ಲಾಕ್ ಡೌನ್ ವೇಳೆ ಕರ್ನಾಟಕದ ಜನತೆಗೆ ಸಿಕ್ಕಿದ್ದು ಬಿಟ್ಟಿ ಸಲಹೆ, ಚುಚ್ಚು ಮಾತು, ಲಾಠಿ ಪ್ರಹಾರ
ಬೆಂಗಳೂರು: ರಾಜ್ಯ ಸರ್ಕಾರ ಘೋಷಿಸಿದ ಲಾಕ್ ಡೌನ್ ನಿಂದ ಕೋಟ್ಯಂತರ ಜನರು ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದಾರೆ. ತಮಿಳುನಾಡು, ಕೇರಳ, ಹರ್ಯಾಣ, ಆಂಧ್ರಪ್ರದೇಶ ರಾಜ್ಯಗಳು ಜನತೆಯ ಸುರಕ್ಷೆಗಾಗಿ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಆದರೆ ಕರ್ನಾಟಕದಲ್ಲಿ ಸಿಎಂ ಯಡಿಯೂರಪ್ಪ ಅವರ ಬಿಟ್ಟಿ ಸಲಹೆಗಳು ಹಾಗೂ ಸಚಿವರ ಚುಚ್ಚು ಮಾತುಗಳು ಮಾತ್ರವೇ ಜನರಿಗೆ ದೊರಕಿದೆ.
ಹೌದು..! ವಿವಿಧ ರಾಜ್ಯಗಳಲ್ಲಿ ಕೊವಿಡ್ 19 ಹಿನ್ನೆಲಯಲ್ಲಿ ಲಾಕ್ ಡೌನ್ ಘೋಷಿಸಿದ ಸಂದರ್ಭದಲ್ಲಿ ಸರ್ಕಾರವು ಜನರ ನೆರವಿಗೆ ಬರುತ್ತಿದೆ. ತಮಿಳುನಾಡು ಸರ್ಕಾರ 4 ಸಾವಿರ, ಹರ್ಯಾಣ 5 ರೂಪಾಯಿಗಳನ್ನು ಬಿಪಿಎಲ್ ಕುಟುಂಬಗಳಿಗೆ ನೀಡುವ ಘೋಷಣೆ ಮಾಡಿವೆ. ಕೇರಳದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿ ಭಿಕ್ಷುಕರಿಗೆ ಕೂಡ ಕಷ್ಟವಾಗದಂತಹ ಕ್ರಮವನ್ನು ಕೈಗೊಳ್ಳಲಾಗಿದೆ. ಆಂಧ್ರಪ್ರದೇಶದಲ್ಲಿ ಕೊರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗಿದೆ. ಆದರೆ, ಕರ್ನಾಟಕದಲ್ಲಿ ಏನಾದರೂ ಜನರಿಗೆ ನೀಡಿ ಎಂದು ಹೇಳಿದರೆ, ಸಚಿವ ಉಮೇಶ್ ಕತ್ತಿ, ಎಲ್ಲರೂ ಸತ್ತು ಹೋಗಿ, ನಾವು ಉಳಿದರೆ ಸಾಕು ಅನ್ನುತ್ತಿದ್ದಾರೆ. ಸಚಿವ ಈಶ್ವರಪ್ಪ, ನಾವು ಜನರಿಗೆ ಹಣ ನೀಡಲು ನೋಟು ಪ್ರಿಂಟ್ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನೊಂದೆಡೆ ಸಿಎಂ ಯಡಿಯೂರಪ್ಪ, ಕಳೆದ ಬಾರಿಯಂತೆ ಈ ಬಾರಿಯೂ ಯಾವುದೇ ವಿಶೇಷ ಪ್ಯಾಕೇಜ್ ಗಳಿಲ್ಲ ಎಂದು ಹೇಳುತ್ತಿದ್ದಾರೆ.
ಕೇವಲ ಮಾಸ್ಕ್ ಹಾಕಿ, ಅಂತರ ಕಾಯ್ದುಕೊಳ್ಳಿ, ಹೊರಗಡೆ ಬರಬೇಡಿ ಎಂದು ಸಿಎಂ ಬಿಟ್ಟಿ ಸಲಹೆ ನೀಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜನರು ಜೀವನೋಪಾಯವನ್ನೇ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಜನರ ಸಹಾಯಕ್ಕೆ ನಿಲ್ಲದಿದ್ದರೆ, ಸರ್ಕಾರ ಇದ್ದೇನು ಪ್ರಯೋಜನ ಎಂದು ಜನ ಪ್ರಶ್ನಿಸುತ್ತಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಮಾಡಿ, ಜನರಿಗೆ ಹಿಗ್ಗಾಮುಗ್ಗಾ ಹೊಡೆದಿದ್ದೇ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ಪಕ್ಷದ ಸರ್ಕಾರದ ಸಾಧನೆ ಎನ್ನುವುದು ಕರ್ನಾಟಕದ ಇತಿಹಾಸದಲ್ಲಿ ದಾಖಲಾಗಲಿದೆ. ಪ್ರತಿಯೊಂದಕ್ಕೂ ಜನ ಸರಿ ಇಲ್ಲ ಎಂದು ಸರ್ಕಾರ ಹಾಗೂ ಮಾಧ್ಯಮಗಳು ಹೇಳುತ್ತಿವೆ. ಆದರೆ ಸರ್ಕಾರ ಎಷ್ಟು ಜವಾಬ್ದಾರಿಯಿಂದ ವರ್ತಿಸುತ್ತಿದೆ ಎನ್ನುವುದು ಇದೀಗ ಜನರ ಪ್ರಶ್ನೆಯಾಗಿದೆ.