ಲಸಿಕೆ ನೀಡುವ ಮೂಲಕ ಕಾಲೇಜು ಆರಂಭಕ್ಕೆ ಸರ್ಕಾರ ಚಿಂತನೆ? | ಶಾಲೆ ತೆರೆಯುವುದು ಯಾವಾಗ?
ಬೆಂಗಳೂರು: ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯದ ನಿಟ್ಟಿನಲ್ಲಿ ಶಾಲೆ ಆರಂಭ ಮಾಡಬೇಕು ಎನ್ನುವ ಒತ್ತಾಯಗಳು ಕೇಳಿ ಬರುತ್ತಿರುವ ನಡುವೆಯೇ, ರಾಜ್ಯದಲ್ಲಿ ಶಾಲೆ ಆರಂಭಕ್ಕೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದ್ದು, ತಜ್ಞರ ವರದಿಯನ್ನಾಧರಿಸಿ ಸರ್ಕಾರ ಶಾಲೆ ಆರಂಭ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಶಾಲೆಗಳ ಆರಂಭಕ್ಕೆ ಸಂಬಂಧಿಸಿದಂತೆ ನಿನ್ನೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾತನಾಡಿ, ಸದ್ಯಕ್ಕೆ ಶಾಲೆಗಳನ್ನು ಆರಂಭಿಸುವುದಿಲ್ಲ. ಹಂತ ಹಂತವಾಗಿ ಶಾಲೆಗಳನ್ನು ಆರಂಭ ಮಾಡಲು ಚಿಂತಿಸಲಾಗಿದೆ ಎಂದು ತಿಳಿಸಿದ್ದರು.
ಮಕ್ಕಳ ದೈಹಿಕ, ಮಾನಸಿಕ ಆರೋಗ್ಯ ಮಾತ್ರವಲ್ಲದೇ ಬಾಲಕಾರ್ಮಿಕ, ಬಾಲ್ಯವಿವಾಹ, ಮಕ್ಕಳ ಕಳ್ಳ ಸಾಗಣೆ ಮೊದಲಾದ ಸಮಸ್ಯೆಗಳು ಉದ್ಬವಿಸುತ್ತಿದ್ದು, ಹಾಗಾಗಿ ಶಾಲೆ ಆರಂಭ ಮಾಡಲೇ ಬೇಕು ಎನ್ನುವ ಒತ್ತಾಯಗಳು ಕೇಳಿ ಬಂದಿವೆ.
ಪೋಷಕರು, ಶಿಕ್ಷಕರು, ಸಿಬ್ಬಂದಿಗೆ ಲಸಿಕೆ ನೀಡಿ ಶಾಲೆಗಳನ್ನು ಆರಂಭಿಸಲು ಕ್ರಮಕೈಗೊಳ್ಳಬೇಕೆಂದು ಸರ್ಕಾರಕ್ಕೆ ತಜ್ಞರು ಸಲಹೆ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. ಮಕ್ಕಳ ವೈದ್ಯಕೀಯ ಭದ್ರತೆಯೊಂದಿಗೆ ಶಾಲೆ ಆರಂಭಕ್ಕೆ ಸರ್ಕಾರ ಮುಂದಾಗಬೇಕು ಎಂದು ಕೂಡ ತಜ್ಞರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ ಉನ್ನತ ಶಿಕ್ಷಣ ಕಾಲೇಜುಗಳನ್ನು ಆರಂಭಿಸುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಆದರೆ, ಸದ್ಯಕ್ಕೆ ಒಂದರಿಂದ ಹತ್ತನೇ ತರಗತಿ ಶಾಲೆಗಳನ್ನು ಆರಂಭಿಸುವ ಬಗ್ಗೆ ಸದ್ಯಕ್ಕೆ ಯೋಚಿಸಿಲ್ಲ ಎಂದು ಹೇಳಲಾಗಿದೆ.