ಎಸ್ಸಿ, ಎಸ್ಟಿ, ಒಬಿಸಿ ವಿದ್ಯಾರ್ಥಿಗಳಿಗೆ ಸರ್ಕಾರ ಮಾಡ್ತಿರೋ ಅನ್ಯಾಯ ನೋಡಿ! - Mahanayaka

ಎಸ್ಸಿ, ಎಸ್ಟಿ, ಒಬಿಸಿ ವಿದ್ಯಾರ್ಥಿಗಳಿಗೆ ಸರ್ಕಾರ ಮಾಡ್ತಿರೋ ಅನ್ಯಾಯ ನೋಡಿ!

democratic dalit students union
24/06/2023

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದ್ಯಾಭ್ಯಾಸಕ್ಕೆ ಅತೀ ಹೆಚ್ಚು ಯೋಜನೆಗಳನ್ನು ರೂಪಿಸಿ ಪ್ರೋತ್ಸಾಹವನ್ನು  ನೀಡುತ್ತಿದ್ದಾರೆ. ಬಡ ವರ್ಗದ ಸಮುದಾಯಗಳಾದ  ಎಸ್ಸಿ, ಎಸ್ಟಿ, ಒಬಿಸಿ ಗಳಿಗೂ ವಿದ್ಯಾಭ್ಯಾಸ ನೀಡಬೇಕೆಂಬ ನಿಟ್ಟಿನಲ್ಲಿ ಸರ್ಕಾರಗಳು ವಿದ್ಯಾರ್ಥಿವೇತನವನ್ನು ನೀಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ, ಆದರೆ ಇದೀಗ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರವು ವಿದ್ಯಾರ್ಥಿಗಳಿಗೆ ಹಲವಾರು ಅನ್ಯಾಯಗಳನ್ನು ಮಾಡುತ್ತಿದೆ ಎಂದು ಪ್ರಜಾಸತ್ತಾತ್ಮಕ ದಲಿತ ವಿದ್ಯಾರ್ಥಿ ಒಕ್ಕೂಟ ಹೇಳಿದೆ.

ಹೌದು… ಈ ಬಗ್ಗೆ ಪ್ರಜಾಸತ್ತಾತ್ಮಕ ದಲಿತ ವಿದ್ಯಾರ್ಥಿ ಒಕ್ಕೂಟದ ಮುಖಂಡರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ಸರ್ಕಾರ ವಿದ್ಯಾರ್ಥಿಗಳಿಗೆ ಮಾಡುತ್ತಿರುವ ಅನ್ಯಾಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಸಂಘಟನೆಯ ಹೇಳಿಕೆಯನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರವು  ಕೂಡಾ ತನ್ನದೇ ಆದ ಯೋಜನೆಗಳನ್ನು ರೂಪಿಸಿಕೊಂಡು, ಈ ಸಂಬಂದಪಟ್ಟ ಸಮುದಾಯಗಳಿಗೆ ಇಲಾಖಾವಾರು ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಪಾವತಿಸುತ್ತಿದ್ದಾರೆ. ವಿದ್ಯಾರ್ಥಿವೇತನವನ್ನು  ಇಲಾಖಾವಾರು ಎರಡು ಹಂತದಲ್ಲಿ ಮಂಜೂರು ಮಾಡುತ್ತಿದ್ದಾರೆ. ಅವುಗಳೆಂದರೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ  ಮತ್ತು ಮೆಟ್ರಿಕ್ ನಂತರ ವಿದ್ಯಾರ್ಥಿವೇತನ  ಎಂದು ವಿಂಗಡಿಸಿ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ,  ಪರಿಶಿಷ್ಟ ಪಂಗಡ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿದ್ಯಾರ್ಥಿವೇತನ  ಮತ್ತು ಹಾಸ್ಟೇಲ್ ವ್ಯವಸ್ಥೆಯನ್ನು ನೀಡುತ್ತಿದ್ದಾರೆ. ವಿದ್ಯಾರ್ಥಿವೇತನವನ್ನು  ನೀಡುವ ಮೂಲಕ ಎಲ್ಲಾ ಸಮುದಾಯದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಲು ಸರ್ಕಾರ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿ ಪ್ರೋತ್ಸಾಹ ನೀಡಲಾಗುತ್ತಿತ್ತು.

