ಸಂವಿಧಾನದ ಆಶಯಗಳಿಗೆ ಬದ್ಧರಾಗಿ–ಜನವರಿ 26ನ್ನು ಆಚರಿಸೋಣ
- ಧಮ್ಮಪ್ರಿಯಾ, ಬೆಂಗಳೂರು
ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ, ರಾಜಕೀಯ ರಂಗದಲ್ಲಿ ಹಲವಾರು ಪಲ್ಲಟಗಳಾಗುತ್ತವೆ, ಅದೆಷ್ಟೋ ಮೋರಿಗಳು ಕೊಳೆತು ನಾರುತ್ತಿವೆ. ರಸ್ತೆಗಳು ಗುಂಡಿಬಿದ್ದ ಪರಿಣಾಮ ಬೈಕ್ ಸವಾರರು ಅದರಲ್ಲಿ ಬಿದ್ದು ಕೈ ಕಾಲು ಕಳೆದುಕೊಂಡರೆ, ಮತ್ತೆಷ್ಟೋ ವಿದ್ಯಾರ್ಥಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಕಾಮಗಾರಿಯ (ಮೆಟ್ರೋ ಕಾಮಗಾರಿ) ಹೆಸರಲ್ಲಿ ಇತ್ತೀಚೆಗೆ ನಡೆದ ಅಮ್ಮ ಮಗುವಿನ ಧಾರುಣ ಘಟನೆ ನೆನೆಸಿಕೊಂಡರೆ ರಸ್ತೆಗಳು ರಕ್ಷಣೆಯಿಲ್ಲದಂತಾಗಿವೆ. ಆದರೂ ವಾಹನಗಳ ತಪಾಷಣೆ ಮಾಡುವವರು ಸವಾರನ್ನು ನಿಲ್ಲಿಸಿ ಸಮಯ ಹಾಳು ಮಾಡುವುದರ ಜೊತೆಗೆ ಮಾನಸಿಕವಾಗಿ ಹಿಂಸಿಸುತ್ತಿದ್ದು, ಜನರು ಇದರಿಂದ ಬೇಸತ್ತು ಕಂಗಾಲಾಗಿದ್ದಾರೆ. BMTC ಬಸ್ಸುಗಳ ನೂಕು ನುಗ್ಗಲಿನಲ್ಲಿ ಕೆಲಸಕ್ಕೆ ಹೋಗುವ ಹಾಗೂ ಸಂಜೆ ಮನೆಗೆ ಬರುವಷ್ಟರಲ್ಲಿ ಕಾರ್ಮಿಕವರ್ಗವು ಹೈರಾಣಾಗಿದ್ದಾರೆ. ವ್ಯಾಪಾರ ವಹಿವಾಟುಗಳೆಲ್ಲಾ ಕರೋನ ಮಹಾಮಾರಿಯ ಲಾಕ್ ಡೌನ್ ಪರಿಣಾಮದಿಂದ ತತ್ತರಿಸಿಹೋಗಿದೆ. ಶಿಕ್ಷಣ ಸಂಸ್ಥೆಗಳು ಹಿಂದಿನ ಸಿದ್ಧ ಮಾದರಿಯ ಶಿಕ್ಷಣವನ್ನೇ ವ್ಯಾಪಾರವಾಗಿಸಿಕೊಂಡಿವೆ. ಜಾಗತೀಕರಣ ಮತ್ತು ಹೊಸ ಆರ್ಥಿಕ ವ್ಯವಸ್ಥೆ, ಮುಕ್ತ ಮಾರುಕಟ್ಟೆ ಬಂಡವಾಳ ಶಾಹಿಗಳ ಪರವಾಗಿ ನಿಂತು ದುಡಿಯುವ ವರ್ಗವನ್ನು ನಿರಾಶೆಗೊಳಿಸುತ್ತಿವೆ. ಅನುತ್ಪಾದಕ ವರ್ಗವು ದಬ್ಬಾಳಿಕೆಯ ದಲ್ಲಾಳಿಗಳಾಗಿವೆ.
ಇಷ್ಟೆಲ್ಲಾ ಸಮಸ್ಯೆಗಳ ನಡುವೆ ಹೋರಾಟ, ಬೇಡಿಕೆ, ಚರ್ಚೆ, ಚಳುವಳಿ ಎಲ್ಲವೂ ಜೊತೆಜೊತೆಯಲ್ಲಿಯೇ ಸಾಗುತ್ತಿವೆ. ಆದರೆ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಇವುಗಳ ಕಾಮಗಾರಿ ಹಠಾತ್ತನೆ ಪ್ರಾರಂಭವಾಗಿಬಿಡುತ್ತವೆ. ನೌಕರರ ಮನ ಓಲೈಸಲು ವೇತನ ಆಯೋಗಗಳು ಜಾರಿಯಾಗಿಬಿಡುತ್ತವೆ. ಧರ್ಮಗ್ರಂಥಗಳ ಪವಿತ್ರತೆಯ ಚಳುವಳಿ ತಕ್ಷಣ ಮೈ ಕೊಡವಿಕೊಂಡು ಮೇಲೇಳುತ್ತದೆ. ಶ್ರಮಿಕವರ್ಗಗಳ ಮೀಸಲಾತಿ, ಓಳ ಮೀಸಲಾತಿ, ಮಠ ಮಾನ್ಯಗಳ ಬೇಟಿ, ಸ್ವಾಮೀಜಿಗಳ ಪಾದಪೂಜೆ, ದೇವಾಲಯಗಳ ಜೀರ್ಣೋದ್ಧಾರ, ಶೋಷಿತರ, ಅಸ್ಪೃಶ್ಯರ ಕೇರಿಗಳ ಪ್ರವೇಶ ಎಲ್ಲವೂ ಸಕಾಲದಲ್ಲಿಯೇ ನಡೆದುಬಿಡುತ್ತವೆ.
ರಾಜಕಾರಣಿಗಳ 5 ವರ್ಷಗಳ ಸುದೀರ್ಘ ರಾಜಕೀಯ ದೊಂಬರಾಟದಲ್ಲಿ 4 ವರ್ಷಗಳನ್ನು ಹೇಗೆ ಕಳೆಯುತ್ತಾರೋ ಗೊತ್ತಿಲ್ಲಾ, ಇವರುಗಳು ಹಾಕಿಕೊಳ್ಳುವ ವಾಚುಗಳಿಂದ ಹಿಡಿದು, ಡಿ ನೋಟಿಫೈ, ED ಹಗರಣ, ಅಶ್ಲೀಲ ಚಿತ್ರಗಳ ವೀಕ್ಷಣೆ, ಧರ್ಮ ರಾಜಕಾರಣ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪವಿತ್ರ ಸಂವಿಧಾನದ ತಿದ್ದುಪಡಿಗಳು, ವಿವಾದಾತ್ಮಕ ಹೇಳಿಕೆ ನೀಡುವುದು, ಒಬ್ಬರನ್ನೊಬ್ಬರು ಕಾಲೆಳೆಯುವುದು, ರಾಜಕೀಯ ನಾಯಕರ ಅಪರೇಷನ್ನುಗಳು ಇಷ್ಟರಲ್ಲೇ ಅಧಿಕಾರ ಅವಧಿಯ ಮುಕ್ಕಾಲು ಭಾಗ ಸಮಯವನ್ನು ಕಳೆದು ಕೇವಲ ಒಂದುವರ್ಷದಲ್ಲಿ ಮತ್ತೆ ಪ್ರಣಾಳಿಕೆಗಳ ಸರದಾರರಾಗಿಬಿಡುತ್ತಾರೆ.
ಬಂಧುಗಳೇ, ಚುನಾವಣೆಗಳು ಎಂದಾಕ್ಷಣ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ, ಪವಿತ್ರ ಸಂವಿಧಾನ ಮತ್ತು ಅದರ ಆಶಯಗಳು ಜ್ಞಾಪಕಕ್ಕೆ ಬಂದುಬಿಡುತ್ತವೆ. ಸಂವಿಧಾನ ಜಾರಿಯದಾಗಿನಿಂದ ಹಲವಾರು ರಾಜಕೀಯ ಪಕ್ಷಗಳು ತಮ್ಮ ತಂತ್ರಗಾರಿಕೆಯಿಂದ ಚುನಾವಣೆ ಎದುರಿಸಿ ಗೆದ್ದು ಗದ್ದುಗೆಗೆ ಬಂದುಬಿಡುತ್ತವೆ. ನಂತರ ಮುಂದಿನ ಚುನಾವಣೆಯ ಸಿದ್ಧತೆಗೆ ಬೇಕಾದ ಎಲ್ಲಾರೀತಿಯ ಕಾರ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿಬಿಡುತ್ತವೆ. ಒಂದೊಂದು ಪಕ್ಷವೂ ಒಂದೊಂದು ಯಾತ್ರೆಗಳನ್ನು ಮಾಡುವ ಮೂಲಕ (ಜನ ಸ್ಪಂದನ, ಪ್ರಜಾಧ್ವನಿ, ಪಂಚರತ್ನ) ಜನರನ್ನು ಓಲೈಸಲು ಮುಂದಾಗಿಬಿಡುತ್ತವೆ. ಸಾಮಾನ್ಯ ಜನರು ಇವರುಗಳ ತಾಳಕ್ಕೆ ತಕ್ಕಂತೆ ಕುಣಿಯಲು ಪ್ರಾರಂಭಮಾಡುತ್ತಾರೆ. ಗೆದ್ದ ಮೇಲೆ ಇದರ ಪ್ರತಿಫಲವನ್ನು ಸಾಮಾನ್ಯ ಜನರೇ ಅನುಭವಿಸುತ್ತಾರೆ.
ಅಂತಹ ಪರಿಸ್ಥಿತಿ 2023 ಮತ್ತು 2024ರ ಚುನಾವಣೆಯಿಂದೇನು ಹೊರತಲ್ಲ!!! 1932ರ ದುಂಡು ಮೇಜಿನ ಸಮ್ಮೇಳನದ ತೀರ್ಪಿನ ಮೂಲಕ ಅಸ್ಪೃಶ್ಯರಿಗೆ ಸಿಕ್ಕ 2 ಓಟುಗಳ ಹಕ್ಕನ್ನು ಗಾಂಧೀಜಿ, ಮತ್ತು ಅಂದಿನ ಕಾಂಗ್ರೇಸ್ಸಿಗರು ಹಾಗೂ ಇತರೆ ಹಿಂದೂ ನಾಯಕರು ಸಹಿಸದಾದರು. ಇಲ್ಲಿ ಅಸ್ಪೃಶ್ಯರು ತಮ್ಮ ನಾಯಕನನ್ನು ತಾವೇ ಆಯ್ಕೆ ಮಾಡಿಕೊಳ್ಳುವುದರ ಜೊತೆಗೆ ಮೇಲ್ಜಾತಿಯ ನಾಯಕರು ಸಹ ಅಸ್ಪೃಶ್ಯರ ಓಟಿನ ಸಹಾಯದಿಂದಲೇ ಗೆಲ್ಲಬೇಕಾಗುತ್ತದೆ. ಇಂತಹ ಪರಿಸ್ಥಿತಿಯನ್ನು ಸಹಿಸಿಕೊಳ್ಳದ ಅಂದಿನ ಕಾಂಗ್ರೇಸಿಗರು ಹಾಗೂ ಇತರೆ ಹಿಂದೂ ನಾಯಕರು ಗಾಂಧೀಜಿಯವರಿಗೆ ಮನವರಿಕೆ ಮಾಡಿದರು. ಇದನ್ನರಿತ ಗಾಂಧಿಯವರು ದುಂಡುಮೇಜಿನ ಸಮ್ಮೇಳನದಿಂದ ನೇರವಾಗಿ ಮಹಾರಾಷ್ಟ್ರದ (ಪೂನಾದ) ಯರವಾಡ ಜೈಲಿಗೆ ಬಂದು ಉಪವಾಸ ಕುಳಿತುಬಿಡುತ್ತಾರೆ.
ಕೊನೆಯದಾಗಿ 24 ಸೆಪ್ಟೆಂಬರ್ 1932 ರಂದು ಗಾಂಧೀಜಿ ಮತ್ತು ಬಾಬಾಸಾಹೇಬ್ ಡಾ.ಅಂಬೇಡ್ಕರ್ ರವರ ನಡುವೆ ಒಂದು ಒಪ್ಪಂದವಾಯಿತು, ಅದುವೇ ಪೂನಒಪ್ಪಂದ, ಈ ಒಪ್ಪಂದದ ಮುಖ್ಯ ವಿಚಾರವೇ ಅಸ್ಪೃಶ್ಯರಿಗೆ ಸಿಕ್ಕಿರುವ ಓಟಿನ ಹಕ್ಕನ್ನು ಹಿಂತೆಗೆದುಕೊಳ್ಳಬೇಕು ಎನ್ನುವುದೇ ಮುಖ್ಯವಾಗಿತ್ತು. ಅಸ್ಪೃಶ್ಯರಿಗೆ ಓಟು ಹಾಕುವ ಹಕ್ಕುಗಳೇ ಬೇಡವೆನ್ನುತ್ತಿದ್ದ ಗಾಂಧಿ ಹಾಗೂ ಇತರೆ ಹಿಂದೂ ನಾಯಕರಿಗೆ, ಅಸ್ಪೃಶ್ಯರಿಗೆ 2 ಓಟು ಹಾಕುವ ಹಕ್ಕು ಸಿಕ್ಕಿದ್ದು ಸಹಿಸಲಾರದ ವಿಚಾರವಾಯಿತು. ಅದಕ್ಕಾಗಿ ಓಟಿನ ಹಕ್ಕನ್ನು ಹಿಂತೆಗೆದುಕೊಳ್ಳುವಂತೆ ಗಾಂಧೀಜಿ ಉಪವಾಸ ಮಾಡಿದ್ದರೆ ಹೊರತು, ಅದು ಯಾವ ಸ್ವಾತಂತ್ರ್ಯ ಚಳುವಳಿಯ ಹೋರಾಟದ ಉಪವಾಸವಾಗಿರಲಿಲ್ಲಾ.
ಈ ಒಪ್ಪಂದದ ಮೂಲ ಕರಾರಿನಂತೆ ದೇಶದಾದ್ಯಂತ ಇರುವ ಲೋಕಸಭಾ ಕ್ಷೇತಗಳಲ್ಲಿ ಕೆಲವು ಕ್ಷೇತಗಳು ಮೀಸಲು ಕ್ಷೇತ್ರಗಳಾಗಬೇಕು, ಅಲ್ಲಿ ದಮನಿತರು ಅಂದರೆ SC/ST ಗಳೇ ಚುನಾವಣೆಗೆ ಸ್ಪರ್ಧಿಸಬೇಕು. ಈ ಕ್ಷೇತ್ರಗಳಲ್ಲಿ ಯಾವುದೇ ಇತರೆ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಬಾರದು. ಅಸ್ಪೃಶ್ಯರಿಂದ ಗೆದ್ದು ಬಂದವರು ಅವರ ಜನರ ಅಭಿವೃದ್ದಿಗಾಗಿ ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳ ಪರವಾಗಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸಭೆಗಳಲ್ಲಿ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಬೇಕು ಎಂದು ತೀರ್ಮಾನಿಸಲಾಯಿತು. ಇದನ್ನು ಒಪ್ಪಿಕೊಂಡ ಗಾಂಧೀಜಿ, ಮತ್ತು ಅಂದಿನ ಕಾಂಗ್ರೇಸ್ಸಿಗರು ಹಾಗೂ ಇತರೆ ಹಿಂದೂ ನಾಯಕರು ಚುನಾವಣೆಯ ಸಂದರ್ಭದಲ್ಲಿ ಒಪ್ಪಂದವನ್ನು ಉಲ್ಲಘಿಸಿ ಎಲ್ಲಾ ಕ್ಷೇತ್ರಗಳಿಗೂ ತನ್ನ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು.ಇವರ ತಂತ್ರಗಾರಿಕೆಯಿಂದ ಸುಮಾರು 73 ಕ್ಷೇತ್ರಗಳಲ್ಲಿ ಅಂದಿನ ಕಾಂಗ್ರೇಸ್ಸಿಗರೇ ಗೆದ್ದರು. ಕೇವಲ 38 ಕ್ಷೇತ್ರಗಳಲ್ಲಿ ಬಾಬಾಸಾಹೇಬರ ಬೆಂಬಲಿತರು ಜಯಗಳಿಸುತ್ತಾರೆ.
ಅಂದು ಬಾಬಾಸಾಹೇಬರ ಬೆಂಬಲದಿಂದ ಗೆದ್ದಿರುವ 38 ಅಭ್ಯರ್ಥಿಗಳು ಮಾತ್ರ ಅಸ್ಪೃಶ್ಯರಿಂದ, ಅಸ್ಪೃಶ್ಯರಿಗಾಗಿ ಗೆದ್ದವರಾಗಿದ್ದರೆ. 73 ಮೀಸಲು ಕ್ಷೇತ್ರದಿಂದ ಗೆದ್ದವರು ಮೇಲ್ವರ್ಗದವರಿಂದ ಗೆದ್ದ ಅಸ್ಪೃಶ್ಯ ನಾಯಕರು. ಇವರುಗಳು ಯಾರೂ ಅಸ್ಪೃಶ್ಯರ ರಾಜಕೀಯ, ಸಾಮಾಜಿಕ ಹಕ್ಕುಗಳ ಬಗ್ಗೆ ಮಾತನಾಡುವವರಲ್ಲಾ. ಆದ್ದರಿಂದ ಯಾವುದೇ ಮೀಸಲು ಕ್ಷೇತ್ರಗಳಲ್ಲಿ ಇತರೆ ಪಕ್ಷಗಳಿಂದ ಸ್ಪರ್ಧಿಸಲು ಅವಕಾಶ ನೀಡಬಾರದು. ಒಂದು ವೇಳೆ ಅವಕಾಶ ನೀಡಿದ್ದೇ ಆದರೆ ಗೆದ್ದು ಬರುವವರೆಲ್ಲಾ ಒಂದೊಂದು ಪಕ್ಷದಲ್ಲಿ ಛಿದ್ರಗೊಂಡು ಸಂವಿಧಾನದ ಮೂಲ ಆಶಯಗಳಿಗೆ ಕೊಳ್ಳಿಯಿಟ್ಟು ಪ್ರಜಾ ಪ್ರಭುತ್ವ ವ್ಯವಸ್ಥೆಯನ್ನು ಧ್ವ0ಸಗೊಳಿಸಲು ಕಾರಣೀಭೂತರಾಗುತ್ತಾರೆ ಎಂದಿದ್ದಾರೆ.
ಇಂದಿಗೂ ಬೇರೆ ಬೇರೆ ಪಕ್ಷಗಳಿಂದ ಪ್ರತೀ ಲೋಕಸಭೆ ಹಾಗೂ ವಿಧಾನಸಭೆಗೆ ಮೀಸಲು ಕ್ಷೇತ್ರದಿಂದ ನಾಯಕರು ಗೆಲ್ಲುತ್ತಲೇ ಇದ್ದಾರೆ, ಆದರೆ ಅಸ್ಪೃಶ್ಯರ ಉದ್ಧಾರವಿರಲಿ ಅವರ ಮೇಲೆ ನಡೆಯುತ್ತಿರುವ ಸಾಮಾಜಿಕ ದೌರ್ಜನ್ಯಗಳು ಹಾಗೂ ಹೆಣ್ಣುಮಕ್ಕಳ ಮೇಲೆ ನಡೆಯುವ ಅತ್ಯಾಚಾರಗಳೇ ನಿಂತಿಲ್ಲಾ. ಹಾಗಾದರೆ ಈ ಗೆದ್ದು ಹೋದ ನಾಯಕರು ಏನು ಮಾಡುತ್ತಿದ್ದಾರೆ ಎನ್ನುವುದೇ ಬಹುದೊಡ್ಡ ಪ್ರಶ್ನೆಯಾಗಿದೆ. ಇವರು ಬಾಬಾಸಾಹೇಬರು ಹೇಳಿರುವ ಹಾಗೆ ಒಂದೇ ಪಕ್ಷದಿಂದ ಗೆದ್ದು ಹೋದವರಲ್ಲಾ, ಬೇರೆ ಬೇರೆ ಪಕ್ಷದಿಂದ ಟಿಕೇಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಹೋದವರೇ. ಇವರುಗಳು ಪಕ್ಷಗಳಿಗೆ ನಿಷ್ಠರಾಗಿ ದುಡಿಯುತ್ತಿರುವವರೇ ಹೊರತು ಅಸ್ಪೃಶ್ಯರ ಸಮಾನತೆಯ ಹಕ್ಕುಗಳಿಗಾಗಲಿ, ರಾಜಕೀಯ ಸ್ಥಾನ ಮಾನಗಳಿಗಾಗಲಿ ಕೆಲಸ ಮಾಡುವವರಲ್ಲಾ, ಇವರಿಂದಲೇ ಪ್ರಜಾಪ್ರಭುತ್ವ ವ್ಯವಸ್ಥೆ ಸರ್ವನಾಶವಾಗುತ್ತದೆಯೆಂದು ಅಂದೇ ಬಾಬಾಸಾಹೇಹರು ಹೇಳಿದ್ದರು. ಅದು ಇಂದಿಗೂ ನಿಜವಾಗುತ್ತಿದೆ.
ಕೇವಲ ಪ್ರಾದೇಶಿಕ ಪಕ್ಷದಿಂದ ಗೆದ್ದವರು ದೇಶದ ಪ್ರಧಾನಿ ಪಟ್ಟಕ್ಕೆ ಕೂರುತ್ತಾರೆಂದರೆ ಅದು ಅವರ ಸ್ವಾಭಿಮಾನದ ಸ್ವಂತ ಪಕ್ಷವಾದ್ದರಿಂದ ನಿರ್ಧಾರ ತೆಗೆದುಕೊಳ್ಳುವಲ್ಲಿ ಸ್ವತಂತ್ರರಾಗಿರುತ್ತಾರೆ. ಇಂದಿನ ರಾಜಕೀಯ ಪಕ್ಷಗಳು ಮೀಸಲು ಕ್ಷೇತ್ರದ ನಾಯಕರನ್ನು ಹೊಡೆದು ಛಿದ್ರಗೊಳಿಸಿ ಒಂದಾಗದಂತೆ ನೋಡಿಕೊಳ್ಳುವುದರಲ್ಲಿ ಯಶಸ್ಸಾಗುತ್ತಿದ್ದಾರೆ. ಇದು ಮೀಸಲು ಕ್ಷೇತ್ರದ ನಾಯಕರುಗಳಾದ ನಿಮಗೆ ಅರ್ಥವಾಗಬೇಕಿದೆ. ನೀವು ನಿಜವಾಗಿಯೂ ಬಾಬಾಸಾಹೇಬರು ಕೊಟ್ಟ ಮೀಸಲು ಕ್ಷೇತ್ರದ ಭಿಕ್ಷೆಯನ್ನು ಪಡೆದ ಫಲಾನುಭವಿಗಳೇ ಆಗಿದ್ದಲ್ಲಿ ಎಲ್ಲರೂ ಒಂದುಗೂಡಿ ಒಂದು ಸಮಾವೇಶ ನಡೆಸಿ ಒಂದೇ ಪಕ್ಷ ನಿರ್ಮಿಸಿ ರಾಜಕೀಯ ಪ್ರವೇಶಿಸಿದರೆ ಎಲ್ಲಾ ರಾಜ್ಯಗಳ ಹಾಗೂ ದೇಶದ ರಾಜಕೀಯ ಭವಿಷ್ಯವೇ ಬದಲಾಗುತ್ತದೆ. ಅಂದು ಸರ್ಕಾರ ರಚಿಸಬೇಕಾದವರು ಯಾರೂ, ಯಾವ ರೀತಿಯ ಕಾನೂನು ಜಾರಿಯಾಗಬೇಕು, ಯಾರಿಗೆ ಎಷ್ಟು ಅವಕಾಶಗಳು ಸಿಗಬೇಕು ಎಂದು ತೀರ್ಮಾನಿಸುವ ಜಾಗದಲ್ಲಿ ನೀವಿರುತ್ತೀರಿ. ಇದು ನಿಜವಾದ ಬಾಬಾಸಾಹೇಬರ ಸ್ವಾಭಿಮಾನದ ರಾಜಕೀಯ ಚಳುವಳಿಯಾಗಿತ್ತು.
ಇದನ್ನೇ ಬಾಬಾಸಾಹೇಬರು “ನನ್ನ ಜನ ಈ ದೇಶವನ್ನು ಆಳುವ ದೊರೆಗಳಾಗಬೇಕು ಅದನ್ನು ನಾನು ಕಣ್ಣಾರೆ ನೋಡಬೇಕೆಂದು” ಕನಸ್ಸು ಕಂಡಿದ್ದು. ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಕೇವಲ 28 ರಿಂದ 32 ಕ್ಷೇತ್ರಗಳಲ್ಲಿ ಗೆಲ್ಲುವ ಪ್ರಾದೇಶಿಕ ಪಕ್ಷದ ಮುಂಚೂಣಿ ನಾಯಕರು ನಾವೇ ಈ ರಾಜ್ಯದ ಮುಖ್ಯಮಂತ್ರಿಗಳು ಎಂದು ಘಂಟಾಘೋಷವಾಗಿ ಹೇಳುವ ತಾಕ್ಕತ್ತು ಇದೆಯೆಂದಾದರೆ ಇನ್ನು 51 SC/ST ಮೀಸಲು ಕ್ಷೇತ್ರಗಳಲ್ಲಿ ಗೆಲ್ಲುವ ಮೀಸಲು ಕ್ಷೇತ್ರದ ನಾಯಕರಿಗೆ ಅಂತಹ ತಾಕತ್ತು ಯಾಕಿರುವುದಿಲ್ಲಾ? ನೀವೇ ಯೋಚಿಸಿ, ಯಾಕೆಂದರೆ ಇವರೆಲ್ಲಾ ಬೇರೆ ಬೇರೆ ಪಕ್ಷಗಳಲ್ಲಿ ಹರಿದು ಹಂಚಿಹೋಗಿದ್ದಾರೆ. ಇವರು ಎಂದೂ ಒಂದಾಗದಂತೆ ಅವರನ್ನು ಬೇರೆ ಪಕ್ಷಗಳು ಹಾಗೆಯೇ ಜಾಗರೂಕವಾಗಿ ನೋಡಿಕೊಳ್ಳುತ್ತಿವೆ. ಮೀಸಲು ಕ್ಷೇತ್ರದ ಅಸ್ಪೃಶ್ಯ ನಾಯಕರು ಒಂದಾದರೆ ಪ್ರತೀ 5 ವರ್ಷಕ್ಕೆ ನಡೆಯುವ ಚುನಾವಣೆಯಲ್ಲಿ ಯಾರೂ ಅಧಿಕಾರದ ಗದ್ದುಗೆಯೇರಬೇಕು ಎಂದು ನಿರ್ಧರಿಸುವವರಾಗುತ್ತಾರೆ.
ಅದು ಬಿಟ್ಟು ದಲಿತರೇ ಈ ಬಾರಿ ಮುಖ್ಯಮಂತ್ರಿ, ಅವರಿಗೆ ಅಧ್ಯಕ್ಷ ಸ್ಥಾನ,ಈಗೆ ಬೇರೆ ಪಕ್ಷದವರು ಪ್ರಚಾರ ಮಾಡುವ ಅಗತ್ಯವೇನಿದೆ. ನೀವೇ ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳುವವರು ನೀವಾಗಬೇಕು. ನೀವು ಬೇರೆ ಬೇರೆ ಪಕ್ಷಗಳ ಜೊತೆ ಕೈ ಜೋಡಿಸುವುದನ್ನು ಮೊದಲು ಬಿಡಬೇಕು. ಎಲ್ಲರೂ ಒಂದೇ ವೇದಿಕೆಗೆ ಬಂದು, ಇಡೀ ರಾಜ್ಯದ ದೇಶದ ರಾಜಕೀಯ ಭವಿಷ್ಯ ನಮ್ಮ ಕೈಯಲ್ಲಿ ಎಂದು ಒಕ್ಕೊರಲಿನಿಂದ ಸಾರಬೇಕಾಗಿದೆ. ಆಗ ನೋಡಿ ಯಾವ ನಾಯಕರು ಇಂತಹ ಡೋಂಗಿ ಹೇಳಿಕೆಗಳನ್ನು ಕೊಡಲು ಮುಂದಾಗುವುದಿಲ್ಲಾ, ಇದು ಬಾಬಾಸಾಹೇಬ್ ಡಾ ಅಂಬೇಡ್ಕರ್ ರವರ ನಿಜ ಕನಸಾಗಿತ್ತು. “ನಾಳೆ ಈ ದೇಶವನ್ನು ಆಳುವವರು ನಾವೆಂದು ಇಂದೇ ನಿಮ್ಮ ಮನೆಗೋಡೆಗಳ ಮೇಲೆ ಬರೆದಿಟ್ಟುಕೊಳ್ಳಿ” ಎಂದು ಹೇಳಿದ್ದು. ಆದರೆ ನೀವುಗಳು ಇಂದಿಗೂ ಬೇರೆಯವರ ಪರಪಕ್ಷದಲ್ಲಿ ಕುಳಿತು ರಾಜಕೀಯ ಮಾಡುತ್ತಿದ್ದು, ಅದು ಒಂದು ರೀತಿಯ ಸ್ವತಂತ್ರವಿಲ್ಲದ, ಕೇವಲ ನೆಪ ಮಾತ್ರದ ಮೀಸಲು ಕ್ಷೇತ್ರದ ನಾಯಕರಾಗುತ್ತೀರಿ.
ಆದ್ದರಿಂದ ಬಂಧುಗಳೇ ನೀವುಗಳು ಅಂದರೆ ಮೀಸಲು ಕ್ಷೇತ್ರದ ನಾಯಕರುಗಳು ತಮ್ಮ ಪಕ್ಷದ ಕಟ್ಟುಪಾಡುಗಳನ್ನು ಬದಿಗೊತ್ತಿ ನೀವುಗಳು ಒಂದು ಯಾತ್ರೆಯನ್ನು ಕೈಗೊಂಡು ಒಂದು ತೀರ್ಮಾನಕ್ಕೆ ಬನ್ನಿ, ಪಕ್ಷ ಬೇಧ ಮರೆತು ಒಂದಾಗಿ ದೇಶ ಆಳಲು ಮುಂದಾಗಿ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದರು ನಾವು ಮೀಸಲು ಕ್ಷೇತ್ರದ ನಾಯಕರು ನಮ್ಮ ಹಕ್ಕುಗಳು ಜಾರಿಯಾಗಬೇಕು ಎಂದು ಒಂದಾಗಿ ಮಾತನಾಡಲು ಪ್ರಾರಂಭಿಸಿ, ಇಲ್ಲಿ ಒಂದು ಪಕ್ಷದ ಕುರುಬ ಜನಾಂಗದ ನಾಯಕ ತನ್ನ ಜನಾಂಗದ ಹಕ್ಕುಗಳಿಗಾಗಿ ಹೊರಟ ಮಾಡಿದರೆ, ಇನ್ನೊಂದು ಪಕ್ಷದಲ್ಲಿರುವ ಕುರುಬ ಜನಾಂಗದ ನಾಯಕನನ್ನೇ ಅವರ ವಿರುದ್ಧ ಮಾತನಾಡಲು ಬಿಟ್ಟು ಗೊಂದಲ ಎಬ್ಬಿಸಿ ತಮಾಷೆ ನೋಡಲು ಮುಂದಾಗುವ ರಾಜಕೀಯ ದೊಂಬರಾಟಗಳು ಬೇಕಾಗಿಲ್ಲಾ, ಇಂತಹ ಘಟನೆಗಳಿಂದ ಮೀಸಲು ಕ್ಷೇತ್ರದ ನಾಯಕರೇನು ಹೊರತಲ್ಲ. ಎಲ್ಲಾ ಕಡೆಯಲ್ಲೂ ಆಡಳಿತ ರೂಢ ಪಕ್ಷಗಳು