ಲಸಿಕೋತ್ಸವ ಮರೆತುಬಿಡಿ ; ನೀತಿಯೇ ನಿಷ್ಪ್ರಯೋಜಕವಾಗಿದೆ - Mahanayaka
1:08 AM Wednesday 11 - December 2024

ಲಸಿಕೋತ್ಸವ ಮರೆತುಬಿಡಿ ; ನೀತಿಯೇ ನಿಷ್ಪ್ರಯೋಜಕವಾಗಿದೆ

na divakara
18/05/2021

ಮೂಲ : ಪಾರ್ಥ ಮುಖೋಪಾಧ್ಯಾಯ

 ಅನುವಾದ : ನಾ ದಿವಾಕರ

ಕೋವಿದ್ 19 ನಿರ್ವಹಣೆಯನ್ನು ಕುರಿತು ಸುಪ್ರೀಂಕೋರ್ಟ್ ಸ್ವಪ್ರೇರಣೆಯ ಮೊಕದ್ದಮೆಯನ್ನು ಕೈಗೆತ್ತಿಕೊಂಡ ನಂತರ, ವಿಚಾರಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮೇ 9ರಂದು ಸಲ್ಲಿಸಿದ ಪ್ರಮಾಣಪತ್ರದಲ್ಲಿ ತನ್ನ ಲಸಿಕೆ ನೀತಿಯನ್ನು ಪರಿಷ್ಕರಿಸಿ, ಜಾರಿಯಲ್ಲಿರಿಸಲು ಅನುಮತಿ ಕೋರಿದೆ. ನ್ಯಾಯಮೂರ್ತಿ ಹೋಮ್ಸ್ ಅವರ ಮಾತುಗಳಲ್ಲೇ ಹೇಳುವುದಾದರೆ ಈಗ ಸುಪ್ರೀಂಕೋರ್ಟ್ “ ಯಂತ್ರದ ಕೀಲುಗಳನ್ನು ಚಾಲ್ತಿಯಲ್ಲಿಡಲು ಯಂತ್ರವನ್ನು ಚಾಲನೆಯಲ್ಲಿ ಇಡಬೇಕಿದೆ. ” ಈ ಸಂದರ್ಭದಲ್ಲಿ ಲಸಿಕೋತ್ಸವದ ಮುಂದುವರಿಕೆಯೂ ಅಪ್ರಸ್ತುತ ಎನಿಸುತ್ತದೆ.. ಏಕೆಂದರೆ ಈ ಯಂತ್ರವೇ ನಿಷ್ಪ್ರಯೋಜಕವಾಗಿದ್ದು ಕೈಬಿಡಬೇಕಿದೆ. ಕೇಂದ್ರ ಸರ್ಕಾರ ಕೂಡಲೇ ತನ್ನ ಲಸಿಕೆಯ ನೀತಿಯನ್ನು ಪರಿಷ್ಕರಿಸುವುದೇ ಅಲ್ಲದೆ ಎಲ್ಲ ರಾಜ್ಯಗಳಿಗೂ ಸಮಾನ ಹಂಚಿಕೆ ಮಾಡುವಂತಹ ಹೊಸ ಲಸಿಕೆ ನೀತಿಯನ್ನು ಈ ಕೂಡಲೇ ಜಾರಿಗೊಳಿಸಬೇಕಿದೆ.

 ನೀತಿ ಪರಿಷ್ಕರಣೆ ಏಕೆ ಬೇಕು ?

45 ವರ್ಷಕ್ಕೂ ಮೇಲ್ಪಟ್ಟವರಿಗೆ ಆದ್ಯತೆಯ ಮೇಲೆ ಲಸಿಕೆಯನ್ನು ನೀಡುವ ನೀತಿಯನ್ನು ಬದಿಗಿರಿಸಿ ಎಲ್ಲ ವಯಸ್ಕರಿಗೂ ಲಸಿಕೆ ನೀಡಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರಗಳು ಕೋರಿಕೆ ಸಲ್ಲಿಸಿರುವುದೇ ಮತಿಹೀನ ಕ್ರಮ. ಆದರೆ ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರವನ್ನು ನೋಡಿದರೆ, ಸರ್ಕಾರ ಬಹಳ ನಾಜೂಕಾಗಿ ತನ್ನ ಅಭಿಪ್ರಾಯವನ್ನು ಸಲ್ಲಿಸಿರುವಂತೆ ತೋರುತ್ತದೆ. ಉದಾರವಾಗಿ ಸಮಸ್ತ ವಯಸ್ಕರಿಗೂ ಲಸಿಕೆ ನೀಡುವ ಹೊಸ ನೀತಿಯನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಈ ಪ್ರಮಾಣಪತ್ರದಲ್ಲೇ ಮೂರು ಕಾರಣಗಳನ್ನು ಗುರುತಿಸಬಹುದು.

ಮೊದಲನೆಯದಾಗಿ, ಇದು ಯಾವುದೇ ರೀತಿಯಲ್ಲಿ ಸಮರ್ಥನೀಯವಲ್ಲ, ಅಂತರರಾಷ್ಟ್ರೀಯ ಮಟ್ಟದಲ್ಲಿ ಅನುಸರಿಸುತ್ತಿರುವ ನೀತಿಗೆ ವ್ಯತಿರಿಕ್ತವಾದುದು. ಮತ್ತು ಕಟು ಶಬ್ದಗಳಲ್ಲಿ ಹೇಳುವುದಾದರೆ ಇದು ಅವಿವೇಕದ ಕ್ರಮ.

ಎರಡನೆಯದಾಗಿ, ಆಂತರಿಕವಾಗಿ ನೋಡಿದಾಗಲೂ ಇದು ಅಸಂಬದ್ಧ ಎನಿಸುವುದೇ ಅಲ್ಲದೆ ಅಸಂಗತವಾದುದೂ ಹೌದು. ಪ್ರತಿಯೊಂದು ರಾಜ್ಯಕ್ಕೆ ಒದಗಿಸುವ ಲಸಿಕೆಯ ಪ್ರಮಾಣ ಮತ್ತು ದರ ಎರಡನ್ನೂ ಕೇಂದ್ರವೇ ನಿಯಂತ್ರಿಸುತ್ತಲೇ ಉದಾರ ನೀತಿಯನ್ನು ಪ್ರತಿಪಾದಿಸುವುದೇ ಅಸಂಬದ್ಧತೆಗೆ ಸಾಕ್ಷಿ. ಹಾಗಾಗಿಯೇ ಪ್ರಸ್ತುತ ಸಂದರ್ಭದಲ್ಲಿ ಈ ಉದಾರ ನೀತಿಯು ಸಮಂಜಸವಾಗಿ ಕಂಡುಬರುತ್ತಿಲ್ಲ. ಲಸಿಕೆಯ ಎರಡನೆ ಡೋಸ್ ನೀಡದಿರುವ ರಾಜ್ಯಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಈಗಾಗಲೇ ಕೇಂದ್ರ ಸರ್ಕಾರ ಎಚ್ಚರಿಕೆ ನೀಡುತ್ತಿದೆ.

ಮೂರನೆಯ ಕಾರಣವೆಂದರೆ, ತನ್ನ ಪ್ರಮಾಣ ಪತ್ರದಲ್ಲಿ ಕೇಂದ್ರ ಸರ್ಕಾರ ತನ್ನ ಎದುರಿರುವ ಸಮಸ್ಯೆಯನ್ನು ನೇರವಾಗಿ ಪ್ರಸ್ತಾಪಿಸುವ ಬದಲು ಕಾನೂನು ಕೈಚಳಕ ತೋರಿಸುವ ಮೂಲಕ ತನ್ನ ವಾದವನ್ನು ಸಮರ್ಥಿಸಿಕೊಳ್ಳುತ್ತಿದೆ.

ಈ ಮುನ್ನ ಪೈಪೋಟಿಯ ಮಾರುಕಟ್ಟೆಯಲ್ಲಿ ಹಲವು ಉತ್ಪಾದಕರು ರೆಮಿಡಿಸಿವಿರ್ ಔಷಧಿಯನ್ನು ತಯಾರಿಸುತ್ತಿದ್ದರು. ಈಗ ಯಾವ ಉತ್ಪಾದಕ ಕಂಪನಿಯು ರೆಮಿಡಿಸಿವಿರ್ ಮಾತ್ರೆಗಳನ್ನು ಉತ್ಪಾದಿಸಬೇಕು ಎಂದು ನಿರ್ಧರಿಸುವುದರಲ್ಲಿ ಕೇಂದ್ರ ಸರ್ಕಾರ ನಿರತವಾಗಿದೆ. ಹಾಗೆಯೇ ಯಾವ ರಾಜ್ಯಕ್ಕೆ ಎಷ್ಟು ಸರಬರಾಜು ಮಾಡಬೇಕು, ಯಾವ ದರ ನಿಗದಿಪಡಿಸಬೇಕು ಎಂದು ನಿಗದಿಪಡಿಸಲು ಯೋಚಿಸುತ್ತಿದೆ. ಮತ್ತೊಂದೆಡೆ ಸದ್ಯಕ್ಕೆ ಎರಡೇ ಪೂರೈಕೆದಾರರನ್ನು ಹೊಂದಿರುವ ಲಸಿಕೆಯನ್ನು ನಿಯಂತ್ರಣಮುಕ್ತವಾಗಿ ಸರಬರಾಜು ಮಾಡಲು ಯೋಚಿಸುತ್ತಿದೆ. ಇದೇ ಸಂದರ್ಭದಲ್ಲಿ 18 ರಿಂದ 45 ವರ್ಷದ ವಯಸ್ಕರನ್ನು ಲಸಿಕೆಯ ಯೋಜನೆಯಲ್ಲಿ ಸೇರ್ಪಡಿಸುವ ಮೂಲಕ ಈಗಾಗಲೇ ಲಸಿಕೆ ಪಡೆಯಲು ಕಾಯುತ್ತಿರುವ 20 ಕೋಟಿ ಜನತೆಗೆ ಇನ್ನೂ 60 ಕೋಟಿ ಜನರನ್ನು ಸೇರಿಸಲಾಗಿದೆ. ಈ ಸಂದರ್ಭದಲ್ಲಿ ವಿಭಿನ್ನ ದರಗಳನ್ನು ವಿಧಿಸುವ ಮೂಲಕ ಮಾರುಕಟ್ಟೆ ಪೈಪೋಟಿಯನ್ನು ಉತ್ತೇಜಿಸುವುದು ಸಮರ್ಥನೀಯವಲ್ಲ.