ಕರ್ನಾಟಕ ಸರ್ಕಾರವು ವಿದ್ಯಾರ್ಥಿವೇತನವನ್ನು ನೀಡಲು   ssp portal  ಅನ್ನು  2018-19 ನೇ ಸಾಲಿನಲ್ಲಿ  ಪರಿಶಿಷ್ಟ  ಜಾತಿ ಮತ್ತು ಪರಿಶಿಷ್ಟ ಪಂಗಡದ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಮತ್ತು ಹಿಂದುಳಿದ ವರ್ಗಗಳ  ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ  2020-21 ಸಾಲಿನಿಂದ ವಿದ್ಯಾರ್ಥಿವೇತನವನ್ನು ನೀಡುವ ಮೂಲಕ ssp portal ಅನ್ನು ಶುರುಮಾಡಲಾಯಿತು. ತದನಂತರ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 2019-20 ನೇ ಸಾಲಿನಲ್ಲಿ ವಿದ್ಯಾರ್ಥಿವೇತನವನ್ನು ನೀಡುವ ಮೂಲಕ  ssp portal  ಅನ್ನು ಶುರುಮಾಡಲಾಯಿತು. ಆದರೆ ssp portal  ನಿಂದ ನಿರೀಕ್ಷಿಸಬಹುದಾದ ಪ್ರಗತಿ ಸಾದಿಸಲಾಗದೆ, ಕಳಪೆ ಗುಣಮಟ್ಟದ ಪ್ರಗತಿ ಸಾದಿಸಿದರು ಅದೇ ತಂತ್ರಾಂಶವನ್ನು ಅಳವಡಿಸಿಕೊಂಡಿದ್ದಾರೆ.

ಆದರೆ ಪ್ರಸ್ತುತ ವಿದ್ಯಾರ್ಥಿವೇತನ ನೀಡಬೇಕಾದ ಸರ್ಕಾರ  ವಿದ್ಯಾರ್ಥಿವೇತನ ನೀಡುವುದನ್ನು ಕ್ರಮೇಣ ಕಡಿಮೆಗೊಳಿಸುತ್ತಿರುವುದು  ಸರ್ಕಾರವು ಈ ಸಮುದಾಯಗಳ ಬಗೆಗೆ ಪೂರ್ವಗ್ರಹ ಪೀಡತವಾದ ದೋರಣೆ ಮತ್ತು ನಿಲಕ್ರ್ಷತೆಯು ಎದ್ದು ಕಾಣುತ್ತಿದೆ.  ಬಹುಶಃ ಈ ಸರ್ಕಾರವು ಮನುವಾದವನ್ನು ಮುನ್ನಡೆಗೆ ತಂದು ಶೋಷಿತ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವುದನ್ನು ನಿಲ್ಲಿಸುವ ಪ್ರಯತ್ನಕ್ಕೆ ಉದಾಹರಣೆಯಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರವು ಮಾಡುತ್ತಿರುವ ಅನ್ಯಾಯಗಳು:

1) ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ನೀಡುವಲ್ಲಿ  ಬಿಜೆಪಿ ಸರ್ಕಾರ ಎಸ್ಸಿ, ಎಸ್ಟಿ, ಒಬಿಸಿ ವಿದ್ಯಾರ್ಥಿಗಳಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಅನ್ಯಾಯ ಮಾಡುತ್ತಿದೆ. ಎಸ್ಸಿ- 48,24,699  ಎಸ್ಟಿ – 19,43,426  ಒಬಿಸಿ – 1,59,25,401 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡದೆ ವಂಚನೆ ಮಾಡಿದೆ.

2) ಭಾರತ ಸರ್ಕಾರದ ಸಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಮಾರ್ಚ್ 2021 ರ 5.9 ಅಂಶದ ಮಾರ್ಗಸೂಚಿಯನ್ವಯ The fee  claimed against management quota seats, spot admission seat in any institution/ university will not be reimbursed ಎಂದು ತಿಳಿಸಿರುತ್ತದೆ. ಈ ಆದೇಶದಿಂದ ಉನ್ನತ ವಿದ್ಯಾಭ್ಯಾಸ ಮಾಡಲು ಇಚ್ಚಿಸುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡದೆ ಡಬಲ್ ಇಂಜನ್ ಸರ್ಕಾರ ವಂಚನೆ ಮಾಡಿದೆ.

3)  2020-21 ನೇ ಸಾಲಿನಿಂದಲೆ ಸಕಾಲದಲ್ಲಿ  ಪ್ರೋತ್ಸಾಹ ಧನವನ್ನು ನೀಡುತ್ತಿಲ್ಲ.

4) ಹಾಸ್ಟೇಲ್ ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಉಲ್ಬಣಗೊಂಡಿದ್ದು, ಸರ್ಕಾರ ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡಿರುವುದಿಲ್ಲ. ಹಾಗೂ ವಿದ್ಯಾರ್ಥಿಗಳ ದಾಖಲಾತಿಗೆ ತಕ್ಕಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತಿಲ್ಲ.

5) ಎಸ್ಸಿ, ಎಸ್ಟಿ, ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಲ್ಯಾಪ್ ಟಾಪ್ ಗಳನ್ನು ಸರ್ಕಾರ ನಿಲ್ಲಿಸಿದೆ ಹಾಗೂ ವಿಶ್ವವಿದ್ಯಾಲಯಗಳಲ್ಲಿಯೂ ಸಹ ಲ್ಯಾಪ್ ಟಾಪ್ ಗಳನ್ನು ನೀಡುತ್ತಿಲ್ಲ.

6) ವಿದ್ಯಾರ್ಥಿವೇತನ ನೀಡುವುದನ್ನು ಆಯಾ ಇಲಾಖೆವಾರು ಜವಾಬ್ದಾರಿ ನೀಡದೆ, ವಿದ್ಯಾರ್ಥಿಗಳನ್ನು ಕಟ್ಟಡಗಳ ಸುತ್ತ ಹೋರಾಡಿಸುತ್ತಿದ್ದಾರೆ.

7) post metric scholarship ನಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿದೆ. ಆಯಾಯ ಶೈಕ್ಷಣಿಕ ವರ್ಷದಲ್ಲಿಯೇ ವಿದ್ಯಾರ್ಥಿವೇತನ ಮಂಜೂರು ಮಾಡುತ್ತಿಲ್ಲ.

8) ಎಸ್ ಎಸ್ ಪಿ ಯಲ್ಲಿ ಗ್ರೇಡಿಂಗ್ ವ್ಯವಸ್ಥೆ ಮಾಡಿಕೊಂಡು ವಿದ್ಯಾರ್ಥಿವೇತನವನ್ನು ಉದ್ದೇಶ ಪೂರ್ವಕವಾಗಿ ನೀಡುತ್ತಿಲ್ಲ.

9) ಪ.ಜಾತಿ, ಪ.ಪಂಗಡ, ಹಿಂದುಳಿದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾಲೇಜಿನ ದೃಡೀಕರಣವನ್ನು ಅನುಮಾನಾಸ್ಪದ ದೃಷ್ಠಿಯಿಂದ ನೋಡುತ್ತಿರುವ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ssp  ಅಧಿಕಾರಿಗಳು , ಕಡ್ಡಾಯವಾಗಿ ವಿಶ್ವವಿದ್ಯಾಲಯದಿಂದ Bonafide ಹಾಗೂ University Reg No ಗೆ ಒತ್ತಾಯಿಸುತ್ತಿದ್ದು, ಇದರಿಂದಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಸಾರಾಸಗಟಾಗಿ ಉಲ್ಲಂಘಿಸಿ , ಕಾಲೇಜಿಗೆ ದಾಖಲಾದ ಸುಮಾರು 10  ತಿಂಗಳ ನಂತರ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವಂತೆ ಮಾಡಿರುವುದು ಇಡೀ ಸಮುದಾಯಕ್ಕೆ ಮಾಡಿದ ಅಪರಾಧವಾಗಿದೆ. ಅಲ್ಲದೇ ತಮ್ಮ ಹಕ್ಕಾಗಿರುವ ವಿದ್ಯಾರ್ಥಿವೇತನದಿಂದ Bonafide ಹಾಗೂ University Reg No  ಒತ್ತಾಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು.