ಮತ್ತು ಮೇಲ್ಜಾತಿಯ ಹಿಂದೂ ನಾಯಕರು ಅಸ್ಪೃಶ್ಯರನ್ನು ಅಸ್ಪೃಶ್ಯರ ವಿರುದ್ಧ ಹಾಗು ಓಬಿಸಿಗಳನ್ನು ಓಬಿಸಿ ಗಳ ವಿರುದ್ಧ ಎತ್ತಿಕಟ್ಟಿ ಇವರುಗಳು ಎಂದೂ ಒಂದಾಗದಂತೆ ನೋಡಿಕೊಳ್ಳುತ್ತಿವೆ. ಇದು ವೈದಿಕ ಶಾಹಿಗಳ ರಾಜಕೀಯ ಕುತಂತ್ರವೂ ಹೌದು. ಇದನ್ನು ಬಾಬಾಸಾಹೇಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು, ಅದಕ್ಕಾಗಿ ಅವರು ಹೇಳುತ್ತಾರೆ “ನನ್ನ ಜನರ ವಿಮೋಚನೆಗಾಗಿ ನಾನು ಯಾರ ಪರ ಹೊರಟ ಮಾಡಿದ್ದೆನೋ ಅವರೇ ನನ್ನನ್ನು ಅರ್ಥಮಾಡಿಕೊಳ್ಳದಾದದು, ಯಾರ ವಿರುದ್ಧ, ಯಾವ ವ್ಯವಸ್ಥೆಯ ವಿರುದ್ಧ ನಾನು ಹೊರಟ ಮಾಡಿದ್ದೆನೋ ಅವರು ನನ್ನನ್ನು, ನನ್ನ ಆಲೋಚನೆಗಳನ್ನು ಅರ್ಥ ಮಾಡಿಕೊಂಡು, ರಾಜಕೀಯ ಅಧಿಕಾರವನ್ನು ಹಿಡಿದುಕೊಂಡಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೀಸಲು ಕ್ಷೇತ್ರದ ನಾಯಕರೇ ಇನ್ನಾದರೂ ದಲಿತರ ಹೆಸರೇಳಿ ನೀವು ಬಲಿತರಾಗಬೇಡಿ, ನಿಮ್ಮನ್ನು ನೀವು ಮಾರಿಕೊಳ್ಳಬೇಡಿ. ಬಾಬಾಸಾಹೇಬರ ಆಶಯದಂತೆ, ಸಂವಿಧಾನದ ಆಶಯಗಳಂತೆ ಯಾರಿಂದ ನೀವುಗಳು ಗೆದ್ದು ಬಂದಿದ್ದೀರೋ ಅವರ ಋಣ ತೀರಿಸಲು ಇದೊಂದು ಸದಾವಕಾಶ ಎನ್ನುವುದನ್ನು ಮರೆಯದಿರಿ. ಮುಂದಿನ ಚುನಾವಣೆಯಲ್ಲಿ ಸರ್ಕಾರವನ್ನು, ಕೇಂದ್ರದಲ್ಲಿ ಅಥವಾ ರಾಜ್ಯಯಲ್ಲಿ ಯಾರೂ ರಚಿಸಬೇಕು ಎಂದು ತೀರ್ಮಾನಿಸುವವರು ನೀವಾಗಿರಿ. ಅಂದೇ ಅಸ್ಪೃಶ್ಯರ ಬಹುಜನರ, ಶೋಷಿತರ ವಿಮೋಚನೆ ಸಾಧ್ಯವಾಗುತ್ತದೆ.
“ತಮಗೆ ಜನುಮ ನೀಡಿದ ಜನಾಂಗದ ಏಳಿಗೆಗೆ ಬದ್ಧರಾದ ಕರ್ತವ್ಯಶೀಲರೇ ಧನ್ಯರು. ತಮ್ಮ ಜನಾಂಗಕ್ಕೆ ತಗುಲಿರುವ ಗುಲಾಮಗಿರಿಯ ಕಡಿದೊಗೆಯಲು
ತಮ್ಮದೆಲ್ಲವನ್ನು ತ್ಯಾಗ ಮಾಡುವವರೇ ಧನ್ಯರು
ಶೋಷಿತ ಜನಾಂಗವು ಹಕ್ಕು ಅಧಿಕಾರವನ್ನುಗಳಿಸುವ ತನಕ ಸನ್ಮಾನಕ್ಕೆ ಆಸೆ ಪಡದೆ, ಅಪಮಾನಕ್ಕೆ ಅಂಜದೆ ಬಿಸಿಲು ಬಿರುಗಾಳಿಯನ್ನು ಲೆಕ್ಕಿಸದೆ
ಮುನ್ನಡೆದು ಗುರಿ ಸಾಧಿಸುವವರೇ ಧನ್ಯರು.”
ಜಾಗೃತರಾಗಿ ಚಿಂತಿಸಿ ಒಂದಾಗಿ, ಈ ದೇಶವನಾಳಲು ಮುಂದಾಗಿ
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw