ಲೈಂಗಿಕ ಕಿರುಕುಳ ತಡೆಗೆ ಆಂತರಿಕ ದೂರು ಸಮಿತಿ ರಚನೆ ಕಡ್ಡಾಯ | ಕಾರ್ಮಿಕ ಅಧಿಕಾರಿ ಕುಮಾರ್
ಉಡುಪಿ: ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗೆ ಆಂತರಿಕ ದೂರು ಸಮಿತಿ ರಚನೆ ಮಾಡುವುದು ಕಡ್ಡಾಯ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಹೇಳಿದರು.
ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ಅಧಿನಿಯಮ 2019ರ ಕುರಿತು ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದಂತೆ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಗೆ ಆಂತರಿಕ ದೂರು ಸಮಿತಿ ರಚನೆ ಮಾಡುವುದು ಕಡ್ಡಾಯ, 10ಕ್ಕಿಂತ ಹೆಚ್ಚು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಸಮಿತಿ ರಚನೆಯಾಗಬೇಕು. ವಾರ್ಷಿಕ ವರದಿ ಸಲ್ಲಿಸಬೇಕು ಎಂದು ಹೇಳಿದರು.
ಜಿಲ್ಲೆಯ ಬಹುತೇಕ ಕಾರ್ಖಾನೆ, ಆಸ್ಪತ್ರೆ, ವಾಣಿಜ್ಯ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿ ರಚನೆ ಮಾಡದಿರುವುದು ಹಾಗೂ ವಾರ್ಷಿಕ ವರದಿ ಸಲ್ಲಿಸದಿರುವುದು ಗಮನಕ್ಕೆ ಬಂದಿದೆ. ಸರ್ಕಾರಿ ಸೇರಿದಂತೆ ಎಲ್ಲ ಖಾಸಗಿ ಉದ್ಯೋಗದಾತ ಸಂಸ್ಥೆಗಳು ಕಡ್ಡಾಯವಾಗಿ ಆಂತರಿಕ ದೂರು ಸಮಿತಿ ರಚಿಸಿ, ಮಹಿಳೆಯರಿಗೆ ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಇಲ್ಲದೆ ಮುಕ್ತ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದರೆ, 50 ಸಾವಿರ ದಂಡ ಪಾವತಿ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.