ಲಾಕ್ ಡೌನ್: ಮೆಡಿಕಲ್ ಗಳಿಗೆ ಹೋಗಲಾಗದೇ ಗ್ರಾಮೀಣ ಜನರ ಪರದಾಟ! - Mahanayaka
2:01 AM Friday 20 - September 2024

ಲಾಕ್ ಡೌನ್: ಮೆಡಿಕಲ್ ಗಳಿಗೆ ಹೋಗಲಾಗದೇ ಗ್ರಾಮೀಣ ಜನರ ಪರದಾಟ!

lockdown mangalore
10/05/2021

ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಶುಕ್ರವಾರದಿಂದಲೂ ಬಿಗಿ ಕ್ರಮದ ಹೆಸರಿನಲ್ಲಿ 9 ಗಂಟೆಗೆ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿತ್ತು. ಶನಿವಾರ ಮತ್ತು ಭಾನುವಾರ ವಾರದ ಲಾಕ್ ಡೌನ್ ಇತ್ತು. ಹೀಗಾಗಿ ಸೋಮವಾರ ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು  ಮುಗಿಬಿದ್ದಿದ್ದು, ಇದರಿಂದಾಗಿ ಅಂಗಡಿಗಳಲ್ಲಿ ದೈಹಿಕ ಅಂತರ ಕಾಪಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇದು ನಗರ ಪ್ರದೇಶಗಳ ಕಥೆಯಾದರೆ, ಗ್ರಾಮೀಣ ಪ್ರದೇಶದ ಜನರ ಸ್ಥಿತಿ ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ಸೋಮವಾರದಿಂದ ಲಾಕ್ ಡೌನ್ ಘೋಷಿಸಿದ್ದರು. ಆದರೆ, ಈ ನಡುವೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಕೊರೊನಾಕ್ಕಿಂತಲೂ ಭಯಂಕರವಾಗಿದ್ದು, ಸರ್ಕಾರದ ನಿಯಮದಿಂದ ಕೊರೊನಾ ಸಾಯುವುದಕ್ಕಿಂತಲೂ ಜನರೇ ಸಾಯುವ ಪರಿಸ್ಥಿತಿ ನಿರ್ಮಾಣವಾಗುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಸರ್ಕಾರದ ವಿರುದ್ಧ ಜನರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ ಗ್ರಾಮೀಣ ಪ್ರದೇಶದ ಜನರು ಅಗತ್ಯ ಸಾಮಗ್ರಿಕೊಳ್ಳಲು ಸಾಧ್ಯವಾಗದೇ ಪರದಾಡಿದ್ದಾರೆ. ಪುತ್ತೂರು, ಸುಳ್ಯ, ಬೆಳ್ತಂಗಡಿ, ಮೂಡುಬಿದಿರೆ, ಬಂಟ್ವಾಳ, ಮಂಗಳೂರು ಮೊದಲಾದ ಪ್ರದೇಶಗಳ ಗ್ರಾಮೀಣ ಪ್ರದೇಶದ ಜನರು ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರವು ವಾಹನಗಳನ್ನು ರಸ್ತೆಗಿಳಿಸಬಾರದು ಎನ್ನುವ ನಿಯಮಗಳನ್ನು ಹೇರಿರುವ ಕಾರಣ, ಈ ಭಾಗದ ಜನರು ಮೆಡಿಕಲ್ ಗಳಿಗೆ, ಆಸ್ಪತ್ರೆಗೆ ಬರಲು ಸಾಧ್ಯವಾಗದೇ ಪರದಾಡಿದ್ದಾರೆ. ಆಸ್ಪತ್ರೆಗೆ ಹೋಗಬೇಕಾದರೆ, ವೈದ್ಯಕೀಯ ದಾಖಲೆ ಬೇಕು ಎಂದು ಪೊಲೀಸರು ಕೇಳುತ್ತಿದ್ದಾರೆ. ಆದರೆ, ಅನಾರೋಗ್ಯದಿಂದ ಮೊದಲ ಬಾರಿಗೆ ಆಸ್ಪತ್ರೆಗೆ ಹೋಗುವವರರು  ವೈದ್ಯಕೀಯ ದಾಖಲೆ ಎಲ್ಲಿಂದ ತರಬೇಕು?  ಜನ ಸಾಮಾನ್ಯರು ಸಣ್ಣಪುಟ್ಟ ಕಾಯಿಲೆಗಳಿಗೆಲ್ಲ, ಸಣ್ಣಪುಟ್ಟ ಕ್ಲೀನಿಕ್ ಗಳಿಗೆ ತೆರಳುತ್ತಾರೆ. ಬಹಳಷ್ಟು ಜನರು ಆಯುರ್ವೇದ ಮದ್ದುಗಳನ್ನು ಮಾಡುತ್ತಾರೆ. ಇವೆಲ್ಲ ಎಲ್ಲಿಂದ ವೈದ್ಯಕೀಯ ಸರ್ಟಿಫಿಕೆಟ್ ತರಬೇಕು ಎಂದು ಜನರು ಪ್ರಶ್ನಿಸುತ್ತಿದ್ದಾರೆ.


Provided by

ಸರ್ಕಾರ ಲಾಕ್ ಡೌನ್ ಜಾರಿ ಮಾಡಲಿ, ಆದರೆ ವಾಹನಗಳಿಗೆ ಹಾಕಿರುವ ನಿರ್ಬಂಧವನ್ನು ವಾಪಸ್ ಪಡೆಯಬೇಕು. ಇಲ್ಲವಾದರೆ, ಗ್ರಾಮೀಣ ಜನರ ಬದುಕನ್ನು ಊಹಿಸಲೂ ಸಾಧ್ಯವಿಲ್ಲ. ಈಗಾಗಲೇ ಬಿಜೆಪಿ ಸರ್ಕಾರದ ವಿರುದ್ಧ  ಸ್ವಪಕ್ಷದ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಮುಂದುವರಿದರೆ, ಪಕ್ಷಕ್ಕೂ ತೀವ್ರ ಹಾನಿಯಾಗುವ ಸಾಧ್ಯತೆಗಳು ಹೆಚ್ಚು ಕಂಡು ಬರುತ್ತಿದೆ.

ಎಸಿ ಕಚೇರಿಯಲ್ಲಿ ಕುಳಿತು ಸರ್ಕಾರ ಲಾಕ್ ಡೌನ್ ನಿಯಮಗಳನ್ನು ರೂಪಿಸಿದೆ. ಕೇವಲ ನಗರ ಪ್ರದೇಶಗಳನ್ನು ಮಾತ್ರವೇ ಗಣನೆಗೆ ತೆಗೆದುಕೊಂಡು ಲಾಕ್ ಡೌನ್ ನಿಯಮಗಳನ್ನು ರೂಪಿಸಲಾಗಿದೆ. ಆಹಾರ ವಸ್ತುಗಳಿಗಾದರೂ ಸಾರ್ವಜನಿಕರು ಹಳ್ಳಿಗಳಲ್ಲಿ ಏನಾದರೂ ವ್ಯವಸ್ಥೆ ಮಾಡಿಕೊಳ್ಳಬಹುದು. ಆದರೆ ಮೆಡಿಕಲ್ ಗಳಿಗೆ ಏನು ಮಾಡುವುದು? ಹಳ್ಳಿ ಜನರು ನಗರದಲ್ಲಿ ಮಾತ್ರವೇ ಇರುವ ಮೆಡಿಕಲ್ ಗಳಿಗೆ ಹೋಗುವುದು ಹೇಗೆ?  ಯಡಿಯೂರಪ್ಪನವರು ಈ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ. ಬೇಕಿದ್ದರೆ, ವಾಹನಗಳಲ್ಲಿ ಒಬ್ಬ ವ್ಯಕ್ತಿ ಮಾತ್ರವೇ ಸಂಚರಿಸಬೇಕು ಎನ್ನುವ ನಿಯಮವನ್ನು ಸರ್ಕಾರ ಹಾಕಬಹುದಿತ್ತು. ಆದರೆ, ವಾಹನಗಳನ್ನೇ ಬಳಸಬಾರದು. ವಾಹನ ಬಳಸಿದರೆ, ಸೀಝ್ ಮಾಡುತ್ತೇವೆ ಎಂದು ನಿಯಮ ರೂಪಿಸಿರುವುದು ಜನರ ಕುತ್ತಿಗೆಯನ್ನು ಬಿಗಿದೆ. ಸರ್ಕಾರ ಮಾರ್ಗದರ್ಶಿ ಸೂತ್ರಗಳನ್ನು ಪುನರ್ ಪರಿಶೀಲನೆ ನಡೆಸಬೇಕಾದ ಅಗತ್ಯವಿದೆ.

ದಕ್ಷಿಣ ಕನ್ನಡ ಜಿಲ್ಲಾಡಳಿತವು ತನಗೆ ತೋಚಿದ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದೂ ವ್ಯಾಪಕ ಅಸಮಾಧಾನಗಳು ಕೇಳಿ ಬರುತ್ತಿವೆ. ಹಳ್ಳಿಯ ಜನರನ್ನು ಶತ್ರುಗಳ ರೀತಿಯಲ್ಲಿ ಸರ್ಕಾರ ನೋಡುವುದನ್ನು ಬಿಡಬೇಕು. ಸಿಎಂ ಯಡಿಯೂರಪ್ಪ ಈ ಬಗ್ಗೆ ಗಮನ ಹರಿಸಬೇಕು ಎಂದು ಜನರು ವ್ಯಾಪಕ ಒತ್ತಾಯ ಮಾಡುತ್ತಿದ್ದಾರೆ.

 

ಇತ್ತೀಚಿನ ಸುದ್ದಿ