ್ತು. ನ್ಯಾಯಾಲಯದಲ್ಲಿ ಒಟ್ಟು 12 ಸಾಕ್ಷಿಗಳ ಪೈಕಿ 10 ಮಂದಿ ವಿಚಾರಣೆ ನಡೆದಿದ್ದು, ಸಂತ್ರಸ್ತರಿಬ್ಬರ ಸಾಕ್ಷಿ ಅಭಿಯೋಜನೆಗೆ ಪೂರಕವಾಗಿದ್ದ ಹಿನ್ನೆಲೆ ಈತನೇ ದೋಷಿ ಎಂದು ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ.

ಬಾಲಕಿ ಹಾಗೂ ಆಕೆ ಸೋದರಿಯನ್ನು ಅಕ್ರಮ ತಡೆದಿದ್ದಕ್ಕೆ ಐಪಿಸಿ ಕಲಂ  341ಗೆ  1 ತಿಂಗಳು ಸಾದಾ ಸಜೆ, ಐಪಿಸಿ ಕಲಂ 354 (ಎ), (ಬಿ) ಅಡಿಯಲ್ಲಿ 2 ವರ್ಷ ಕಠಿಣ ಸಜೆ ಹಾಗೂ 1 ಸಾವಿರ ದಂಡ, ಬೆದರಿಕೆ ಹಾಕಿದ್ದಕ್ಕೆ 506 ಅಡಿಯಲ್ಲಿ 1 ವರ್ಷ ಕಠಿಣ ಜೈಲು ಹಾಗೂ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಕ್ಕಾಗಿ ಪೋಕ್ಸೋ ಕಾಯ್ದೆಯಡಿ 1 ವರ್ಷ ಕಠಿಣ ಸಜೆ ಹಾಗೂ 1 ಸಾವಿರ ದಂಡ ವಿಧಿಸಿದ್ದು ನೊಂದ ಬಾಲಕಿಗೆ 5 ಸಾವಿರ ರೂ. ಸರ್ಕಾರ ಪರಿಹಾರ ನೀಡಬೇಕೆಂದು ಆದೇಶ ನೀಡಿದ್ದಾರೆ.

ಪ್ರಾಸಿಕ್ಯೂಶನ್ ಪರವಾಗಿ ಉಡುಪಿ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