10) ವಿಶ್ವವಿದ್ಯಾಲಯಗಳೊಂದಿಗೆ ಉನ್ನತ ಶಿಕ್ಷಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ವಿದ್ಯಾರ್ಥಿವೇತನದ ಬಗ್ಗೆ ಕಾಲ ಕಾಲಕ್ಕೆ ಸರಿಯಾದ ಸೂಚನೆಗಳನ್ನು ನೀಡದೆ ಧೋರಣೆ ಮಾಡುತ್ತಿದ್ದಾರೆ.

ಈ ರೀತಿಯಾಗಿ  ಕಳೆದ ಬಿ.ಜೆ.ಪಿ ಸರ್ಕಾರ ಶೋಷಿತ ವರ್ಗಗಳಾದ ಒಬಿಸಿ, ಎಸ್ಸಿ,ಎಸ್ಟಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯನ್ನುಂಟು ಮಾಡಿ ಶಿಕ್ಷಣದಿಂದ ದೂರಮಾಡುವ ಕುತಂತ್ರವನ್ನು ರೂಪಿಸಿದ್ದಾರೆ.

ಶೋಷಿತ ವರ್ಗಗಳಾದ ಒಬಿಸಿ, ಎಸ್ಸಿ,ಎಸ್ಟಿ ಗಳಿಂದ ಶಿಕ್ಷಣವನ್ನು ಕಿತ್ತುಕೊಂಡು ಮೊದಲಿನಂತೆ ನಮ್ಮನ್ನು ಗುಲಾಮರಾಗಿ ಮಾಡುವ ಯೋಜನೆ ಇದಾಗಿದೆ. ಈ ಸರ್ಕಾರ ಮಾಡುತ್ತಿರುವ ಅನ್ಯಾಯದ ವಿರುದ್ದ ಶೋಷಿತ ಯುವ ವಿದ್ಯಾರ್ಥಿ ಸಮೂಹ ಎಚ್ಚೆತ್ತುಕೊಳ್ಳಬೇಕಾಗಿ ವಿನಂತಿಸುತ್ತೇವೆ.

ಹಕ್ಕೊತ್ತಾಯ:

1)  ಪ.ಜಾತಿ , ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ವಿದ್ಯಾರ್ಥಿವೇತನವನ್ನು ನೂತನ ತಂತ್ರಾಂಶದ ನೆಪ ಹೇಳಿಕೊಂಡು ಉದ್ದೇಶಪೂರ್ವಕವಾಗಿ  ವಿದ್ಯಾರ್ಥಿವೇತನದಿಂದ ಪ.ಜಾತಿ , ಪ.ಪಂಗಡ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿ  ಮಾಡಿರುವ ಇ ಆಡಳಿತ ಇಲಾಖೆ ಯ ಕಾರ್ಯದರ್ಶಿಗಳು, SSP ನಿರ್ದೇಶಕರು, ಹಾಗೂ  ನಿಖರವಾದ SATS ಮಾಹಿತಿ ನೀಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಪ.ಜಾತಿ, ಪ.ಪಂಗಡ ಸಮುದಾಯದ ರಕ್ಷಣೆ ಮಾಡಬೇಕಾದ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು , ಹಾಗೂ ವಿವಿಧ ಇಲಾಖಾ ಮಟ್ಟದಲ್ಲಿ ಕಾಲಕಾಲಕ್ಕೆ ಸೂಕ್ತ ಸಮನ್ವಯ ಸಾಧಿಸಲು ಸಂಪೂರ್ಣರಾಗಿ ವಿಫಲರಾದ ಮುಖ್ಯಕಾರ್ಯದರ್ಶಿಗಳ ವಿರುದ್ದ  SCSA/TSA  ಹಣವನ್ನು ಉದ್ದೇಶಪೂರ್ವಕವಾಗಿ ಖರ್ಚುಮಾಡದೆ ನಿರ್ಲಕ್ಷಿಸಿದವರ ವಿರುದ್ದ ಚಿಛಿಣ ನ ಅನ್ವಯ ಕ್ರಮ ತೆಗೆದುಕೊಳ್ಳಬೇಕು.

2) ವಿದ್ಯಾರ್ಥಿವೇತನ ಅವ್ಯವಸ್ಥೆಗೆ ಕಾರಣರಾದ ಎಲ್ಲಾ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು . ಹಾಗೂ ವಿದ್ಯಾರ್ಥಿವೇತನ ಅವ್ಯವಸ್ಥೆಗೆ ಕಾರಣರಾದ ಎಲ್ಲಾ ಅಧಿಕಾರಿಗಳ ವಿರುದ್ದ ನ್ಯಾಯಾಂಗ ತನಿಖೆ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತೇವೆ.

3) ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ವಿದ್ಯಾರ್ಥಿವೇತನವನ್ನು ನೂತನ ತಂತ್ರಾಂಶದ ನೆಪ ಹೇಳಿಕೊಂಡು ಉದ್ದೇಶಪೂರ್ವಕವಾಗಿ  ವಂಚಿತರನ್ನಾಗಿ  ಮಾಡಿರುವ , ಸಮುದಾಯದ ರಕ್ಷಣೆ ಮಾಡಬೇಕಾದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು.

4) ವಿದ್ಯಾರ್ಥಿವೇತನ ನೀಡುವುದನ್ನು ಆಯಾ ಇಲಾಖೆವಾರು ಜವಾಬ್ದಾರಿ ನೀಡಬೇಕು. ಮತ್ತು ವಿದ್ಯಾರ್ಥಿವೇತನದ ಅವ್ಯವಸ್ಥೆಯನ್ನು ಸರಿಪಡಿಸಬೇಕು.

5)  ಭಾರತ ಸರ್ಕಾರದ ಸಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಮಾರ್ಚ್ 2021 ರ 5.9 ಅಂಶದ ಮಾರ್ಗಸೂಚಿಯನ್ವಯ  The fee  claimed against management quota seats, spot admission seat in any institution/ university will not be reimbursed. ಎಂದು ತಿಳಿಸಿರುತ್ತದೆ. ಅದ್ದರಿಂದ ಉನ್ನತ ವಿದ್ಯಾಭ್ಯಾಸ ಮಾಡಲು ಇಚ್ಚಿಸುವ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ  ಕರ್ನಾಟಕ ಸರ್ಕಾರ ವು ಭೋದನಾ ಶುಲ್ಕ ಮತ್ತು ಹಾಸ್ಟೇಲ್ ನಿರ್ವಹಣಾ ಮೊತ್ತವನ್ನು ಬಿಡುಗಡೆ ಮಾಡಬೇಕು.

6) ಉನ್ನತ ಶಿಕ್ಷಣ ಇಲಾಖೆ , ವೈದ್ಯಕೀಯ ಶಿಕ್ಷಣ ಇಲಾಖೆಯ  ಹಾಗೂ ವಿವಿದ ಇಲಾಖೆಗಳಿಗೆ ಸಂಬಂದಪಟ್ಟ ವಿಶ್ವವಿದ್ಯಾಲಯಗಳಲ್ಲಿನ ವಿದ್ಯಾರ್ಥಿವೇತನವನ್ನು ಪರಿಶೀಲಿಸಬೇಕು.   

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