ಇತರ ಎಲ್ಲ ದೇಶಗಳಲ್ಲೂ ರಾಷ್ಟ್ರೀಯ ಸರ್ಕಾರವೇ ಲಸಿಕೆಯನ್ನು ಖರೀದಿಸುತ್ತಿದೆ. ಇಂಡೋನೇಷಿಯಾ ಮತ್ತು ಫಿಲಿಪೈನ್ಸ್ ದೇಶಗಳಲ್ಲಿ ಮಾತ್ರ ಕಾರ್ಪೋರೇಟ್ ಉದ್ದಿಮೆಗಳು ತಮ್ಮ ಸಿಬ್ಬಂದಿ ವರ್ಗದವರಿಗೆ ನೀಡಲು ಲಸಿಕೆಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ ಖರೀದಿಸಲು ಅವಕಾಶ ನೀಡಲಾಗುತ್ತಿದೆ. ಲಸಿಕೆಯ ಉತ್ಪಾದನೆಯ ಹಂತದಲ್ಲಿ ಪುಣೆಯಲ್ಲಿರುವ ಐಸಿಎಂಆರ್-ಎನ್‍ಐವಿ ಸಂಸ್ಥೆಯ ಆಶ್ರಯದಲ್ಲಿಯೇ ಹೆಚ್ಚಿನ ಯಶಸ್ಸು ಸಾಧಿಸಲಾಗಿದೆ ಎಂಬ ಅರಿವಿದ್ದರೂ, ಕೋವ್ಯಾಕ್ಸಿನ್ ಲಸಿಕೆಗೆ ಹೆಚ್ಚಿನ ಉತ್ಪಾದನೆಯ ಪರವಾನಗಿ ಏಕೆ ನೀಡಲಾಗಿಲ್ಲ ಎನ್ನುವ ಪ್ರಶ್ನೆ, ಬಹುಶಃ ಪ್ರಶ್ನೆಯಾಗಿಯೇ ಉಳಿಯಲಿದೆ.

ರಾಜ್ಯಗಳು ತೆರಬೇಕಾಗುವ ಹೆಚ್ಚಿನ ದರ

ತನ್ನ ಪ್ರಮಾಣಪತ್ರದಲ್ಲಿ ಕೇಂದ್ರ ಸರ್ಕಾರವು, “ ಕೇಂದ್ರ ಸರ್ಕಾರ ಬೃಹತ್ ಪ್ರಮಾಣದ ವ್ಯಾಪಕವಾದ ಲಸಿಕಾ ಯೋಜನೆಯನ್ನು ಹಮ್ಮಿಕೊಂಡಿರುವುದರಿಂದ, ರಾಜ್ಯ ಸರ್ಕಾರಗಳು ಮತ್ತು ಖಾಸಗಿ ಆಸ್ಪತ್ರೆಗಳಿಗಿಂತಲೂ ಕೇಂದ್ರವೇ ಹೆಚ್ಚಿನ ಪ್ರಮಾಣದ ಲಸಿಕೆಗಳಿಗಾಗಿ ಬೇಡಿಕೆಯನ್ನು ಸಲ್ಲಿಸುತ್ತದೆ. ಈ ವಾಸ್ತವ ಸನ್ನಿವೇಶವೇ ದರ ನಿಗದಿಯ ಮಾತುಕತೆಗಳಲ್ಲೂ ಬಿಂಬಿತವಾಗುತ್ತದೆ ,,,,, ” ಎಂದು ಹೇಳುತ್ತದೆ. ಅಂದರೆ ರಾಜ್ಯ ಸರ್ಕಾರ ಅಥವಾ ಖಾಸಗಿ ಆಸ್ಪತ್ರೆಗಳಿಗಿಂತಲೂ ಕಡಿಮೆ ದರದಲ್ಲಿ ಕೇಂದ್ರ ಲಸಿಕೆ ಖರೀದಿಸಬಹುದು ಎಂದರ್ಥ. ಹಾಗಾದಲ್ಲಿ ಏಪ್ರಿಲ್ 30ರವರೆಗೂ ಮಾಡಿದಂತೆ ಕೇಂದ್ರ ಸರ್ಕಾರವೇ ಏಕೆ ಲಸಿಕೆ ಖರೀದಿಸಿ ವಿತರಣೆ ಮಾಡಬಾರದು ?

ಮತ್ತೊಂದು ನಿಯಮದ ಅನುಸಾರ, 45 ವರ್ಷಕ್ಕೆ ಮೇಲ್ಪಟ್ಟವರಿಗಾಗಿ ಖರೀದಿಸುವ ಲಸಿಕೆಯಲ್ಲಿ ಶೇ 50ರಷ್ಟನ್ನು ಕೇಂದ್ರ ಸರ್ಕಾರವೇ ಖರೀದಿಸಿ ರಾಜ್ಯಗಳಿಗೆ ಹಂಚುತ್ತದೆ. ರಾಜ್ಯ ಸರ್ಕಾರಗಳು ಒಟ್ಟು ಉತ್ಪಾದನೆಯಾಗುವ ಲಸಿಕೆಯಲ್ಲಿ ಶೇ 25ರಷ್ಟನ್ನು ಖರೀದಿಸಿ ಬಳಸಬೇಕಾಗುತ್ತದೆ. ರಾಜ್ಯಗಳಿಗೆ ಎಷ್ಟು ಪ್ರಮಾಣದ ಲಸಿಕೆ ಪೂರೈಸಲಾಗುತ್ತದೆ ಎನ್ನುವುದನ್ನು ಪ್ರತಿಯೊಂದು ರಾಜ್ಯಕ್ಕೂ ಮುಂಚಿತವಾಗಿಯೇ ತಿಳಿಸಲಾಗಿರುತ್ತದೆ,,, ಎಂದೂ ಹೇಳಲಾಗಿದೆ. “ ಲಸಿಕೆ ಉತ್ಪಾದಕ ಕಂಪನಿಗಳೊಡನೆ ಅನೌಪಚಾರಿಕ ಮಾತುಕತೆಗಳನ್ನು ನಡೆಸುವ ಮೂಲಕ ಎಲ್ಲ ರಾಜ್ಯಗಳಿಗೂ ಸಮಾನ ಬೆಲೆಯಲ್ಲಿ ವಿತರಿಸಲು ಸೂಚಿಸಲಾಗಿದೆ,,,” ಎಂದೂ ಹೇಳಲಾಗಿದೆ. ಅಂದರೆ ಕೇಂದ್ರ ಸರ್ಕಾರ ಲಸಿಕೆಯ ಪ್ರಮಾಣ ಮತ್ತು ದರ ಎರಡನ್ನೂ ನಿರ್ಧರಿಸಿದೆ ಎಂದರೆ ಇದು ಉದಾರ ನೀತಿ ಎನಿಸಿಕೊಳ್ಳುವುದಿಲ್ಲ.

ಪ್ರತಿಯೊಂದು ರಾಜ್ಯದಲ್ಲಿ ಲಭಿಸುವ ಉಳಿದ ಶೇ 25ರಷ್ಟು ಲಸಿಕೆಗಳು ಖಾಸಗಿ ಕ್ಷೇತ್ರ ಮತ್ತು ಲಸಿಕೆ ಉತ್ಪಾದಕರ ನಡುವೆ ಏರ್ಪಟ್ಟ ಒಪ್ಪಂದಗಳಿಗೆ ಅನುಗುಣವಾಗಿ, ಖಾಸಗಿ ಆಸ್ಪತ್ರೆಗಳಿಗೆ ಲಭಿಸುತ್ತವೆ. ಇಲ್ಲಿ ಉದ್ಭವಿಸುವ ಪ್ರಶ್ನೆ ಎಂದರೆ ಈ ಒಪ್ಪಂದಗಳು ರಾಜ್ಯಮಟ್ಟದಲ್ಲಿ ನಡೆಯದೆ ಕಾರ್ಪೋರೇಟ್ ಮಟ್ಟದಲ್ಲಿ ನಡೆಯುವುದರಿಂದ ಖಾಸಗಿ ಕ್ಷೇತ್ರದ ಲಕ್ಷಣವನ್ನು ಹೇಗೆ ನಿಷ್ಕರ್ಷೆ ಮಾಡಲು ಸಾಧ್ಯ ? ಒಂದು ವೇಳೆ ಖಾಸಗಿ ಕ್ಷೇತ್ರ ಲಸಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಬಳಸಲು ಸಾಧ್ಯವಾಗದಿದ್ದರೆ ಏನಾಗುತ್ತದೆ ? ಈ ಪ್ರಶ್ನೆಗಳ ನಡುವೆಯೇ ಗಮನಿಸಬೇಕಾದ ಅಂಶ ಎಂದರೆ ಕೋವಿನ್ ವೆಬ್ ತಾಣಗಳ ಸಂಖ್ಯೆಯಲ್ಲಿ ಖಾಸಗಿ ಕ್ಷೇತ್ರದ ಪ್ರಮಾಣ ಮೊದಲು ಶೇ 10ರಷ್ಟಿದ್ದುದು ಈಗ ಶೇ 3ರಷ್ಟಾಗಿದೆ. ಕೆಲವು ದಿನಗಳ ಹಿಂದೆ ಬಿಹಾರದಲ್ಲಿ ಒಂಬತ್ತು, ಚಂದಿಘಡದಲ್ಲಿ 32 ಮತ್ತು ಅನರುಣಾಚಲ ಪ್ರದೇಶದಲ್ಲಿ ಒಂದೂ ತಾಣ ಇರಲಿಲ್ಲ. ಖಾಸಗಿ ಕ್ಷೇತ್ರದ ಅಸ್ತಿತ್ವ ನಗರ ಪ್ರದೇಶಗಳಲ್ಲೇ ಹೆಚ್ಚಿರುವುದರಿಂದ ವಿತರಣೆಯೂ ನಗರ ಕೇಂದ್ರಿತವೇ ಆಗಿರುತ್ತದೆ.

ಈ ಹಿನ್ನೆಲೆಯಲ್ಲಿ ನೋಡಿದಾಗ, ಶೂನ್ಯ ವೆಚ್ಚದಲ್ಲಿ ಸಂಪೂರ್ಣ ಉತ್ಪಾದನೆಯನ್ನು ಮಾಡುವ ಬದಲು, ರಾಜ್ಯಗಳು ಉತ್ಪಾದನೆಯ ಶೇ 25ರಷ್ಟನ್ನು ದುಪ್ಪಟ್ಟು ದರ ಅಥವಾ ಇನ್ನೂ ಹೆಚ್ಚಿನ ಬೆಲೆ ಕೊಟ್ಟು ಖರೀದಿಸಬೇಕಿದೆ. ಉಳಿದ ಕಾಲು ಭಾಗವನ್ನು ಖಾಸಗಿ ಕ್ಷೇತ್ರವು, ಮೊದಲಿಗಿಂತಲೂ ಹತ್ತು ಪಟ್ಟು ಹೆಚ್ಚಿನ ಬೆಲೆ ನೀಡಿ ಆಕ್ರಮಿಸುತ್ತದೆ. ಎಲ್ಲರಿಗೂ ಲಸಿಕೆ ನೀಡುವ ಘೋಷಣೆ ಮಾಡಿದ ರಾಜ್ಯಗಳಿಗೆ ತಮ್ಮ ಘೋಷಣೆ ಇಷ್ಟು ದುಬಾರಿಯಾದೀತು ಎಂಬ ಊಹೆಯೂ ಇರಲಿಕ್ಕಿಲ್ಲ.

ಕೇಂದ್ರದ ಕಳಪೆ ಸಾಧನೆ

ಆದರೆ ರಾಜ್ಯಗಳು ಇತರ ಮೂಲಗಳಿಂದ ಲಸಿಕೆಯನ್ನು ಪಡೆಯಬಹುದೇ ? ಈಗಾಗಲೇ ಜಾಗತಿಕ ಟೆಂಡರ್ ಮೂಲಕ ಖರೀದಿಸಲು ಯತ್ನಿಸುತ್ತಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪ್ರಮಾಣ ಪತ್ರದಲ್ಲಿ “ ಈಗ ಸದ್ಯಕ್ಕೆ ಇತರ ದೇಶಗಳಿಂದ ಇತರ ಲಸಿಕೆಗಳನ್ನು ಖರೀದಿಸುವ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದಾಗಿರುತ್ತದೆ,,,, ಕಳೆದ ವರ್ಷದ ಕೊನೆಯ ತ್ರೈಮಾಸಿಕದಿಂದಲೇ ಈ ಕುರಿತು ಮಾತುಕತೆಗಳು ನಡೆಯುತ್ತಿವೆ,,,,ಸದ್ಯದ ಪರಿಸ್ಥಿತಿಯಲ್ಲಿ ಸಮರೋಪಾದಿಯಲ್ಲಿ ಈ ಪ್ರಯತ್ನಗಳು ನಡೆಯುತ್ತಿದ್ದು ರಾಜತಾಂತ್ರಿಕ ಮಾರ್ಗಗಳನ್ನೂ ಒಳಗೊಂಡಂತೆ ಎಲ್ಲ ಸಂಪನ್ಮೂಲಗಳನ್ನೂ ಬಳಸಿಕೊಂಡು ಮಾತುಕತೆಗಳನ್ನು ನಡೆಸಲಾಗುತ್ತಿದೆ ” ಎಂದು ಹೇಳುತ್ತದೆ. ಇದರ ಅರ್ಥ ಏನೆಂದರೆ ಕಳೆದ ಆರು ತಿಂಗಳಿನಿಂದಲೂ ಕೇಂದ್ರ ಸರ್ಕಾರ ಈ ಪ್ರಯತ್ನ ನಡೆಸುತ್ತಿದೆ ಆದರೆ ಶೂನ್ಯ ಸಾಧನೆ ಎಂದಷ್ಟೆ. ಈ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರಗಳನ್ನು ಸುಂದರ ಭ್ರಮೆಗೊಳಪಡಿಸಲಾಗುತ್ತಿದೆ ಎನ್ನಬಹುದು ಅಥವಾ ರಾಜ್ಯ ಸರ್ಕಾರಗಳು ಅಷ್ಟೊಂದು ಅಮಾಯಕ ಎಂದು ಹೇಳಲಾಗದಿದ್ದರೆ, ಈ ಸರ್ಕಾರಗಳ ಜಾಗತಿಕ ಟೆಂಡರ್ ಗಳು ಕೇವಲ ನಾಮಕಾವಸ್ಥೆ ಎನ್ನಬಹುದು.

ಅಂತಿಮವಾಗಿ, ಮನೆಮನೆಗೆ ತಲುಪಿ ಲಸಿಕೆ ನೀಡುವ ಯೋಜನೆಯ ಬಗ್ಗೆ ಪ್ರಮಾಣಪತ್ರದಲ್ಲಿ ಕಾನೂನು ಕೈಚಳಕವನ್ನು ಸ್ಪಷ್ಟವಾಗಿ ಗುರುತಿಸಬಹುದು. ಇದು ಕಷ್ಟ ಸಾಧ್ಯ ಎನ್ನುವುದು ನಿರ್ವಿವಾದ ಅಂಶ. ಆದರೆ ಜನರು ಲಸಿಕೆಯನ್ನು ಸುಲಭವಾಗಿ ಪಡೆಯುವಂತೆ ಮಾಡಲು ಪ್ರತಿಯೊಂದು ಬ್ಲಾಕ್‍ಗಳಲ್ಲೂ, ಸಮುದಾಯ ಕೇಂದ್ರಗಳಲ್ಲಿ, ಕೋವಿದ್ ನಿಯಮಗಳನ್ನು ಪಾಲಿಸುವುದರ ಮೂಲಕವೇ ಅನುಕೂಲ ಮಾಡಿಕೊಡುವ ಉತ್ಸಾಹ ತೋರಬಹುದಿತ್ತು. ಬದಲಾಗಿ, ಮನೆಮನೆಗೆ ಲಸಿಕೆ ತಲುಪಿಸುವ ಅನಗತ್ಯ ಕ್ರಮವನ್ನು ಅಲ್ಲಗಳೆಯುತ್ತಲೇ, ಈ ಪ್ರಮಾಣ ಪತ್ರದಲ್ಲಿ ಸರ್ಕಾರವು “ ಕೇಂದ್ರ ಸರ್ಕಾರವು ತನ್ನ ನೀತಿಯನ್ನು ಪರಿಷ್ಕರಿಸಿ ಶೇ 100ರಷ್ಟು ಲಸಿಕೆಯನ್ನು ತಾನೇ ಖರೀದಿಸಿ ರಾಜ್ಯಗಳಿಗೆ ಸಮನಾಗಿ ಹಂಚುತ್ತದೆಯೇ ” ಎಂಬ ನ್ನು ಒಮ್ಮೆಲೇ ನಿರಾಕರಿಸಿದೆ. ಈ ನಿರಾಕರಣೆಯನ್ನೂ ನಯವಾಗಿಯೇ ಸೂಚಿಸಲಾಗಿದ್ದು “ ಈ ಪ್ರಶ್ನೆಗೆ ಉತ್ತರವನ್ನು ಈ ಮೇಲೆ ಉಲ್ಲೇಖಿಸಲಾಗಿದೆ ” ಎಂದು ಹೇಳುತ್ತದೆ. ಮೇಲಿನ ಯಾವ ಪುಟದಲ್ಲೂ ಈ ನಿಟ್ಟಿನಲ್ಲಿ ಉತ್ತರ ದೊರೆಯುವುದಿಲ್ಲ !!!

ಈ ರೀತಿಯ ಸಮಾನ ಹಂಚಿಕೆಗೆ ಅಗತ್ಯವಾದ ನಂಬಿಕೆ ಮತ್ತು ವಿಶ್ವಾಸ ಕೇಂದ್ರ ಮತ್ತು ರಾಜ್ಯಗಳ ನಡುವೆ ಉಳಿದಿಲ್ಲವೇ? ಹಾಗಿದ್ದಲ್ಲಿ ಈ ಅಪನಂಬಿಕೆಯನ್ನು ಇನ್ನೂ ಹೆಚ್ಚು ಮಾಡಿ ವಿಘಟನೆಯತ್ತ ಸಾಗುವುದಕ್ಕಿಂತಲೂ, ವಿಶ್ವಾಸವನ್ನು ಗಳಿಸುವುದು ಆದ್ಯತೆಯಾಗಬೇಕು. ಈ ಹಿನ್ನೆಲೆಯಲ್ಲಿ ನೋಡಿದಾಗ ಕೇಂದ್ರ ಸರ್ಕಾರದ ಉದಾರ ಲಸಿಕೆ ನೀತಿ ಸಾಧಿಸಿರುವುದಾದರೂ ಏನು ? ಲಸಿಕೆ ಉತ್ಪಾದಿಸುವ ಕಂಪನಿಯ ಆದಾಯವನ್ನು ಹೆಚ್ಚಿಸಿದೆಯಷ್ಟೆ. ರಾಜ್ಯ ಸರ್ಕಾರಗಳು ಮತ್ತು ಖಾಸಗಿ ವಲಯ ಪಾವತಿಸಬೇಕಿರುವ ದರದಲ್ಲಿ ಕೋವ್ಯಾಕ್ಸಿನ್‍ಗೆ ಒಂದು ಡೋಸ್‍ಗೆ 477 ರೂ, ಕೋವಿಷೀಲ್ಡ್ ಒಂದು ಡೋಸ್‍ಗೆ 302 ನಿಗದಿಪಡಿಸುವ ಮೂಲಕ ಕಂಪನಿಗಳ ಆದಾಯ ಹೆಚ್ಚಿಸಲಾಗಿದೆ.

ಸರಾಸರಿ ಹೊರೆಯ ಆಧಾರದಲ್ಲಿ ದರವನ್ನು ನಿಗದಿಪಡಿಸುವಾಗ, ಲಸಿಕೆ ಪೂರೈಕೆಯನ್ನು ಕೇಂದ್ರಕ್ಕೆ ಶೇ 50, ರಾಜ್ಯಗಳಿಗೆ ಶೇ 25 ಮತ್ತು ಖಾಸಗಿ ಕ್ಷೇತ್ರಕ್ಕೆ ಶೇ 25 ಎಂದು ನಿಗದಿಪಡಿಸಿ ಲೆಕ್ಕ ಮಾಡಲಾಗುತ್ತದೆ ಎಂದು ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ. ಉತ್ಪಾದಕ ಕಂಪನಿಗಳು ಕೋವ್ಯಾಕ್ಸಿನ್ ಮತ್ತು ಕೋವಿಷೀಲ್ಡ್ ಎರಡನ್ನೂ ಕೇಂದ್ರ ಸರ್ಕಾರಕ್ಕೆ 154 ರೂನಂತೆ ಪೂರೈಕೆ ಮಾಡಬೇಕು. ಕೋವ್ಯಾಕ್ಸಿನ್ ಲಸಿಕೆಯನ್ನು ರಾಜ್ಯ ಸರ್ಕಾರಗಳಿಗೆ 400 ರೂನಂತೆ ಮತ್ತು ಖಾಸಗಿ ಕ್ಷೇತ್ರಕ್ಕೆ 1200 ರೂನಂತೆ, ಕೋವಿಷೀಲ್ಡ್ ಲಸಿಕೆಯನ್ನು ರಾಜ್ಯ ಸರ್ಕಾರಗಳಿಗೆ 300 ರೂನಂತೆ, ಖಾಸಗಿ ಕ್ಷೇತ್ರಕ್ಕೆ 600 ರೂನಂತೆ ಪೂರೈಸಬೇಕು ಎಂದು ನಿಗದಿಪಡಿಸಲಾಗಿದೆ.

ಈ ಬೆಲೆಗಳು ಸ್ವಾಭಾವಿಕವಾಗಿಯೇ ಹೆಚ್ಚಾಗಿ ಕಾಣುತ್ತದೆ. ಈ ಕಂಪನಿಗಳ ಆದಾಯವನ್ನು ಹೆಚ್ಚಿಸಬೇಕಾದರೆ ಕೇಂದ್ರ ಸರ್ಕಾರಕ್ಕೆ ನಿಗದಿಯಾಗಿರುವ 154 ರೂಗಳನ್ನು ಮತ್ತಷ್ಟು ಹೆಚ್ಚಿಸಬೇಕಾಗುತ್ತದೆ. ಇದರಿಂದ ಉತ್ಪಾದಕರು ಜಾಗತಿಕವಾಗಿ ಮಾರಾಟ ಮಾಡಲು ಹೆಚ್ಚಿನ ಉತ್ಪಾದನೆ ಮಾಡಬಹುದು ಮತ್ತು ಅಂತರಿಕವಾಗಿಯೂ ಶೇ 100ರಷ್ಟು ಬೇಡಿಕೆಯನ್ನು ಪೂರೈಸಲೂಬಹುದು. ಈ ಹೊಸ ಜಟಿಲ ನೀತಿಗಳ ಹೊರತಾಗಿಯೂ ರಾಜ್ಯ ಸರ್ಕಾರಗಳು ಹೆಚ್ಚಿನ ಹೊರೆಯನ್ನು ಭರಿಸಲು ಸಾಧ್ಯವಾಗುತ್ತದೆ. ಕಳೆದ ವರ್ಷ ಮೂಲ ಸೌಕರ್ಯಗಳಿಗಾಗಿ ಕೇಂದ್ರ ವಿತ್ತಸಚಿವಾಲಯ ಘೋಷಿಸಿದ ಬಡ್ಡಿ ರಹಿತ ಸಾಲಗಳನ್ನು ಐವತ್ತು ವರ್ಷಗಳ ಅವಧಿಗಾಗಿ ರಾಜ್ಯ ಸರ್ಕಾರಗಳಿಗೆ ನೀಡುವುದರ ಮೂಲಕ ಕೇಂದ್ರ ಸರ್ಕಾರ ಈ ಹೊರೆಯನ್ನು ನೀಗಿಸಲು ನೆರವಾಗಬಹುದು.

ಲಸಿಕೆಯನ್ನು ಖಾಸಗಿ ಕ್ಷೇತ್ರಗಳ ಮೂಲಕ, ಕಾರ್ಪೋರೇಟ್ ಕ್ಷೇತ್ರದ ಮೂಲಕ ಪಡೆಯುವ ಸಾಮರ್ಥ್ಯ ಇದ್ದವರು ಮುಂದುವರೆಯಬಹುದು ಎಂದು ಕೇಂದ್ರ ಆರೋಗ್ಯ ಸಚಿವರು ಸ್ಪಷ್ಟವಾಗಿ ಹೇಳಿದ್ದಾಗಿದೆ. ಈ ನೀತಿಯನ್ನು ಒಪ್ಪಿಕೊಳ್ಳುವುದೇ ಆದರೆ, ಪೂರೈಕೆಯ ಪ್ರಮಾಣವನ್ನು ನಂಬಲು ಸಾಧ್ಯವಾಗುವುದಿಲ್ಲ. ಲಸಿಕೆಗಳು ದುಬಾರಿಯಾಗುತ್ತವೆ. ಇದರಿಂದ ವಿವಿಧ ರಾಜ್ಯಗಳಿಗೆ ಹೆಚ್ಚಿನ ಹೊರೆಯಾಗುವುದೇ ಅಲ್ಲದೆ, ಬಡ ಜನತೆ ಲಸಿಕೆಗಾಗಿ ನಿಲ್ಲುವ ಸಾಲುಗಳ ಅಂಚಿಗೆ ತಳ್ಳಲ್ಪಡುತ್ತಾರೆ. ಅಲ್ಲವೇ ? ಅಂದರೆ ಲಸಿಕೆಯ ವಿತರಣೆಯನ್ನೇ ಅರ್ಧದಷ್ಟು ಕಡಿಮೆ ಮಾಡುವ ಮೂಲಕ ದುರ್ಬಲ ವರ್ಗಗಳಿಗೆ ಲಸಿಕೆ ನೀಡುವುದೂ ವಿಳಂಬ ಮಾಡಲಾಗುತ್ತದೆ ಅಲ್ಲವೇ ? ಹಾಗಾದರೆ ಈ ಹೊಸ ನೀತಿಯನ್ನು ತಿರಸ್ಕರಿಸುವುದೇ ವಿವೇಕಯುತ ಕ್ರಮ.

( ಲೇಖಕರು ಕೇಂದ್ರೀಯ ಕಾರ್ಯನೀತಿ ಸಂಶೋಧನಾ ಸಂಸ್ಥೆಯ ಹಿರಿಯ ಸದಸ್ಯರು )

ಇತ್ತೀಚಿನ ಸುದ್ದಿ