ಸುಳ್ಯ: ಗ್ಯಾಸ್ ಸಿಲಿಂಡರ್ ಗೋಡಾನ್ ನಿಂದ ಸ್ಥಳೀಯರಿಗೆ ಅಪಾಯದ ಆತಂಕ: ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ನೇತೃತ್ವದಲ್ಲಿ ಪಂಚಾಯತ್ ಗೆ ಮನವಿ

ಸುಳ್ಯ: ತಾಲೂಕಿನ ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ಕಾರ್ಯನಿರ್ವಹಿಸುತ್ತಿರುವ ರೈ ಇಂಡೇನ್ ಗ್ಯಾಸ್ ಸಿಲಿಂಡರ್ ಗೋಡಾನ್ ನಲ್ಲಿ ಹಲವು ದಿನಗಳಿಂದ ಗೋಡಾನ್ ಕಾಂಪೌಂಡ್ ನ ಹೊರಗೆ ತುಂಬಿದ ಗ್ಯಾಸ್ ಸಿಲಿಂಡರ್ ಗಳನ್ನ ಬೇಕಾಬಿಟ್ಟಿಯಾಗಿ ಎಸೆಯುತ್ತಾ ಕೆಲಸ ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದರು.
ಈ ಬಗ್ಗೆ ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯ ಗಮನಕ್ಕೆ ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಸಂಘಟನೆ ತಾಲೂಕು ಅಧ್ಯಕ್ಷ ಸತೀಶ್ ಬೂಡುಮಕ್ಕಿ, ಸ್ಥಳೀಯ ಪಂಚಾಯತ್ ಸದಸ್ಯರಿಗೆ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಬಳಿಕ ಸ್ಥಳೀಯ ನಿವಾಸಿಗಳಾದ ದಯಾನಂದ ಕಾಂತಮಂಗಲ, ಸುನೀಲ್ ಕಾಂತಮಂಗಲರವರ ಜೊತೆ ಗೋಡಾನ್ ಗೆ ಭೇಟಿ ನೀಡಿ, ಸ್ಥಳದಲ್ಲಿ ತುಂಬಿದ ಸಿಲಿಂಡರ್ ಗಳನ್ನ ಬೇಕಾಬಿಟ್ಟಿಯಾಗಿ ಎಸೆದಿರುವ ಫೋಟೋ, ವಿಡಿಯೋಗಳನ್ನು ಸಂಗ್ರಹಿಸಲಾಯಿತು.
ಗ್ಯಾಸ್ ತುಂಬಿದ ಸಿಲಿಂಡರ್ ಗಳನ್ನು ಈ ರೀತಿಯಾಗಿ ಎಸೆಯುತ್ತಿರುವುದರಿಂದ ಏನಾದರೂ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡರೆ, ಕಾಂತಮಂಗಲ–ಮುಳ್ಯ ಸುತ್ತ ಮುತ್ತ ಪರಿಸರದ ಜನರಿಗೆ ಹಾಗೂ ಸ್ಥಳೀಯ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಹಾಸ್ಟೆಲ್, ಕಾಲೋನಿ, ಶಾಲೆ–ಅಂಗನವಾಡಿ ಮಕ್ಕಳಿಗೆ ಪ್ರಾಣಹಾನಿ ಸಂಭವಿಸುವ ಅಪಾಯವಿದೆ ಎನ್ನುವುದನ್ನು ಮನಗಂಡ ಸಂಘಟನೆ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪಂಚಾಯತ್ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳಿಗೆ ಸ್ಥಳೀಯ ನಿವಾಸಿಗಳ ಜೊತೆಗೂಡಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಪಲ್ಲತ್ತಡ್ಕರವರು ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಅಜ್ಜಾವರ ಘಟಕಾಧ್ಯಕ್ಷರಾದ ಹರೀಶ್ ಮೇನಾಲ ಸೇರಿದಂತೆ ಸಮಿತಿ ಸದಸ್ಯರು ಹಾಜರಿದ್ದರು ಈ ಮಧ್ಯೆ ಗೋಡಾನ್ ಕೀಪರ್ ಆಗಿರುವ ಶಶಿಧರ ಎಂಬ ವ್ಯಕ್ತಿಯು ಪೊಲೀಸ್ ದೂರು ನೀಡುವ ಮೂಲಕ ಇದನ್ನು ತಡೆಯುವ ಪ್ರಯತ್ನ ಕೂಡ ನಡೆಸಿದ್ದು, ಪೊಲೀಸರು ಸುನೀಲ್ ಎಂಬವರಿಗೆ ಕರೆ ಮಾಡಿ ಠಾಣೆಗೆ ಬರುವಂತೆ ತಿಳಿಸಿದ್ದಾರೆ. ಸ್ಥಳೀಯರಿಗೆ ಆಗುತ್ತಿರುವ ತೊಂದರೆ ಪ್ರತ್ಯಕ್ಷವಾಗಿ ಕಂಡರೂ ಅದನ್ನು ಪ್ರಶ್ನೆ ಮಾಡಿದ ಕೂಡಲೇ ಪೊಲೀಸ್ ಠಾಣೆಗೆ ಹೋಗಬೇಕಾಗುತ್ತದೆಯೇ ಎಂದು ಸುನೀಲ್ ನೋವು ತೋಡಿಕೊಂಡ ಘಟನೆಯೂ ನಡೆಯಿತು.