ಕಾಂಗ್ರೆಸ್ ತನ್ನ ಕಾಲದ ಹಗರಣಗಳ ಬಗ್ಗೆ ಮೊದಲು ಉತ್ತರ ನೀಡಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು: ಕಾಂಗ್ರೆಸ್ ನವರ ಹಿಂದಿನ ಹಗರಣಗಳ ಬಗ್ಗೆ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಅವರ ಮೇಲಿರುವ ಆರೋಪಗಳಿಗೆ ಉತ್ತರ ಕೊಡಲಿ. ಅವರ ಕಾಲದಲ್ಲಿ ಆಗಿರುವ ಟೆಂಡರ್ ಹಗರಣಗಳ ಬಗ್ಗೆ ಉತ್ತರ ಕೊಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಹೋಟೆಲ್ ಕ್ಯಾಪಿಟಲ್ ನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
ಕಾಂಗ್ರೆಸ್ ಅವರು ಹಿಂದೆ ಮಾಡಿರುವ ಕರ್ಮಕಾಂಡವನ್ನು ನೆನಪು ಮಾಡಿಕೊಂಡು ಮಾತನಾಡುತ್ತಾರೆ. ಯಾವ ಗುತ್ತಿಗೆದಾರರನ್ನು ನೀಡಬೇಡಿ. ಮುಂದೆ ಅಧಿಕಾರಕ್ಕೆ ಬಂದು ತನಿಖೆ ಮಾಡಿಸುತ್ತೇವೆ ಎಂದು ಧಮಕಿ ಹಾಕುತ್ತಿದ್ದಾರೆ. ಇದರ ಅರ್ಥ ಏನೆಂದರೆ ಅಧಿಕಾರಕ್ಕೆ ಬಂದರೆ ಸುಲಿಗೆ ಮಾಡಲು ಬರುತ್ತಿದ್ದಾರೆ ಎನ್ನುವುದು ಬಹಳ ಸ್ಪಷ್ಟವಾಗಿದೆ. ಅವರ ಅವರ ಅಜೆಂಡಾ ಅವರೇ ಹೇಳಿಕೊಂಡಿದ್ದಾರೆ. ಶೇ 40 % ಕಮಿಷನ್ ಆರೋಪ ಯಾವುದೂ ನಿರೂಪಿತವಾಗಿಲ್ಲ. ನ್ಯಾಯಾಲಯದಲ್ಲಿ ಕೊಡುವುದಾಗಿ ಹೇಳಿದ್ದು ಇನ್ನೂ ಕೊಟ್ಟಿಲ್ಲ. ಅವರು ಎಲ್ಲಿ ಬೇಕಾದರೂ ನಿರ್ದಿಷ್ಟ ಪ್ರಕರಣ ದಾಖಲು ಮಾಡಿದರೆ ತನಿಖೆಯಾಗುತ್ತದೆ. ಅದನ್ನು ಮಾಡುವುದು ಬಿಟ್ಟು ಗಾಳಿಯಲ್ಲಿ ಗುಂಡು ಹೊಡೆದರೆ ಏನೂ ಪ್ರಯೋಜನವಿಲ್ಲ ಎಂದರು.
ಪಾರದರ್ಶಕ ವ್ಯವಸ್ಥೆ ಗುಳಿಹಟ್ಟಿ ಶೇಖರ್ ಅವರು ಸಾಮಾನ್ಯವಾಗಿ ಪತ್ರ ಬರೆದಿದ್ದಾರೆ. ನಾವು ಅವರಿಗೆ ಪತ್ರ ಮುಖೇನ ನಿರ್ದಿಷ್ಟ ಪ್ರಕರಣವಿದ್ದರೆ ನೀಡಲಿ, ತನಿಖೆ ಮಾಡುತ್ತೇವೆ ಎಂದು ಕೇಳುತ್ತಿದ್ದೇವೆ. ನಿನ್ನೆ ಸದನದಲ್ಲಿಯೂ ಸ್ಪಷ್ಟವಾಗಿ ಕೇಳಿದ್ದೇವೆ. ಯಾವುದಾದರೂ ಅಧಿಕಾರಿ ಯಾವುದೇ ಹಂತದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ತನಿಖೆ ಮಾಡುತ್ತೇವೆ ಎನ್ನುವುದು ನಮ್ಮ ನಿಲುವಾಗಿದೆ. ಇದ್ಯಾವುದೂ ನೀಡದೆ, ಕೇವಲ ಹೇಳಿಕೆ ನೀಡಿದರೆ ಆಗುವುದಿಲ್ಲ. ಕಾಂಗ್ರೆಸ್ 5 ವರ್ಷ ಆಡಳಿತ ಮಾಡಿದೆ. ಅವರೂ ಟೆಂಡರ್ ಕರೆದಿದ್ದಾರೆ. ನಾವು ಬಂದ ನಂತರ ಟೆಂಡರ್ ಪರಿಶೀಲನಾ ಸಮಿತಿಯನ್ನು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನೇಮಕ ಮಾಡಿದ್ದೇವೆ. ಟೆಂಡರ್ ಪರಿಶೀಲನೆಯಾಗುತ್ತದೆ ಹಾಗೂ ಇಡೀ ಪ್ರಕ್ರಿಯೆ ಪಾರದರ್ಶಕವಾಗಿದೆ. ಯಾರು ಬೇಕಾದರೂ ದೂರು ನೀಡಬಹುದಾಗಿದೆ.
ಭ್ರಷ್ಟಾಚಾರಕ್ಕೆ ರಹದಾರಿ ಡಿ.ಕೆ.ಶಿವಕುಮಾರ್ ಅವರು ನೀರಾವರಿ ಸಚಿವರಿದ್ದಾಗ ಟೆಂಡರ್ ಪರಿಶೀಲನಾ ಸಮಿತಿಯನ್ನು ತೆಗೆದುಹಾಕಿದ್ದರು. ಟಿ. ಎ. ಸಿ ಯನ್ನೂ ತೆಗೆದುಹಾಕಿದ್ದರು. ನಿಗಮದಲ್ಲಿ ಎರಡು ಹಂತದ ಪರಿಶೀಲನೆಯನ್ನು ತೆಗೆದವರು ಅವರು, ಭ್ರಷ್ಟಾಚಾರಕ್ಕೆ ರಹದಾರಿ ಮಾಡಿಕೊಂಡಿದ್ದರು. ನಾವು ಬಂದ ನಂತರ ಅದನ್ನು ಪುನ: ಸ್ಥಾಪನೆ ಮಾಡಿದ್ದೇವೆ. ಹೀಗಾಗಿ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw