ಮೊನ್ನೆ ರಾತ್ರಿ 3 ಅಂಗಡಿ, ಇಂದು ಹಾಡಹಗಲೇ ಮನೆ, ಮಲೆನಾಡಲ್ಲಿ ನಿಲ್ಲದ ಕಳ್ಳತನ
ಚಿಕ್ಕಮಗಳೂರು: ಮಲೆನಾಡಲ್ಲಿ ಒಂದೇ ರಾತ್ರಿಗೆ ಮೂರು ಅಂಗಡಿಗಳನ್ನ ಕಳ್ಳತನ ಮಾಡಿದ್ದ ಪ್ರಕರಣ ಮಾಸುವ ಮುನ್ನವೇ ಇಂದು ಹಾಡಹಗಲೇ ಮತ್ತೊಂದು ಮನೆ ಕಳ್ಳತನ ನಡೆದಿದ್ದು ಮಲೆನಾಡಿಗರು ಹಗಲಿರುಳು ಆತಂಕದಲ್ಲೇ ಬದುಕು ಸ್ಥಿತಿ ನಿರ್ಮಾಣವಾಗಿವೆ.
ಮೂರು ದಿನದ ಹಿಂದಷ್ಟೆ ಜಿಲ್ಲೆ ಮೂಡಿಗೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 173ರ ಬಣಕಲ್ ಮುಖ್ಯ ರಸ್ತೆಯಲ್ಲಿ ಒಂದೇ ರಾತ್ರಿಗೆ ಮೂರು ಅಂಗಡಿಗಳ ಬೀಗ ಒಡೆದು ಲಕ್ಷಾಂತರ ರೂಪಾಯಿ ಹಣ ಹಾಗೂ ವಸ್ತುಗಳನ್ನ ಕಳ್ಳತನ ಮಾಡಲಾಗಿತ್ತು. ಆ ಪ್ರಕರಣ ಮಾಸುವ ಮುನ್ನವೇ ಇಂದು ಹಾಡಹಗಲೇ ಮತ್ತೊಂದು ಮನೆ ಕಳ್ಳತನ ನಡೆದಿದೆ.
ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಕಣಚೂರು ಗ್ರಾಮದಲ್ಲಿ ಹಾಡಹಗಲೇ ವೇದಾವತಿ ಎಂಬುವರ ಮನೆಯ ಹೆಂಚುಗಳನ್ನ ತೆಗೆದು ಕಳ್ಳತನ ಮಾಡಿದ್ದಾರೆ. 120 ಗ್ರಾಂ ಚಿನ್ನ, 100 ಗ್ರಾಂ ಬೆಳ್ಳಿ ಹಾಗೂ 25 ಸಾವಿರ ಹಣವನ್ನ ದೋಚಿದ್ದಾರೆ. ಮನೆಯೊಡತಿ ವೇದಾವತಿ ಇಂದು ಬೆಳಗ್ಗೆ ತಮ್ಮ ಕಾಫಿತೋಟಕ್ಕೆ ಹೋಗಿದ್ದರು. ಮಧ್ಯಾಹ್ನ ಊಟಕ್ಕೆ ಮನೆಗೆ ಬರುವಷ್ಟರಲ್ಲಿ ಮನೆ ಹೆಂಚು ತೆಗೆದು ಕಳ್ಳತನ ಮಾಡಿದ್ದಾರೆ. ವಿಷಯ ತಿಳಿದು ಮೂಡಿಗೆರೆ ಸರ್ಕಲ್ ಇನ್ಸ್ ಪೆಕ್ಟರ್, ಗೋಣಿಬೀಡು ಪಿ.ಎಸ್.ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗೋಣಿಬೀಡು ಠಾಣೆಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಆದರೆ, ಮೂಡಿಗೆರೆ ತಾಲೂಕಿನ ಅಕ್ಕಪಕ್ಕದ ಊರುಗಳಲ್ಲಿ ಹೀಗೆ ಮೇಲಿಂದ ಮೇಲೆ ಕಳ್ಳತನ ನಡೆಯುತ್ತಿದ್ದು ಹೊರಗಡೆಯವರು ಕಳ್ಳತನ ಮಾಡುತ್ತಿದ್ದಾರೋ ಅಥವ ಊರ ಒಳಗಿನವರೇ ಕಳ್ಳತನ ಮಾಡುತ್ತಿದ್ದಾರೋ ಅರ್ಥವಾಗದಂತಾಗಿದೆ. ಆದರೆ, ಮೂಡಿಗೆರೆ ಸುತ್ತಮುತ್ತಲಿನ ಜನ ಮಾತ್ರ ಆತಂಕದಿಂದ ಬದುಕುತ್ತಿದ್ದಾರೆ.
ಮೂರು ದಿನಗಳ ಹಿಂದಷ್ಟೆ ಬಣಕಲ್ ಗ್ರಾಮದ ಮಹೇಶ್ ಸಂಭ್ರಮ್ ಎಂಬುವರ ಬಿಲ್ಡಿಂಗ್‍ನಲ್ಲಿನ ಮೊಬೈಲ್ ಅಂಗಡಿ, ಬಟ್ಟೆ ಅಂಗಡಿ ಹಾಗೂ ದಿನಸಿ ಅಂಗಡಿಯಲ್ಲಿ ಕಳ್ಳತನ ನಡೆದಿತ್ತು. ಅಂಗಡಿಗಳ ಹಿಂದಿನ ಶೀಟ್ ಒಡೆದು, ಶೆಟ್ಟರ್ ಮುರಿದು ಸರಣಿ ಕಳ್ಳತನ ಮಾಡಿದ್ದರು. ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದರು. ಶ್ವಾನದಳವನ್ನ ತಂದು ಕಳ್ಳರ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾಗಿದ್ದರು. ಇದೀಗ, ಮತ್ತೆ ಹಾಡಹಗಲೇ ಕಳ್ಳತನ ನಡೆದಿದ್ದು ಜನ ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw