ಹನುಮಂತ ದೇವರು ಯಾವ ಸಂಘಟನೆಯ ವೈಯುಕ್ತಿಕ ಸೊತ್ತಲ್ಲ: ಪ್ರಸಾದ್ ರಾಜ್ ಕಾಂಚನ್
ಉಡುಪಿ: ಹನುಮಂತ ದೇವರು ಯಾವ ಸಂಘಟನೆಯ ವೈಯುಕ್ತಿಕ ಸೊತ್ತಲ್ಲ. ಬಜರಂಗದಳವನ್ನು ಸಮೀಕರಿಸುವ ಮೂಲಕ ಪಕ್ಷವೊಂದು ಭಕ್ತರ ಭಾವನೆಗೆ ಧಕ್ಕೆ ತರುವುದು ಸರಿಯಾದ ನಡೆಯಲ್ಲ. ಹನುಮಂತ ದೇಶ ವಿದೇಶ ಸೇರಿದಂತೆ ಪ್ರತಿ ಭಾರತೀಯನ ಹೃದಯದಲ್ಲಿ ಪೂಜನೀಯ ದೇವರು ಎಂದು ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ತಿಳಿಸಿದ್ದಾರೆ.
ಬಜರಂಗದಳವನ್ನು ನಿಷೇಧಿಸುವ ಪ್ರಸ್ತಾವ ಕಾಂಗ್ರೆಸ್ ಮುಂದಿಲ್ಲ. ಬಿಜೆಪಿ ಓಟಿಗಾಗಿ ವಾಸ್ತವ ವಿಷಯವನ್ನು ತಿರುಚಿ ಸುಳ್ಳು ಸುದ್ದಿ ಹರಡುತ್ತಿದೆ. ಪ್ರಜ್ಞಾವಂತ ಮತದಾರರು ಇದನ್ನು ಅರಿತು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಯಾವುದೇ ಸಂಘಟನೆಯನ್ನು ನಿಷೇಧಿಸುವ ಅಧಿಕಾರ ರಾಜ್ಯ ಸರಕಾರಕ್ಕೆ ಇರುವುದಿಲ್ಲ. ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ, ಕೇಂದ್ರ ಸರಕಾರದಿಂದ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಬಜರಂಗದಳವನ್ನು ನಿಷೇಧಿಸುವ ಯಾವ ಪ್ರಸ್ತಾವನೆಯೂ ಕಾಂಗ್ರೆಸ್ ಮುಂದೆ ಇಲ್ಲ.
ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಸಮಾಜದ ಶಾಂತಿ, ಸುವ್ಯವಸ್ಥೆಗೆ ಭಂಗ ತರುವ ಯಾವುದೇ ಸಂಘಟನೆಗಳನ್ನು ನಿಷೇಧಿಸುವುದಾಗಿ ಹೇಳಿದೆ. ಆದರೆ ಬಿಜೆಪಿಯು ಪ್ರಣಾಳಿಕೆಯಲ್ಲಿನ ವಿಷಯ ಗಳನ್ನು ತಿರುಚಿ ಹಿಂದೂಗಳು ಆರಾಧಿಸುವ ಹನುಮಂತನ ಜೊತೆ ತನ್ನ ಸಂಘಟನೆ ಭಜರಂಗದಳವನ್ನು ಹೋಲಿಕೆ ಮಾಡಿರುವುದು ಬಿಜೆಪಿಯ ನೈತಿಕ ದಿವಾಳಿತನವನ್ನು ತೋರಿಸುತ್ತದೆ ಎಂದರು.
ಬಿಜೆಪಿ ಮತಗಳಿಕೆಗಾಗಿ ದೇವರುಗಳನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿ ಸುವುದು ಅವರಲ್ಲಿಯ ಅಭಿವೃದ್ಧಿಯ ಚಿಂತನೆಯ ಕೊರತೆಯಿಂದ ಧರ್ಮ ಮತ್ತು ಜಾತಿಯ ಹೆಸರಲ್ಲಿ ಸಮಾಜವನ್ನು ವಿಭಜಿಸುವ ವ್ಯಕ್ತಿ ಮತ್ತು ಸಂಘಟನೆ ಗಳ ವಿರುದ್ಧ ಕಠಿಣ ನಿರ್ಣಾಯಕ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಬಧ್ಧವಾಗಿದೆ. ಇದನ್ನು ಬಿಜೆಪಿ ವಿರೋಧಿಸುತ್ತದೆ ಎಂದರೆ ಬಿಜೆಪಿ ಕಾನೂನು ಬಾಹಿರ ಚಟುವಟಿಕೆಗಳನ್ನು ಪೂಜಿಸುತ್ತದೆ ಹಾಗೂ ಪ್ರಚೋದಿಸುತ್ತದೆ ಎಂದು ಅರ್ಥ ಎಂದು ಅವರು ತಿಳಿಸಿದ್ದಾರೆ.ಪ್ರಣಾಳಿಕೆಯಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದ್ದು ಇದನ್ನು ಬಿಜೆಪಿ ವಿರೋಧಿಸುವುದರಿಂದ ಬಿಜೆಪಿಗೆ ಕಾನೂನಿನ ಮೇಲೆಯೂ ವಿಶ್ವಾಸವಿಲ್ಲ ಹಾಗೂ ಗೌರವೂ ಇಲ್ಲ ಎಂಬುದು ಸಾಬೀತಾಗಿದೆ.
ಕಾಂಗ್ರೆಸ್ ಶಾಂತಿ, ಸೌಹಾರ್ದ, ಸಮಾಜ ಕಟ್ಟುವ ಉದ್ದೇಶದಿಂದ ಪ್ರಣಾಳಿಕೆಯಲ್ಲಿ ಈ ಬಗ್ಗೆ ತಿಳಿಸಿದೆ. ಆದರೆ ಜಾತಿ ಧರ್ಮ ವನ್ನು ಒಡೆದು ಆಳುವ ನೀತಿ ಅನುಸರಿಸುವ ಬಿಜೆಪಿಗೆ ಸಮಾಜದಲ್ಲಿ ಶಾಂತಿ ಸೌರ್ಹಾದತೆ ಬೇಕಾಗಿಲ್ಲ ಎಂದರು.ಅಮಾಯಕರ ನೆತ್ತರಲ್ಲಿ ಮತ ಫಸಲು ಪಡೆಯುವ ಉದ್ದೇಶ ಹೊಂದಿರುವ ಬಿಜೆಪಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಪ್ರಚೋದನೆ ನೀಡುತ್ತದೆ. ಇದರಿಂದ ನೋವುಂಡ ಕರಾವಳಿ ಜನತೆ ಈ ಬಾರಿ ಬದಲಾವಣೆ ಬಯಸಿದ್ದಾರೆ ಎಂದು ಪ್ರಸಾದ್ ರಾಜ್ ಕಾಂಚನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw