ಲಾಕ್ ಡೌನ್ ವಿಸ್ತರಣೆಗೆ ಹೆಚ್ಚಿದ ಒತ್ತಾಯ | ಇಂದು ಸಭೆ ನಡೆಸಲಿರುವ ಸಿಎಂ ಯಡಿಯೂರಪ್ಪ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹರಡುವಿಕೆ ಲಾಕ್ ಡೌನ್ ಜಾರಿ ಮಾಡಿದರೂ ಸರ್ಕಾರ ನಿರೀಕ್ಷಿಸಿದಷ್ಟು ಮಟ್ಟಕ್ಕೆ ಕೊರೊನಾ ಸೋಂಕು ಹರಡುವಿಕೆ ನಿಂತಿಲ್ಲ. ಇದೇ ಸಂದರ್ಭದಲ್ಲಿ ವಿಪಕ್ಷಗಳ ನಾಯಕರು ಕೂಡ ಲಾಕ್ ಡೌನ್ ಮುಂದುವರಿಸಬೇಕು ಎನ್ನುವ ಒತ್ತಾಯ ಮಾಡುತ್ತಿದ್ದಾರೆ. ಈ ನಡುವೆ ಇಂದು ಸಿಎಂ ಯಡಿಯೂರಪ್ಪನವರ ನೇತೃತ್ವದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲು ಸಭೆ ಕರೆಯಲಾಗಿದೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಂಜೆ 4:30ಕ್ಕೆ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಲಾಕ್ ಡೌನ್ ವಿಸ್ತರಣೆ ಅಥವಾ ಅನ್ ಲಾಕ್ ಮಾಡುವ ಕುರಿತು ಕೊವಿಡ್ ತಜ್ಞರು, ವೈದ್ಯಕೀಯ ಅಧಿಕಾರಿಗಳ ಸಭೆಯನ್ನು ಸಿಎಂ ಯಡಿಯೂರಪ್ಪನವರು ಕರೆದಿದ್ದಾರೆ.
ಬುಧವಾರ ಸಂಜೆ 6ಕ್ಕೆ ಸಚಿವರು ಹಾಗೂ ಅಧಿಕಾರಗಳೊಂದಿಗೆ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ನಡೆಸಲಿದ್ದು, ತಜ್ಷರ ಸಭೆ, ಸಲಹೆಗಳನ್ನು ಪಡೆದ ಬಳಿಕ, ಲಾಕ್ ಡೌನ್ ವಿಚಾರವಾಗಿ ಸಿಎಂ ಮರು ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ಕಳೆದ ಬಾರಿಯೂ ಕೊರೊನಾ ಅಲೆ ಕಡಿಮೆಯಾಗಿದೆ ಎಂದು ಲಾಕ್ ಡೌನ್ ಹಿಂತೆಗೆದುಕೊಂಡಿದ್ದರಿಂದ ಮತ್ತೆ ಕೊರೊನಾ ವ್ಯಾಪಕವಾಗಿ ಹರಡಿತ್ತು. ಈ ನಿದರ್ಶನ ಸರ್ಕಾರದ ಮುಂದಿದೆ. ಹೀಗಾಗಿ ಈ ವಿಚಾರಕ್ಕೆ ತಜ್ಞರು ಕೂಡ ಹೆಚ್ಚಿನ ಒತ್ತು ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಇನ್ನೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡ ಲಾಕ್ ಡೌನ್ ವಿಸ್ತರಣೆ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.